ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆ: ಕೇಂದ್ರ ಅಂಕುಶ

ನವೀಕರಣಕ್ಕೂ ಪರಿಸರ ಸಚಿವಾಲಯದ ಪರವಾನಗಿ ಕಡ್ಡಾಯ
Last Updated 7 ಜೂನ್ 2014, 20:00 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾ­ಲಯದ ಪೂರ್ವಾನು­ಮತಿ ಪಡೆಯದ ಯಾವುದೇ ಗಣಿಯ ಪರವಾನಗಿಯನ್ನು ನವೀಕರಿಸ­ಬಾ­ರದು ಎಂದು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಅನುಮತಿ ಇಲ್ಲದೆ  ಪುನರಾರಂಭಿ­ಸಿರುವ ಗಣಿಗಳ ಕಾರ್ಯಾಚರಣೆ­ಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅದು ಆದೇಶಿಸಿದೆ.  ಅರಣ್ಯ ಸಂರಕ್ಷಣೆ ಕಾಯ್ದೆ ಅನ್ವಯ ಗಣಿಗಾರಿಕೆ ಪುನರಾರಂಭಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾ­ಲಯದ ಪೂರ್ವಾ­ನು­ಮತಿ ಕಡ್ಡಾಯ ಎಂದೂ ಅದು ನೆನಪಿಸಿದೆ.

ರಾಜ್ಯದಲ್ಲಿ ಮೂರು ವರ್ಷದಿಂದ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಆದರೆ ಗುತ್ತಿಗೆ ರದ್ದಾದ ಕೆಲ ಗಣಿ ಕಂಪೆನಿಗಳು ಈಚೆಗೆ ರಾಜ್ಯ ಮತ್ತು ಕೇಂದ್ರ ‘ಗಣಿ ಸಚಿವಾಲಯದ’ ಅನುಮತಿ ಪಡೆದು ಗಣಿಗಾರಿಕೆ ಪುನರಾರಂಭಿಸಿವೆ. ಈ ಸಂಗತಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಗಮನಕ್ಕೆ ಬಂದ ಬಳಿಕ ಈ ಕಟ್ಟುನಿಟ್ಟಿನ ಆದೇಶ ಹೊರಬಿದ್ದಿದೆ.

ಪರಿಸರ ಪರವಾನಗಿ ಕಡ್ಡಾಯ: ಗಣಿ ಗುತ್ತಿಗೆ ಪರವಾನಗಿ ನವೀಕರಣವನ್ನು ಹೊಸ ಗುತ್ತಿಗೆ ಎಂದೇ ಪರಿಗಣಿಸ­ಬೇಕು. ಗಣಿ ಗುತ್ತಿಗೆ ಪರವಾನಗಿ ಮುಗಿಯು­ವುದ­ರೊಂದಿಗೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿಯೂ ರದ್ದಾಗಲಿದೆ. ಅರಣ್ಯ ಸಂರಕ್ಷಣೆ ಕಾಯ್ದೆಯಡಿ ಮತ್ತೆ ಗಣಿಗಾರಿಕೆ ಗುತ್ತಿಗೆ ಅನುಮತಿಗೆ ಪರಿಸರ ಮತ್ತು ಅರಣ್ಯ ಸಚಿವಾಲಯ ಒಪ್ಪಿಗೆ ಅಗತ್ಯ ಎಂದು ತಿಳಿಸಲಾಗಿದೆ.

ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ಗೂ ಕೇಂದ್ರ ಸರ್ಕಾರ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿದೆ.

ತಾತ್ಕಾಲಿಕ ಪರವಾನಗಿ ಹಾಗೂ ನವೀಕರಣ ಪರವಾನಗಿ ಪಡೆಯುವ ಪ್ರಕ್ರಿಯೆ ಮತ್ತು ಪೂರ್ವ ಷರತ್ತು­ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾ­ಗುತ್ತದೆ. ಹೀಗಾಗಿ ಗಣಿ ಗುತ್ತಿಗೆ ಅವಧಿ ಪೂರ್ಣಗೊಳ್ಳುವ ಎರಡು ವರ್ಷ ಮೊದಲೇ ಅನುಮತಿ ಪುನರ್‌ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರದ ಪತ್ರದಲ್ಲಿ ಹೇಳಲಾಗಿದೆ.

12 ರಾಜ್ಯಗಳಲ್ಲಿ ಅಕ್ರಮ ಗಣಿಗಾರಿಕೆ: ಕರ್ನಾಟಕ, ಒಡಿಶಾ, ಗೋವಾ ಸೇರಿ­ದಂತೆ ಸುಮಾರು 12 ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಈ ಕುರಿತು ವಿಚಾರಣೆ ನಡೆಸಿದ ಎಂ.ಬಿ. ಷಾ ಆಯೋಗವು ಒಡಿಶಾ ರಾಜ್ಯ­ವೊಂದ­ರಲ್ಲೇ  ₨ 66 ಸಾವಿರ ಕೋಟಿ ಮೌಲ್ಯದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಹೇಳಿತ್ತು.

ರಾಜ್ಯದಲ್ಲಿ
ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ 2011 ಜನವರಿಯಿಂದ ಗಣಿ ಚಟುವಟಿಕೆ ಬಂದ್‌ ಆಗಿದೆ. ಇಲ್ಲಿ ಎ ವರ್ಗದ 46, ಬಿ ವರ್ಗದ 69 ಮತ್ತು ಸಿ ವರ್ಗದ 51 ಗಣಿ ಗುತ್ತಿಗೆಗಳಿವೆ. ಇತ್ತೀಚೆಗಷ್ಟೇ ಸುಮಾರು 25 ಗಣಿಗಳಲ್ಲಿ ಗಣಿಗಾರಿಕೆ ಮತ್ತೆ ಆರಂಭವಾಗಿದೆ. ಆದರೆ ಇವುಗಳಲ್ಲಿ ಕೆಲ ಗಣಿಗಳ ಅನುಮತಿ ಅವಧಿ ಮುಗಿದಿದೆ. ಇವು ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆದಿಲ್ಲ ಎನ್ನುವ ಸಂಗತಿ ಸರ್ಕಾರದ ಗಮನಕ್ಕೆ ಬಂದಿದೆ.

ಅದಿರು ಅವಕಾಶ: ರಾಜ್ಯದಲ್ಲಿ 3 ಕೋಟಿ ಟನ್‌ ಅದಿರು ತೆಗೆಯಲು ಅವಕಾಶವಿದೆ. ಇದನ್ನು 4–5 ಕೋಟಿ ಟನ್‌ಗೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಸದ್ಯ 1.8 ಕೋಟಿ ಟನ್‌ ಅದಿರು ಉತ್ಪಾದನೆ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT