ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಬಂದ ಕಛೇರಿ ತಂದ

Last Updated 28 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಗಣೇಶ ಚತುರ್ಥಿ ಮತ್ತೆ ಬಂದಿದೆ. ವರ್ಷಧಾರೆಗೆ ಕೆರೆಕಟ್ಟೆ ಬಾವಿಗಳು ತುಂಬಿವೆ. ಗಲ್ಲಿ ಗಲ್ಲಿಗಳಲ್ಲಿ, ಮನೆ ಸಂಧಿಗಳಲ್ಲೇ ಚಿಕ್ಕದೊಂದು ಹಸಿರು ಚಪ್ಪರ ಹಾಕಿ ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ಗಣೇಶ ಮೂರ್ತಿಯನ್ನು ತಂದು ಕೂರಿಸಿ ರಾತ್ರಿ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲೇಬೇಕು. ಪಕ್ಕದ ಬೀದಿಯ ಸಂಘಕ್ಕಿಂತ ತಮ್ಮ ಸಂಘದ ಕಾರ್ಯಕ್ರಮವೇ ಅದ್ದೂರಿಯಾಗಿ ನಡೆಯಬೇಕೆಂಬ ಉತ್ಸಾಹದೊಂದಿಗೆ ಖ್ಯಾತ ನಟ– ನಟಿಯರನ್ನೋ ಅಥವಾ ಗಾಯಕರನ್ನೋ ಕರೆಸಿ ರಸಸಂಜೆ, ಸಂಗೀತ ಕಛೇರಿ ಆಯೋಜಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಬೆಂಗಳೂರು ಮಹಾನಗರ ಪಾಲಿಕೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಪೊಲೀಸರ ಎಚ್ಚರಿಕೆ ನಡುವೆಯೂ ಸಡಗರದಿಂದ ಗಣೇಶೋತ್ಸವ ಆಯೋಜಿಸುತ್ತಾರೆ. ಆರ್ಕೆಸ್ಟ್ರಾಗಳನ್ನು ಕರೆಸುವ ಪರಿಪಾಠ ಹೆಚ್ಚಾಗಿದ್ದ ಕಾಲವೊಂದಿತ್ತು. ಆದರೆ ಆರ್ಕೆಸ್ಟ್ರಾಗಳಲ್ಲಿ ಕರೋಕೆ ಸಂಗೀತ ಬಂದ ನಂತರ ಇವುಗಳ ಮೇಲಿನ ಆಸಕ್ತಿ ನಗರದ ಕೆಲವು ಕಡೆ ಕಡಿಮೆಯಾದಂತಾಗಿದೆ. ಆ ಜಾಗದಲ್ಲಿ ಲೈವ್‌ ಸಂಗೀತ ಕಛೇರಿಗಳು ಬಂದಿವೆ. ಕಳೆದ 50 ವರ್ಷಗಳಿಂದ ಆಯೋಜಿಸುತ್ತಿರುವ ಬಸವನಗುಡಿಯ ಬೆಂಗಳೂರು ಗಣೇಶ ಉತ್ಸವದಲ್ಲಿ ತಿಂಗಳುಗಟ್ಟಲೆ ಸಂಗೀತ ಕಛೇರಿಗಳು ನಡೆಯುತ್ತಿರುವುದನ್ನು ಗಮನಿಸಬಹುದು. ಇಂಥ ಸಂಗೀತ ಕಛೇರಿಗಳಿಂದ ಗಾಯಕರಿಗೆ ಹೆಚ್ಚುತ್ತಿರುವ ಬೇಡಿಕೆ ಕುರಿತು ಕೆಲವು ಗಾಯಕರು ‘ಮೆಟ್ರೊ’ ಜೊತೆ ಮಾತನಾಡಿದರು.

ಕಾಡುವ ಕಛೇರಿಗಳು

ತುಂಬಾ ವರ್ಷಗಳ ಹಿಂದೆಯೇ ಆರ್ಕೆಸ್ಟ್ರಾ ಇತ್ತು. ಈಗಲೂ ಇದೆ. ಆಗ ದಾಸವಾಣಿ, ಸಂತವಾಣಿಗೆ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅಂಥವರಿದ್ದರು. ಈಗಲೂ ಅನೇಕ ಪ್ರತಿಭಾವಂತ ಕಲಾವಿದರಿದ್ದಾರೆ. ಲೈವ್‌ ಕಛೇರಿಗಳು ಅಂದೂ ನಡೆಯುತ್ತಿದ್ದವು, ಇಂದೂ ನಡೆಯುತ್ತಿವೆ. ಆದರೆ ಈಗ ಹಾಡುವವರು ಹೆಚ್ಚಾಗಿದ್ದಾರೆ. ವೇದಿಕೆಗಳು ಹೆಚ್ಚಾಗಿವೆ. ಕರ್ನಾಟಕ ರಾಜ್ಯೋತ್ಸವ, ಅಣ್ಣಮ್ಮನ ಉತ್ಸವ ಸೇರಿದಂತೆ ಗಣೇಶೋತ್ಸವಗಳಲ್ಲಿ ಗಾಯಕರಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ. ಕಾರ್ಯಕ್ರಮಗಳು ಹೆಚ್ಚಾಗಿವೆ.


ಪಿತೃಪಕ್ಷದಲ್ಲೂ ಗಣೇಶನನ್ನು ಕೂರಿಸಿ ಆರ್ಕೆಸ್ಟ್ರಾ ಆಯೋಜಿಸಿದ ಉದಾಹರಣೆ ನಗರದಲ್ಲಿ ನಡೆದಿದೆ. ಗಣಪತಿ ಪೆಂಡಾಲ್‌ಗಳಲ್ಲಿ ಆಯೋಜಿಸುವ ಕಛೇರಿಯಲ್ಲಿ ಶಾಸ್ತ್ರೀಯ ಸಂಗೀತದ ಜೊತೆಗೆ ಭಾವಗೀತೆ, ಭಕ್ತಿಗೀತೆಗಳನ್ನು ಹಾಡುತ್ತೇವೆ. 50 ವರ್ಷಗಳ ಹಿಂದೆ ಕಛೇರಿಗಳಲ್ಲಿ ಎರಡು ತಬಲಾ, ತಂಬೂರಿ, ತಾಳ, ಪಖ್‌ವಾಜ್‌ ಬಳಸುತ್ತಿದ್ದೆವು. ಈಗ ಎಲೆಕ್ಟ್ರಾನಿಕ್‌ ವಾದ್ಯಗಳು ಬಂದಿವೆ. ಕೆಲಸವನ್ನು ಸುಲಭವಾಗಿಸಿವೆ. ಈಗ ಎಲ್ಲಾ ಬಗೆಯ ಸಂಗೀತವನ್ನು ಕೇಳುತ್ತಾರೆ. ಜನಪದ, ಭಕ್ತಿ ಸಂಗೀತ ಹಾಗೂ ಭಾವ ಗೀತೆಗಳನ್ನು ಹಾಡುತ್ತೇನೆ.

ಈಗಾಗಲೇ ಸುಮಾರು ನಾಲ್ಕು ಸಾವಿರ ಸೋಲೊ ಕಛೇರಿಗಳನ್ನು ನೀಡಿದ್ದೇನೆ. ಅದರಲ್ಲಿ ನೆನಪಿನಲ್ಲಿ ಉಳಿಯುವಂಥವು ಮೂರು ಕಛೇರಿಗಳು. ಐದು ವರ್ಷಗಳ ಹಿಂದೆ ಮೈಸೂರಿನಲ್ಲಿ ಗಣಪತಿ ಉತ್ಸವದಲ್ಲಿ ಗಾಯನ ಕಛೇರಿ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಮಳೆ ಶುರುವಾಯಿತು. ಆದರೂ ಸಂಗೀತಾಸಕ್ತರು ಮೂರೂವರೆ ಗಂಟೆ ತಾಳ್ಮೆಯಿಂದ ಸಂಗೀತ ಆಲಿಸಿದರು. ಇಂಥ ಅನುಭವ ಮೈಸೂರಿನಲ್ಲೇ ಮತ್ತೆರಡು ಬಾರಿ ಆಯಿತು.
–ಸಂಗೀತಾ ಕಟ್ಟಿ ಕುಲಕರ್ಣಿ

ತಾಳವಾದ್ಯ ಜಾಗದಲ್ಲಿ ರಿದಂಪ್ಯಾಡ್‌

ಹತ್ತು ವರ್ಷಗಳಿಂದ ಉತ್ತಮ ಸಂಗೀತಕ್ಕೆ ಪ್ರೋತ್ಸಾಹ ಸಿಗುತ್ತಿದೆ. ವೇದಿಕೆಗಳು ಹೆಚ್ಚಾಗುತ್ತಿವೆ. ಮುಂಚೆ ರಾಮೋತ್ಸವ, ಗಣೇಶೋತ್ಸವಗಳು ಬಿಟ್ಟರೆ ಗಾಯಕರಿಗೆ ಬೇರೆ ವೇದಿಕೆಗಳಿರಲಿಲ್ಲ. ಆದರೆ ಈಗ ರಾಘವೇಂದ್ರಸ್ವಾಮಿ ಆರಾಧನೆ, ಶ್ರೀಕೃಷ್ಣ ಜನ್ಮಾಷ್ಟಮಿ ಮೊದಲಾದ ಹಬ್ಬಗಳಲ್ಲಿಯೂ ಸಂಗೀತ ಕಛೇರಿ ಆಯೋಜಿಸುತ್ತಾರೆ. ಶೃಂಗೇರಿಯಲ್ಲಿ ವಾರದವರೆಗೂ ನಡೆಯುತ್ತಿದ್ದ ಕಛೇರಿಗಳು ಈಗ ತಿಂಗಳವರೆಗೂ ಮುಂದುವರಿದಿವೆ.

ಮೊದಲೆಲ್ಲಾ ನಾನ್‌ ಎಲೆಕ್ಟ್ರಾನಿಕ್‌ ವಾದ್ಯಗಳಿರುತ್ತಿದ್ದವು. ಈಗ ರಿದಂ ಪ್ಯಾಡ್ ಒಂದರಲ್ಲೇ ಹಲವು ತಾಳವಾದ್ಯಗಳ ಎಫೆಕ್ಟ್‌ ಬರುತ್ತದೆ. ಹಾಗಾಗಿ ಸಾಥ್‌ನಲ್ಲಿ ಎಲೆಕ್ಟ್ರಾನಿಕ್‌ ವಾದ್ಯಗಳ ಬಳಕೆ ಹೆಚ್ಚಾಗಿದೆ. ತಂತ್ರಜ್ಞಾನ ಬದಲಾದಂತೆ ಮೈಕ್‌, ಸೌಂಡ್‌ ಸಿಸ್ಟಂಗಳು ಬದಲಾಗಿವೆ. ಆಗೆಲ್ಲಾ ಹಾಡುಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಕಾಲ ಬದಲಾದಂತೆ ಅಬ್ಬರದ ಸಂಗೀತ ದಾಳಿ ಮಾಡತೊಡಗಿತು. ಒಟ್ಟಾರೆ ಹಬ್ಬ ಉತ್ಸವಗಳಿಂದ ಸಾವಿರಾರು ಗಾಯಕರಿಗೆ ವೇದಿಕೆ ಸಿಕ್ಕಂತಾಗುತ್ತದೆ.
–ಗೀತಾ ಸತ್ಯಮೂರ್ತಿ, ಗಾಯಕಿ

ಭಕ್ತಿ ಸಂಗೀತಕ್ಕೆ ಬೇಡಿಕೆ

ಹದಿನೈದು ವರ್ಷಗಳ ಹಿಂದೆ ಆರ್ಕೆಸ್ಟ್ರಾದವರು ವಾದ್ಯಗಳನ್ನು ನುಡಿಸಿಯೇ ಕಾರ್ಯಕ್ರಮ ನೀಡುತ್ತಿದ್ದರು. ಆದರೆ ಕಂಪ್ಯೂಟರ್‌ ಬಂದ ನಂತರ ಕರೋಕೆ ಸಂಗೀತ ಪರಿಚಯವಾಯಿತು. ಅಲ್ಲಿ ಬರೀ ರೆಕಾರ್ಡೆಡ್‌ ಸಂಗೀತವೇ ಕೇಳಿಸುತ್ತದೆ. ಯಾರೇ ಗಾಯಕರು ಹಾಡಿದರೂ ಕೇಳುಗರಿಗೆ ಅದರ ವ್ಯತ್ಯಾಸ ಗೊತ್ತಾಗುವುದಿಲ್ಲ. ಹಾಗಾಗಿ ಜನ ಸಾರಾಸಗಟಾಗಿ ಆರ್ಕೆಸ್ಟ್ರಾವನ್ನು ತಿರಸ್ಕರಿಸಲು ಮುಂದಾದರು. ಪರ್ಯಾಯವಾಗಿ ಸುಗಮ, ಜನಪದ, ಭಕ್ತಿ ಸಂಗೀತದತ್ತ ಮುಖ ಮಾಡತೊಡಗಿದರು. ಶಾಸ್ತ್ರೀಯವಾಗಿ ಹಾಡುವ ಗಾಯಕರಿಗೆ ಹೆಚ್ಚು ಬೇಡಿಕೆ ಬರತೊಡಗಿತು.

ವಾದ್ಯಗಳನ್ನು ಇಟ್ಟುಕೊಂಡು ನಡೆಸುವ ಕಛೇರಿ ಜೀವಂತ ಸಂಗೀತವಿದ್ದಂತೆ. ಸ್ವಲ್ಪ ತಪ್ಪುಗಳಾದರೂ ಜನ ಅದನ್ನು ಸ್ವೀಕರಿಸುತ್ತಾರೆ. ರಾಜ್ಯೋತ್ಸವ, ಗಣೇಶೋತ್ಸವಗಳಲ್ಲದೇ ದೇವಾಲಯಗಳಲ್ಲಿ ಭಕ್ತಿ ಸಂಗೀತ ಕಛೇರಿ ಆಯೋಜಿಸುತ್ತಾರೆ. ಅವಕಾಶವೂ ಹೆಚ್ಚಿರುತ್ತದೆ. ಇದುವರೆಗೂ ಐದು ಸಾವಿರಕ್ಕೂ ಹೆಚ್ಚು ಸಂಗೀತ ಕಛೇರಿ ನೀಡಿದ್ದೇನೆ. ಕೇಳುಗರು ಉತ್ತಮ ಸಂಗೀತವನ್ನು ಯಾವತ್ತಿಗೂ ಪ್ರೀತಿಸುತ್ತಾರೆ. –ಪುತ್ತೂರು ನರಸಿಂಹ ನಾಯಕ್‌

ಗಾಯಕರಿಗೆ ಹೆಚ್ಚಿದ ಅವಕಾಶ

ಇತ್ತೀಚಿನ ವರ್ಷಗಳಲ್ಲಿ ಲೈವ್‌ ಸಂಗೀತ ಕಛೇರಿ ಆಯೋಜಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಗಣೇಶ ಉತ್ಸವಗಳಲ್ಲಿ ಹೆಚ್ಚಿರುತ್ತದೆ. ಕರೋಕೆ ಸಂಗೀತದಲ್ಲಿ ಹಾಡುಗಾರನಿಗೆ ಕಲಿಯಲು ಏನೂ ಇರುವುದಿಲ್ಲ. ಆದ್ದರಿಂದ ಲೈವ್‌ ಸಂಗೀತದಿಂದ ಗಾಯಕನಿಗೆ ಹೆಚ್ಚಿನ ಅನುಕೂಲ. ಇದುವರೆಗೆ ಸಾವಿರಕ್ಕೂ ಹೆಚ್ಚು ಸಂಗೀತ ಕಛೇರಿ ನೀಡಿದ್ದೇವೆ. ಲಘು ಸಂಗೀತದಲ್ಲಿ ಶಾಸ್ತ್ರೀಯ ಬದ್ಧತೆ ಇದ್ದರೆ ಇನ್ನೂ ಕ್ರಿಯಾತ್ಮಕವಾಗಿ ಸಂಗೀತ ಹೊರಹೊಮ್ಮುತ್ತದೆ. ನವರಾತ್ರಿ ಉತ್ಸವ, ಗಣೇಶೋತ್ಸವಗಳು, ಶ್ರಾವಣ ಮಾಸದ ಕಾರ್ಯಕ್ರಮಗಳಲ್ಲೂ ಗಾಯಕರಿಗೆ ಬೇಡಿಕೆ ಹೆಚ್ಚಾಗುತ್ತದೆ.
–ರವೀಂದ್ರ ಸೊರಗಾಂವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT