ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದುಗಿನಲ್ಲಿ ಲಾಠಿ ಚಾರ್ಜ್‌; ಅರೆಬೆತ್ತಲೆ ಮೆರವಣಿಗೆ

ಮಹಾದಾಯಿ ಹೋರಾಟ; ಕೇಂದ್ರದ ವಿರುದ್ಧದ ಬುಗಿಲೆದ್ದ ಆಕ್ರೋಶ
Last Updated 28 ಜುಲೈ 2016, 4:51 IST
ಅಕ್ಷರ ಗಾತ್ರ

ಗದಗ: ಮಹಾದಾಯಿ ನ್ಯಾಯಮಂಡಳಿಯಲ್ಲಿ ರಾಜ್ಯದ ಮಧ್ಯಂತರ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಗದಗ, ನರಗುಂದದಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಗದುಗಿನಲ್ಲಿ ಗುರುವಾರ ಬೆಳ್ಳಂ ಬೆಳಿಗ್ಗೆಯೇ ಗ್ರೇನ್‌ ತರಕಾರಿ ಮಾರುಕಟ್ಟೆ ಬಂದ್‌ ಮಾಡಿಸಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಪ್ರತಿಭಟನಾಕಾರರು ಪೊಲೀಸರ ಎಚ್ಚರಿಕೆಗೆ ಬಗ್ಗದಿದ್ದಾಗ ಗಾಂಧಿ ವೃತ್ತದಲ್ಲಿ ಮತ್ತೊಮ್ಮೆ ಲಾಠಿ ರುಚಿ ತೋರಿಸಿದರು.

ಅರೆಬೆತ್ತಲೆ ಮೆರವಣಿಗೆ: ಗದುಗಿನಲ್ಲಿ ವಿವಿಧ ಕನ್ನಡಪರದ ಸಂಘಟನೆಗಳ ಸದಸ್ಯರು ಗುರುವಾರ ಬೆಳಿಗ್ಗೆ 6ಗಂಟೆಗೇ ಪ್ರತಿಭಟನೆ ಪ್ರಾರಂಭಿಸಿದ್ದರು.ಮುಳಗುಂದ ನಾಕಾದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲು ಮುಂದಾದರು. ಪೊಲೀಸರು ಇದಕ್ಕೆ ಅವಕಾಶ ಕೊಡಲಿಲ್ಲ. ನಂತರ  ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ಜಮಾಯಿಸಿ, ಅರೆಬೆತ್ತಲೆ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಲ್ಲಿಂದ ಬೈಕ್‌ ಮೂಲಕ ಗ್ರೇನ್‌ ತರಕಾರಿ ಮಾರುಕಟ್ಟೆಗೆ ತೆರಳಿ, ತರಕಾರಿ ತುಂಬಿದ್ದ ಚೀಲಗಳನ್ನು ಎತ್ತಿ ಎಸೆದು ಮಾರುಕಟ್ಟೆ ಬಂದ್‌ ಮಾಡುವಂತೆ ಒತ್ತಾಯಿಸಿದರು. ಈ ದಾಂದಲೆಯಿಂದ ಭಯಗೊಂಡ ಚಾಲಕನೊಬ್ಬ, ಅವಸರದಲ್ಲಿ ತರಕಾರಿ ತುಂಬಿದ್ದ ಟ್ರಕ್‌ ಅನ್ನು ಹಿಂದಕ್ಕೆ ಚಾಲನೆ ಮಾಡುವಾಗ, ಪೊಲೀಸ್‌ ಜೀಪ್‌ಗೆ ತಾಗಿ ಜಖಂಗೊಳಿಸಿತು. ಇದರಿಂದ ಕೆರಳಿದ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌ ನಡೆಸಿದರು. ವಿವಿಧ ಸಂಘಟನೆಗಳಿಗೆ ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿ ಕೊಂಡೊಯ್ಯದರು.

ಬಂದ್‌: ಬಂದ್‌ಗೆ ಕರೆ ನೀಡಿದ್ದರಿಂದ ಗುರುವಾರ ಜಿಲ್ಲೆಯ 7 ಡಿಪೊಗಳಿಂದ ಕೆಎಸ್‌ಆರ್‌ಟಿಸಿ ವಾಹನಗಳು ಹೊರಬರಲಿಲ್ಲ. ಖಾಸಗಿ ವಾಹನ ಸಂಚಾರವೂ ವಿರಳವಾಗಿತ್ತು.ಬೆಂಗಳೂರು, ಮಂಗಳೂರು ಸೇರಿ ದೂರದ ಊರುಗಳಿಂದ ನಗರಕ್ಕೆ ಬಂದವರು, ಮನೆಗಳಿಗೆ ತೆರಳಲು ಪ್ರಯಾಸಪಟ್ಟರು. ಸಂಸದ ಶಿವಕುಮಾರು ಉದಾಸಿ ಜನಸಂಪರ್ಕ ಕಚೇರಿ ಮೇಲೆ ಪ್ರತಿಭಟನಾಕಾರರು ಬುಧವಾರ ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಗುರುವಾರ  ಅವರ ಕಚೇರಿಗೆ ಬಿಗಿ ಭದ್ರತೆ  ಕಲ್ಪಿಸಲಾಗಿತ್ತು.

ಕ್ಷಿಪ್ರ ಕಾರ್ಯಪಡೆ ದೌಡು: ಹೆಚ್ಚುವರಿ ಭದ್ರತೆಗಾಗಿ ಕ್ಷಿಪ್ರ ಕಾರ್ಯಪಡೆಯ 6 ತುಕಡಿಗಳನ್ನು ಬೆಂಗಳೂರಿನಿಂದ ಜಿಲ್ಲೆಗೆ ಕರೆಯಿಸಿಕೊಳ್ಳಲಾಗುತ್ತಿದೆ. ಈಗಾಗಲೇ 6 ಕೆಎಸ್‌ಆರ್‌ಪಿ ತುಕಡಿಗಳು ನಗರದಲ್ಲಿ ಬೀಡುಬಿಟ್ಟಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT