ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಲದ ಅಧಿವೇಶನಕ್ಕೆ ತೆರೆ

ಲೋಕಸಭೆಯಲ್ಲಿ 13, ರಾಜ್ಯಸಭೆಯಲ್ಲಿ 9 ಮಸೂದೆಗಳಿಗೆ ಒಪ್ಪಿಗೆ
Last Updated 23 ಡಿಸೆಂಬರ್ 2015, 19:42 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಬುಧವಾರ ತೆರೆಬಿದ್ದಿದ್ದು, ಲೋಕಸಭೆಯಲ್ಲಿ 13 ಮತ್ತು ರಾಜ್ಯಸಭೆಯಲ್ಲಿ 9 ಮಸೂದೆಗಳಿಗೆ ಅಂಗೀಕಾರ ದೊರೆತಿದೆ. 20 ದಿನಗಳ ಅಧಿವೇಶನದ ಕೊನೆಯ ದಿನವಾದ ಬುಧವಾರ ಕೂಡಾ ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಗದ್ದಲ ಉಂಟುಮಾಡಿ ಕಲಾಪಕ್ಕೆ ಅಡ್ಡಿಪಡಿಸಿದವು.

ಅಧಿವೇಶನದ ಬಹುತೇಕ ಕಲಾಪಗಳು ಗದ್ದಲದಲ್ಲೇ ಅಂತ್ಯ ಕಂಡಿದ್ದವು. ಆದರೆ  ಮುಂಗಾರು ಅಧಿವೇಶನಕ್ಕಿಂತ  ಚಳಿಗಾಲದ ಅಧಿವೇಶನ ಹೆಚ್ಚು ಫಲಪ್ರದವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಸಂವಿಧಾನಕ್ಕೆ ಸಂಬಂಧಿಸಿದ ಎರಡು ದಿನಗಳ ಚರ್ಚೆಯೊಂದಿಗೆ ಚಳಿಗಾಲದ ಅಧಿವೇಶಕ್ಕೆ ಚಾಲನೆ ದೊರೆತಿತ್ತು.

ಈ ಚರ್ಚೆಯ ವೇಳೆ ‘ಅಸಹಿಷ್ಣುತೆ’ ಕುರಿತು ಆರೋಪ, ಪ್ರತ್ಯಾರೋಪಗಳು ಕೇಳಿಬಂದಿದ್ದವು. ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಡಿಡಿಸಿಎ ಹಗರಣ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಸಂಬಂಧಿಸಿದ ನ್ಯಾಷನಲ್ ಹೆರಾಲ್ಡ್‌ ಪ್ರಕರಣ, ಅರುಣಾಚಲ ಪ್ರದೇಶದ ರಾಜಕೀಯ ಬಿಕ್ಕಟ್ಟು ವಿವಾದ ಉಭಯ ಸದನಗಳಲ್ಲೂ ಪ್ರತಿಧ್ವನಿಸಿದವು. 

ಮುಂಗಾರು ಅಧಿವೇಶನದಂತೆ ಈ ಅಧಿವೇಶನದಲ್ಲೂ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಾಂಗ್ರೆಸ್ ಸದಸ್ಯರ ವಿರುದ್ಧ ಅಸಮಾಧಾನ ಹೊರಹಾಕಿದರು. ಮುಂಗಾರು ಅಧಿವೇಶನದಲ್ಲಿ ಸುಮಿತ್ರಾ  ಕಾಂಗ್ರೆಸ್‌ನ 25 ಸಂಸದರನ್ನು ಅಮಾನತು ಮಾಡಿದ್ದರು.

ಮೂರು ಮಸೂದೆಗೆ ಅಂಗೀಕಾರ: ರಾಜ್ಯಸಭೆಯಲ್ಲಿ ಕೊನೆಯ ದಿನವಾದ ಬುಧವಾರ ಯಾವುದೇ ಚರ್ಚೆಯಿಲ್ಲ ದೆಯೇ ಮೂರು ಮಸೂದೆಗಳಿಗೆ ಅಂಗೀಕಾರ ಲಭಿಸಿದವು. ಈ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಒಟ್ಟು ಒಂಬತ್ತು ಮಸೂದೆಗಳಿಗೆ ಅಂಗೀಕಾರ ದೊರೆತರೂ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್‌ಟಿ) ಬಗ್ಗೆ ಒಮ್ಮತ ಮೂಡಲಿಲ್ಲ. ಕಾಂಗ್ರೆಸ್‌ನ ಮನವೊಲಿಸಲು ಆಡಳಿತ ಪಕ್ಷ ನಡೆಸಿದ ಪ್ರಯತ್ನ ಕೊನೆಯವರೆಗೂ ಫಲ ಕಾಣಲಿಲ್ಲ.

ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡುವ ಮುನ್ನ ಮಾತನಾಡಿದ ಸಭಾಧ್ಯಕ್ಷ ಹಮೀದ್‌ ಅನ್ಸಾರಿ, ‘ರಾಜ್ಯಸಭೆಯ 237ನೇ ಅಧಿವೇಶನದ ಕೊನೆಯ ಮೂರು ದಿನಗಳು ಅಲ್ಪ ಫಲಪ್ರದವಾಗಿತ್ತು. ಆದರೆ ಹೋದ ವಾರ  ಶಾಸನ ರಚನೆಗೆ ಸಂಬಂಧಿಸಿದ ಕೆಲಸ ನಡೆಯಲೇ ಇಲ್ಲ’ ಎಂದರು.

‘ಗದ್ದಲದ ಕಾರಣ ಸದಸ್ಯರಿಗೆ ಶೂನ್ಯವೇಳೆ ಮತ್ತು ಪ್ರಶ್ನೋತ್ತರ ಅವಧಿಯ ಪೂರ್ಣ ಪ್ರಯೋಜನ ಪಡೆಯಲು ಆಗಲಿಲ್ಲ.  ಅದೇ ರೀತಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಲಿಲ್ಲ’ ಎಂದು ತಿಳಿಸಿದರು.

‘ಸರ್ಕಾರದಿಂದ ಕಲಾಪ ವ್ಯರ್ಥ’
ನವದೆಹಲಿ:
ಎನ್‌ಡಿಎ ಸರ್ಕಾರ ದುರಹಂಕಾರ ಹಾಗೂ ಸೇಡಿನ ರಾಜಕಾರಣ ಮಾಡುವುದನ್ನು ಬಿಟ್ಟು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕೆಂದು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಬುಧವಾರ ಕಿವಿಮಾತು ಹೇಳಿತು.

ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಸರಿಯಾಗಿ ಕಲಾಪ ನಡೆಯದಿರುವುದಕ್ಕೆ ವಿರೋಧ ಪಕ್ಷಗಳನ್ನು ದೂರುತ್ತಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌, ವಿರೋಧ ಪಕ್ಷಗಳ ಬೇಡಿಕೆಗಳಿಗೆ ಬಿಡಿಗಾಸಿನ ಕಿಮ್ಮತ್ತೂ ಕೊಡದೆ ಕೇಂದ್ರ ಸರ್ಕಾರ ಸರ್ವಾಧಿಕಾರಿಯಾಗಿ ವರ್ತಿಸಿತು ಎಂದು ಆರೋಪಿಸಿತು.

ಸರ್ಕಾರ ವಿರೋಧ ಪಕ್ಷಗಳನ್ನು ಮುಗಿಸಲು ಹೊರಟಿದೆ. ವಿರೋಧ ಪಕ್ಷ ಮುಕ್ತ ಭಾರತದ ನಿರ್ಮಾಣಕ್ಕೆ ಪ್ರಯತ್ನಿ ಸುತ್ತಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂನಬಿ ಆಜಾದ್‌ ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದರು.

₹ 9.9 ಕೋಟಿ ನಷ್ಟ
ಲೋಕಸಭೆ ಮತ್ತು ರಾಜ್ಯಸಭೆ ಕಲಾಪಕ್ಕೆ ಪ್ರತಿ ನಿಮಿಷಕ್ಕೆ ಅಂದಾಜು ₹ 29 ಸಾವಿರ ವೆಚ್ಚವಾಗುತ್ತದೆ. ರಾಜ್ಯಸಭೆ ಕಲಾಪಕ್ಕೆ ಅಡ್ಡಿ ಉಂಟಾದ ಕಾರಣ ಸರ್ಕಾರದ ಬೊಕ್ಕಸಕ್ಕೆ ₹ 9.9 ಕೋಟಿಯಷ್ಟು ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಧಿವೇಶನದ ಮುಖ್ಯಾಂಶಗಳು
* ಲೋಕಸಭೆಯಲ್ಲಿ 114 ತಾಸುಗಳ ಕಲಾಪ ನಿಗದಿಯಾಗಿತ್ತು. ಇದಕ್ಕಿಂತ ಒಂದು ಗಂಟೆ ಅಧಿಕ (115 ಗಂಟೆ) ತಾಸುಗಳ ಕಲಾಪ ನಡೆದಿದೆ.

* ರಾಜ್ಯಸಭೆಯಲ್ಲಿ 112 ತಾಸುಗಳ ಕಲಾಪ ನಡೆಯಬೇಕಿತ್ತು. ಆದರೆ ವಿರೋಧ ಪಕ್ಷಗಳ ಗದ್ದಲದ ಕಾರಣ 47 ತಾಸುಗಳ ಕಲಾಪ ನಷ್ಟವಾಗಿದೆ.

* ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ (ಜಿಎಸ್‌ಟಿ) ಈ ಬಾರಿಯೂ ಅಂಗೀಕಾರ ದೊರೆಯಲಿಲ್ಲ.

* ಶಾಸನ ರಚನೆಗೆ ಸಂಬಂಧಪಡದ ವಿಚಾರಗಳಿಗೆ ಲೋಕಸಭೆಯಲ್ಲಿ ಸುಮಾರು 50 ಮತ್ತು ರಾಜ್ಯಸಭೆಯಲ್ಲಿ 37 ಗಂಟೆಗಳನ್ನು ವ್ಯಯಿಸಲಾಗಿದೆ.

* ಬಾಲನ್ಯಾಯ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರೆತಿದೆ. ಮಸೂದೆಯ ಅಂಗೀಕಾರಕ್ಕೆ ರಾಜ್ಯಸಭೆ ಡಿಸೆಂಬರ್‌ 22 ರಂದು ಸತತ ಐದು ಗಂಟೆಗಳ ಕಾಲ ಕೆಲಸ ನಿರ್ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT