ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಜಾನಪದ ಕಲೆ ಪ್ರದರ್ಶನ

‘ಹಳ್ಳಿಹಬ್ಬ’ದಲ್ಲಿ ಆಹಾರ ಪ್ರಿಯರನ್ನು ಸೆಳೆದ ಭಕ್ಷ್ಯಗಳು
Last Updated 3 ಅಕ್ಟೋಬರ್ 2015, 20:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಹಳ್ಳಿಯ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ಗ್ರಾಮೀಣ ಆಟಗಳನ್ನು ಆಡಿ ನಲಿದರು. ಜಾನಪದ ಕಲೆಗಳ ಪ್ರದರ್ಶನವು ಗಮನ ಸೆಳೆಯಿತು...

ಈ ದೃಶ್ಯಗಳು ಕಂಡುಬಂದಿದ್ದು ವಿದ್ಯಾರಣ್ಯ ಸಂಸ್ಥೆಯು ರೀಚಿಂಗ್ ಹ್ಯಾಂಡ್ಸ್‌ ಮತ್ತು ಇಂಡಿಯಾ ಕೇರ್‌್ಸ  ಸಂಸ್ಥೆಗಳ ಜತೆಗೂಡಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಹಳ್ಳಿಹಬ್ಬ’ ಕಾರ್ಯಕ್ರಮದಲ್ಲಿ.

ಸಂಸ್ಥೆಯ ವತಿಯಿಂದ ಜನಪದ ಆಟಗಳಿಗೆ ಪರಿಕರಗಳ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ದೊಡ್ಡವರು ಲಗೋರಿ, ಬುಗುರಿ, ಕುಂಟಾಬಿಲ್ಲೆ, ಆಣೆಕಲ್ಲು, ಕೋಲಾಟ, ಪಗಡೆ, ಚೌಕಾಬಾರ, ಚಿನ್ನಿ ದಾಂಡು, ಬುಗುರಿ, ಗೋಲಿ, ಹಾವು ಏಣಿ ಆಟ ಆಡಿ ನಲಿದರು.

ರಾಗಿ ಬೀಸುವ, ಕುಟ್ಟುವ ಮತ್ತು ಮಕ್ಕಳಿಗೆ ಕತೆ ಹೇಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಮಣ್ಣಿನ ಗೊಂಬೆ, ಮಡಿಕೆ ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ವಿವಿಧ ಸಂಘ ಸಂಸ್ಥೆಗಳ ವತಿಯಿಂದ   ಕರ ಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಡೊಳ್ಳು ಕುಣಿತ, ಕಂಸಾಳೆ, ಮರಗಾಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲೆಗಳ ಪ್ರದರ್ಶನವು ಜನರನ್ನು ರಂಜಿಸಿತು.

ಆಹಾರಪ್ರಿಯರನ್ನು ಸೆಳೆದ ಭಕ್ಷ್ಯಗಳು: ರಾಗಿಮುದ್ದೆ ಸೊಪ್ಪು ಸಾರು, ರಾಗಿ ರೊಟ್ಟಿ, ಹುಚ್ಚೆಳ್ ಚಟ್ನಿ ಸೇರಿದಂತೆ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಕಾರ್ಯಕ್ರಮಕ್ಕೆ ಬಂದಿದ್ದ ಜನರು ಸವಿದರು.

ಗಮನ ಸೆಳೆದ ಉದ್ದ ಜಡೆ, ಮೀಸೆ ಸ್ಪರ್ಧೆ: ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಉದ್ದ ಜಡೆ ಮತ್ತು ಪುರುಷರಿಗೆ ಉದ್ದ ಮೀಸೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂತಿಮ ಸುತ್ತಿನ ಸ್ಪರ್ಧೆ ಭಾನುವಾರ ನಡೆಯಲಿದೆ.

ಗೋಲಿ, ಬುಗುರಿ ಆಡಿದ ರಾಮಲಿಂಗಾರೆಡ್ಡಿ:  ಕಾರ್ಯಕ್ರಮದ ಉದ್ಘಾಟನೆಗೆ ಬಂದಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬುಗುರಿ, ಚಿನ್ನಿ ದಾಂಡು, ಗೋಲಿ, ಲಗೋರಿ ಆಡಿ ಸಂಭ್ರಮಿಸಿದರು. ನಂತರ ಮಾತನಾಡಿ, ‘ನಗರ ಪ್ರದೇಶಗಳಲ್ಲಿರುವವರಿಗೆ ಗ್ರಾಮೀಣ ಭಾಗದ ಆಟಗಳು, ತಿಂಡಿ ತಿನಿಸುಗಳು ಮತ್ತು ಅಲ್ಲಿನ ಸಂಸ್ಕೃತಿಯ ಬಗ್ಗೆ ಪರಿಚಯ ಇರುವುದಿಲ್ಲ. ಇದನ್ನು ಪರಿಚಯಿಸಲು ಸಂಸ್ಥೆಯು ಹಳ್ಳಿಹಬ್ಬ ಎಂಬ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕೆಲಸ’ ಎಂದರು.

ವಿದ್ಯಾರಣ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪ್ರಕಾಶ್‌ ಮಾತನಾಡಿ, ‘ಸಂಸ್ಥೆಯ ವತಿಯಿಂದ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಮುಂದೆ ಪ್ರತಿ ವರ್ಷ ‘ಹಳ್ಳಿಹಬ್ಬ’ ಕಾರ್ಯಕ್ರಮ ಆಯೋಜಿಸಲಾಗುವುದು.  ಭಾನುವಾರವೂ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT