ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಯಾ: ಆನ್‌ಲೈನ್‌ ಪಿಂಡ ಪ್ರದಾನದ ಸುತ್ತ...

Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ತೀರಿಹೋಗಿರುವ ಲೇಖಕ ಖುಷ್ವಂತ್‌ ಸಿಂಗ್‌ ಹಾಗೂ ರಾಜೇಂದ್ರ ಯಾದವ್‌ ಅವರಿಗೆ ಚಂದನ್‌ ಸಿಂಗ್‌ ಪಿಂಡ ಪ್ರದಾನವನ್ನು ಫಲ್ಗು ನದಿ ದಡದ ಗಯೆಯಲ್ಲಿ ನಡೆಸುತ್ತಿದ್ದರು. ಗಯೆಯಲ್ಲಿ ವ್ಯಾಪಾರ ಮಾಡುತ್ತಿರುವ ಮೂವತ್ತೆಂಟು ವರ್ಷಗಳ ಚಂದನ್ ಸಿಂಗ್‌ ಅವರಿಗೆ ಖುಷ್ವಂತ್‌ ಸಿಂಗ್‌ ಆಗಲೀ, ರಾಜೇಂದ್ರ ಯಾದವ್‌ ಆಗಲೀ ಸಂಬಂಧಿಕರಲ್ಲ. ಅವರನ್ನು ಚಂದನ್‌ ಎಂದೂ ಭೇಟಿ ಮಾಡಿದ್ದೂ ಇಲ್ಲ.

ಈ ವರ್ಷ ಸೆಪ್ಟೆಂಬರ್‌ನಲ್ಲಿ ಹದಿನೈದು ದಿನಗಳು ಪಿತೃ ಪಕ್ಷವಿತ್ತು. ಇದು ತೀರಿಹೋಗಿರುವ ಹಿರಿಯರಿಗೆ ವರ್ಷಕ್ಕೆ ಒಂದು ಸಲ ತೋರಿಸುವ ಗೌರವ ಹಾಗೂ ಅವರು ಮೋಕ್ಷ ಪಡೆಯಲೆಂದು ನಡೆಸುವ ಧಾರ್ಮಿಕ ಕಲಾಪ. ಈ ಪಿತೃಪಕ್ಷ ಮೇಳದಲ್ಲಿ ಗಯಾದ ಫಲ್ಗು ನದಿ ತೀರದಲ್ಲಿ ಇವರಿಬ್ಬರ ಜೀವಕ್ಕೂ ಮೋಕ್ಷ ದೊರೆಯಲಿ ಎಂದು ರಾಜೇಂದ್ರ ಸಿಂಗ್‌ ಪಿಂಡ ಪ್ರದಾನ ಮಾಡಿದ್ದಾರೆ.
ಇದೇ ವರ್ಷ ಜನವರಿಯಲ್ಲಿ ಕೊನೆಯುಸಿರು ಎಳೆಯುವ ಮುನ್ನ ಸುರೇಶ್‌ ಅವರು ಪಿತೃಪಕ್ಷದ ಮೇಳದಲ್ಲಿ ತೀರಿಹೋಗಿರುವ ಅಪರಿಚಿತರಿಗೆ ಪಿಂಡ ಪ್ರದಾನ ಮಾಡುವುದನ್ನು ಬಿಡಬಾರದು ಎಂದು ಮಗನಿಗೆ ಸೂಚನೆ ಕೊಟ್ಟಿದ್ದರಂತೆ. ತಂದೆ ಸುರೇಶ್‌ ನಾರಾಯಣನ್‌ 2001ರಲ್ಲಿ ಆರಂಭಿಸಿದ್ದ ಈ ಪದ್ಧತಿಯನ್ನು ಮಗ ಚಂದನ್‌ ಸಿಂಗ್ ಮುಂದುವರೆಸಿದ್ದಾರೆ. ತಂದೆಯ ಇಚ್ಛೆಯನ್ನು ತಾನು ನೆರವೇರಿಸುತ್ತಿರುವುದಾಗಿ ಚಂದನ್‌ ಹೇಳುತ್ತಾರೆ.

ತೀರಿಹೋದ ಪ್ರಸಿದ್ಧರಿಗಲ್ಲದೆ ಆಂಧ್ರಪ್ರದೇಶದ ಮೆಹಬೂಬ್‌ನಗರದ ಬಸ್‌ ದುರಂತದಲ್ಲಿ ಸುಟ್ಟು ಕರಕಲಾದ
45 ಮಂದಿಗೆ, ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಬೆಂಗಳೂರು–ನಾಂದೇಡ್‌ ಎಕ್ಸ್‌ಪ್ರೆಸ್‌ ರೈಲು ಅಪಘಾತದಲ್ಲಿ ಮೃತರಾದ
12 ಮಕ್ಕಳಿಗೆ ಚಂದನ್‌ ಗಯೆಯಲ್ಲಿ ಪಿಂಡ ಪ್ರದಾನ ಮಾಡಿದ್ದಾರೆ. ಇದಲ್ಲದೆ ಇವರು ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ದಾಳಿಗೆ ಬಲಿಯಾದ 15 ಪೊಲೀಸರಿಗೆ, ಔರಂಗಾಬಾದ್‌ನಲ್ಲಿ ಮಾವೋವಾದಿಗಳೊಡನೆ ನಡೆದ ಸಂಘರ್ಷದಲ್ಲಿ ಮೃತರಾದ ಡೆಪ್ಯುಟಿ ಕಮಾಂಡರ್‌ ಇಂದ್ರಜಿತ್‌ ಸಿಂಗ್‌ ಅವರಿಗೆ, ಇರಾಕ್‌ನಲ್ಲಿ ಹತ್ಯೆಗೆ ಈಡಾದ ಪತ್ರಕರ್ತ ಜೇಮ್ಸ್‌ ಫೋಲಿ ಅವರಿಗೂ ಚಂದನ್ ಸಿಂಗ್ ಪಿಂಡ ಪ್ರದಾನ ಮಾಡಿದ್ದಾರೆ.

ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯುವ ‘ಜೀವಗಳ ಮೇಳ’ ಎಂದು ಹೆಸರುವಾಸಿಯಾಗಿರುವ ಈ ಮೇಳಕ್ಕೆ ಧಾರ್ಮಿಕ, ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವವಿದೆ. ಒಂದು ಅಂದಾಜಿನ ಪ್ರಕಾರ ಈ ಅವಧಿಯಲ್ಲಿ ಸುಮಾರು ಎಂಟು ಲಕ್ಷ ಜನರು ಗಯೆಗೆ ಭೇಟಿ ನೀಡುವರು. ಈ ಸಮಯದಲ್ಲಿ ಭಾರತದ ಬೇರೆ ಬೇರೆ ಭಾಗಗಳಿಂದ ಅಲ್ಲದೇ ಪಕ್ಕದ ನೇಪಾಳ, ಬಾಂಗ್ಲಾದೇಶದಿಂದಲೂ ಪಿಂಡವನ್ನು ಅರ್ಪಿಸಿ ತಮ್ಮ ಪೂರ್ವಿಕರನ್ನು ಮೋಕ್ಷಕ್ಕೆ ತಲುಪಿಸಲು ಯಾತ್ರಿಕರು ಗಯೆಗೆ ಬರುತ್ತಾರೆ.

ಹಾಗಾಗಿ ಈ ತಿಂಗಳಿನಲ್ಲಿ ಗಯೆಯ 48 ವಿವಿಧ ವೇದಿಕೆಗಳಲ್ಲಿ ಹಲವು ಬಗೆಯ ಧಾರ್ಮಿಕ ಕಲಾಪಗಳ ಜತೆಗೆ ಪಿಂಡ ಪ್ರದಾನಗಳು ನಡೆಯುತ್ತವೆ. ಇಂತಹ ಕೆಲವು ಸ್ಥಳಗಳೆಂದರೆ ಫಲ್ಗು ನದಿ, ರಾಮ ಶಿಲಾ, ವೈತರಣೀ ಕುಂಡ, ಧರ್ಮಕುಂಡ, ಸೂರ್ಯಕುಂಡ, ಸೀತಾ ಕುಂಡ ಹಾಗೂ ಬ್ರಹ್ಮ ಸರೋವರ.

ತಾವು ತೀರಿಕೊಳ್ಳುವ ಕೆಲವು ತಿಂಗಳುಗಳ ಮೊದಲು ಸುರೇಶ್‌ ನಾರಾಯಣನ್‌ ಅವರು ಸಿತಾರ್‌ ದಿಗ್ಗಜ ಪಂಡಿತ್‌ ರವಿಶಂಕರ್‌, ಹಿನ್ನೆಲೆ ಗಾಯಕಿ ಶಂಷದ್‌ ಬೇಗಂ, ಬಾಲಿವುಡ್‌ ನಟ ಪ್ರಾಣ್‌, ಮಿಥಿಲೆಯ ಚಿತ್ರಕಲಾವಿದೆ ಮಹಾಸುಂದರಿ ದೇವಿ ಅವರಿಗೆ ಪಿಂಡ ಪ್ರದಾನ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಚಂದನ್‌ ಸಿಂಗ್, ಅವರ ತಂದೆಯ ನೆನಪಿನಲ್ಲಿ ಬಾಬು ಸುರೇಶ್‌ ನಾರಾಯಣನ್‌ ಸ್ಮಾರಕ ಟ್ರಸ್ಟ್‌ ರಚಿಸಿಕೊಂಡಿದ್ದು, ಸಾಮೂಹಿಕ ಪಿಂಡ ಪ್ರದಾನ ಮಾಡುವ ಉದ್ದೇಶ ಹೊಂದಿದ್ದಾರೆ. ‘ಈ ಟ್ರಸ್ಟ್‌ ಮೂಲಕ ಗಯೆಗೆ ಬರುವ ಯಾತ್ರಾರ್ಥಿಗಳ ಯೋಗ ಕ್ಷೇಮದ ಕೆಲಸ ಮಾಡುತ್ತೇವೆ. ಜತೆಗೆ ಪಿತೃಪಕ್ಷ ಮೇಳದ ಹದಿನೇಳು ದಿನಗಳೂ ಧಾರ್ಮಿಕ ಕಲಾಪದೊಂದಿಗೆ ಅಗತ್ಯವಿದ್ದವರಿಗೆ ಔಷಧಿಗಳನ್ನು ಒದಗಿಸಲಾಗುತ್ತದೆ’ ಎನ್ನುತ್ತಾರೆ.

ತಮ್ಮ ಊರುಗಳಿಂದ ಸಾವಿರಾರು ಕಿ.ಮೀ. ದೂರದ ಗಯೆಗೆ ಬಂದು ಮೃತರ ಪೂರ್ವಿಕರಿಗೋಸ್ಕರ ಧಾರ್ಮಿಕ ಕಲಾಪ ಮಾಡಲು ಅನೇಕರಿಗೆ ಸಾಧ್ಯವಿರುವುದಿಲ್ಲ. ಅಂಥವರಿಗಾಗಿ ಹೊಸ ವ್ಯವಸ್ಥೆಯೊಂದು ಹುಟ್ಟಿಕೊಂಡಿದೆ.

ಮೃತರಿಗೆ ಕುಳಿತಲ್ಲಿಂದಲೇ ಕಂಪ್ಯೂಟರ್‌ ಮೌಸ್‌ ಬಳಸಿ ಕ್ಲಿಕ್ಕಿಸಿ ಪಿಂಡ ಪ್ರದಾನ ಮಾಡಬಹುದಾದ ಆನ್‌ಲೈನ್‌ ವ್ಯವಸ್ಥೆ ಈಗ ಲಭ್ಯವಿದೆ. ತರಬೇತಿ ಪಡೆದಿರುವ ಪುರೋಹಿತರಿಗೆ ನಿಗದಿತ ಶುಲ್ಕವನ್ನು ನೀಡಿ ಈ ಸೇವೆ ಪಡೆಯಬಹುದು. ಕಾಲಿಘಾಟ್‌ ದೇವಾಲಯ, ದಕ್ಷಿಣೇಶ್ವರದ ದೇಗುಲ ಹಾಗೂ ತಿರುಮಲ ತಿರುಪತಿಯ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಚಾಲ್ತಿಯಲ್ಲಿರುವ ಆನ್‌ಲೈನ್‌ ಪೂಜೆಯ ವ್ಯವಸ್ಥೆಯೇ ಈ ಆನ್‌ಲೈನ್‌ ಪಿಂಡ ಪ್ರದಾನಕ್ಕೆ ಸ್ಫೂರ್ತಿ.

ಅನೇಕ ಡಾಟ್‌ಕಾಂಗಳು, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಗಯೆಯಲ್ಲಿರುವ ಇರುವ ಒಬ್ಬ ಬ್ರಾಹ್ಮಣ ಪಂಡ (ಪೂಜಾರಿ) ಮೂಲಕ ಈ ಸೇವೆಯನ್ನು ಒದಗಿಸುತ್ತಿವೆ. ಗಯೆಯಲ್ಲಿ ಧಾರ್ಮಿಕ ಕಲಾಪ ನಡೆಯುವ ದಿನವನ್ನು ಮೊದಲೇ ವಿದೇಶದಲ್ಲಿರುವವರಿಗೆ ತಿಳಿಸಲಾಗಿರುತ್ತದೆ, ಅವರು ಇಲ್ಲಿರುವ ಪೂಜಾರಿಯ ನಿರ್ದೇಶನದಂತೆ ವಿದೇಶದಲ್ಲೇ ಕೆಲವು ಆಚರಣೆಗಳನ್ನು ನಡೆಸಬಹುದು.
ಆದರೆ ಈ ಆನ್‌ಲೈನ್‌ ಸೌಲಭ್ಯದ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪೂಜೆಗೆ ಸಂಬಂಧಿಸಿದವರು ಪೂಜೆ ನಡೆಯುವ ಸ್ಥಳದಲ್ಲಿ ಇರಬೇಕು. ಯಾರು ಈ ಆನ್‌ಲೈನ್‌ ಸೇವೆ ಆರಂಭಿಸಿದ್ದಾರೋ ಅವರಿಗೆ ಈ ಕುರಿತು ಏನೂ ತಿಳಿವಳಿಕೆ ಇಲ್ಲ’ ಎನ್ನುತ್ತಾರೆ ಅಲ್ಲಿನ ಒಬ್ಬ ಸ್ಥಳೀಯ ಪೂಜಾರಿ.

ಕಳೆದ ವರ್ಷ ಇಬ್ಬರು ಮುಸ್ಲಿಮರು ಹಾಗೂ ಇಬ್ಬರು ಜಪಾನ್‌ ದೇಶದವರೂ ಪಿಂಡಪ್ರದಾನ ಮಾಡಿದ್ದು ಸುದ್ದಿಯಾಗಿತ್ತು ಎನ್ನುತ್ತಾರೆ ಗಯಾ ಮೂಲದ ಪತ್ರಕರ್ತ ಅಲೋಕ್‌.

ಮುಜಫರ್‌ ನಗರದ ಮೊಹಮ್ಮದ್‌ ಮಕ್ಬೂಲ್‌ ಹಾಗೂ ಛಪ್ರಾದ ಅಹಮದ್‌ ಅಲಿ, ಹಿಂದೂಗಳ ಸನಾತನ ಧಾರ್ಮಿಕ ಕ್ಷೇತ್ರವಾದ ಗಯೆಗೆ ಬಂದು ಅವರ ಪೂರ್ವಿಕರಿಗೆ ಪಿಂಡಪ್ರದಾನ ನಡೆಸಿದ್ದರು. ಜಪಾನಿನ ಯುಕೊ ಮುಸುಡ ಮತ್ತು ಯುಕ ಪಿಸುಡ ಕೂಡ ಗಯೆಯಲ್ಲಿ ಪಿಂಡ ಪ್ರದಾನ ಮಾಡಿದ್ದು ಅದಕ್ಕಿಂತಲೂ ವಿಶೇಷ. ಈ ಪಿತೃಪಕ್ಷ ನೋಡಲೆಂದೇ ಜಪಾನಿನ ಟೊಮಕ ಲೀ ಗಯೆಗೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT