ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಸು ಭೂಮಿಯಲ್ಲಿ ಹಸಿರು ಚಿಗುರಿಸಿ

Last Updated 27 ಜೂನ್ 2016, 19:30 IST
ಅಕ್ಷರ ಗಾತ್ರ

ಇವರ ಹೆಸರು  ಭಾಷುಸಾಬ್ ಗಡಾದ್. ಊರು ಕೊಪ್ಪಳ ತಾಲ್ಲೂಕಿನ ಅಳವಂಡಿ ಗ್ರಾಮ. ನೀರಿಲ್ಲವೆಂದು ಗೊಣಗಾಡುತ್ತಾ ಏನು ಮಾಡಬೇಕೆಂದು ತೋಚದವರಿಗೆ ಇವರ ತೋಟದಲ್ಲಿ ಉತ್ತರ ಕಾಣುತ್ತದೆ.

ಕೊಪ್ಪಳ ಬಯಲುಸೀಮೆ ಪ್ರದೇಶ. ತುಂಗಭದ್ರ ಡ್ಯಾಂ ಇದೆ ಅನ್ನೋದಷ್ಟೆ ಹೆಗ್ಗಳಿಕೆ. ಆದರೆ ತುಂಗಭದ್ರ ನದಿಯಿಂದ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನ ಕೆಲವೇ ಹಳ್ಳಿಗಳ ರೈತರಿಗಷ್ಟೇ ಅನುಕೂಲವಾಗಿದೆ. ಮಿಕ್ಕೆಲ್ಲ ತಾಲ್ಲೂಕಿನ ರೈತರು ಬರೀ ಒಣಬೇಸಾಯವನ್ನೇ ಅವಲಂಬಿಸಿದ್ದಾರೆ.

ಮಳೆಯಾದರೆ ಬೆಳೆ, ಇಲ್ಲವಾದರೆ ಗುಳೆ; ಇಂತಹ ಪರಿಸ್ಥಿತಿ ಮಧ್ಯೆಯೂ ಭಾಷುಸಾಬ್ ನಿರಾಶೆ ಹೊಂದದೆ ಕೊಳವೆ ಬಾವಿ ಕೊರೆಸಿ ಹನಿ ನೀರಾವರಿ ಮೂಲಕ ಬದುಕನ್ನು ಹಸನಾಗಿಸಿಕೊಂಡಿದ್ದಾರೆ. ಹನಿ ನೀರಾವರಿ ಮೂಲಕ ಸಮೃದ್ಧ ಬೆಳೆ ಬೆಳೆದು ಆದಾಯ ಗಳಿಸುತ್ತಿದ್ದಾರೆ.

3 ಎಕರೆಯಲ್ಲಿ ವಿವಿಧ ಫಲ
20 ವರ್ಷಗಳಿಂದ ‘ಮೆಕ್ಯಾನಿಕ್’ ಆಗಿ ಕೆಲಸ ಮಾಡುತ್ತಿದ್ದ ಭಾಷುಸಾಬ್, ಅಲ್ಪ-ಸ್ವಲ್ಪ ಹಣ ಉಳಿಸಿ 3 ಎಕರೆ ಜಮೀನು ಖರೀದಿಸಿದ್ದಾರೆ. ಅದು ಗರಸು ಭೂಮಿ (ಕಲ್ಲು ಮಿಶ್ರಿತ ನೆಲ).

ಆದರೆ ಈ ನೆಲದಲ್ಲಿ ಯಾವುದೇ ಬೆಳೆಯೂ ಸರಿಯಾಗಿ ಬೆಳೆಯುತ್ತಿರಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದರು ಭಾಷುಸಾಬ್. ಕೆಲಸ ಬಿಟ್ಟು ಈ ನೆಲದಲ್ಲಿಯೇ ಏನಾದರೂ ಬೆಳೆ ತೆಗೆಯಲೇಬೇಕೆಂದು ತೀರ್ಮಾನಿಸಿ ಕೊಳವೆ ಬಾವಿ ಕೊರೆಸಿದರು. ಎರಡು ಇಂಚು ನೀರು ಸಿಕ್ಕಿತು.

ಈ ಕೊಳವೆ ಬಾವಿ ಮೂಲಕ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡು ದಾಳಿಂಬೆ, ತೆಂಗು, ಮಾವು, ಚಿಕ್ಕು ಪೇರಲ, ಹೆಬ್ಬೇವು ಗಿಡ ಬೆಳೆಸಿ ಉತ್ತಮ ಫಸಲು ಪಡೆಯುತ್ತಿದ್ದಾರೆ. ಕಟಾವು ಮಾಡಿದ ಹಣ್ಣುಗಳನ್ನು ಬೆಂಗಳೂರು ಮಾರುಕಟ್ಟೆಗೆ ಕಳಿಸುತ್ತಾರೆ.

ಪ್ರತಿ ವರ್ಷ  ಹಣ್ಣುಗಳ ಮಾರಾಟದಿಂದ ಸಾಕಷ್ಟು ಆದಾಯ ಗಳಿಸಿದ್ದಾರೆ. ಇವರ ಕಾಯಕಕ್ಕೆ ಇವರ ಪತ್ನಿ ಹುಸೇನ್‌ಬಿ ಅವರ ಸಾಥ್ ಇದೆ. ಜೈವಿಕ ಗೊಬ್ಬರ ಬಳಕೆ ಭಾಷುಸಾಬ್‌ರು ತಮ್ಮ ಹೊಲಕ್ಕೆ ರಾಸಾಯನಿಕ ಗೊಬ್ಬರ ಸೋಕಿಸಿಲ್ಲ.

ಎಲ್ಲವೂ ಸಾವಯವ. ಅದಕ್ಕಾಗಿ ಹೊಲದಲ್ಲಿಯೇ ತೊಟ್ಟಿ ನಿರ್ಮಿಸಿ ಅದರಲ್ಲಿ ಕಸ-ಕಡ್ಡಿ ಹಾಕಿ ಅದಕ್ಕೆ ನೀರು ಮಿಶ್ರಣ ಮಾಡುತ್ತಾರೆ. ಆ ನೀರನ್ನು ಸೋಸಿ ಮತ್ತೊಂದು ಗುಂಡಿಯಲ್ಲಿ ಸಂಗ್ರಹಿಸುತ್ತಾರೆ. ಈ ನೀರನ್ನು ಹನಿ ನೀರಾವರಿ ಮೂಲಕ ಎಲ್ಲಾ ಗಿಡಗಳಿಗೂ ಪೂರೈಸುತ್ತಾರೆ.

ಇದರಿಂದ ಹಣ್ಣುಗಳಿಗೆ ಸತ್ವ ಸಿಕ್ಕು ಚೆನ್ನಾಗಿ ಬೆಳೆಯುತ್ತವೆ. ಅಲ್ಲದೆ ಗಿಡಗಳಿಗೆ ಕೀಟನಾಶಕ ಸಿಂಪಡಿಸಲು ಟ್ಯಾಕ್ಟ್ರರ್ ಬಳಸುತ್ತಾರೆ. ಭಾಷುಸಾಬ್ ಟ್ರ್ಯಾಕ್ಟರ್ ನಡೆಸಿದರೆ, ಇವರ ಪತ್ನಿ ಹಿಂದೆ ಕೂತು ಸ್ಪ್ರೇ ಮೂಲಕ ಔಷಧಿ ಸಿಂಪಡಿಸುತ್ತಾರೆ.

ರಕ್ಷಣೆಗಾಗಿ ಅಟ್ಟ, ತಂತಿ ಬೇಲಿ: ತೋಟದ ರಕ್ಷಣೆಗಾಗಿ ಸುತ್ತಲೂ ತಂತಿಬೇಲಿ ಹಾಕಿಸಿದ್ದಾರೆ. ಇದರಿಂದ ದನ-ಕರು-ಜನರ ಕಾಟ ತಪ್ಪಿದೆ. ಜೊತೆಗೆ ರಾತ್ರಿಯೆಲ್ಲಾ ಕಾವಲು ಕಾಯಲು ಎತ್ತರವಾಗಿ ಅಟ್ಟ ನಿರ್ಮಿಸಿಕೊಂಡಿದ್ದಾರೆ. ರಾತ್ರಿ ತೋಟದಲ್ಲಿ ಕಾವಲು ಕಾಯುತ್ತಾರೆ ಸುಮಾರು 30 ಅಡಿ ಎತ್ತರದ ಈ ಅಟ್ಟವನ್ನು ಭಾಷುಸಾಬರು ಸರಸರನೇ ಏರಿ ಇಳಿಯುತ್ತಾರೆ.

ಪ್ರತಿ ನಿತ್ಯ ನಾಲ್ಕು ಗಂಟೆಗೆ ಏಳುವ ಅಭ್ಯಾಸ ಮಾಡಿಕೊಂಡಿರುವ ಇವರು ನಮಾಜ್ ಮುಗಿಸಿ ಒಂದು ಗಂಟೆ ಯೋಗ ಮಾಡುತ್ತಾರೆ. ನಂತರ ತೋಟದ ಕೆಲಸದಲ್ಲಿ ತೊಡಗುತ್ತಾರೆ. ಇವರ ಮಕ್ಕಳಲ್ಲಿ ಇಬ್ಬರು ಸರ್ಕಾರಿ ನೌಕರಿಯಲ್ಲಿದ್ದಾರೆ. ಮತ್ತೊಬ್ಬರು ಗ್ಯಾರೇಜ್ ನಡೆಸುತ್ತಾರೆ. ‘ಒಕ್ಕಲುತನ್ದಾಗ ಸಿಗುವಷ್ಟು ಸಂತೃಪ್ತಿ ಬೇರ್‍್ಯಾವ ಕೆಲ್ಸದಾಗ ಸಿಗಂಗಿಲ್ರಿ. ಇದು ಕಷ್ಟದ, ಶ್ರಮದ ಬದುಕು; ಆದ್ರ ಇದರಲ್ಲಿ ಸುಖ ಅಡಗಿದೆ ’ ಎನ್ನುತ್ತಾರೆ ಭಾಷುಸಾಬ.

ರೈತರ ಆತ್ಮಹತ್ಯೆಗೆ ಆತಂಕ ವ್ಯಕ್ತಪಡಿಸುವ ಇವರು, ಇದಕ್ಕೆ ಆಡಳಿತ ಮತ್ತು ಈಗಿನ ಭ್ರಷ್ಟ ಮಾರುಕಟ್ಟೆ ವ್ಯವಸ್ಥೆ ಕಾರಣವೆನ್ನುತ್ತಾರೆ. ಚೀನಾದಲ್ಲಿ ಕೃಷಿ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಅಲ್ಲಿ ಕೃಷಿಕರು ಬೆಳೆದ ಬೆಳೆಯನ್ನು ಸರ್ಕಾರವೇ ಖರೀದಿಸಿ ವೈಜ್ಞಾನಿಕ ಬೆಲೆ ನೀಡುತ್ತದೆ. ಇದರಿಂದ ಅಲ್ಲಿನ ರೈತರ ಬದುಕು ಹಸನಾಗಿದೆ. ಆದ್ದರಿಂದ ಸರ್ಕಾರ ರೈತರಿಗೆ ಹಲವು ಸಬ್ಸಿಡಿ ಕೊಡುವುದರ ಬದಲು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ರೈತರಿಗೆ ಅನುಕೂಲ ಕಲ್ಪಿಸಲಿ’ ಎನ್ನುವುದು ಇವರ ಅಭಿಮತ.  ಸಂಪರ್ಕಕ್ಕೆ: 9741338993. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT