ಗರ್ಭದೊಳಗಿನ ಮಗು ಭಾಷೆ ಕಲಿಯುತ್ತದೆ...!

ಲಂಡನ್: ಸಂಶೋಧಕರ ಪ್ರಕಾರ ಮಕ್ಕಳು ಅಮ್ಮನ ಗರ್ಭದಲ್ಲಿದ್ದಾಗಲೇ ಸ್ವರಾಕ್ಷರದ ನಡುವಿನ ವ್ಯತ್ಯಾಸವನ್ನು ಗುರುತಿಸಲು ಆರಂಭಿಸುತ್ತವೆಯಂತೆ. ಇದಕ್ಕೂ ಮುನ್ನ, ನವಜಾತ ಶಿಶುಗಳು ಹುಟ್ಟಿದ ಒಂದು ತಿಂಗಳಲ್ಲಿ  ಶಬ್ದಗಳನ್ನು ಗುರುತಿಸುತ್ತವೆ ಎಂದು ನಂಬಲಾಗಿತ್ತು.

ವಿಜ್ಞಾನಿಗಳು ಕೈಗೊಂಡಿರುವ ಹೊಸ ಅಧ್ಯಯನದ ಪ್ರಕಾರ `ಹತ್ತು ವಾರಗಳ ಗರ್ಭದೊಳಗಿರುವ ಮಗು, ತನ್ನ ತಾಯಿಯಿಂದ ಶಬ್ದವನ್ನು ಗ್ರಹಿಸುವುದು ಹಾಗೂ ನೆನಪಿಟ್ಟುಕೊಳ್ಳುವುದನ್ನು ಕಲಿಯುವ ಸಾಮರ್ಥ್ಯ ಹೊಂದಿರುತ್ತದೆ' ಎಂದು `ಡೈಲಿ ಮೇಲ್' ವರದಿ ಮಾಡಿದೆ.

ಹುಟ್ಟಿದ ಕೆಲವು ಗಂಟೆಗಳಲ್ಲಿ ಮಕ್ಕಳು ತಮ್ಮ ಮಾತೃಭಾಷೆ ಮತ್ತು ವಿದೇಶಿ ಭಾಷೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಅಧ್ಯಯನದಿಂದ ತಿಳಿದಿದ್ದಾರೆ.

`ನಾವು ತಾಯಿಯ ಮಾತಿನ ಧ್ವನಿಯನ್ನು ಕೇಳಿಕೊಂಡೇ ಭಾಷೆ ಕಲಿಕೆಯನ್ನು ಆರಂಭಿಸುತ್ತೇವೆ ಎಂಬುದನ್ನು ಮೂವತ್ತು ವರ್ಷಗಳಿಂದ ನಂಬಿದ್ದೇವೆ' ಎಂದು ಈ ಸಂಶೋಧನೆಯ ನೇತೃತ್ವ ವಹಿಸಿರುವ ಪೆಸಿಫಿಕ್ ಲ್ಯುಥೆರನ್ ವಿಶ್ವವಿದ್ಯಾಲಯದ ಮನಶಾಸ್ತ್ರ ಪ್ರಾಧ್ಯಾಪಕ ಕ್ರಿಸ್ಟೈನ್ ಮೂನ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಗರ್ಭದೊಳಗಿರುವ ಮಗು ನಿಗದಿತವಾದ ಭಾಷೆಯನ್ನು ತನ್ನ ತಾಯಿಯಿಂದಲೇ ಕಲಿಯುತ್ತದೆ ಎನ್ನುವುದು ಈ ಹೊಸ ಅಧ್ಯಯನದ ವಿಶೇಷವಾಗಿದೆ ಎಂದು ಮೂನ್ ಹೇಳಿದ್ದಾರೆ.

ಸ್ವೀಡನ್‌ನ ಟಕೊಮಾ ಮತ್ತು ಸ್ಟಾಕ್‌ಹೋಮ್‌ನಲ್ಲಿ 30 ಗಂಟೆಗಳ ಹಿಂದೆ ಹುಟ್ಟಿದ ನಲ್ವತ್ತು ಬಾಲಕಿಯರು ಮತ್ತು ಬಾಲಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಫಲಿತಾಂಶದ ಪ್ರಕಾರ ಮಕ್ಕಳು ಸ್ವೀಡಿಷ್ ಅಥವಾ ಇಂಗ್ಲಿಷ್ ಭಾಷೆಯ ಸ್ವರಾಕ್ಷರಗಳನ್ನು ಗ್ರಹಿಸಿರುವ ಕುರಿತು ಕಂಪ್ಯೂಟರ್ ಮೂಲಕ ಮಾಹಿತಿ ದಾಖಲಿಸಲಾಗಿದೆ.