ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತವಾಗಲು ಕಾರಣವೇನು?

ಅಂಕುರ - 56
Last Updated 31 ಜುಲೈ 2015, 19:45 IST
ಅಕ್ಷರ ಗಾತ್ರ

ಕೆಲವೊಮ್ಮೆ ಬಸಿರು ನಿಂತಿದೆ ಎಂದು ಮೊದಲ ಟೆಸ್ಟ್‌ಗಳಲ್ಲಿ ಕಂಡು ಬರುತ್ತದೆ. ಅದಕ್ಕೆ ಹಾರ್ಮೋನಿನಲ್ಲಿ ಆಗುವ ಬದಲಾವಣೆಗಳೂ ಕಾರಣವಾಗಿರಬಹುದು. ಆದರೆ ಅಲ್ಟ್ರಾಸೌಂಡ್‌ ಪರೀಕ್ಷೆ ಮಾಡಿಸಿದಾಗ ಗರ್ಭಕೋಶದಲ್ಲಿ ಏನೂ ಇರುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಭ್ರೂಣವು ಅತ್ಯಲ್ಪ ಕಾಲಕ್ಕಾಗಿ ಕಟ್ಟಿರುತ್ತದೆ. ನಂತರ  ಯಾವುದೇ ಅಸಹಜತೆಗಳಿಂದಾಗಿ ಅದರ ಉಳಿವಿನ ಸಾಧ್ಯತೆಗಳು ಕಡಿಮೆಯಾಗುತ್ತವೆ. ಹೃದಯ ಮಿಡಿಯುವ ಮುನ್ನವೇ ಈ ಭ್ರೂಣ ಕಳಚಿಕೊಂಡಿರುತ್ತದೆ.

ಒಂದು ವೇಳೆ ನಿಮ್ಮ ಮಗುವಿನ ಹೃದಯ ಮಿಡಿಯಲು ಆರಂಭಿಸಿದ್ದರೆ ಮೊದಲ ಒಂದೂವರೆ ತಿಂಗಳ ಅವಧಿಯಲ್ಲಿ ಅಲ್ಟ್ರಾಸೌಂಡ್‌ ಪರೀಕ್ಷೆಯಲ್ಲಿ ತಿಳಿದು ಬರುತ್ತದೆ. ಒಂದು ವೇಳೆ ನಿಮ್ಮಲ್ಲಿ ರಕ್ತಸ್ರಾವ ಅಥವಾ ಸೆಡವು ಕಾಣದಿದ್ದಲ್ಲಿ ಆರೋಗ್ಯವಂತರಾಗಿದ್ದೀರಿ ಹಾಗೂ ಗರ್ಭಪಾತದ ಸಾಧ್ಯತೆಗಳು ಕಡಿಮೆ ಎಂದು ಅರ್ಥೈಸಬಹುದು. ನಂತರದ ಪ್ರತಿವಾರವೂ ನಿಮ್ಮ ಮಗು ಒಂದು ಸುರಕ್ಷಾ ವಲಯವನ್ನು ಪ್ರವೇಶಿಸುತ್ತ ಹೋಗುತ್ತದೆ.

ಸಾಮಾನ್ಯವಾಗಿ ಗರ್ಭಪಾತಗಳು ಗರ್ಭಧಾರಣೆಯ ಮೊದಲ 20 ವಾರಗಳಲ್ಲಿ ಕಂಡು ಬರುತ್ತವೆ. ಶೇ 10–15ರಷ್ಟು ಪ್ರಕರಣಗಳು 20 ವಾರಗಳ ನಂತರ ಕಂಡು ಬರುತ್ತವೆ. ಶೇ 80ರಷ್ಟು ಪ್ರಕರಣಗಳು ಮೂರನೆಯ ತಿಂಗಳು ಅಥವಾ 12ನೇ ವಾರದೊಳಗೆ ಕಂಡುಬರುತ್ತವೆ.

 ಸಾಮಾನ್ಯವಾಗಿ ಭ್ರೂಣ ಗರ್ಭಕೋಶದೊಳಗೆ ಅಂಟಿಕೊಳ್ಳುವ ಮುನ್ನವೇ ಅಂಡಾಣು ತನ್ನ ಜೀವಿತಾವಧಿಯನ್ನು ಕಳೆದುಕೊಂಡಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಗರ್ಭಕಟ್ಟಿದ ಭ್ರೂಣವು ಅದೆಷ್ಟು ಬೇಗ ಗರ್ಭಕೋಶದಿಂದ ಕಳಚಿಕೊಳ್ಳುವ ಸಾಧ್ಯತೆ ಇದೆಯೆಂದರೆ ಮಹಿಳೆಯರು ನಿರೀಕ್ಷಿತ ಸಮಯದಲ್ಲಿಯೇ ತಮ್ಮ ಋತುಚಕ್ರವನ್ನು ಹೊಂದಿರುತ್ತಾರೆ.

ಗರ್ಭಪಾತಕ್ಕೆ ಕಾರಣಗಳೇನು?
ವರ್ಣತಂತುಗಳ ಸಂಖ್ಯೆ:
ಸಾಮಾನ್ಯವಾಗಿ ಫಲಿತ ಅಂಡಾಣು ಅಥವಾ ವೀರ್ಯಾಣುಗಳಲ್ಲಿ ವರ್ಣತಂತುಗಳ ಸಂಖ್ಯೆ ಸಮರ್ಪಕವಾಗಿರದಿದ್ದಲ್ಲಿ ಅಂಡಾಣು ಮತ್ತು ವೀರ್ಯಾಣುಗಳು ಸಂಯೋಗವಾಗಿ ಫಲಿತಗೊಂಡಿದ್ದರೂ ಭ್ರೂಣವಾಗಿ ಬೆಳೆಯುವುದಿಲ್ಲ. ಗರ್ಭಪಾತವಾಗುತ್ತದೆ.

ನಾಜೂಕಿನ ಸಮಯ: ಗರ್ಭಕೋಶದಲ್ಲಿ ಫಲಿತವಾದ ಅಂಡಾಣು, ಗರ್ಭಗೋಡೆಗೆ ಅಂಟಿಕೊಳ್ಳಬೇಕು. ಇದು ಅತಿ ನಾಜೂಕಿನ ಹಂತ. ಈ ಹಂತದಲ್ಲಿ ವಿಫಲವಾಗುವ ಅಂಡಾಣುಗಳು ಗರ್ಭಪಾತವಾಗುತ್ತವೆ. ಅಂಡಾಣು ಮಜಬೂತಾಗಿ ಅಂಟಿಕೊಳ್ಳದೇ ಇರಲು, ಅಂಡಾಣುವಿನಲ್ಲಿರುವ ವರ್ಣತಂತುಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ವರ್ಣತಂತುಗಳು ಅಸಮರ್ಪಕವಾಗಿದ್ದರೆ ರಚನಾತ್ಮಕ ದೋಷಗಳು ಕಂಡು ಬರುತ್ತವೆ. ಅದು ಅಂಡಾಣುವು ಫಲಿತಗೊಂಡಿದ್ದರೂ ಬೆಳೆಯದಂತೆ ತಡೆಯುತ್ತದೆ. ಹಾಗಾಗಿ ಬಸಿರು ಕಟ್ಟಿದೆಯೆಂದು ಕಂಡು ಬಂದರೂ ಹೃದಯ ಮಿಡಿತ ಆರಂಭವಾಗುವುದಿಲ್ಲ.

ಇನ್ನೂ ಕೆಲವು ಸನ್ನಿವೇಶಗಳಲ್ಲಿ ಅಸಮರ್ಥ ಗರ್ಭಕೋಶ ಹಾಗೂ ವೀರ್ಯಾಣುಗಳಿಂದಾಗಿಯೂ ಗರ್ಭಪಾತವಾಗುತ್ತದೆ. ಒಂದಕ್ಕಿಂತ ಹೆಚ್ಚು ಗರ್ಭಪಾತವಾತ ಎದುರಿಸಿರುವ, ಮೂವತ್ತರ ಅಂಚಿನಲ್ಲಿರುವ ಮಹಿಳೆಯರು ತಮ್ಮ ವೈದ್ಯರೊಂದಿಗೆ ವಿಸ್ತೃತ ತಪಾಸಣೆಗೆ ಒಳಗಾಗಬೇಕು.

ಗರ್ಭಪಾತಕ್ಕೆ ಕಾರಣವಾಗಬಹುದಾದ ಅಂಶಗಳು
ಗರ್ಭಪಾತಕ್ಕೆ ಸಾಮಾನ್ಯವಾದ ಕಾರಣಗಳನ್ನು ನಾವಿಲ್ಲಿ ಪಟ್ಟಿ ಮಾಡಬಹುದಾಗಿದೆ.
ವಯಸ್ಸು: ಮಹಿಳೆಯರ ವಯಸ್ಸು ಪ್ರಮುಖ ಕಾರಣವಾಗಿರುತ್ತದೆ. ಮೂವತ್ತರ ಅಂಚನ್ನು ದಾಟಿದ ಮಹಿಳೆಯರಲ್ಲಿ, 35ರ ಮೈಲಿಗಲ್ಲನ್ನು ದಾಟಿದ ಮೇಲೆ ಗರ್ಭಪಾತದ ಸಾಧ್ಯತೆಗಳು ಹೆಚ್ಚಾಗುತ್ತಲೇ ಹೋಗುತ್ತವೆ. 25ರ ಮಹಿಳೆಯನ್ನು ಹೋಲಿಸಿದರೆ ಮೂವತ್ತರ ಅಂಚಿನಲ್ಲಿರುವವರಲ್ಲಿ ಗರ್ಭಪಾತದ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ.

ಪುನರಾವರ್ತನೆ: ಒಂದೆರಡು ಗರ್ಭಪಾತವಾದ ಮಹಿಳೆಯರಲ್ಲಿ ಮೂರನೆಯದ್ದು, ಮುಂದಿನದ್ದೂ ಗರ್ಭಪಾತವಾಗುವ ಸಾಧ್ಯತೆಗಳಿರುತ್ತವೆ.

ಕಾಯಿಲೆಗಳು: ಮಧುಮೇಹ ನಿಯಂತ್ರಣದಲ್ಲಿರದಿದ್ದರೆ, ರಕ್ತ ಹೆಪ್ಪುಗಟ್ಟುವ ರೋಗಗಳು, ಲೂಪಸ್‌ ಅಥವಾ ಪಿಓಎಸ್‌ ಸಮಸ್ಯೆ ಇದ್ದರೆ ಗರ್ಭಪಾತವಾಗುವ ಸಾಧ್ಯತೆಗಳಿರುತ್ತವೆ.
ಮಾಹಿತಿಗೆ: 1800 208 4444

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT