ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಜಾ ಗಮ್ಮತ್ತು ಆರೋಗ್ಯಕ್ಕೆ ಆಪತ್ತು!

Last Updated 23 ಜೂನ್ 2015, 19:30 IST
ಅಕ್ಷರ ಗಾತ್ರ

ಇಪ್ಪತ್ತೈದು ವರ್ಷದ ತರುಣ. ಈಗಷ್ಟೇ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದವನು.  ತಂದೆ-ತಾಯಿ ಆತನನ್ನು ಚಿಕಿತ್ಸೆಗಾಗಿ ಕರೆತಂದಿದ್ದರು.  ಕೆದರಿದ ಕೂದಲು, ಕೆಂಪಾದ ಕಣ್ಣು, ಮುಖದಲ್ಲಿ ಒಂದು ವಿಲಕ್ಷಣ ನಗೆ.  ತಂದೆ-ತಾಯಿಯ ಪ್ರಕಾರ ಈಗ ಒಂದು ತಿಂಗಳಿನಿಂದ ಕೆಲಸಕ್ಕೇ ಆತ ಹೋಗಿರಲಿಲ್ಲ. 

ಸ್ನೇಹಿತರ ಜೊತೆ ಸುತ್ತಾಟ, ಬಾಗಿಲು ಮುಚ್ಚಿ ರೂಮಿನೊಳಗೆ ಸೇರಿದರೆ ಯಾರೊಂದಿಗೂ ಮಾತುಕತೆ ಏನೂ ಇಲ್ಲ.  ಸುಮಾರು ಹದಿನೈದು ದಿನದಿಂದ ಎಲ್ಲರ ಮೇಲೂ ಅನುಮಾನ. ಯಾರೊಂದಿಗೂ ಮಾತನಾಡುವಂತೇ  ತನ್ನೊಳಗೇ ಮಾತನಾಡುವುದು.  ಇವುಗಳಿಂದ ಹೆದರಿ ತಂದೆ-ತಾಯಿ ವೈದ್ಯರ ಬಳಿ ಧಾವಿಸಿದ್ದರು.

ಮೇಲ್ನೋಟಕ್ಕೆ ಇವಿಷ್ಟೇ ಸಮಸ್ಯೆಗಳಾಗಿ ತೋರಿದರೂ, ನಿಜವಾಗಿ ಈ ಯುವಕನಿಗೆ ಇದ್ದದ್ದು ಗಾಂಜಾ ವ್ಯಸನ.  ಸಿನಿಮಾದಲ್ಲಿಯೋ, ಕಾದಂಬರಿಗಳಲ್ಲಿಯೋ, ಸಾಧುಗಳು ಭಂಗಿ ಸೊಪ್ಪು ಸೇದುವ ಬಗ್ಗೆ, ಮದುವೆಯಲ್ಲಿ, ಹೋಳಿ ಸಂದರ್ಭದಲ್ಲಿ ‘ಮಜಾ’ ಬರಲೆಂದು ಭಂಗಿಯಿಂದ ಸಿಹಿತಿಂಡಿ, ಪಾನಕ ಮಾಡುವ ಬಗ್ಗೆ ನಾವೆಲ್ಲರೂ ಓದಿಯೇ ಇರುತ್ತೇವೆ. ಈ ಭಂಗಿ ಸೊಪ್ಪು ಈ ‘ಗಾಂಜಾ’ದ ಮೂಲ. 

‘ಗಾಂಜಾ’ ಗಿಡದ ಹೆಸರು ವೈಜ್ಞಾನಿಕವಾಗಿ ‘Cannabis Sativa’. ‘ಮರಿಜುವಾನ’ ಎಂಬ ರಂಜನೀಯ ಹೆಸರೂ ಇದಕ್ಕಿದೆ.  ಇದರ ಒಣಗಿದ ಎಲೆಗಳು, ಹೂವುಗಳು, ಕಾಂಡ, ಬೀಜ ಎಲ್ಲವೂ ಉನ್ಮಾದ ತರಬಲ್ಲ THC ಡೆಲ್ಟಾ - 9 - ಟೆಟ್ರಾಹೈಡ್ರೋ ಕೆನ್ನಾಬಿನಾಲ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ.

ಗಾಂಜಾ ಉಪಯೋಗಿಸುವ ಯುವಕರಿಗೆ ಇದರ ವಿವಿಧ ರೀತಿಯ ಉಪಯೋಗ ಗೊತ್ತಿರುತ್ತದೆ.  ಕೈಯಿಂದ ಹೊಸೆದ ಬೀಡಿಗಳ ರೀತಿಯಲ್ಲಿ ಇದನ್ನು ಪುಡಿಮಾಡಿ ತುಂಬಿ ಕೆಲವರು ಸೇದಿದರೆ, ಉದ್ದದ ‘ಗುಡುಗುಡಿ’ಯಂಥ ಕೊಳವೆಗಳಲ್ಲಿಯೂ ಇದನ್ನು ಒಳಗೆಳೆದುಕೊಂಡು ಅದರ ‘ಮಜಾ ಅನುಭವಿಸು ತ್ತಾರೆ.   ಇನ್ನು ಕೆಲವರು ಅದನ್ನು ‘ಚಹಾ’ದಂತೆ ಕುದಿಸಿ ಕಷಾಯವಾಗಿ ಕುಡಿಯುತ್ತಾರೆ.

ಮರಿಜುವಾನ ಮಜಾ ನೀಡುವುದರ ಜೊತೆಗೇ ಮೆದುಳಿನ ಹಲವು ಭಾಗಗಳ ಮೇಲೆ ತನ್ನ ಬಲವಾದ ಪರಿಣಾಮ ಬೀರುತ್ತದೆ.  ಒಬ್ಬ ವ್ಯಕ್ತಿ ಗಾಂಜಾ ಸೇದಿದಾಗ, ಅದರಲ್ಲಿರುವ  ಟಿ.ಎಚ್.ಸಿ. ರಾಸಾಯನಿಕ, ಶ್ವಾಸಕೋಶಗಳಿಂದ ರಕ್ತ ಸೇರುತ್ತದೆ.  ರಕ್ತ ಮೆದುಳಿಗೆ ಮುಖ್ಯವಾಗಿ ದೇಹದ ಇತರ ಭಾಗಗಳಿಗೆ ಸ್ವಲ್ಪವಾಗಿ ರಾಸಾಯನಿಕವನ್ನು ಒಯ್ಯುತ್ತದೆ. 

ದೇಹದ ತುಂಬೆಲ್ಲಾ ಸೇರುವ ರಾಸಾಯನಿಕ 30 ನಿಮಿಷಗಳಿಂದ ಒಂದು ಗಂಟೆಯ ಅವಧಿಯಲ್ಲಿ ತನ್ನ ಪರಿಣಾಮ ಬೀರಲಾರಂಭಿಸುತ್ತದೆ. ಕುತೂಹಲದ ಅಂಶವೆಂದರೆ ನಮ್ಮ ಮೆದುಳಿನಲ್ಲಿ ಈ ರಾಸಾಯನಿಕವನ್ನು ಹೋಲುವಂತಹದ್ದೇ ಒಂದು ವಸ್ತು ಇರುತ್ತದೆ.  ಈ ವಸ್ತು - ‘ಆನಂದಮೈಡ್’ ಎಂಬ ರಾಸಾಯನಿಕ, ಸಹಜ ಮೆದುಳಿನ ಬೆಳವಣಿಗೆ ಮತ್ತು ಕಾರ್ಯಕ್ಷಮತೆಗೆ ಅತ್ಯವಶ್ಯ. 

ಮರಿಜುವಾನ ಮೆದುಳಿನ ಈ ‘ಆನಂದಮೈಡ್’ ಇರುವ ಭಾಗಗಳನ್ನು ಅತಿಯಾಗಿ ಪ್ರಚೋದಿಸುತ್ತದೆ.  ಇದು ಗಾಂಜಾ ಉಪಯೋಗಿಸುವ ವ್ಯಕ್ತಿ ಅನುಭವಿಸುವ ‘ಉನ್ಮಾದ’ಕ್ಕೆ ಕಾರಣವಾಗುತ್ತದೆ.  ‘ಗಾಂಜಾ’ದ ಅನುಭವದಲ್ಲಿ ಬಣ್ಣಗಳು ಪ್ರಕಾಶಮಾನವಾಗಿ ಕಾಣಬಹುದು, ಸುತ್ತಲ ಜಗತ್ತು ವರ್ಣಮಯ ಅನಿಸಬಹುದು, ‘ಸಂಗೀತವನ್ನು ಕಾಣುವುದು’, ‘ಬಣ್ಣ ಕೇಳುವುದು’ ಈ ರೀತಿಯ ವಿಚಿತ್ರ ಅನುಭವಗಳು ಉಂಟಾಗಬಹುದು.

*ಸಮಯದ ಬದಲಾಗುವಿಕೆ, ಅದರ ಪ್ರಜ್ಞೆ ಇರದಿರುವುದು
*ಅತಿ ನಗು, ಇದ್ದಕ್ಕಿದ್ದಂತೆ ಅಳು
*ಯೋಚನಾಶಕ್ತಿ, ನೆನಪು ಮತ್ತು ಸಮಸ್ಯೆಯ ಪರಿಹಾರದ ಸಾಮರ್ಥ್ಯ ಇವುಗಳಲ್ಲಿ ಕುಸಿತ.

ಇವು ಒಂದು ಸಲ ಗಾಂಜಾ ಸೇದುವವನಲ್ಲಿ ತಕ್ಷಣ ಕಾಣಿಸಬಹುದಾದ ಪರಿಣಾಮಗಳು.  ಗಾಂಜಾ ಮತ್ತೆ ಮತ್ತೆ ಉಪಯೋಗಿಸಿದಾಗ ಅದು ಮೆದುಳನ್ನು ದುರ್ಬಲಗೊಳಿಸುತ್ತದೆ.  ಗಾಂಜಾದ ‘ಮಜಾ’ ಅದನ್ನು ಮತ್ತೆ ಮತ್ತೆ ಉಪಯೋಗಿಸಲು ಪ್ರೇರೇಪಿಸುತ್ತದೆ.  ಮೆದುಳಿನ ಮೇಲಿನ ಪರಿಣಾಮಗಳಲ್ಲದೆ, ಗಾಂಜಾ ಈ ಕೆಳಗಿನ ರೀತಿಯಲ್ಲಿ ಅಪಾಯವನ್ನು ಉಂಟು ಮಾಡಬಹುದು.

ಉಸಿರಾಟದ ತೊಂದರೆ- ಧೂಮಪಾನದಿಂದ ಉಂಟಾಗುವ ಎಲ್ಲ ರೀತಿಯ ಶ್ವಾಸಕೋಶದ ತೊಂದರೆಗಳು ಗಾಂಜಾ ಸೇದುವುದರಿಂದಲೂ ಉಂಟಾಗಬಹುದು. ಕೆಮ್ಮು, ಶ್ವಾಸಕೋಶದ ಸೋಂಕು ರೋಗಗಳು ಕಾಣಿಸಿಕೊಳ್ಳಬಹುದು. ಹೃದಯ ಸಂಬಂಧಿ ತೊಂದರೆಗಳು ಗಾಂಜಾ ವ್ಯಸನಿಗಳಲ್ಲಿ ಇತರರಿಗೆ ಹೋಲಿಸಿದರೆ ಹೆಚ್ಚು.

ಇವಲ್ಲದೆ ಭ್ರಮೆಗಳು, ಬೇರೆಯವರ ಮೇಲೆ ಅನುಮಾನ, ಸಾಮಾಜಿಕವಾಗಿ ಬೆರೆಯದಿರುವುದು ಈ ರೀತಿಯ ಚಿತ್ತವಿಕಲತೆ - ಅಥವಾ ಸ್ಕಿಜೋಫ್ರ್ರಿನಿಯಾದ ಲಕ್ಷಣಗಳು ಈ ವ್ಯಕ್ತಿಗಳಲ್ಲಿ ಕಾಣಿಸಬಹುದು. ಗಾಂಜಾ ವ್ಯಸನಿಗಳಲ್ಲಿ ಇತರ ಮಾದಕದ್ರವ್ಯ ವ್ಯಸನಿಗಳಂತೆ ಕೌಟುಂಬಿಕ ಸಮಸ್ಯೆಗಳು, ಸಂಬಂಧಗಳಲ್ಲಿ ತೊಂದರೆಗಳು ಸಾಮಾನ್ಯ. ಹಾಗೆ ನೋಡಿದರೆ ಈ ಸಮಸ್ಯೆಗಳು, ದುರ್ಬಲ ವ್ಯಕ್ತಿತ್ವ.  ಸ್ನೇಹಿತರ ಪ್ರಭಾವ, ಸುತ್ತಮುತ್ತಲ ವಾತಾವರಣ ಈ ವ್ಯಸನ ಉಂಟಾಗಲು ಪ್ರಬಲವಾದ ಕಾರಣಗಳು.

ಗಾಂಜಾ ವ್ಯಸನದ ಚಿಕಿತ್ಸೆ ಹಾಗಾಗಿಯೇ ಸುಲಭವಲ್ಲ.  ಔಷಧಿಗಳಿಂದ ಮನಸ್ಸಿನ ವ್ಯಸನದ ತುಡಿತವನ್ನು ತಡೆಗಟ್ಟಬಹುದಾದರೂ, ವಾತಾವರಣ ವನ್ನು ಬದಲಿಸದ ಹೊರತು, ವ್ಯಕ್ತಿಯ ವ್ಯಕ್ತಿತ್ವವನ್ನು ಬಲಪಡಿಸದೆ ಗಾಂಜಾ ವ್ಯಸನದಿಂದ ಮುಕ್ತರಾಗಿಸಲು ಸಾಧ್ಯವಿಲ್ಲ. ಜೂನ್ 26 ವಿಶ್ವ ಮಾದಕದ್ರವ್ಯ ವಿರೋಧಿ ದಿನ. 

ಇಂದಿನ ಯುವಜನತೆ ವಿವಿಧ ರೀತಿಗಳಲ್ಲಿ ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗುತ್ತಿದೆ.  ಯೌವ್ವನದಲ್ಲಿ ಆರಂಭವಾಗುವ ಈ ವ್ಯಸನಗಳು ಇಡೀ ಜೀವನದ ಉದ್ದಕ್ಕೂ ಮುಂದುವರಿಯುತ್ತದೆ.  ಶಿಕ್ಷಣ, ಉದ್ಯೋಗ ಸಂಪಾದನೆ, ಕೌಟುಂಬಿಕ ಜೀವನ ಎಲ್ಲವನ್ನೂ ಹಾಳುಗೆಡವುತ್ತದೆ. 

ಮದ್ಯವ್ಯಸನ ಮತ್ತು ಧೂಮಪಾನ - ತಂಬಾಕು ವ್ಯಸನದ ಬಗೆಗೆ ಜನರಿಗೆ ಕಿಂಚಿತ್ ಅರಿವಾದರೂ ಇದೆ.  ಆದರೆ ಇನ್ನಿತರ ವ್ಯಸನಗಳ ಬಗೆಗೆ ತಿಳುವಳಿಕೆ ಕಡಿಮೆಯೇ.  ಎಷ್ಟೋ ಬಾರಿ ಗಾಂಜಾದಂಥ ಮಾದಕದ್ರವ್ಯಗಳ ವ್ಯಸನ ಸಾಮಾನ್ಯವೇ ಆದರೂ ‘ಇದು ನಮ್ಮ ಸುತ್ತಮುತ್ತಲಲ್ಲಿ ಇರಲು ಸಾಧ್ಯವಿಲ್ಲ’ ಎಂದು ಭಾವಿಸಿ ನಿರ್ಲಕ್ಷಿಸುತ್ತೇವೆ. 

ಪರಿಣಾಮ ಅದನ್ನು ಗುರುತಿಸುವಲ್ಲಿ ತಡವಾಗಬಹುದು.  ವ್ಯಸನಕ್ಕೆ ಒಳಗಾದ ವ್ಯಕ್ತಿ ಚಿಕಿತ್ಸೆಗೆ ಬರದಿರಬಹುದು.  ಹಾಗಾಗದೆ ವ್ಯಸನಕ್ಕೆ ಒಳಗಾದವರು ತತ್‌ಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳುವಂತಾಗಬೇಕು. ಯುವಜನರಿಗೆ ಗಾಂಜಾದಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ನೀಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT