ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರದಲ್ಲಿ ದೇವನೂರು!

Last Updated 26 ಮೇ 2016, 19:41 IST
ಅಕ್ಷರ ಗಾತ್ರ

‘ಸಾಹಿತ್ಯದ ಭಾಷೆಯೇ ಬೇರೆ, ಸಿನಿಮಾದ ಭಾಷೆಯೇ ಬೇರೆ. ಸಾಹಿತ್ಯ ಕೃತಿಯ ನೆಪದಲ್ಲಿ ಸಿನಿಮಾ ತನ್ನದೇ ಕಥೆಯ ಸಾಧ್ಯತೆಗಳನ್ನು ಹೇಳುತ್ತಾ ಹೋಗುತ್ತದೆ’. ಇದು ‘ಮಾರಿಕೊಂಡವರು’ ಸಿನಿಮಾದ ಬಗ್ಗೆ ಲೇಖಕ ದೇವನೂರ ಮಹಾದೇವ ಅವರ ಅನಿಸಿಕೆ.

2015ರ ಸಾಲಿನಲ್ಲಿ ಎರಡನೇ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ ಪಡೆದಿರುವ, ಶಿವರುದ್ರಯ್ಯ ನಿರ್ದೇಶನದ ‘ಮಾರಿಕೊಂಡವರು’ ಚಿತ್ರವನ್ನು ವೀಕ್ಷಿಸಿದ ನಂತರ ದೇವನೂರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ದೇವನೂರರ ಮೂರು ಕಥೆಗಳ (‘ಮಾರಿಕೊಂಡವರು’, ‘ಡಾಂಬರು ಬಂದುದು’ ಮತ್ತು ‘ಗ್ರಸ್ತರು’) ಸಂಯೋಜಿಸಿದ ರೂಪ ಶಿವರುದ್ರಯ್ಯನವರ ‘ಮಾರಿಕೊಂಡವರು’ ಸಿನಿಮಾ. ಪ್ರಶಸ್ತಿ ದೊರೆತ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ವಿಶೇಷ ಪ್ರದರ್ಶನ ಮತ್ತು ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು

ಸಿನಿಮಾ ಒಟ್ಟಾರೆಯಾಗಿ ದೇವನೂರು ಅವರಿಗೆ ಇಷ್ಟವಾಗಿದೆ. ಇಷ್ಟವಾದ ಕೆಲವು ಸನ್ನಿವೇಶಗಳ ಜೊತೆಗೆ ಸಿನಿಮಾದಲ್ಲಿ ತಮಗೆ ಇಷ್ಟವಾಗದ ಸಂಗತಿಗಳನ್ನೂ ಪ್ರಸ್ತಾಪಿಸಿದರು. ‘ಡಾಂಬರು ಬಂದುದು’ ಕಥೆಯಲ್ಲಿ ಕಳೆದುಹೋಗುವ ಮಗುವಿನ ಹುಡುಕಾಟ ಅತಿ ಭಾವಸೂಕ್ಷ್ಮದ ಸನ್ನಿವೇಶ. ಆದರೆ ಚಿತ್ರದಲ್ಲಿ ಆ ವಿಚಾರವೇ ಇಲ್ಲ ಎಂಬುದು ಅವರ ಆಕ್ಷೇಪ.

‘ಮಗು ಡಾಂಬರ್‌ ಬಳಿ ಆಟವಾಡುವುದು, ಡಾಂಬರಿನಲ್ಲಿ ಬೀಳುವುದು, ತಾಯಿ ಮಗುವನ್ನು ಹುಡುಕುವ ಸನ್ನಿವೇಶಗಳನ್ನು ಹಾಡಿನಲ್ಲಿ ಚಿತ್ರಿಸುವುದು ಉದ್ದೇಶವಾಗಿತ್ತು. ಆದರೆ ಆ ಸಮಯದಲ್ಲಿ ಕಲಾವಿದರು ಸಿಗದ ಕಾರಣ ಅದು ಸಾಧ್ಯವಾಗಲಿಲ್ಲ. ನಿರ್ಮಾಪಕರು ಒಪ್ಪಿಕೊಂಡರೆ ಆ ದೃಶ್ಯಗಳನ್ನು ಈಗಲೂ ಚಿತ್ರೀಕರಿಸಲು ಸಿದ್ಧ’ ಎಂದು ಶಿವರುದ್ರಯ್ಯ ವಿವರಣೆ ನೀಡಿದರು. ಹಾಡಿನ ಚಿತ್ರೀಕರಣಕ್ಕೆ ಮತ್ತೆ ಹಣ ಹೂಡಲು ನಾನೂ ಸಿದ್ಧ ಎಂದು ನಿರ್ಮಾಪಕರೂ ಹೇಳಿದರು.

‘ತಮಗೆ ಗೊತ್ತಿರದ ಬದುಕನ್ನು ತೋರಿಸಿ, ಚಿಂತನಾಕ್ರಮವನ್ನು ಬದಲಿಸಿದ ದೇವನೂರ ಮಹಾದೇವ ಅವರ ಕಥೆಗಳು ಸಿನಿಮಾ ಆಗುತ್ತಿಲ್ಲವಲ್ಲ ಎಂಬ ಬೇಸರವಿತ್ತು. ಆ ಕೊರತೆ ಈಗ ನೀಗಿದೆ’ ಎಂದು ನಿರ್ದೇಶಕ ಗಿರೀಶ್ ಕಾಸರವಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಬಂಧಗಳ ಕುರಿತೇ ಸಿನಿಮಾ ಹೆಚ್ಚು ಮಾತನಾಡುವುದರಿಂದ ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎಂಬರ್ಥದ ಶೀರ್ಷಿಕೆಯೇ ಹೆಚ್ಚು ಸೂಕ್ತವಾಗುತ್ತಿತ್ತು ಎಂಬ ಅಭಿಪ್ರಾಯ ಪಿ. ಶೇಷಾದ್ರಿ ಅವರದ್ದು.

‘ಇಡೀ ಭಾರತದ ಚಿತ್ರರಂಗಕ್ಕೆ ಕಥೆಗಳನ್ನು ಕೊಡುವಷ್ಟು ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಆದರೆ ಇಲ್ಲಿನವರು ಕಥೆಯಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ’ ಎಂಬ ಬೇಸರ ನಿರ್ಮಾಪಕ ಬಸಂತ್‌ ಕುಮಾರ್‌ ಪಾಟೀಲ್ ಅವರಲ್ಲಿತ್ತು.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಲೀಲ್‌, ಸೋನು ಗೌಡ, ಸರ್ದಾರ್‌ ಸತ್ಯ ಮತ್ತು ಸಂಚಾರಿ ವಿಜಯ್‌ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೂನ್ ತಿಂಗಳಿನಲ್ಲಿ ಚಿತ್ರವನ್ನು ತೆರೆಗೆ ತರುವುದು ಚಿತ್ರತಂಡದ ಯೋಜನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT