ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರದ ಬೋಧಿವೃಕ್ಷದಡಿ

ಜಗ್ಗೇಶ್‌ ಸ್ವಗತಗಳು...
Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧದ ಬರವಣಿಗೆ ಜಗ್ಗೇಶ್‌ ಅವರಿಗೆ ನೋವು ತಂದಿದೆ. ಕನ್ನಡ ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳೂ ಅವರ ಬೇಸರಕ್ಕೆ ಕಾರಣವಾಗಿವೆ.
‘ಸಿನಿಮಾ ರಂಜನೆ’ ಜೊತೆಗಿನ ಅವರ ಮಾತುಗಳು ‘ವರ್ತಮಾನದ ಕನ್ನಡ ಚಿತ್ರರಂಗ’ಕ್ಕೆ ಕನ್ನಡಿಯಂತಿವೆ.

ಒಂದು ಕಾಲ ಇತ್ತು. ಅದ್ಭುತ ನಿರ್ಮಾಪಕರು, ನಿರ್ದೇಶಕರು, ವಿತರಕರು ಮತ್ತು ಚಿತ್ರಮಂದಿರ ಮಾಲೀಕರಿದ್ದರು. ವ್ಯವಸ್ಥೆಯನ್ನು ಶಿಸ್ತುಬದ್ಧವಾಗಿ ಫಿಲ್ಮ್ ಚೇಂಬರ್ ನೋಡಿಕೊಳ್ಳುತ್ತಿತ್ತು. ಕಲಾವಿದರ ಸಂಘದ ಅಧ್ಯಕ್ಷರಾಗಿದ್ದ ರಾಜಕುಮಾರ್ ಅವರ ಮುಂದೆ ನಿಲ್ಲುವವರು ಯಾರೂ ಇರಲಿಲ್ಲ. 20–25 ಜನ ನಿರ್ದೇಶಕರಿದ್ದು ವರ್ಷಕ್ಕೆ 70–80 ಚಿತ್ರಗಳು ಬರುತ್ತಿದ್ದವು. ನಟರು ಸ್ಟಾರ್ ಆದ ನಂತರವೂ ತಂತ್ರಜ್ಞರಿಗೆ ಗೌರವ ಕೊಡುವ ಪದ್ಧತಿ ಇತ್ತು.

ಒಬ್ಬ ನಿರ್ಮಾಪಕ ವರ್ಷಕ್ಕೆ ಹತ್ತಾರು ಚಿತ್ರಗಳನ್ನು ಮಾಡುತ್ತಿದ್ದ. ಈ ರೆಗ್ಯುಲರ್ ನಿರ್ಮಾಪಕರು 2000 ಇಸವಿ ವೇಳೆಗೆ ಖಾಲಿಯಾದರು. ಅಲ್ಲಿಂದ ಹೊಸ ನಿರ್ಮಾಪಕರನ್ನು ಕರೆದುಕೊಂಡು ಬರುವ ಪ್ರಯತ್ನವಾಯಿತು. ಚಂದೂಲಾಲ್ ಜೈನ್ ಅವರಂಥ ನಿರ್ಮಾಪಕರಿಗೆ ಒಂದು ಇತಿಹಾಸವಿತ್ತು. ‘ಯದ್ಧಕಾಂಡ’ ಸಮಯದಿಂದ ಸಿನಿಮಾ ಮೇಕಿಂಗ್ ಹಾದಿಯಲ್ಲಿ ಭಿನ್ನತೆ ಕಾಣಿಸಿಕೊಂಡಿತು. 30–40 ಲಕ್ಷ ರೂಪಾಯಿಯಲ್ಲಿ ನಿರ್ಮಾಣವಾಗುತ್ತಿದ್ದ ಸಿನಿಮಾ ಬಜೆಟ್‌ ಅನ್ನು ರವಿಚಂದ್ರನ್ ಒಂದೂವರೆ ಕೋಟಿ ರೂಪಾಯಿವರೆಗೆ ವಿಸ್ತರಿಸಿದರು. ಆಗ ವಿಷ್ಣುವರ್ಧನ್, ಅಂಬರೀಷ್ ಪಡೆಯುತ್ತಿದ್ದ ಸಂಭಾವನೆ ನಾಲ್ಕು ಇಲ್ಲವೇ ಐದು ಲಕ್ಷ. ರವಿಚಂದ್ರನ್ ಅವರದ್ದು ಒಂಬತ್ತು ಲಕ್ಷ ರೂಪಾಯಿ. ಅಲ್ಲಿಂದ ಆರಂಭವಾಯಿತು ಈ ತಾರತಮ್ಯ.

‘ಅಗ್ರಜ’ನ ಬಾಧಿಸಿದ ‘ಸ್ಟಾರ್’

‘ಅಗ್ರಜ’ ಚಿತ್ರದಲ್ಲಿ ನನ್ನೊಂದಿಗೆ ನಟಿಸಿದ್ದ ಒಬ್ಬ ಸ್ಟಾರ್ ನಟನ ಪಾತ್ರಕ್ಕೆ ನನ್ನ ಮನಸ್ಸಿನಲ್ಲಿದ್ದ ಹೆಸರು ಉಪೇಂದ್ರ. ನಿರ್ಮಾಪಕರಿಗೆ ಯಾರು ತಲೆ ಕೆಡಿಸಿದರೋ ‘ಆ ಸ್ಟಾರ್ ನಟ’ನನ್ನು ಹಾಕಿಕೊಂಡರು. ಸಿನಿಮಾ ಮುಗಿದು ಒಂದು ವರ್ಷಕ್ಕೆ ಡಬ್ಬಿಂಗ್ ಆಯಿತು. ನಿರ್ಮಾಪಕರು ಸುಮಾರು 1 ಕೋಟಿ 30 ಲಕ್ಷ ರೂಪಾಯಿ ಬಡ್ಡಿ ಕಟ್ಟಿದರು. ‘ನಾನು ಪ್ರಚಾರಕ್ಕೆ ಬರುವುದಿಲ್ಲ, ಹೆಸರು ಹಾಕಬೇಡಿ’ ಎಂದು ಆ ‘ಸ್ಟಾರ್‌ ನಟ’ರು ಹೇಳಿದರು. ಆಗ ಅವರಿಂದ ನಾನು ಜೀವನ ಮಾಡುತ್ತಿದ್ದೇನೆ ಎನ್ನುವಂತೆ ಆಯಿತು. ‘ಅಗ್ರಜ’ ಚಿತ್ರದ ನಿರ್ಮಾಪಕರಲ್ಲಿ ಕಾರು ಇದೆ, ಮನೆ ಇದೆ ಆದರೆ ಎಲ್ಲಿ ಹೋದರೋ ಎನ್ನುವುದೇ ಗೊತ್ತಿಲ್ಲ.

‘ಉಳ್ಳವರು ಶಿವಾಲಯವ ಮಾಡುವರು’ ಎನ್ನುವಂತೆ ಯಾರ ಹತ್ತಿರ ದುಡ್ಡು ಇದೆಯೋ ಅವರೆಲ್ಲ ಸಿನಿಮಾ ಮಾಡಲು ಆರಂಭಿಸಿದರು. ಹಿನ್ನೆಲೆ–ಜ್ಞಾನ ಎಲ್ಲವೂ ಗೌಣವಾಯಿತು. ಗಟ್ಟಿ ನಿರ್ಮಾಪಕ– ನಿರ್ದೇಶಕ ಖಾಲಿಯಾದ.

ಕಮೀಷನ್ ಏಜೆಂಟರು
ನಿರ್ಮಾಪಕರನ್ನು ಕ್ಯಾಚ್ ಹಾಕುವ ಸಂಘ ಒಂದಿದೆ. ಈ ಕ್ಯಾಚ್ ಆಫೀಸರ್ಸ್‌ ದೊಡ್ಡ ದೊಡ್ಡ ನಾಯಕರಿಗೂ ಕ್ಯಾಚ್‌ ಹಾಕುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲೂ ಇಂಥವರಿದ್ದಾರೆ. ಈ ಎಲ್‌ ಬೋರ್ಡ್‌ನವರು ಸಿನಿಮಾದ ಗಂಧಗಾಳಿ ಗೊತ್ತಿಲ್ಲದ ನಿರ್ದೇಶಕ ಮತ್ತು ಛಾಯಾಗ್ರಹಕರನ್ನು ಕರೆದುಕೊಂಡು ಬರುತ್ತಾರೆ. ಒಟ್ಟಾರೆಯಾಗಿ ಇವರೆಲ್ಲ ಕಮಿಷನ್ ಮಾಡುವವರು. ಇವರಿಂದ ಸಿನಿಮಾರಂಗದಲ್ಲಿ ಶಿಸ್ತು ಹೊರಟು ಹೋಗಿದೆ. ಒಳ್ಳೆಯ ಸಿನಿಮಾಗಳೂ ಗೌಣವಾಗುತ್ತಿವೆ. ನಮ್ಮ ಪ್ರೇಕ್ಷಕ ತಮಿಳು, ತೆಲುಗು ಇಲ್ಲವೆ ಹಿಂದಿ ಸಿನಿಮಾಗಳತ್ತ ಹೋಗುತ್ತಾನೆ. ಅದು ವ್ಯಾಮೋಹವೇನೂ ಅಲ್ಲ. ಒಳ್ಳೆಯ ಸಿನಿಮಾ ನೋಡಬೇಕು ಎನ್ನುವ ಮನೋಭಾವವಷ್ಟೇ. ಇನ್ನೂ ದೊಡ್ಡ ದುರಂತ ಎಂದರೆ ಸಿಂಗಲ್ ಥಿಯೇಟರ್‌ಗಳು ಮರೆಯಾಗುತ್ತಿರುವುದು. ಮಾಲ್‌ಗಳು ಮಲ್ಟಿಪ್ಲೆಕ್ಸ್‌ಗಳು ಪರಭಾಷೆಯವರ ಹೂಡಿಕೆಗಳು. ಅವರಿಗೆ ಭಾಷೆ ಕಟ್ಟಿಕೊಂಡು ಏನಾಗಬೇಕಿದೆ?

ಅಂಬರೀಷ್‌ಗೆ ಪುರುಸೊತ್ತಿಲ್ಲ...
ಸುಮಾರು ಎರಡು ದಶಕಗಳ ಕಾಲ ಸಿನಿಮಾಗಳನ್ನು ಟೀವಿಯವರು ತೆಗೆದುಕೊಂಡು ನಿತ್ಯ ತೋರಿಸಿ ಪ್ರೇಕ್ಷಕರಿಗೆ ಸಿನಿಮಾ ನೋಡುವ ಪ್ರಾಕ್ಟೀಸ್ ಮಾಡಿಸಿದರು. ಈಗ ವಾಹಿನಿಗಳು ಸಿನಿಮಾ ಖರೀದಿ ನಿಲ್ಲಿಸಿವೆ. ಈ ಸಂದರ್ಭದಲ್ಲಿ ಇಡೀ ಚಿತ್ರರಂಗ ಒಗ್ಗೂಡಿ ಮಾತನಾಡಬೇಕು. ಆದರೆ ನನ್ನ ಸಿನಿಮಾವನ್ನು ತೆಗೆದುಕೊಳ್ಳುತ್ತಾರೆ ನಾನೇಕೆ ಮಾತನಾಡಲಿ ಎನ್ನುವವರಿದ್ದಾರೆ. ಕಲಾವಿದರ ಸಂಘದ ಅಧ್ಯಕ್ಷರಾದ ಅಂಬರೀಷ್ ಅವರಿಗೆ ರಾಜಕೀಯದಲ್ಲೇ ಪುರುಸೊತ್ತಿಲ್ಲ. ಕಲಾವಿದರ ಸಂಘದ ಆಸೆ ಎಂದರೆ ಒಂದು ಬಿಲ್ಡಿಂಗ್ ಕಟ್ಟಬೇಕು ಅಷ್ಟೇ ಎನ್ನುವಂತಾಗಿದೆ! ನಾನು ಅಂಬರೀಷ್ ಅವರನ್ನು ದೂಷಿಸುತ್ತಿಲ್ಲ. ಅವರ ಬಗ್ಗೆ ಅನುಕಂಪವಿದೆ. ಕೆಲಸ ಮಾಡುವವರ ಜತೆ ಅವರು ನಿಲ್ಲಲಿ. ಸಿನಿಮಾದ ಬಗ್ಗೆ ಗೊತ್ತಿರುವವರು ಇಲ್ಲಿನ ಬೆಳವಣಿಗೆಯನ್ನು ನೋಡಿ ಬೇಸರಗೊಂಡು ದೂರ ನಿಲ್ಲುತ್ತಿದ್ದರೆ ಏನೂ ಗೊತ್ತಿಲ್ಲದವರು ಇಲ್ಲಿದ್ದಾರೆ.

ಮೇರೆ ಮೀರಿದ ಗುಂಪುಗಾರಿಕೆ
ಸ್ಟಾರ್‌ಗಳು ಗುಂಪುಗಳನ್ನು ಮಾಡಿಕೊಂಡಿದ್ದಾರೆ. ಪೋಷಕ ನಟರ ಪಾಡು ಯಾರಿಗೂ ಬೇಡ. ಇವರ ಕಡೆ ಕೆಲಸಕ್ಕೆ ಹೋದರೆ ಮತ್ತೊಂದು ಕಡೆ ಕೆಲಸ ಸಿಕ್ಕುವುದಿಲ್ಲ. ‘ಆ ನಟನ, ಬ್ಯಾನರ್‌ನ ಚಿತ್ರಕ್ಕೆ ಕಲಾವಿದನೊಬ್ಬ ಹೋದನಾ, ಮುಂದಿನ ಚಿತ್ರಗಳಲ್ಲಿ ಅವನಿಗೆ ಅವಕಾಶ ಕೊಡಬೇಡಿ’ ಎನ್ನುತ್ತಾರೆ. ಪೋಷಕ ನಟರು ಡಬ್ಬಲ್ ಆಕ್ಟಿಂಗ್ ಮಾಡಿ ಬದುಕಬೇಕಿದೆ.

ಇವನು ಕ್ರಿಕೆಟ್ ಆಡಲು ಬರಲಿಲ್ಲ, ಇವನು ನಮ್ಮವನಲ್ಲ, ಅವನು ನನ್ನ ಸಿನಿಮಾ ಸಮಾರಂಭಕ್ಕೆ ಬರಲಿಲ್ಲ... ಹೀಗೆ ಸ್ಟಾರ್‌ನಟನರಲ್ಲಿ ಗುಂಪುಗಳಾಗಿವೆ. ಇದು ಒಂದು ರೀತಿ ಕಾಯಿಲೆ. ಒಬ್ಬನನ್ನು ಕಾಫಿಗೆ ಕರೆದರೆ... ‘ಜಗ್ಗೇಶ್ ನಮ್ಮನ್ನು ಬಳಸಿಕೊಳ್ಳುತ್ತಾನೆ’ ಎನ್ನುವ ಸ್ಥಿತಿ ಮುಟ್ಟಿದ್ದಾರೆ. ಇವರೆಲ್ಲರೂ ತಮ್ಮನ್ನು ತಾವೇ ‘ನಾವು ದೇವರ ಎತ್ತರದಲ್ಲಿದ್ದೇವೆ’ ಎಂದುಕೊಂಡಿದ್ದಾರೆ.

ಚಿತ್ರರಂಗದಲ್ಲಿ ಹಂತ ಹಂತವಾಗಿ ಮೇಲೇರಿದವನು ನಾನು. ‘ತರ್ಲೆ ನನ್ಮಗ’ ಸಿನಿಮಾಕ್ಕೆ 9 ಲಕ್ಷ ರೂಪಾಯಿ ವೆಚ್ಚ ಮಾಡಿದ್ದರು. 59 ಲಕ್ಷ ಗಳಿಕೆಯಾಗಿತ್ತು. ‘ಭಂಡ ನನ್ನ ಗಂಡ’ 14 ಲಕ್ಷ ವೆಚ್ಚದ ಸಿನಿಮಾ. ಅದು ಗಳಿಸಿದ್ದು 69 ಲಕ್ಷ ರೂಪಾಯಿ. ‘ರಾಣಿ ಮಹಾರಾಣಿ’ ನನಗೆ ಹೆಸರು ತಂದುಕೊಟ್ಟ ಸಿನಿಮಾ. ಆದರೆ, ಆ ಸಿನಿಮಾದ ನಂತರ ಒಂದೂ ಮುಕ್ಕಾಲು ವರ್ಷ ಕೆಲಸವಿರಲಿಲ್ಲ. ಹೆಂಡತಿ ಮಕ್ಕಳನ್ನು ಸಾಕಲು ಸಾಲ ಮಾಡಿದ್ದೇನೆ. ಈ ಮಾತು ಹೇಳಲು ಕಾರಣ ಸೋಶಿಯಲ್ ಮೀಡಿಯಾದಲ್ಲಿ ‘ಜಗ್ಗೇಶ್ ಇಂಥವರನ್ನು ನೋಡಿ ಕಲಿಯಬೇಕು’ ಎಂದು ಯಾರೋ ಒಬ್ಬರು ಬರೆದಿರುವುದು.

ವ್ಯಕ್ತಿಗಳ ತೇಜೋವಧೆಗೆ ಪ್ರಸ್ತುತ ಮಾಧ್ಯಮಗಳು ಬಳಕೆಯಾಗುತ್ತಿವೆ. ವಿರೋಧಿಗಳ ಮೇಲೆ ಟೀವಿಯಲ್ಲಿ ಕಾರ್ಯಕ್ರಮ ಮಾಡಿಸುತ್ತಾರೆ. ಅದನ್ನು ನಮ್ಮವರೇ (ಸಿನಿಮಾ) ಮಾಡಿಸುತ್ತಾರೆ.

‘ಕಲೆಕ್ಷನ್ ಕಿಂಗ್‌’ ಎಂದು ಕರೆಯಿಸಿಕೊಂಡವನು ನಾನು. ಆದರೆ ಹೆಸರು ಶಾಶ್ವತವಲ್ಲ. ಜನ ನಮ್ಮ ಗುಣವನ್ನೂ ನೋಡುತ್ತಾರೆ. ಯಶಸ್ವಿ ಚಿತ್ರ ಕೊಡದಿದ್ದರೂ ಗುಣದಿಂದ ಜನಮಾನಸದಲ್ಲಿ ಉಳಿದುಕೊಳ್ಳಬಹುದು. ಅದೇ ಹಿಟ್ ಸಿನಿಮಾ ಕೊಟ್ಟು ಪರೋಡಿ ಎನಿಸಿಕೊಂಡರೆ ಅವನನ್ನು ಚಪ್ಪಲಿ ಬಿಡುವ ಜಾಗದಲ್ಲಿ ಜನರು ಇಡುತ್ತಾರೆ.

ದುನಿಯಾ ವಿಜಯ್, ಗಣೇಶ್, ನಿರ್ದೇಶಕ ಪ್ರೇಮ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹೀಗೆ ಕೆಲವೇ ಜನರು ಮಾತ್ರ ನನ್ನ ಸಂಪರ್ಕದಲ್ಲಿರುವವರು. ಅವರ ಜತೆ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ. 

ಸಂಕುಚಿತವಾಗಿ ಯೋಚಿಸುವುದನ್ನು ಬಿಡಿ ಎನ್ನುವುದು ಸಿನಿಮಾದವರಲ್ಲಿ ನನ್ನ ಕೋರಿಕೆ. ಶರತ್ ಲೋಹಿತಾಶ್ವ ಅವರಂಥ ಅತ್ಯುತ್ತಮ ವಿಲನ್‌ ಪಾತ್ರಧಾರಿಗಳು ಕನ್ನಡದಲ್ಲಿ ಇದ್ದರೂ ತೆಲುಗಿನಿಂದ ಬಂದವರಿಗೆ ಕೆಂಪುಹಾಸು ಸ್ವಾಗತ ನೀಡುತ್ತೇವೆ, ಲಕ್ಷ ಲಕ್ಷ ಸಂಭಾವನೆ ಕೊಡುತ್ತೇವೆ. ಇಂಥ ಮನೋಭಾವ ಹೋಗಬೇಕು. ಕನ್ನಡ ಸಿನಿಮಾಗಳನ್ನು ರಾಜ್ಯದ ಗಡಿ ದಾಟಿಸಲು ನಾವೆಲ್ಲ ಪ್ರಯತ್ನ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT