ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಜಯಂತಿ: ಕಡ್ಡಾಯ ಹಾಜರಾತಿಗೆ ಸೂಚನೆ

Last Updated 2 ಅಕ್ಟೋಬರ್ 2014, 7:26 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾಡಳಿತದಿಂದ ನಗರದ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ ಅ. 2ರಂದು ಬೆಳಿಗ್ಗೆ 9ಗಂಟೆಗೆ ಗಾಂಧಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಮಟ್ಟದ ಅಧಿಕಾರಿಗಳು, ನೌಕರರು ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಗೈರುಹಾಜರಾದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ತಿಳಿಸಿದ್ದಾರೆ.

ಮಾಂಸ ಮಾರಾಟ ನಿಷೇಧ: ಗಾಂಧಿ ಜಯಂತಿ ಪ್ರಯುಕ್ತ ನಗರಸಭೆ ವ್ಯಾಪ್ತಿ ಮಾಂಸ ಮಾರಾಟ ನಿಷೇಧಿಸಲಾಗಿದೆ.
ಗಾಂಧಿ ಜಯಂತಿಯಂದು ಯಾವುದೇ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡಬಾರದು. ಪ್ರಾಣಿ ವಧೆ ಸಲ್ಲದು. ತಪ್ಪಿದ್ದರೆ ಸಂಬಂಧಪಟ್ಟ ಅಂಗಡಿ ಮಾಲೀಕರು ಹಾಗೂ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.

ಸ್ವಚ್ಛ ಭಾರತ ಮಿಷನ್‌ಗೆ ಚಾಲನೆ: ನಗರಸಭೆಯಿಂದ ಹಮ್ಮಿಕೊಳ್ಳಲಾಗಿರುವ ಸ್ವಚ್ಛ ಭಾರತ ಮಿಷನ್‌ಗೆ ಅ. 2ರಂದು ನಗರದ ಖಾಸಗಿ ಬಸ್‌ನಿಲ್ದಾಣದಲ್ಲಿ ಸ್ವಚ್ಛತೆ ಕೈಗೊಳ್ಳುವ ಮೂಲಕ ಚಾಲನೆ ನೀಡಲಾಗುತ್ತಿದೆ.

ಸರ್ಕಾರದ ಆದೇಶದ ಮೇರೆಗೆ ಅ. 2ರಿಂದ 31ರವರೆಗೆ ನಗರಸಭೆ ವ್ಯಾಪ್ತಿ ಹಮ್ಮಿಕೊಳ್ಳುತ್ತಿರುವ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅ. 2ರಂದು ಬೆಳಿಗ್ಗೆ 9.30ಗಂಟೆಗೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದಡಿ ನಗರಸಭೆ ವ್ಯಾಪ್ತಿಯ ಸರ್ಕಾರಿ ಕಚೆೇರಿ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ರೈಲ್ವೆ ನಿಲ್ದಾಣ, ಶಾಲಾ ಆವರಣ, ಸಾಮೂಹಿಕ ಶೌಚಾಲಯಗಳನ್ನು ಹಂತ ಹಂತವಾಗಿ ಸ್ವಚ್ಛತೆ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಹಾಗೂ ಪೌರಾಯುಕ್ತ ವಿಜಯ್ ತಿಳಿಸಿದ್ದಾರೆ.

ಸ್ವಚ್ಛ ಭಾರತ ಮಾಸಾಚರಣೆ ಇಂದಿನಿಂದ
ಚಾಮರಾಜನಗರ:  ವಿವಿಧ ಇಲಾಖೆ ಮೂಲಕ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅ. 2ರಿಂದ 31ರವರೆಗೆ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಸ್ವಚ್ಛ ಭಾರತ ಮಾಸಾಚರಣೆಯಲ್ಲಿ ನಾಗರಿಕರಿಗೆ ಅವರ ಮನೆ ಹಾಗೂ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಬಗ್ಗೆ ಅರಿವು, ಧಾರ್ಮಿಕ, ಸಾರ್ವಜನಿಕ ಸ್ಥಳದಲ್ಲಿ ಸಮುದಾಯದ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಸಾರ್ವಜನಿಕ, ಸಮುದಾಯ ಶೌಚಾಲಯಗಳ ದುರಸ್ತಿ, ನಿರ್ವಹಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬಸ್, ರೈಲು ನಿಲ್ದಾಣ, ರಸ್ತೆಬೀದಿ, ಮಾರುಕಟ್ಟೆ, ಪಾದಚಾರಿ, ಮಾರ್ಗಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕೈಗೊಳ್ಳಬೇಕು, ನದಿ, ಕೆರೆ, ಕಲ್ಯಾಣಿಗಳಲ್ಲಿ ಶುಚಿತ್ವಕ್ಕೆ ಕ್ರಮವಹಿಸಬೇಕು. ಸರ್ಕಾರಿ ಆಸ್ಪತ್ರೆ ಕಚೇರಿ, ಶಾಲೆಗಳ ಶೌಚಾಲಯಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಕಚೇರಿಗಳಲ್ಲಿ ಹೆಚ್ಚುವರಿ ಅನುಪಯುಕ್ತ ಪೀಠೋಪಕರಣ, ಕಡತಗಳನ್ನು ತೆರವುಗೊಳಿಸಬೇಕು. ಸರ್ಕಾರಿ ಕಟ್ಟಡಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು. ನಾಗರಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಉಗುಳುವುದು ಸೇರಿದಂತೆ ಯಾವುದೇ ಮಾಲಿನ್ಯಕ್ಕೆ ಅವಕಾಶ ಮಾಡಿಕೊಡುವುದಿಲ್ಲವೆಂದು ಪ್ರತಿಜ್ಞೆ ಸ್ವೀಕರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲೂ ನೈರ್ಮಲ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸ್ವಚ್ಛ ಭಾರತ ಮಾಸಾಚರಣೆಯಲ್ಲಿ ಹಮ್ಮಿಕೊಳ್ಳಬೇಕು ಎಂದು ಕುಂಜಪ್ಪ ತಿಳಿಸಿದ್ದಾರೆ.

ವಿಚಾರ ಸಂಕಿರಣ ಇಂದು
ಚಾಮರಾಜನಗರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧಿ ಜಯಂತಿ ಅಂಗವಾಗಿ ಗಾಂಧಿವಾದದ ಪ್ರಸ್ತುತತೆ ಕುರಿತು ಅ. 2ರಂದು ಬೆಳಿಗ್ಗೆ 10.30ಗಂಟೆಗೆ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿದೆ.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಯೋಗದಡಿ ವಿಚಾರ ಸಂಕಿರಣ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ವಿಚಾರ ಸಂಕಿರಣ ಉದ್ಘಾಟಿಸುವರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆವಹಿಸಲಿದ್ದಾರೆ.

ಸಂಸದ ಆರ್. ಧ್ರುವನಾರಾಯಣ, ನಗರಸಭೆ ಅಧ್ಯಕ್ಷ  ಎಸ್. ನಂಜುಂಡಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ರಂಗಸ್ವಾಮಿ ನಾಯಕ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಲಿಂಗಣ್ಣ, ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಪಿ ದೇವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

‘ಮಹಾತ್ಮ ಗಾಂಧೀಜಿ ಅವರ ಜೀವನ ಮತ್ತು ಸಾಧನೆ’ ಕುರಿತು ಅಧ್ಯಾಪಕಿ ಎ.ಆರ್. ಸುಷ್ಮಾ ವಿಷಯ ಮಂಡಿಸುವರು. ‘ಸಮಕಾಲೀನ ಸಂದರ್ಭದಲ್ಲಿ ಗಾಂಧೀಜಿ ಅವರ ಚಿಂತನೆಗಳ ಪ್ರಸ್ತುತತೆ’ ಕುರಿತು ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ’ ಪ್ರಾಧ್ಯಾಪಕರಾದ ಡಾ.ಲೋಲಾಕ್ಷಿ ಮಾತನಾಡಲಿದ್ದಾರೆ. ‘ಗ್ರಾಮ ಸ್ವರಾಜ್ಯ ಮತ್ತು ಪ್ರಸ್ತುತತೆ’ ವಿಷಯ ಕುರಿತು ಗುಂಡ್ಲುಪೇಟೆಯ ಜೆಎಸ್ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹದೇವಸ್ವಾಮಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT