ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಫೋಟೊ ಸ್ಮರಣೆ

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಸ್ತೂರಬಾ ಅವರೊಂದಿಗೆ ಮೊದಲ ಬಾರಿ 1915ರಲ್ಲಿ ಬೆಂಗಳೂರಿಗೆ ಬಂದಿದ್ದಾಗ ಗಾಂಧೀಜಿ ಗುಜರಾತಿ ಉಡುಗೆಯಲ್ಲಿದ್ದರು. 1927ರಲ್ಲಿ ಖಾದಿ ಪ್ರಚಾರಕ್ಕೆಂದು ಭಾರತದ ಪ್ರವಾಸ ಮಾಡುತ್ತಿದ್ದಾಗ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಗಾಗಿ ನಂದಿ ಗಿರಿಧಾಮಕ್ಕೆ ತೆರಳಲು ಯಶವಂತಪುರ ನಿಲ್ದಾಣದಲ್ಲಿ ಮುಂಜಾನೆ ಬಂದಿಳಿದರು. ಆಗ ಪ್ರಾರ್ಥನೆ ಸಲ್ಲಿಸಿದ್ದ ಗಾಂಧಿ, 1936ರಲ್ಲಿ ರೇಸ್‌ಕೋರ್ಸ್‌ ಮುಖ್ಯ ದ್ವಾರದಲ್ಲಿರುವ ಕ್ರೆಸೆಂಟ್‌ ಹೌಸ್‌ನಲ್ಲಿ ತಂಗಿದ್ದರು. ಡಾ.ಸಿ.ವಿ.ನಟರಾಜನ್‌ ಅವರ ಮನೆಯಲ್ಲಿದ್ದ ಮಗುವಿನ ಕೆನ್ನೆಯನ್ನು ಚಿವುಟಿದ್ದರು. ಗಾಂಧೀಜಿ ಅವರ ಬೆಂಗಳೂರು ಭೇಟಿಯ ಕುರಿತಾದ ಛಾಯಾಚಿತ್ರಗಳ ಸಂಗ್ರಹವು ನಗರದ ರಂಗೋಲಿ ಮೆಟ್ರೊ ಕಲಾ ಕೇಂದ್ರದಲ್ಲಿ ಗುರುವಾರ ಅನಾವರಣಗೊಳ್ಳಲಿದೆ.

ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಸುಮಾರು ಇಪ್ಪತ್ತು ವರ್ಷ ಚಳವಳಿ ನಡೆಸಿದ ಗಾಂಧೀಜಿ, 1915 ಜನವರಿ 9ರಂದು ಭಾರತಕ್ಕೆ ಮರಳಿದ ವೇಳೆಗೆ ದೇಶದೆಲ್ಲೆಡೆ ಸ್ವಾತಂತ್ರ್ಯದ ಕಿಚ್ಚು ತೀವ್ರಗೊಂಡಿತ್ತು. ಆಗ ತಮ್ಮ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆ ಅವರನ್ನು ಭೇಟಿಯಾದಾಗ ‘ನೀನು ಭಾರತದ ಸಲುವಾಗಿ ಮಹತ್‌ಕಾರ್ಯಗಳನ್ನು ಮಾಡಬೇಕಿರುವುದರಿಂದ ಮೊದಲು ಒಂದು ವರ್ಷ ಇಡೀ ಭಾರತ ಪ್ರವಾಸ ಮಾಡಿ ಪರಿಸ್ಥಿತಿಯನ್ನು ತಿಳಿದುಕೋ. ಆನಂತರ ಸಾರ್ವಜನಿಕ ಕೆಲಸ ಆರಂಭಿಸು’ ಎಂದಿದ್ದರಂತೆ.

ಇಂದು ಇತಿಹಾಸಕಾರ ವೇಮಗಲ್‌ ಸೋಮಶೇಖರ್‌ ಅವರು ಗಾಂಧೀಜಿ ಅವರ ವೇಷಧಾರಿಯಾಗಿ ರಂಗೋಲಿ ಮೆಟ್ರೊ ಕಲಾ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ನೂಲುತ್ತಿರುವ ಗಾಂಧಿ ಪ್ರತಿಮೆಯ ಮುಂದೆ ಮಧ್ಯಾಹ್ನ ಮೂರು ಗಂಟೆಯಿಂದ ಆರರವರೆಗೆ ಕೂರುವ ಮೂಲಕ ಮಹಾತ್ಮ ಗಾಂಧೀಜಿ ಅವರಿಗೆ ವಿಶೇಷ ನಮನ ಸಲ್ಲಿಸಲಿದ್ದಾರೆ.

ಗೋಖಲೆಯವರ ಮಾತಿನ ಮೇರೆಗೆ ಪ್ರವಾಸವನ್ನು ಕೈಗೊಂಡ ಗಾಂಧೀಜಿ, ಪತ್ನಿ ಕಸ್ತೂರಬಾ ಅವರೊಡನೆ 1915ರ ಏಪ್ರಿಲ್‌ನಲ್ಲಿ ಮದರಾಸಿಗೆ ಭೇಟಿ ನೀಡಿದ್ದರು. ಆಗ ಹಿರಿಯ ರಾಜಕಾರಣಿ ಮತ್ತು ಸಾಹಿತಿ ಡಿ.ವಿ.ಗುಂಡಪ್ಪನವರು ಮದರಾಸಿನ ಪ್ರಸಿದ್ಧ ಲೇಖಕ ಹಾಗೂ ಪತ್ರಕರ್ತರಾಗಿದ್ದ ನಟೇಶನ್‌ ಅವರೊಂದಿಗೆ ಪತ್ರ ವ್ಯವಹಾರ ನಡೆಸಿ, ಗಾಂಧೀಜಿಯವರಿಗೆ ಬೆಂಗಳೂರಿಗೆ ಭೇಟಿ ನೀಡಲು ಆಹ್ವಾನ ನೀಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ನಡೆಸುತ್ತಿದ್ದ ಚಳವಳಿಗೆ ಸಹಾಯಾರ್ಥವಾಗಿ ಡಿವಿಜಿ ನಿಧಿ ಸಂಗ್ರಹಿಸಿ ಕಳುಹಿಸಿದ್ದರಿಂದ ಕನ್ನಡಿಗರ ಈ ಕಾಣಿಕೆಯನ್ನು ಮರೆಯದ ಗಾಂಧೀಜಿ, 1915ರ ಮೇ 8ರಂದು ಮೊದಲ ಬಾರಿಗೆ ನಗರದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದರು. ಹೀಗೆ ಬಂದಾಗ ತಿಂಗಳುಗಟ್ಟಲೆ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುತ್ತಿದ್ದುದು ವಿಶೇಷ.

ಅಲ್ಲಿಂದೀಚೆಗೆ 1920 ಆಗಸ್ಟ್‌ 21, 1927 ಏಪ್ರಿಲ್‌ 20, 1934 ಜನವರಿ 4 ಮತ್ತು 1936 ಮೇ 10 ಸೇರಿದಂತೆ ಒಟ್ಟು ಐದು ಬಾರಿ ಬೆಂಗಳೂರಿಗೆ ಭೇಟಿ ನೀಡಿರುವ ವಿವರಗಳನ್ನು ಇತಿಹಾಸಕಾರ ವೇಮಗಲ್‌ ಸೋಮಶೇಖರ್‌ ತಮ್ಮ ‘ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ರಂಗೋಲಿ ಮೆಟ್ರೊ ಕಲಾ ಕೇಂದ್ರವು ಅಕ್ಟೋಬರ್‌ 2, ಗಾಂಧಿ ಜಯಂತಿ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದೆ. ಕೇಂದ್ರದ ಕ್ಯುರೇಟರ್‌ ಸುರೇಖಾ ಅವರು ಛಾಯಾಚಿತ್ರಗಳ ಪ್ರದರ್ಶನವನ್ನು ಕ್ಯುರೇಟ್‌ ಮಾಡಿದ್ದಾರೆ.
 

‘ತಿಳಿವಳಿಕೆಯ ಕೈಪಿಡಿಯಾಗಲಿ’
ಗಾಂಧೀಜಿ ಬೆಂಗಳೂರಿಗೆ ಎಷ್ಟು ಬಾರಿ ಭೇಟಿ ನೀಡಿದ್ದರು, ಎಲ್ಲೆಲ್ಲಿ ತಂಗಿದ್ದರು, ಯಾವ ಯಾವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು ಎಂಬ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಅನಾರೋಗ್ಯದ ಕಾರಣ ಬೆಂಗಳೂರಿನಲ್ಲಿ ಇದ್ದುಕೊಂಡು ಇತರೆ ಭಾಗಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದ ಗಾಂಧೀಜಿ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಇಲ್ಲಿನ ಅಪೆಕ್ಸ್‌ ಬ್ಯಾಂಕ್‌, ಥಿಯಸಾಫಿಕಲ್‌ ಕಾಲೇಜಿನವರಿಗೂ ತಮ್ಮ ಸಂಸ್ಥೆಗೆ ಗಾಂಧೀಜಿ ಅವರು ಭೇಟಿ ನೀಡಿದ್ದ ಬಗ್ಗೆ ತಿಳಿದಿರಲಿಲ್ಲ. ನನ್ನ ಅಧ್ಯಯನದ ಭಾಗವಾಗಿ ದಾಖಲೆಗಳನ್ನು ತೆಗೆಸಿ ನೋಡಿದಾಗಲಷ್ಟೆ ಅವರಿಗೂ ತಿಳಿದದ್ದು. ಇಂದು ಸರಳ ಜೀವನ ಮರೆಯಾಗುತ್ತಿರುವ ಕಾರಣ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಗಾಂಧೀಜಿಯವರ ಈ ಛಾಯಾಚಿತ್ರಗಳ ಪ್ರದರ್ಶನ ಮುಂದಿನ ಪೀಳಿಗೆಯವರಿಗೆ ತಿಳಿವಳಿಕೆಯ ಕೈಪಿಡಿಯಾಗಲಿ ಎಂಬುದು ನನ್ನ ಆಶಯ
–ವೇಮಗಲ್‌ ಸೋಮಶೇಖರ್‌, ಇತಿಹಾಸಕಾರ, ಬೆಂಗಳೂರು

‘ಕಲಾ ಕೇಂದ್ರ ಆರಂಭವಾದ ದಿನಗಳಿಂದಲೂ ಗಾಂಧಿ ಜಯಂತಿ, ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನಗಳಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಮಹಾತ್ಮ ಗಾಂಧೀಜಿಯವರು ಅನೇಕ ಸಲ ಬೆಂಗಳೂರಿಗೆ ಭೇಟಿ ನೀಡಿದ್ದರೂ ಹಲವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇತಿಹಾಸಕಾರ ವೇಮಗಲ್‌ ಸೋಮಶೇಖರ್‌ ಅವರು ತಮ್ಮ ಪುಸ್ತಕಗಳಲ್ಲಿ ಈ ಎಲ್ಲ ವಿವರಗಳನ್ನು ಛಾಯಾಚಿತ್ರಗಳೊಂದಿಗೆ ದಾಖಲಿಸಿದ್ದು, ಇದನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಗಾಂಧೀಜಿಯವರು ಬೆಂಗಳೂರಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದ ಸಂದರ್ಭಗಳ ಸುಮಾರು 40 ಛಾಯಾಚಿತ್ರಗಳ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಇತರೆ ಭಾಗಗಳಿಗೆ ಭೇಟಿ ನೀಡಿದ ಹತ್ತು ಚಿತ್ರಗಳೂ ಪ್ರದರ್ಶನದಲ್ಲಿ ಇರಲಿವೆ’ ಎಂದು ಅವರು ಮಾಹಿತಿ ನೀಡಿದರು.

‘ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ (ಎನ್‌ಡಿಆರ್‌ಐ), ಮಹಿಳಾ ಸೇವಾ ಸಮಾಜ, ದೀನಸೇವಾ ಸಂಘ, ವಿಶ್ವ ಕರ್ನಾಟಕ ಪತ್ರಿಕಾ ಕಚೇರಿ, ನಂದಿ ಗಿರಿಧಾಮ ಇನ್ನೂ ಮುಂತಾದ ಪ್ರದೇಶಗಳಿಗೆ ಗಾಂಧೀಜಿಯವರು ಭೇಟಿ ನೀಡಿದ್ದ ಛಾಯಾಚಿತ್ರಗಳು, ಕಾಂಗ್ರೆಸ್‌ ಸಮಾವೇಶಗಳಲ್ಲಿ ಅವರು ಮಾಡಿದ ಭಾಷಣದ ಪ್ರತಿಗಳು, ವಿವಿಧ ಶಂಕುಸ್ಥಾಪನಾ ಕಾರ್ಯಕ್ರಮಗಳನ್ನು ನೆರವೇರಿಸಿದ ಗಾಂಧೀಜಿಯವರ ಹೆಸರು ನಮೂದಾಗಿರುವ ಫಲಕಗಳ ಚಿತ್ರಗಳು, ಎನ್‌ಡಿಆರ್‌ಐಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂದರ್ಶಕರ ಪುಸ್ತಕದಲ್ಲಿ ‘A Farmer from Sabarmathi’ ಎಂದು ಸಹಿ ಮಾಡಿರುವುದನ್ನೂ ಪ್ರದರ್ಶನಕ್ಕೆ ಇಡಲಾಗುವುದು. ಗಾಂಧೀಜಿಯವರು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿನ ಬೆಂಗಳೂರಿನ ಸ್ಥಿತಿಗತಿಯ ಬಗ್ಗೆ ಈಗಿನ ತಲೆಮಾರಿನವರಿಗೂ ತಿಳಿಸಿಕೊಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶ’ ಎಂದು ಮಾಹಿತಿ ನೀಡಿದರು.

ಕೇಂದ್ರದ ‘ಛಾಯಾ’ ಗ್ಯಾಲರಿಯಲ್ಲಿ ಅಕ್ಟೋಬರ್‌ 13ರವರೆಗೆ ಪ್ರದರ್ಶನ ನಡೆಯಲಿದ್ದು, ವೇಮಗಲ್‌ ಸೋಮಶೇಖರ್‌ ಅವರು ಸ್ವತಃ ಹಾಜರಿದ್ದು, ಛಾಯಾಚಿತ್ರಗಳ ಸಂದರ್ಭಗಳು, ಗಾಂಧೀಜಿಯವರ ಉಡುಪಿನ ಬದಲಾವಣೆಯ ಹಿನ್ನಲೆ ಇನ್ನೂ ಮುಂತಾದ ರೋಚಕ ಸಂಗತಿಗಳ ಬಗ್ಗೆ ವಿವರಣೆ ನೀಡಲಿದ್ದಾರೆ’ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT