ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಸಮನ್ವಯ

Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿರುವ ಈ ದಿನಗಳಲ್ಲಿ,  ಗಾಂಧೀಜಿ ತಮ್ಮ ಮಗನ ಮತಾಂತರದ ಸಂದರ್ಭದಲ್ಲಿ ತೋರಿದ ಸಹಿಷ್ಣುತೆ ನೆನಪಿಗೆ ಬರುತ್ತದೆ. 

ಅವರ ಜೇಷ್ಠ ಪುತ್ರ ಹರಿಲಾಲ ಇಸ್ಲಾಂ ಧರ್ಮ ಸ್ವೀಕರಿಸಿ ಅಬ್ದುಲ್ಲ ಗಾಂಧಿ ಎಂದು ಹೆಸರು ಬದಲಿಸಿಕೊಂಡರು. ಇದು ಗಾಂಧಿ ವಿರೋಧಿಗಳಿಗೆ ಬಹಳ ಖುಷಿ ಕೊಟ್ಟಿತು. ಅವರೆಲ್ಲ ಕುಣಿದಾಡಿ ಸಿಹಿ ಹಂಚಿದರು. ‘ಮಗನಂತೆ ಇಸ್ಲಾಂ ಅಪ್ಪಿಕೊಂಡು ಪುಣ್ಯ ಕಟ್ಟಿಕೋ’ ಎಂದು ಕೆಲವರು ಗಾಂಧೀಜಿಗೆ ಪತ್ರ ಬರೆದರು. ದೇಶ-ವಿದೇಶದ ಪತ್ರಿಕೆಗಳಲ್ಲಿ ಈ ವಿಷಯದ ಚರ್ಚೆ ನಡೆಯತೊಡಗಿತು. ಗಾಂಧೀಜಿ ಇದಾವುದರಿಂದ ಎಳ್ಳಷ್ಟೂ ವಿಚಲಿತರಾಗದೆ ‘ಹರಿಜನ’ ಪತ್ರಿಕೆಯಲ್ಲಿ ಹೀಗೆ  ಪ್ರತಿಕ್ರಿಯಿಸಿದರು:

‘ಹರಿಲಾಲ ನಿಜವಾಗಿಯೂ ಹೃದಯ ಪರಿವರ್ತನೆಯಿಂದ ಯಾವ ಲೌಕಿಕ ಲಾಭಗಳಿಗೂ ಆಸೆ ಪಡದೆ ಮತಾಂತರಗೊಂಡಿದ್ದರೆ ಯಾವ ಜಗಳವೂ ಇಲ್ಲ. ಇಸ್ಲಾಂ ಎಂಬುದು ನನ್ನ ಧರ್ಮದಷ್ಟೇ ಸತ್ಯದ್ದು ಎಂದು ನಾನು ನಂಬಿದ್ದೇನೆ. ಆದರೆ ಇದು ಹೃದಯ ಪರಿವರ್ತನೆಯೇ ಅಥವಾ ಬರೀ ಸ್ವಾರ್ಥಕ್ಕಾಗಿ ನಡೆದ ಘಟನೆಯೇ ಎಂಬುದರ ಬಗ್ಗೆ ನನಗೆ ಈಗಲೂ ಸಂದೇಹ ಇದೆ.

ನನ್ನ ಮಗ ಹರಿಲಾಲನ ಬಗ್ಗೆ ಬಲ್ಲವರಿಗೆ ಇದು ಅರ್ಥವಾಗುತ್ತದೆ. ಅವನು ಕುಡಿತಕ್ಕೆ ಬಲಿಯಾಗಿದ್ದಾನೆ, ವೇಶ್ಯೆಯರ ಸಹವಾಸ ಮಾಡಿದ್ದಾನೆ, ಹಣಕ್ಕಾಗಿ ಸ್ನೇಹಿತರನ್ನು ಪೀಡಿಸುತ್ತಾನೆ. ಪಠಾಣರ ಹತ್ತಿರ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ತೊಂದರೆ ಅನುಭವಿಸುತ್ತಿದ್ದಾನೆ.

ಅವನ ಮೂವರು ಮಕ್ಕಳಿಗೆ ಅವನಿಂದ ಯಾವ ಪೋಷಣೆ-ಸಹಕಾರ ಸಿಕ್ಕಿಲ್ಲ. ಹರಿಲಾಲ ಹಿಂದೂ ಧರ್ಮ ಬಿಟ್ಟಿದ್ದರಿಂದ ಹಿಂದೂ ಧರ್ಮಕ್ಕೆ ಯಾವ ನಷ್ಟವೂ ಆಗಿಲ್ಲ. ಇಸ್ಲಾಂಗೆ ಸೇರಿದ್ದರಿಂದ ಇಸ್ಲಾಂಗೂ ಯಾವ ಲಾಭವೂ ಆಗಿಲ್ಲ. ಅವನು ಪೋಲಿಯಾಗಿಯೇ ಇರುತ್ತಾನೆ. ಇದು ಇಸ್ಲಾಂಗೂ ಭೂಷಣವಲ್ಲ.

ನನ್ನ ಮುಸ್ಲಿಂ ಬಾಂಧವರು ಹರಿಲಾಲ ಮುಂದೆ ಸರಿಯಾದ ದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳಬೇಕು ಎಂದು ಆಶಿಸುತ್ತೇನೆ. ಅವನು ಹಿಂದಿನ ದುರ್ವ್ಯಸನವನ್ನು ಪೂರ್ಣ ತ್ಯಜಿಸಿ ದೇವರಲ್ಲಿ ಅಚಲ ನಂಬಿಕೆಯಿಟ್ಟು ಯೋಗ್ಯ ಮನುಷ್ಯನಾದರೆ ಸಾಕು. ಅವನು ಅಬ್ದುಲ್ಲ ಇರಲಿ, ಹರಿಲಾಲ ಇರಲಿ ನನಗೇನೂ ವ್ಯತ್ಯಾಸವಿಲ್ಲ. ಎರಡೂ ಹೆಸರುಗಳ ಅರ್ಥ ‘ದೇವರ ಭಕ್ತ’ ಎಂದೇ ಆಗುತ್ತದೆ’. ಗಾಂಧಿ ಅವರ ಈ ವಿಚಾರಗಳು ವಿಶ್ವ ಬಂಧುತ್ವಕ್ಕೆ, ವಿಶ್ವಮಾನವತೆಗೆ ಸಾಕ್ಷಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT