ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದಿಂದಲೂ ಪುರುಷರ ಬಂಜೆತನ

ಅಂಕುರ 41
Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌, ಬೇಸ್‌ಬಾಲ್‌, ಫುಟ್‌ಬಾಲ್‌, ಸಾಕ್ಕರ್‌, ಹಾಕಿ ಅಥವಾ ಕರಾಟೆಗಳಲ್ಲಿ ನಿರತರಾದರೆ ಏಟು ರೋಧಕ ಕಪ್‌ಗಳನ್ನು ಧರಿಸಬೇಕು. ಅವು ಪ್ಲಾಸ್ಟಿಕ್‌ನಿಂದ ತಯಾರಾಗಿರುವುದರಿಂದ ಯಾವುದೇ ಕಾರಣಕ್ಕೂ ವೃಷಣಗಳಿಗೆ  ಏಟು ತಾಕುವುದಿಲ್ಲ. ತೊಡೆ ಸಂದನ್ನು ಸಂರಕ್ಷಿಸುವ ಈ ಕಪ್‌ಗಳನ್ನು ಧರಿಸಿಯೇ ಆಟವಾಡಬೇಕು.

ದೇಹದ ಇನ್ನಿತರ ಅಂಗಗಳಿಗಿಂತ ಭಿನ್ನವಾಗಿ ದೇಹದಿಂದ ಹೊರ ಚಾಚಿರುವ ಅಂಗಗಳಾದ ವೃಷಣಗಳಿಗೆ ಜೋರಾಗಿ ಏಟು ಬಿದ್ದರೆ ಆಗುವ ಸಮಸ್ಯೆಗಳೇನು? ಶಾಶ್ವತ ಬಂಜೆತನ ಉಂಟಾಗಲು ಕಾರಣಗಳೇನು? ಗಾಯವಾಗದಂತೆ ತಡೆಯಲು ಏನು ಮಾಡಬಹುದು ಎಂಬ ಮಾಹಿತಿಯನ್ನು ಈ ವಾರ ನೀಡಲಾಗಿದೆ.

ವೃಷಣಗಳಿಗೆ ಅಥವಾ ಜನನಾಂಗಕ್ಕೆ ಹೊಡೆತ ಬಿದ್ದರೆ, ಗಾಯವಾದರೆ ಗಂಭೀರ ಸ್ವರೂಪದ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆಯೇ?
ಸಾಮಾನ್ಯವಾಗಿ ವೃಷಣಗಳಿಗೆ ಗಾಯವಾದಾಗ ವೃಷಣಗಳಲ್ಲಿ ತೀವ್ರತೆರನಾದ ತಿರುಚು ಅಥವಾ ತೀವ್ರತೆರನಾಗಿ ಘಾಸಿಗೊಳ್ಳುವ ಸಾಧ್ಯತೆಗಳಿರುತ್ತವೆ. ಇವೆರಡೂ ಸ್ಥಿತಿಯಲ್ಲಿಯೂ ಪುರುಷರಲ್ಲಿ ಬಂಜೆತನ ಕಾಡುವ ಸಾಧ್ಯತೆಗಳಿರುತ್ತವೆ. ಹಠಾತ್‌ ಗಾಯದಿಂದಾಗಿ ವೃಷಣಗಳಲ್ಲಿ ವೀರ್ಯೋತ್ಪತ್ತಿಯ ಕಾರ್ಯ ಕ್ಷಮತೆಗೆ ಕುಂದು ಉಂಟಾಗಬಹುದು. ಆಗಿಂದಾಗಲೇ ಪರಿಣಾಮ ಅರಿಯಲಾಗದಿದ್ದರೂ ಭವಿಷ್ಯದಲ್ಲಿ ಅಂಥ ಸಮಸ್ಯೆ ಎದುರಾಗುವ ಸಾಧ್ಯತೆಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ವೃಷಣಗಳಿಗೆ ಗಾಯವಾದರೆ ಸಾಕು ಅದರ ಕಾರ್ಯ ವೈಖರಿಯ ಮೇಲೆ ಪರಿಣಾಮ ವಾಗಿದೆಯೇ ಎಂಬುದನ್ನು ಪರಿಶೀಲಿಸಲು ವೈದ್ಯಕೀಯ ಸಲಹೆ ಪಡೆಯುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಅಮ್ಮಂದಿರು ಹೆಚ್ಚು ಎಚ್ಚರದಿಂದಿರಬೇಕು. ಗಂಡುಮಕ್ಕಳು ಗಾಯವಾದ ಬಗ್ಗೆ ತಿಳಿಸಿದರೆ, ನೋವನ್ನು ಅನುಭವಿಸುತ್ತಿದ್ದರೆ ಅಮ್ಮಂದಿರೇ ವೈದ್ಯರನ್ನು ಸಂಪರ್ಕಿಸಲು ಮುಂದಾಗಬೇಕು.

ವೃಷಣಗಳಲ್ಲಿ ತಿರುಚು ಎಂದರೇನು?
ವೃಷಣಗಳಿಗೆ ಜೋರಾದ ಏಟು ತಾಕಿದಾಗ ಈ ಸ್ಥಿತಿ ಉಂಟಾಗುತ್ತದೆ. ತೊಡೆಸಂದುಗಳಿಗೆ ಯಾರಾದರೂ ಜೋರಾಗಿ ರಭಸದಿಂದ ಒದ್ದಾಗ ಅಥವಾ ಏನಾದರೂ ವೇಗದಿಂದ ಭಾರವಾದ ವಸ್ತುಗಳು ಬಿದ್ದಲ್ಲಿ ವೃಷಣಗಳಲ್ಲಿ ತಿರುಚು ಕಾಣಿಸಿಕೊಳ್ಳಬಹುದು. ಏಟು ಬಿದ್ದೊಡನೆ ವೃಷಣಗಳನ್ನು ಹಿಡಿದಿಟ್ಟಿರುವ ಸ್ನಾಯುಗಳು ತಿರುಚಿಕೊಳ್ಳುತ್ತವೆ. ಆಗ ವೃಷಣಗಳಿಗೆ ರಕ್ತ ಸರಬರಾಜು ಆಗುವುದು ನಿಂತು ಹೋಗುತ್ತದೆ. ಪರಿಣಾಮವಾಗಿ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ಊತ ಸಹ ಕಂಡು ಬರುತ್ತದೆ. ವೈದ್ಯಕೀಯ ಸ್ಥಿತಿಯಲ್ಲಿ ಇದನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಇಂಥ ಪರಿಸ್ಥಿತಿ ಎದುರಾದಾಗ ಗರಿಷ್ಠ 6ಗಂಟೆಯೊಳಗೆ ಚಿಕಿತ್ಸೆ ಕೈಗೊಳ್ಳಬೇಕಾಗಿರುವುದು ಅತ್ಯಗತ್ಯ. ತೀವ್ರತರನಾಗಿ ತಿರುಚಿದ್ದರೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಬೀಳಬಹುದು. ಒಂದು ವೇಳೆ ಕೂಡಲೇ ವೈದ್ಯರನ್ನು ಕಾಣದಿದ್ದಲ್ಲಿ ವೃಷಣಗಳನ್ನು ಅಥವಾ ವೃಷಣಗಳು ತಮ್ಮ ಕಾರ್ಯ ಕ್ಷಮತೆಯನ್ನು ಕಳೆದುಕೊಳ್ಳಬಹುದು.

ವೃಷಣಗಳು ಛಿದ್ರಗೊಳ್ಳುವವು ಗೊತ್ತೆ?
ಇದು ವಿರಳಾತಿವಿರಳ ಸಮಸ್ಯೆ. ಅತಿ ರಭಸವಾಗಿ, ವೇಗವಾಗಿ ಮತ್ತು ನೇರವಾಗಿ ವೃಷಣಗಳಿಗೆ ಹೊಡೆತ ಬಿದ್ದಾಗ ಅವು ಶಿಶ್ನದ ಸ್ನಾಯುವಿನ ಮೇಲೆ ಒತ್ತಡ ಬಿದ್ದಂತೆ ಒತ್ತೊತ್ತಾಗಿ ಬಡಿದಾಗ ವೃಷಣಗಳು ಛಿದ್ರ ಗೊಳ್ಳುತ್ತವೆ. ಇದರಿಂದ ಅಸಾಧ್ಯವಾದ ನೋವು ಹಾಗೂ ಊತ ಕಾಣಿಸಿಕೊಳ್ಳುತ್ತದೆ. ವ್ಯಕ್ತಿ ಅಸ್ವಸ್ಥನಾಗುತ್ತಾನೆ. ವಾಂತಿಗಳಾಗುತ್ತವೆ. ಶಿಶ್ನದೊಳಗೆ ರಕ್ತಸ್ರಾವವಾಗಲು ಆರಂಭಿಸುತ್ತದೆ. ಇಂಥ ಸಂದರ್ಭದಲ್ಲಿ ಕೂಡಲೇ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.

ಪುರುಷರಲ್ಲಿ ಬಂಜೆತನ ಉಂಟಾಗುವುದು ಹೇಗೆ? ವೀರ್ಯೋತ್ಪಾದನೆ ಕುಂಠಿತಗೊಳ್ಳುವುದು ಹೇಗೆ?
ಸಾಮಾನ್ಯವಾಗಿ ನಿರ್ಲಕ್ಷಿಸುವ ಇನ್ನೊಂದು ಅಂಶವೆಂದರೆ ಯಾವುದೇ ಬಗೆಯ ಹೊಡೆತಗಳಿರಲಿ, ಕೆಲವೊಮ್ಮೆ ನಿಧಾನವಾಗಿ ವೃಷಣಗಳು ವೀರ್ಯೋತ್ಪಾದ ನೆಯ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಈ ಪರಿಣಾಮದ ಅರಿವು ಆಮೇಲೆಯೇ ಆಗುತ್ತದೆ. ವೃಷಣದೊಳಗಿನ ಟಿಶ್ಯುಗಳಿಗೆ ಘಾಸಿಯಾದಲ್ಲಿ ಅವು ನಿಧಾನವಾಗಿ ತಮ್ಮ ಕ್ಷಮತೆಯನ್ನು ಕಳೆದುಕೊಳ್ಳುತ್ತವೆ. ಈ ಒಳಪೆಟ್ಟು ವೀರ್ಯೋತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಗಾಯಗಳಿಂದಾಗಿ ಸಮರ್ಪಕವಾದ ವೀರ್ಯೋತ್ಪತ್ತಿ ಆಗುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಆದರೆ ವೀರ್ಯಾಣುಗಳ ಸಂಖ್ಯೆಯಲ್ಲಿ ಏರುಪೇರು ಆಗಿರುತ್ತದೆ. ಕೆಲವೊಮ್ಮೆ ಇದು ಸಂಪೂರ್ಣ ಬಂಜೆತನಕ್ಕೂ ಕಾರಣವಾಗಬಹುದು.

ವೃಷಣಗಳು ಕುಗ್ಗಿದರೆ..?
ವಯೋಸಹಜವಾಗಿ ವೃಷಣಗಳ ಗಾತ್ರದಲ್ಲಿ ಕೆಲವೊಮ್ಮೆ ಕುಗ್ಗಿದಂತೆ ಕಾಣಬಹುದು. ಇದಕ್ಕೆ ಕಾರಣ ವೃಷಣಗಳಲ್ಲಿಯ ಟಿಶ್ಯುಗಳು ಜೀವಾಂಕುರದ ಕೋಶಗಳಿಂದ ರಚಿತವಾಗಿರುತ್ತವೆ. ಇದರಿಂದಲೇ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ. ಟೆಸ್ಟೊಸ್ಟರಾನ್‌ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ. ಆದರೆ ಏಟು ಬಿದ್ದು ಅಥವಾ ಜೋರಾಗಿ ಪೆಟ್ಟು ತಗುಲಿದಾಗ ಈ ಜೀವಕೋಶಗಳು ಸಾಯಬಹುದು. ಮರು ಉತ್ಪತ್ತಿ ಯಾಗಲಿಕ್ಕಿಲ್ಲ. ಆಗ ವೀರ್ಯಾಣುಗಳ ಉತ್ಪಾದನೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇಲ್ಲವೇ ವೀರ್ಯ ಉತ್ಪಾದನೆಯೇ ನಿಂತು ಹೋಗುತ್ತದೆ. ಕ್ರಮೇಣ ವೃಷಣಗಳು ಕುಗ್ಗುತ್ತ ಹೋಗುತ್ತವೆ. ಇದರಿಂದಲೂ ಪುರುಷನಲ್ಲಿ ಬಂಜೆತನ ಕಾಣಿಸಿಕೊಳ್ಳುತ್ತದೆ.

ವೃಷಣಗಳಿಗೆ ಗಾಯಗಳಾಗದಂತೆ ತಡೆಯುವುದು ಹೇಗೆ?
ಆಟವಾಡುವಾಗ, ಸಕ್ರಿಯ ಕ್ರೀಡಾಳುಗಳಾಗಿದ್ದಲ್ಲಿ ಸೂಕ್ತ ಸಲಕರಣೆ ಗಳನ್ನು ಧರಿಸುವುದು ಸೂಕ್ತ. ಆದಷ್ಟೂ ಹೊಡೆತದ ಆಘಾತಗಳನ್ನು ತಡೆ ಯುವಂಥ ದಿರಿಸುಗಳನ್ನು ಧರಿಸಬೇಕು.

ಕ್ರಿಕೆಟ್‌, ಬೇಸ್‌ಬಾಲ್‌, ಫುಟ್‌ ಬಾಲ್‌, ಸಾಕ್ಕರ್‌, ಹಾಕಿ ಅಥವಾ ಕರಾಟೆಗಳಲ್ಲಿ ನಿರತರಾದರೆ ಏಟು ರೋಧಕ ಕಪ್‌ಗಳನ್ನು ಧರಿಸಬೇಕು. ಅವು ಪ್ಲಾಸ್ಟಿಕ್‌ನಿಂದ ತಯಾರಾಗಿರುವುದರಿಂದ ಯಾವುದೇ ಕಾರಣಕ್ಕೂ ಏಟು ತಾಕುವುದಿಲ್ಲ. ತೊಡೆ ಸಂದನ್ನು ಸಂರಕ್ಷಿಸುವ ಈ ಕಪ್‌ಗಳನ್ನು ಧರಿಸಿಯೇ ಆಟವಾಡಬೇಕು.

ಜಾಕ್‌ಸ್ಟ್ರಾಪ್ಸ್‌ಗಳಲ್ಲಿ ಬಟ್ಟೆಯಿಂದ ಮಾಡಿರುವ ಆಧಾರ ಲಭ್ಯ ಇರುತ್ತದೆ. ಇದು ವೃಷಣಗಳು ದೇಹಕ್ಕೆ ಅಂಟಿಕೊಂಡಂತೆ ಇರಲು ಅನುಕೂಲ ಮಾಡಿಕೊಡುತ್ತವೆ. ಸೈಕ್ಲಿಂಗ್‌ ಮಾಡುವಾಗ, ಅತಿ ತೂಕದ ಭಾರಗಳನ್ನು ಎತ್ತುವ ವ್ಯಾಯಾಮದಲ್ಲಿ ತೊಡಗಿದಾಗ ಇವನ್ನು ಧರಿಸಬುದಾಗಿದೆ.

ನಿಮ್ಮ ಕ್ರೀಡಾ ತರಬೇತಿದಾರರನ್ನು ಯಾವುದೇ ಹಿಂಜರಿಕೆಯಿಲ್ಲದೇ ದೇಹದ ಸಂರಕ್ಷಣೆಗಾಗಿ ಧರಿಸಬಹುದಾದ ಉಡುಪು ಆಥವಾ ಸಲಕರಣೆಗಳ ಬಗ್ಗೆ ವಿಚಾರಿಸಿ ತಿಳಿದುಕೊಳ್ಳಿ. ಅವರು ತಿಳಿಸುವ ಎಲ್ಲ ಮುಂಜಾಗೃತೆ ಕ್ರಮಗಳನ್ನೂ ಅನುಸರಿಸಿ. ತಿಳಿಯದೇ ಇದ್ದರೆ ಮತ್ತೆ ಮತ್ತೆ ಕೇಳಿ ತಿಳಿದುಕೊಳ್ಳಲು ಹಿಂಜರಿಯಬೇಡಿ.

ಉಡುಗೆ ತೊಡುಗೆಗಳನ್ನು ಧರಿಸುವಾಗ ಅವುಗಳ ಅಳತೆಯ ಮೇಲೆಯೂ ಗಮನವಿರಲಿ. ಅರಾಮದಾಯಕವೆಂದು ಅತಿ ದೊಡ್ಡ ಅಳತೆಯ ಅಥವಾ ಸುರಕ್ಷತೆಗೆ ಹೆಚ್ಚು ಗಮನ ನೀಡಬೇಕೆಂದು ಅತಿ ಸಣ್ಣ ಅಳತೆಯ ಉಡುಗೆ, ತೊಡುಗೆಗಳನ್ನು ಧರಿಸದಿರಿ. ನಿಮ್ಮ ತರಬೇತುದಾರರ ಬಳಿ ಅಥವಾ ವೈದ್ಯರ ಬಳಿ ಸಮಾಲೋಚಿಸಿ ಸೂಕ್ತ ಅಳತೆಯ ಉಡುಗೆಗಳನ್ನು ಖರೀದಿಸಿ.

ಈ ಗಾಯ, ಹೊಡೆತ, ಏಟುಗಳ ಭಯದಿಂದಾಗಿ ನಿಮ್ಮ ಕ್ರೀಡಾಜೀವನದಿಂದ ವಿಮುಖರಾಗದಿರಿ. ಸಾಮಾನ್ಯ ಜೀವನದಲ್ಲಿಯೂ ಕಸರತ್ತು, ಕ್ರೀಡೆ ಅತಿ ಮುಖ್ಯವಾದುದು.

ಸುರಕ್ಷಿತವಾಗಿರುವೆಡೆ ಹೆಚ್ಚು ಗಮನ ನೀಡಿ. ಇಲ್ಲಿ ನೀಡಿರುವುದು ಅರಿವಿಗಾಗಿ ಮಾಹಿತಿ ಮಾತ್ರ. ನೋವಾದಲ್ಲಿ, ಗಾಯವಾದಲ್ಲಿ ಕುಟುಂದಬವರಿಗೆ ತಿಳಿಸಿ. ವೈದ್ಯರ ಸಲಹೆಯನ್ನು ಪಡೆಯಿರಿ. ಯಾವುದನ್ನೂ ನಿರ್ಲಕ್ಷಿಸದಿರಿ... ಇದು ನಿಮ್ಮ ಭವಿಷ್ಯದ ಪ್ರಶ್ನೆ ಎನ್ನುವುದು ಗಮನದಲ್ಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT