ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲಿಬ್‌ನೆಡೆಗೆ ಇದು ಭಾವತೀರ ಯಾನ

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಕಾವ್ಯಾಸಕ್ತರ ರಕ್ತವನ್ನು ಬಿಸಿಯೇರಿಸುವ, ಕೊರೆಯುವಂತೆ ಮಾಡುವ ಯಾವ ಕವಿಗೂ ಸಾವಿಲ್ಲ; ಇಂಥ ಪಟ್ಟಿಗೆ ಸೇರಿಕೊಂಡವರು ಗಾಲಿಬ್.ಗಾಲಿಬ್ ಕನ್ನಡ ಸಂವೇದನೆಗೆ ತೀರಾ ಅಪರಿಚಿತನಲ್ಲದಿದ್ದರೂ ಸಾಕಷ್ಟು ಪರಿಚಿತನೂ ಅಲ್ಲ. ಆದರೆ ಕನ್ನಡದಲ್ಲಿ ಗಾಲಿಬ್ ರಂಗದ ಮೇಲೆ ಒಂದು ಪಾತ್ರವಾಗಿ ಕಾಣಿಸಿಕೊಂಡದ್ದು ಇದೇ ಮೊದಲು.

ಡ್ರಾಮಾಟ್ರಿಕ್ಸ್ ನಾಟಕ ತಂಡ ಈಚೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಕವಿ ಗಾಲಿಬ್‌ನ ಜೀವನದ ಒಂದು ಕುತೂಹಲಕಾರಿ ಘಟಕವನ್ನು ಕೇಂದ್ರವಾಗಿಸಿಕೊಂಡ ‘ಅರಳಿದ ಗಜಲುಗಳು’ ನಾಟಕವನ್ನು ಪ್ರಯೋಗಿಸಿತು.

ಗಾಲಿಬ್‌ನ ಕೆಲವು ಗಜಲುಗಳು ಕನ್ನಡದಲ್ಲಿ ಅರಳಿಕೊಳ್ಳುತ್ತಾ ಸಾಗಿದ್ದು ಒಂದು ಪರಿಯಾದರೆ ವಸ್ತ್ರವಿನ್ಯಾಸ, ರಂಗಸಜ್ಜಿಕೆ ಮತ್ತು ಇವುಗಳನ್ನು ಉದ್ದೀಪಿಸುವಂತೆ ಕಾಣಿಸಿದ ಬೆಳಕು ಮೊಗಲ್ ಕಾಲಘಟ್ಟದ ಒಂದು ರಂಗಿನ ಆವರಣ ಕಟ್ಟಿಕೊಳ್ಳಲು ನೆರವು ನೀಡಿತು. ಇವುಗಳನ್ನು ಮೈದುಂಬಿಕೊಂಡು ನಟರು ಕಾವ್ಯದ ಬಿಗಿ ಬಂಧದಂತೆಯೇ ನಟಿಸಿದರು.

ಈ ನಾಟಕವನ್ನು ರಚಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಎನ್.ಸಿ.ಮಹೇಶ್, ಗಾಲಿಬ್‌ನನ್ನು ಒಂದು ಘಟ್ಟದಲ್ಲಿ ತತ್ತರಿಸುವಂತೆ ಮಾಡಿದ ‘ಸಾಲ’ವನ್ನು ಕೇಂದ್ರವಾಗಿಸಿಕೊಂಡಿದ್ದಾರೆ.

ಗಾಲಿಬ್ ಜೀವನಪ್ರೇಮಿಯೂ ಹೌದು, ಉತ್ಕಟ ಕವಿ ಹೃದಯಿಯೂ ಹೌದು. ಒಂದೆಡೆ ತಾತ್ವಿಕ; ಮತ್ತೊಂದೆಡೆ ಉಡಾಫೆಯ ಜೀವಿ. ಸ್ವಸಮರ್ಥನೆಗಳನ್ನೂ ಕಾವ್ಯವಾಗಿಸಿದ ಭಾವಜೀವಿ. ಪ್ರೇಮ, ಕುಡಿತ, ಮೋಜು, ಜೂಜು ಮತ್ತು ತನ್ನನ್ನು ಕಟ್ಟಕಡೆಯವರೆಗೆ ಜೀವಂತವಾಗಿರಿಸಿದ ಕಾವ್ಯದ ಜತೆ ನಿರಂತರ ಸಂಗಾತ. ಇಷ್ಟೂ ಬಣ್ಣಗಳ ನಡುವೆ ಮಹೇಶ್, ಗಾಲಿಬ್‌ನನ್ನು ತತ್ತರಿಸುವಂತೆ ಮಾಡಿದ ಸಾಲದ ಕೇಂದ್ರದ ಎಳೆಗಳನ್ನು ಪ್ರತಿ ದೃಶ್ಯಗಳಲ್ಲೂ ಕಟ್ಟಿ ಒಟ್ಟು ಒಂದು ಒಟ್ಟಂದದ ನಾಟಕ ಹೆಣೆದಿರುವುದರ ಹಿಂದೆ ಒಂದು ಕಲೆಗಾರಿಕೆ ಇದೆ.

ಪದಗಳ ಸಂಯೋಜನೆಯಲ್ಲಿ ಒಂದು ಮಾಂತ್ರಿಕತೆಯಿದೆ. ಇದರ ಪರಿಣಾಮವಾಗಿ ಒಂದೆರಡು ಕಡೆ ದೃಶ್ಯಗಳು ಲಂಬಿಸಿದವು ಎನ್ನುವುದನ್ನು ಬಿಟ್ಟರೆ ನಟವರ್ಗದವರು ಭಾವ ತೀವ್ರತೆಯನ್ನು ಹೆಚ್ಚಿಸಿದರು.

ಹಾಡುಗಳಲ್ಲಿ ರಂಗೋಲಿಯ ಚಿತ್ತಾರವಿತ್ತು. ತೀರಿಹೋಗಿರುವ ತನ್ನ ಅಪ್ಪನ ಪಿಂಚಣಿ ಆಡಳಿತದ ಜಟಿಲತೆಯಿಂದ ಬ್ರಿಟಿಷರ ಖಾತೆಯಲ್ಲಿ ಬಂಧಿಯಾಗಿ ಕೂತಿದ್ದು ಅದು ದಿನದಿಂದ ಬೆಳೆಯುತ್ತಿದೆ ಮತ್ತು ಒಂದು ದಿನ ದೊಡ್ಡಮೊತ್ತವಾಗಿ ತನ್ನ ಕೈಸೇರಿ ಕುಟಂಬಕ್ಕೆ ನೆರವು ನೀಡುತ್ತದೆ ಎನ್ನುವ ಭರವಸೆಯಲ್ಲಿ ಗಾಲಿಬ್ ದುಡಿಮೆಗೆ ಕೈಹಚ್ಚದೆ ಸಾಲದ ಸುಳಿಯಲ್ಲಿ ಸಿಲುಕಿ ನಲುಗುವುದು ಇಲ್ಲಿನ ಕಥೆ; ಇದು ಗಾಲಿಬ್‌ನನ್ನು ಹಂತಹಂತವಾಗಿ ಅತಂತ್ರಕ್ಕೀಡು ಮಾಡುವ ಸನ್ನಿವೇಶಗಳಲ್ಲಿ ನಿರ್ದೇಶಕ ಮಹೇಶ್, ಸಾಲವನ್ನು ಬೇರೆ ನೆಲೆಗಳಿಗೆ ಹಿಗ್ಗಿಸಿದ್ದಾರೆ. ಒಟ್ಟಿನಲ್ಲಿ ಇಡೀ ನಾಟಕದ ಸೂತ್ರ ಅಡಗಿರುವುದು ಅದರ ಮಂದ್ರಗತಿ ಮತ್ತು ಮಂದ್ರಶೋಧದಲ್ಲಿ.

ಈ ಬಂಧ ದಟ್ಟವಾಗುವುದು ಹಲವು ಸ್ತರದ ನೋವಿನ ತೀವ್ರತೆಯಲ್ಲಾದರೂ ಈ ತೀವ್ರತೆ ಮತ್ತೂ ದಟ್ಟವಾಗದಂತೆ ಎಚ್ಚರ ವಹಿಸಿ ಬೇರೆ ಗುಂಗು ಕಟ್ಟಿಕೊಟ್ಟಿದ್ದು ನಾಟಕದ ಹಾಡುಗಳು. ನಾಟಕದ ಆರಂಭದ ಹಾಡೇ ಕುತೂಹಲಕಾರಿಯಾಗಿದೆ; ಹಿಂದಿ ಸಿನಿಮಾ ‘ವಕ್ತ್’ನಲ್ಲಿನ ಪ್ರಸಿದ್ಧ ಹಾಡು ‘ಎ ಮೆರೆ ಜೊಹರ ಜಬೀನ್’ ಹಾಡಿನ ಲಯಕ್ಕೆ ಕನ್ನಡ ಸಂವೇದನೆಗೆ ಒಗ್ಗುವಂತೆ ಹಾಡನ್ನು ಬರೆಯಲಾಗಿದೆ. ಖವ್ವಾಲಿ ಲಯದಲ್ಲಿ ಇರುವ ಹಾಡನ್ನು ನಾಟಕಕ್ಕೆ ಹೊಂದುವಂತೆ ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ದಾರೆ.

ಈ ಹಾಡಿನ ಆರಂಭದಿಂದಲೇ ಗಾಲಿಬ್‌ನ ಪರಿಚಯ ಅನಾವರಣಗೊಳ್ಳುತ್ತದೆ. ಇಲ್ಲಿಂದಾಚೆಗೆ ದೃಶ್ಯಬಂಧದ ಸೂತ್ರೀಕರಣ ಆರಂಭವಾಗುತ್ತದೆ. ಪಾತ್ರಗಳು ಪರಿಚಯಗೊಳ್ಳುತ್ತ ತಮ್ಮ ಬದುಕಿನ ಸುತ್ತ ಹೆಣೆದುಕೊಂಡಿರುವ ಕಥಾನಕದ ಇತರ ಪಾತ್ರಗಳ ಜೊತೆಗೆ ಒಂದು ಸೂತ್ರ ಕಟ್ಟಿಕೊಳ್ಳುತ್ತಾ ಸಾಗುತ್ತದೆ.

ಕಥನ ಕ್ರಮದ ನಿರೂಪಣೆಯಲ್ಲಿ ತುಂಬ ತಂತ್ರಗಾರಿಕೆ ಒಳಸಲು ಹೋಗಿಲ್ಲ- ಬದುಕಿನ ಅನುಕ್ರಮಣಿಕೆಯಲ್ಲಿಯೇ ನಾಟಕದ ಓಘ ಸಾಗುವಂತೆ ಮಹೇಶ್ ನೋಡಿಕೊಂಡಿದ್ದಾರೆ.

ನಾಟಕದ ಮುಖ್ಯಭೂಮಿಕೆಯಲ್ಲಿ ಮಿರ್ಜಾ ಗಾಲಿಬ್ ಇರುವ ಕಾರಣ ಗಾಲಿಬ್ ಪಾತ್ರದ ನಿರ್ವಹಣೆ ಮಾಡಿದ ಸತೀಶ್ ಐತಾಳ್ ಪ್ರತೀ ಹಂತದಲ್ಲೂ ತಮ್ಮ ತನ್ಮಯತೆ ಕಾಣಿಸುತ್ತ ಹಂತಹಂತವಾಗಿ ಆವರಿಸಿಕೊಂಡರು. ಒಂದು ಪ್ರಭೆ ಕಟ್ಟಿದರು.

ಅದರ ಚೌಕಟ್ಟಿನ ಬೆಳಕಿನಲ್ಲೇ ಪಾತ್ರದ ಮನೋಲೋಕ ನಿರ್ಮಿಸಿಕೊಂಡರು. ಅಲ್ಲಿ ಅವರದೇ ಮಾತು, ಮೋಡಿ, ಜಾದೂ ಎಲ್ಲ. ಅವರು ಕಾವ್ಯಾತ್ಮಕ ಸ್ವಗತಕ್ಕೂ ಸೈ. ನಗೆಚಾಟಿಕೆಯಲ್ಲಿ ಛೇಡಿಸುವಾಗಲೂ ಸೈ. ದುಃಖದ ತೀವ್ರತೆ ಕಾಣಿಸಿಕೊಳ್ಳುವಾಗ ಅಭಿನಯದಲ್ಲಿ ಉತ್ತುಂಗ ತಲುಪುತ್ತಾರೆ.

ಹಾಗಾಗಿ ಆ ಗಾಲಿಬ್ ರಂಗದ ಮೇಲೆ ಮತ್ತೆ ಪುನರವತರಿಸಿದಂತೆ ಭಾಸವಾಗುತ್ತದೆ. ಜೊತೆಗೆ ಸಹ ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ಕಾರಣ ತಮ್ಮ ಛಾಪನ್ನೂ ಮಿಕ್ಕವರ ಮೇಲೆ ಹರಿಬಿಟ್ಟಂತೆ ಅನಿಸುತ್ತದೆ.

ಇವರಿಗೆ ಸಾಥ್ ಕೊಡುವ ರೀತಿಯಲ್ಲಿ ಇತರ ಎಲ್ಲ ನಟರೂ ತಂತಮ್ಮ ಪಾತ್ರ ನಿರ್ವಹಣೆಯಲ್ಲಿ ಅಚ್ಚುಕಟ್ಟುತನ ತಂದರು. ಗಾಲಿಬ್ ಮಡದಿ ಉಮ್ರಾಜಾನ್ ಪಾತ್ರದಲ್ಲಿ ನಟಿ ರಾಜೇಶ್ವರಿ ಭಾವ ತೀವ್ರತೆಯಲ್ಲಿ ಸತೀಶ್ ಐತಾಳ್ ಅವರಿಗೆ ಸರಿಸಮವಾಗಿ ನಟಿಸಿದರು. ಇವರ ಜತೆಗೆ ಕಲ್ಲುಮಿಯಾನಾಗಿ ಕಾಣಿಸಿಕೊಂಡ ಲಕ್ಷ್ಮಣ್ ಪೂಜಾರಿ ಅವರ ಧ್ವನಿ, ಚಲನೆ ಮತ್ತು ಅಭಿನಯದ ಮೂಲಕ ನೆನಪಿನಲ್ಲಿ ಉಳಿದುಬಿಡುತ್ತಾರೆ.

ಮೋತಿಬೇಗಂ ಆಗಿ ಭುವನಾ ಚಕಿತಗೊಳಿಸುತ್ತಾರೆ. ರಘು ರಾಮನ್‌ಕೊಪ್ಪ ಅವರು ಬನ್ಸೀಧರ್ ಆಗಿ ನಟಿಸುವಾಗ ನಟನೆಯಲ್ಲಿ ನಿಯಂತ್ರಣ ಮತ್ತು ಸಹಜತೆ ಕಂಡಿತು; ಆದರೆ ಶಂಸುದ್ದೀನ್ ಪಾತ್ರ ನಿರ್ವಹಣೆಯಲ್ಲಿ ಅವರ ಮಾತುಗಳು ಬಾಯಿ ಪಾಠದಂತೆ ಕೇಳಿಸಲು ಆರಂಭಿಸುತ್ತವೆ. ಅದಕ್ಕಿರುವ ಬೀಸನ್ನು ಅವರು ಗ್ರಹಿಸಿದಂತೆ ಕಂಡುಬರುವುದಿಲ್ಲ; ನಗುವಿನಿಂದ ಮುಚ್ಚಿಹಾಕಲು ಹವಣಿಸುತ್ತಿರುವಂತೆ ಅನಿಸುತ್ತದೆ.

ಉಳಿದ ನಟರು ಅಲ್ಲಲ್ಲಿ ಮಿನುಗಲು ಪ್ರಯತ್ನಿಸಿದ್ದಾರಾದರೂ ಅವರ ವಯೋಮಾನಕ್ಕೆ ಮೀರಿದ ಪಾತ್ರಗಳು ದಕ್ಕಿರುವ ಕಾರಣ ಚೂರು ಪೇಲವವಾಗಿ ಕಂಡು ಬರುತ್ತಾರೆ. ಝಾಗ್ ಪಾತ್ರದಲ್ಲಿ ವಿಕಾಸ್ ಶಾಸ್ತ್ರಿ ಕನ್ನಡವನ್ನು ಪ್ರಯತ್ನಪೂರ್ವಕವಾಗಿ ಹೊರಡಿಸಿದಂತೆ ಕಂಡುಬಂದರು. ಹಾಗೆ ನೋಡಿದರೆ ಉಸ್ತಾದ್ ಝಾಗ್ ಸೇವಕ ಹಾಗೂ ಫಜಲ್ ಹಸನ್ ಪಾತ್ರದಲ್ಲಿ ರಘುವೀರ್ ತಾವು ಚುರುಕುಗೊಳ್ಳುತ್ತಾ ಸಾಗಿದರು.

ಇಡೀ ನಾಟಕ ಗಾಲಿಬ್‌ನ ಮಾತಿನ ಕಡಲಿನಂತೆ ಇತ್ತು. ಇದಕ್ಕೆ ಪೂರಕವಾದ ಹಿನ್ನೆಲೆ, ವಸ್ತ್ರವಿನ್ಯಾಸ ಮತ್ತು ಪ್ರಸಾಧನ ಅತ್ಯುತ್ತಮ. ಬೆಳಕು ಚಂದ ಹೆಚ್ಚಿಸಿತು.ಸಂಗೀತದಲ್ಲಿನ ಏರಿಳಿತ ನಿಯಂತ್ರಿಸುವುದನ್ನು ರೂಢಿಸಿಕೊಂಡರೆ ಹೊಸ ಅನುಭೂತಿ ನಿರೀಕ್ಷಿಸಬಹುದು. ಒಟ್ಟಿನಲ್ಲಿ ಇದು ಕವಿ ಗಾಲಿಬ್‌ನೆಡೆಗೆ ಒಂದು ಭಾವತೀರ ಯಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT