ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲಿಬ್ ಮೋಹಿತರ ರಂಗ ಪ್ರಯೋಗ

Last Updated 26 ಮೇ 2016, 19:41 IST
ಅಕ್ಷರ ಗಾತ್ರ

ಅದೆಷ್ಟು ಬಾರಿ ಓದಿಕೊಂಡರು, ಗಜಲ್ ಕೇಳಿದರು ತೀರದ ಮೋಹ ಗಾಲಿಬ್‌ ಪದ್ಯಗಳ ಮೇಲೆ ಉಳಿದಿರುತ್ತದೆ. ನೋವು, ದುಃಖವನ್ನೇ ಕೇಂದ್ರವಾಗಿ ಹೊಂದಿದ ಸಾವಿರಾರು ಉರ್ದು ಗಜಲ್‌ಗಳನ್ನು ಅದ್ಭುತವಾಗಿ ರಚಿಸಿದವರು ಮೊಘಲರ ಕಾಲದ ಕವಿ ಮಿರ್ಜಾ ಅಸಾದುಲ್ಲಾ ಖಾನ್ ಗಾಲಿಬ್.

ಆಧುನಿಕೋತ್ತರ ಕವಿಗಳನ್ನೂ ಗಾಲಿಬ್ ಆವರಿಸಿದ್ದಾನೆ. ಗಾಲಿಬ್ ಶೈಲಿಯ ಅನುಕರಣೆಯಲ್ಲೇ ಅನೇಕರು ಪದ್ಯಗಳನ್ನು ರಚಿಸಿದ್ದಾರೆ. ಕವಿ ಗುಲ್ಜರ್ ಸಾಬ್ ಕೂಡ ಗಾಲಿಬ್‌ ಪದ್ಯಗಳನ್ನು ಸಾಕ್ಷಾತ್ಕರಿಸಿಕೊಂಡವರು. ಗಾಲಿಬ್ ಪದ್ಯಗಳನಷ್ಟೆ ಅಲ್ಲದೆ ಅವರ ಗದ್ಯ, ಪತ್ರಗಳೂ ಕೂಡ ಬದುಕಿನ ಚಿತ್ರಣ ಕಟ್ಟಿಕೊಡುವ ಅದ್ಭುತ ಉಪಮೆಗಳಿಂದ ಕೂಡಿವೆ.

ಅವರ ಪದ್ಯಗಳಷ್ಟೆ ಗದ್ಯ ಪ್ರಕಾರವೂ ಮಹತ್ವದ್ದಾಗಿದೆ. ಮೊಘಲ್‌ ದರ್ಬಾರಿನಲ್ಲಿ ವೈಭವದಿಂದ ಇದ್ದ ದೆಹಲಿಯನ್ನು ಗಾಲಿಬ್‌ ಅದಮ್ಯವಾಗಿ ಪ್ರೀತಿಸುತ್ತಿದ್ದರು. ಮೊಘಲ ಪ್ರಭಾವ ಕುಂದಿದ ನಂತರ ಆಂಗ್ರೇಜಿ ದಬ್ಬಾಳಿಕೆಯಿಂದ ತತ್ತರಿಸಿದ ದೆಹಲಿ ಕಂಡು ಅಪಾರ ನೋವುಂಡರು.

ಈ ಸಂದರ್ಭದಲ್ಲಿ ತನ್ನ ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಪತ್ರಗಳನ್ನು ಬರೆದರು. ಇಂತಹ ಪತ್ರಗಳ ಸಂಕಲನ ರೂಪವನ್ನು ಇಟ್ಟುಕೊಂಡು ಜೊತೆಗೆ ಗಾಲಿಬ್ ಅವರ ಕೆಲವು ಗಜಲ್‌ಗಳನ್ನು ಸೇರಿಸಿ ಸಂಗೀತ ರಂಗರೂಪಕವನ್ನು ನಿರ್ಮಿಸಿದ್ದಾರೆ ರಂಗಕರ್ಮಿ ಜಾಫರ್ ಮೊಹಿಯುದ್ದಿನ್.

ಕತ್‌ಪುತ್ಲಿಯ ನಾಟಕ ತಂಡ ಮತ್ತು ಕರ್ನಾಟಕ ಉರ್ದು ಅಕಾಡೆಮಿಯ ಸಹಯೋಗದಲ್ಲಿ ‘ಜಿಕ್ರೆ ಗಾಲಿಬ್’ ಸಂಗೀತ ನಾಟಕವನ್ನು ರಂಗದ ಮೇಲೆ ತರಲಿದ್ದಾರೆ ನಿರ್ದೇಶಕ ಜಾಫರ್ ಮೊಹಿಯುದ್ದಿನ್.

‘ಸಣ್ಣ ವಯಸ್ಸಿನಿಂದಲೂ ಗಾಲಿಬ್‌ ಪದ್ಯಗಳನ್ನು ಓದಿಕೊಂಡು ಬಂದಿದ್ದೇನೆ, ಅವರು ನೋವಿನ ಬಗ್ಗೆ ರಚಿಸಿದ ಗಜಲ್‌ಗಳು ನನಗೆ ತುಂಬಾ ಇಷ್ಟ, ಇಂದಿನ ತಲೆಮಾರಿನ ಹುಡುಗರಿಗೆ ಗಾಲಿಬ್‌ ಬಗ್ಗೆ ಕೇಳಿದರೆ ಏನು ಗೊತ್ತಿರುವುದಿಲ್ಲ. ಹಾಗಾಗಿ ಇಂಥ ವಿಭಿನ್ನ ರಂಗ ಪ್ರಯೋಗದಿಂದ ಯುವ ಸಮುದಾಯಕ್ಕೆ ಗಾಲಿಬ್‌ರನ್ನು ತಲುಪಿಸುವ ಪ್ರಯತ್ನ ನನ್ನದು’ ಎನ್ನುತ್ತಾರೆ  ಜಾಫರ್ ಮೊಹಿಯುದ್ದಿನ್.

ಅಂತರ್ಜಾಲದಲ್ಲಿ ಗಾಲಿಬ್‌ರ ಅನೇಕ ಪದ್ಯಗಳು ಲಭ್ಯವಿದೆ. ಗಾಲಿಬ್‌ ಪದ್ಯಗಳನ್ನು ಸುಮ್ಮನೆ ಓದುವುದಕ್ಕಿಂತ, ಅದರ ಪದ ಪ್ರಯೋಗ, ಉಪಮೆಗಳ ಅಮಲಿಗೆ ಹೋಗಿ ಒಂದು ಧ್ಯಾನದಂತೆ ಅನುಭವಿಸಬೇಕು. ಈ ಧ್ಯಾನಕ್ಕೆ ಕಥಕ್‌ ನೃತ್ಯದ ಸಾಥ್‌ ಸಿಕ್ಕಿದೆ. ‘ಜಿಕ್ರೆ ಗಾಲಿಬ್’ ರಂಗ ಪ್ರಯೋಗದಲ್ಲಿ ಗಾಲಿಬ್‌ ದರ್ಶನವಾಗಲಿದೆ.

ಗಾಲಿಬ್‌ ಅವರಿಗೆ ಒಮ್ಮೆ ತಾವು  ಹಿಂದೆಂದೋ ತಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಬರೆದ ಪತ್ರಗಳು ಸಿಗುತ್ತವೆ. ಅವರು ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳುವ ರೀತಿಯಲ್ಲಿ ನಾಟಕ ತೆರೆದುಕೊಳ್ಳುತ್ತದೆ.

ಗಜಲ್‌ಗಳ ಹಾಡುಗಾರಿಕೆ, ಕಥಕ್‌ ನೃತ್ಯದೊಂದಿಗೆ ‘ಜಿಕ್ರೆ ಗಾಲಿಬ್’ ಕಳೆ ಕಟ್ಟುತ್ತದೆ. ರಂಗ ಪ್ರಯತ್ನಕ್ಕೆ ಕವಿ ಗುಲ್ಜಾರ್, ಗೋಪಿಚಂದ್ ನಾರಂಗ್ ಮತ್ತು ಟಿ.ಪಿ. ಇಸ್ಸಾರ್ ನಿರ್ದೇಶಕರಿಗೆ ಸಹಾಯ ಮಾಡಿದ್ದಾರೆ. ನಂದಿನಿ ಮೆಹ್ತಾ ‘ಜಿಕ್ರೆ ಗಾಲಿಬ್’ ರಂಗರೂಪಕ್ಕೆ ಕಥಕ್ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾಟಕದಲ್ಲಿ ರಘುಪತಿ ಝಾ, ಅಂಕಿತಾ ಕುಂಡು ಅವರ ಗಜಲ್ ಗಾಯನವಿದೆ

ಮಾಲ್ಗುಡಿ ಡೇಸ್‌ ಖ್ಯಾತಿಯ ನಿರ್ದೇಶಕ
‘ಜಿಕ್ರೆ ಗಾಲಿಬ್’ನ ನಿರ್ದೇಶಕ ಜಾಫರ್ ಮೊಹಿಯುದ್ದಿನ್ ವೃತ್ತಿಯಲ್ಲಿ ವಾಸ್ತುಶಿಲ್ಪಿ. 1979ರಿಂದಲೂ ನಾಟಕ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ಖ್ಯಾತ ನಾಟಕ ತಂಡಗಳಾದ ಸಮುದಾಯ, ಬೆಂಗಳೂರು ಲಿಟಲ್ ಥಿಯೇಟರ್, ಮಂಚ್ ಮುಂತಾದವುಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಇದೀಗ ತಮ್ಮದೇ ಆದ ಕತ್‌ಪುತ್ಲಿಯಾ ತಂಡದೊಂದಿಗೆ ರಂಗ ಪ್ರಯೋಗದಲ್ಲಿ ತಲ್ಲೀನರು.

ಇವರು ಹಲವು ಸಿನಿಮಾಗಳು, ಜಾಹೀರಾತುಗಳು ಮತ್ತು ಸಾಕ್ಷ್ಯಚಿತ್ರಗಳಿಗೆ ದನಿ ನೀಡಿದ್ದಾರೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದ ಅನುಭವವನ್ನು ಹೊಂದಿದ್ದಾರೆ. ಇವರ ಪ್ರತಿಭೆಗೆ ಕನ್ನಡಿಯಂತಿರುವುದು ‘ಮಾಲ್ಗುಡಿ ಡೇಸ್’. ಶಂಕರ್‌ನಾಗ್‌ ನಿರ್ದೇಶನದಲ್ಲಿ ಮೂಡಿಬಂದ ದೃಶ್ಯಕಾವ್ಯಕ್ಕೆ ಚಿತ್ರಕಥೆ ಬರೆದಿದ್ದವರು ಜಾಫರ್‌ ಮೊಹಿಯುದ್ದೀನ್.

‘ಜಿಕ್ರೆ ಗಾಲಿಬ್’ ತಂಡ
ಗಾಲಿಬ್ ಪಾತ್ರಧಾರಿ – ಜಾಫರ್ ಮೊಹಿಯುದ್ದಿನ್, ಗಜಲ್ ಹಾಡುಗಾರರು– ರಘುಪತಿ ಝಾ, ಅಂಕಿತಾ ಕುಂಡು. ಕಥಕ್ ನೃತ್ಯ– ಸ್ಮಿತಾ ಶ್ರೀನಿವಾಸನ್, ಸಂಗೀತ– ಅಜಯ್‌ ಕುಮಾರ್ ಸಿಂಗ್ (ತಬಲಾ), ಅಶ್ವಿನಿ ಕೌಶಿಕ್ (ಕೊಳಲು), ಸರ್ಫರಾಝ್ ಖಾನ್ (ಸಾರಂಗಿ), ನೃತ್ಯ ಸಂಯೋಜನೆ– ನಂದಿನಿ ಮೆಹ್ತಾ, ನೃತ್ಯಗಾರರು– ಪೂಜಾ ಮೆಹ್ತಾ, ಮಾಳವಿಕಾ ಶ್ರೀಪಾದ, ವಿದ್ಯಾ ಚಕ್ರವರ್ತಿ, ಜಿನಾಲ್ ರೂಪಾನಿ, ಸಹ ನಿರ್ದೇಶನ– ಜೆಹೆರಾ ಸುಲ್ತಾನ, ಸಹಾಯಕ ನಿರ್ದೇಶನ– ರೂಬಿಯಾ ಖಾನ್, ರಂಗಸಜ್ಜಿಕೆ– ಇಶಾಕ್ ಕಾಜಿ, ರಂಗಪರಿಕರ– ಶಕೀಲ್, ಬೆಳಕಿನ ವಿನ್ಯಾಸ– ಪ್ರದೀಪ್‌ ಬೆಳವಾಡಿ, ಮೇಕಪ್‌– ಉಮಾ ಮಹೇಶ್ವರ್ (ಉಮೇಶ್), ಗಾಲಿಬ್ ವಸ್ತ್ರವಿನ್ಯಾಸ– ತಹಸೀನ್ ಜಾಫರ್.

ಇಂದು ಪ್ರಯೋಗ
ಇಂದು (ಮೇ 27) ಸಂಜೆ 7ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಜಿಕ್ರೆ ಗಾಲಿಬ್‌’ನ ಮೊದಲ ಪ್ರದರ್ಶನ ನಡೆಯಲಿದೆ.
ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT