ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಪಟದ ಸೂತ್ರಧಾರ ಸಾಬಿರ್‌

Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಮುಗಿಲ ಅಂಗಳದಲ್ಲಿ ಹಾರಾಡುವ ಬಣ್ಣಬಣ್ಣದ ಗಾಳಿಪಟಗಳನ್ನು ಕಂಡಾಗ ನಮ್ಮ ಮನಸ್ಸಿನಲ್ಲೂ ಬಾಲ್ಯದ ನೆನಪುಗಳು ಗರಿಬಿಚ್ಚಿಕೊಳ್ಳುತ್ತವೆ. ಅಪ್ಪ ಕೊಟ್ಟ ಪುಡಿಗಾಸಿನಿಂದ ಬಣ್ಣದ ಕಾಗದ ಖರೀದಿಸಿ, ಅದನ್ನು ಬಿದಿರಿನ ಕಡ್ಡಿಗೆ ಅಂಟಿಸಿ, ಬಾಲಂಗೋಚಿ ಕಟ್ಟಿ ಸೂತ್ರ ಹಿಡಿದು ಬಯಲಲ್ಲಿ ಗಾಳಿಪಟ ಹಾರಿಸಿದ ಮೊದಲ ನೆನಪನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಹೀಗೆ ಎಲ್ಲರ ಬಾಲ್ಯದೊಂದಿಗೂ ತಳುಕು ಹಾಕಿಕೊಂಡಿರುವ ಗಾಳಿಪಟ ಇಂದು ಆಟವಾಗಿಯೂ, ಕಲೆಯಾಗಿಯೂ, ಸ್ಪರ್ಧೆಯಾಗಿಯೂ ಗುರ್ತಿಸಿಕೊಂಡಿದೆ.

ಸಾಮಾನ್ಯವಾಗಿ ನಮ್ಮಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟವನ್ನು ಹಾರಿಸುವ ಸಂಪ್ರದಾಯವಿದೆ. ವರ್ಷದ ಮೊದಲ ತಿಂಗಳಿನಲ್ಲಿ ದೇಶದೆಲ್ಲೆಡೆ ‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವ’ವೂ ನಡೆಯುತ್ತದೆ. ಗಾಳಿಪಟದ ಸ್ಪರ್ಧೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯತೊಡಗಿದಂತೆ ಗಾಳಿಪಟ ತಯಾರಿಕೆಯೂ ಒಂದು ಸಣ್ಣ ಉದ್ಯಮವಾಗಿ ರೂಪುಗೊಳ್ಳತೊಡಗಿತು. ಈ ಉದ್ಯಮದ ಹರವು ಈಗ ಹಿಗ್ಗಿದೆ. ಮೊದಲೆಲ್ಲಾ ಹತ್ತು, ನೂರರ ಆಸುಪಾಸಿನಲ್ಲಿದ್ದ ಗಾಳಿಪಟದ ಬೆಲೆ ಈಗ ಸಾವಿರದ ಗಡಿ ದಾಟಿದೆ. 

ಗಾಳಿಪಟ ಪ್ರಿಯರಿಗೆ ಅವರಿಷ್ಟದ ಗಾಳಿಪಟ ಮಾಡಿಕೊಡುವ ಅನೇಕ ಅಂಗಡಿಗಳು ನಗರದಲ್ಲಿವೆ. ಕಾರ್ಖಾನೆಗಳೂ ಕಣ್ತೆರೆದಿವೆ. ಅಚ್ಚುಕಟ್ಟಾದ ಗಾಳಿಪಟ ತಯಾರಿಸಿಕೊಡುವ ಅಂಗಡಿಗಳಲ್ಲಿ ಶಿವಾಜಿನಗರದಲ್ಲಿರುವ ‘ಬರ್ಕತ್‌ ಕೈಟ್‌ ಸೆಂಟರ್‌’ ಕೂಡ ಒಂದು. ಈ ಅಂಗಡಿ ಕಳೆದ 25 ವರ್ಷದಿಂದಲೂ ಗಾಳಿಪಟಪ್ರಿಯರಿಗೆ ಅವರಿಷ್ಟದ ಗಾಳಿಪಟ ಮಾಡಿಕೊಡುತ್ತಲೇ ಪ್ರಸಿದ್ಧಿ ಪಡೆದಿದೆ.

‘ನನ್ನ ತಂದೆ ಮೊದಲು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಸ್ಥಳದ ಆಜುಬಾಜಿನಲ್ಲಿ ಗಾಳಿಪಟ ತಯಾರಿಸುವ ಅಂಗಡಿಗಳಿದ್ದವು. ಬೇರೆ ಕೆಲಸ ಮಾಡುತ್ತಿದ್ದ ನನ್ನ ತಂದೆ ಬಿಡುವಿನ ಸಮಯದಲ್ಲಿ ಗಾಳಿಪಟ ತಯಾರಿಸುವುದನ್ನು ಕುತೂಹಲದ ಕಣ್ಣುಗಳಿಂದ ಗಮನಿಸುತ್ತಿದ್ದರು. ಆಮೇಲೆ ಅವರೇ ಗಾಳಿಪಟ ತಯಾರಿಸುವುದನ್ನು ಕಲಿತುಕೊಂಡರು. ಹೀಗೆ ಅಪ್ಪನಿಂದ ಗಾಳಿಪಟ ಮಾಡುವುದನ್ನು ಕಲಿತ ನಾನು ನಗರದಲ್ಲಿ ಗಾಳಿಪಟ ಕಾರ್ಖಾನೆ ಆರಂಭಿಸಿದೆ’ ಎನ್ನುತ್ತಾರೆ ಬರ್ಕತ್‌ ಕೈಟ್‌ ಸೆಂಟರ್‌ನ ಮಾಲೀಕ ಸಾಬಿರ್‌ ಖಾನ್‌.

ಸಾಬಿರ್‌ ಖಾನ್‌ ಅಪ್ಪನಿಂದ ಕಲಿತ ಕಲೆಯನ್ನು ಈಗ ಉದ್ಯಮವಾಗಿ ಪರಿವರ್ತಿಸಿ ತಮ್ಮ ಜೀವನ ನಿರ್ವಹಣೆಯ ದಾರಿ ಮಾಡಿಕೊಂಡಿದ್ದಾರೆ. 1991ರಲ್ಲಿ ಶಿವಾಜಿನಗರದ ಓಂ ಶಕ್ತಿ ದೇವಸ್ಥಾನದ ಬಳಿ ‘ಬರ್ಕತ್‌ ಕೈಟ್‌ ಸೆಂಟರ್‌’ ಆರಂಭಿಸಿದ ಇವರು ಈಗ ತಮ್ಮ ಉದ್ಯಮವನ್ನು ಆರ್‌.ಟಿ.ನಗರ ಮತ್ತು ಕುಂಬಾರಪೇಟೆಗೂ ವಿಸ್ತರಿಸಿದ್ದಾರೆ. ಸಾಬಿರ್‌ ಖಾನ್‌ ಅವರ ಬಳಿ ವಿವಿಧ ವಿನ್ಯಾಸದ ಗಾಳಿಪಟಗಳು ಲಭ್ಯವಿದ್ದು, ಅವುಗಳ ಬೆಲೆ ₹5ರಿಂದ ₹500ರವರೆಗೂ ಇದೆ.

ಗಾಳಿಪಟವು ಸಾಮಾನ್ಯವಾಗಿ ಚೌಕಾಕಾರದಲ್ಲಿದ್ದರೂ ವಿವಿಧ ಆಕಾರ ಮತ್ತು ಗಾತ್ರಗಳಲ್ಲಿಯೂ ಇದನ್ನು ಮಾಡಬಹುದು. ಸಾಬಿರ್‌ ಅವರು ಕೂಡ ಪೇಪರ್‌, ಪ್ಲಾಸ್ಟಿಕ್‌, ಬಟ್ಟೆಗಳನ್ನು ಬಳಸಿ ವಿವಿಧ ಬಗೆಯ ಗಾಳಿಪಟಗಳನ್ನು ತಯಾರಿಸಿಕೊಡುತ್ತಾರೆ. ವಿದ್ಯುತ್‌ ದೀಪಗಳನ್ನು ಬಳಸಿ ಗಾಳಿಪಟಗಳನ್ನು ತಯಾರಿಸಿಕೊಡುವುದು ಇವರ ಇನ್ನೊಂದು ವಿಶೇಷ.

‘ಬೆಂಟನ್‌, ಮೋಟು ಪತ್ಲು, ಚೋಟಾ ಭೀಮ್ ಮೊದಲಾದ ಕಾರ್ಟೂನ್‌ ಚಿತ್ರಗಳಿರುವ ಗಾಳಿಪಟಗಳಿಗೆ ನಮ್ಮಲ್ಲಿ ಹೆಚ್ಚಿನ ಬೇಡಿಕೆ ಇದೆ. ಚೀನಿ ದೇವರುಗಳು ಹಾಗೂ ಚೀನಿ ಬಟ್ಟೆಯಿಂದ ತಯಾರಿಸಿದ ಗಾಳಿಪಟಗಳಿಗೂ ಹೆಚ್ಚಿನ ಬೇಡಿಕೆಯಿದೆ. ಇವುಗಳ ಜೊತೆಗೆ ದೇಶಭಕ್ತರ ಚಿತ್ರಗಳಿರುವ ಗಾಳಿಪಟಗಳನ್ನು ಮಾಡಿಕೊಡುವಂತೆ ಗ್ರಾಹಕರು ಬೇಡಿಕೆ ಇಡುತ್ತಾರೆ. ಉಳಿದಂತೆ ಮೀನು, ನಕ್ಷತ್ರ ಹೀಗೆ ವಿವಿಧ ಆಕಾರದ ಗಾಳಿಪಟಗಳು ನಮ್ಮ ಬಳಿ ಹೆಚ್ಚಾಗಿ ದೊರೆಯುತ್ತವೆ.

ಟೀವಿಯಲ್ಲಿ ಹೊಸ ಹೊಸ ಮಕ್ಕಳ ಧಾರಾವಾಹಿಗಳು ಪ್ರಸಾರವಾದಾಗ ಅದರಲ್ಲಿನ ಪಾತ್ರಧಾರಿಗಳ ಮುಖಚಿತ್ರಗಳಿರುವ ಪಟಗಳನ್ನು ನಾವು ತಯಾರಿಸಿ ಮಾರಾಟ ಮಾಡುತ್ತೇವೆ. ಕಾರ್ಟೂನ್‌ ಪಾತ್ರಧಾರಿಗಳನ್ನು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ’ ಎನ್ನುವ ಸಾಬಿರ್‌ ಕೇವಲ ಗಾಳಿಪಟ ತಯಾರಿಸುವುದಷ್ಟೇ ಅಲ್ಲದೇ ರಾಜ್ಯದ ವಿವಿಧೆಡೆ  ನಡೆಯುವ ಗಾಳಿಪಟ ಸ್ಪರ್ಧೆಗಳಲ್ಲಿ ಭಾಗವಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಆರನೇ ತರಗತಿವರೆಗೆ ಮಾತ್ರ ಓದಿರುವ ಸಾಬಿರ್‌ ಖಾನ್‌ಗೆ ಗಾಳಿಪಟ ತಯಾರಿಕೆ ಒಂದು ಪ್ಯಾಷನ್‌. ತಮ್ಮ ಗಾಳಿಪಟ ತಯಾರಿಕೆ ಕಾರ್ಖಾನೆಯಲ್ಲಿ ಹತ್ತು ಮಂದಿಗೆ ಉದ್ಯೋಗ ನೀಡಿದ್ದಾರೆ. ‘ಮಕ್ಕಳು ಗಾಳಿಪಟಗಳನ್ನು ತುಂಬ ಇಷ್ಟ ಪಡುತ್ತಾರೆ’ ಎನ್ನುವ ಸಾಬಿರ್‌ ಖಾನ್‌ ಈವರೆಗೆ ಮಕ್ಕಳು ಮೆಚ್ಚುವಂತಹ ಗಾಳಿಪಟಗಳನ್ನೇ ಹೆಚ್ಚಾಗಿ ತಯಾರಿಸಿ ಮಾರಾಟ ಮಾಡಿದ್ದಾರೆ.  ಸುಮಾರು 30 ಅಡಿ ಎತ್ತರದ ಗಾಳಿಪಟಗಳನ್ನು ತಯಾರಿಸಿ ಮಾರಾಟ ಮಾಡಿರುವುದು ಇವರ ಹೆಗ್ಗಳಿಕೆಯಲ್ಲೊಂದು.

ಗಾಳಿಪಟದ ಬೇಡಿಕೆ
‘ಸಾಮಾನ್ಯವಾಗಿ ಗಾಳಿಪಟವನ್ನು ಯಾವಾಗ ಬೇಕಾದರೂ ಹಾರಿಸಬಹುದಾದರೂ ಸಂಕ್ರಾಂತಿ, ದಸರಾ, ಏಕಾದಶಿ ಹಾಗೂ ಆಷಾಢದ ಸಮಯದಲ್ಲಿ ಗಾಳಿಪಟಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಗಾಳಿಪಟ ರಚಿಸಲು ಬೇಕಾಗುವ ಕಡ್ಡಿ, ದಾರ ಹಾಗೂ ಬಟ್ಟೆಗಳನ್ನು ದೇಶದ ವಿವಿಧೆಡೆಯಿಂದ ತರಿಸುತ್ತೇವೆ’ ಎನ್ನುತ್ತಾರೆ ಸಾಬಿರ್‌.

ಒಂದು ಗಾಳಿಪಟವನ್ನು ಪೂರ್ತಿಯಾಗಿ ತಯಾರಿಸಲು ಐದು ನಿಮಿಷ ಸಾಕು ಎನ್ನುವ ಸಾಬಿರ್‌, 30 ಅಡಿ ಎತ್ತರದ ಗಾಳಿಪಟವನ್ನು 20 ನಿಮಿಷದಲ್ಲಿ ತಯಾರಿಸಿದ್ದಾರಂತೆ. ಅಷ್ಟೇ ಅಲ್ಲದೇ ಸಾಬಿರ್‌ ರಚಿಸಿದ ಗಾಳಿಪಟಗಳು ‘ಆಪ್ತಮಿತ್ರ’, ‘ಗಾಳಿಪಟ’ ಹಾಗೂ ‘ಕೇರಾಫ್‌ ಪುಟ್‌ಬಾತ್‌ 2’ ಸಿನಿಮಾಗಳಲ್ಲಿ ಬಳಕೆಯಾಗಿವೆ.

ಆದರೆ, ‘ಆಪ್ತಮಿತ್ರ’ ಹಾಗೂ ‘ಗಾಳಿಪಟ’ ಚಿತ್ರ ತಂಡದವರು ತಮ್ಮನ್ನು ಗುರುತಿಸಲಿಲ್ಲ ಎಂದು ನೋವಿನಿಂದ ಹೇಳಿಕೊಳ್ಳುವ ಸಾಬಿರ್‌, ಗಾಳಿಟಪವನ್ನು ಆಕಾಶದೆತ್ತರಕ್ಕೆ ಹಾರಿಸಿ ಸಂಭ್ರಮಿಸುವಾಗ ಸಿಗುವ ಖುಷಿ ಕೋಟಿ ಕೊಟ್ಟರು ಸಿಗದು ಎಂದು ನಗು ಚೆಲ್ಲುತ್ತಾರೆ. ಅಂದಹಾಗೆ, ಸಾಬಿರ್‌ ಅವರಿಗೆ ಭವಿಷ್ಯದಲ್ಲಿ ಇನ್ನೂ ಹಲವು ವಿನ್ಯಾಸದ ಗಾಳಿಪಟಗಳನ್ನು ತಯಾರಿಸಿ ಮಾರಾಟ ಮಾಡುವ ಉಮೇದು, ಉತ್ಸಾಹ ಎರಡೂ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT