ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾವುಂದರಿಂದ ಮೇಯರ್‌ವರೆಗೆ...

ಈಗಿರುವುದು ಬಿಬಿಎಂಪಿ ಕೌನ್ಸಿಲ್‌ l ಆಗಿರುತ್ತಿತ್ತು ‘ಊರ ಹದಿನೆಂಟು ಜಾತಿ’ ಸಭೆ
Last Updated 1 ಜುಲೈ 2015, 20:04 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಚನೆಯಾಗುವ ಮುನ್ನ ನಗರದ ಸ್ಥಳೀಯ ಆಡಳಿತ ತನ್ನ ಸ್ವರೂಪದಲ್ಲಿ ಹಲವು ಮಗ್ಗಲು ಬದಲಿಸಿದೆ. ಶತಮಾನಗಳ ಹಿಂದೆ ‘ಗಾವುಂದ’ ಎನಿಸಿಕೊಳ್ಳುತ್ತಿದ್ದ ಜನನಾಯಕ ಊರಿನ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದ. ಪ್ರಜಾಪ್ರಭುತ್ವದ ಈಗಿನ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಮೇಯರ್‌ ಆ ಹೊಣೆ ಹೊರುತ್ತಿದ್ದಾರೆ.

ಆಗ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಗ್ರಾಮಸಭೆಗಳು ನಡೆಯುತ್ತಿದ್ದವು. ಅದಕ್ಕೆ ‘ಊರ ಹದಿನೆಂಟು ಜಾತಿ ಸಭೆ’ ಎಂದು ಕರೆಯುತ್ತಿದ್ದರು.  ಅಂದರೆ ಊರಿನ ಸಮಸ್ತ ಸಮುದಾಯದವರು ಪಾಲ್ಗೊಂಡು ನಡೆಸುತ್ತಿದ್ದ ಸಭೆ ಅದಾಗಿರುತ್ತಿತ್ತು. ಎಂಟನೇ ಶತಮಾನದ ಹೊತ್ತಿಗೆ ಬೆಂಗಳೂರು (ಆಗ ಒಂದು ಪುಟ್ಟ ಗ್ರಾಮ) ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಗ್ರಾಮಸಭೆ ನಡೆದ ಐತಿಹಾಸಿಕ ದಾಖಲೆಗಳಿವೆ.

ಮೈಸೂರು ರಾಜ್ಯದಲ್ಲಿ ಬ್ರಿಟಿಷ್‌ ಕಮಿಷನರ್‌ ಆಡಳಿತ ಇದ್ದಾಗ (1831–1881) ಸ್ಥಳೀಯ ಆಡಳಿತವನ್ನು ಸುಸ್ಥಿರಗೊಳಿಸಲು ‘ಭಾರತ ಸರ್ಕಾರದ ಕಾಯ್ದೆ 26–1850’ (ಪಟ್ಟಣಗಳ ಅಭಿವೃದ್ಧಿ ಕಾಯ್ದೆ) ಜಾರಿಗೆ ತರಲಾಯಿತು. ಈ ಕಾಯ್ದೆಯನ್ನು ಮೈಸೂರು ರಾಜ್ಯದಲ್ಲಿ ಜಾರಿಗೊಳಿಸುವ ಏಕೈಕ ಉದ್ದೇಶದಿಂದ ರೂಪಿಸಲಾಗಿತ್ತು. ಈ ಕಾಯ್ದೆ ಅನ್ವಯ ಪ್ರಾಯೋಗಿಕವಾಗಿ 1862ರಲ್ಲಿ ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಮುನ್ಸಿಪಲ್‌ ಬೋರ್ಡ್‌ಗಳ ರಚನೆ ಮಾಡಲಾಯಿತು.

ಬೆಂಗಳೂರಿನ ನಗರ ಪೇಟೆ ಮತ್ತು ಕಂಟೋನ್ಮೆಂಟ್‌ ಪ್ರದೇಶಗಳಿಗೆ ಪ್ರತ್ಯೇಕ ಮುನ್ಸಿಪಲ್‌ ಬೋರ್ಡ್‌ಗಳನ್ನು ಸ್ಥಾಪಿಸಿತು. ಎರಡೂ ಬೋರ್ಡ್‌ಗಳಿಗೆ ಒಬ್ಬರೇ ಅಧ್ಯಕ್ಷರು ಇದ್ದರು. ಅವರ ತಿಂಗಳ ಸಂಬಳ ₨ 700 ಅನ್ನು ಎರಡೂ ಬೋರ್ಡ್‌ಗಳು ವಂತಿಗೆ ಹಾಕಿಕೊಡುತ್ತಿದ್ದವು. ತೆರಿಗೆ ಸಂಗ್ರಹದ ಅವಕಾಶವನ್ನೂ ಈ ಬೋರ್ಡ್‌ಗಳಿಗೆ ಒದಗಿಸಲಾಯಿತು. 1881ರಲ್ಲಿ ಮುನ್ಸಿಪಲ್‌ ಬೋರ್ಡ್‌ಗಳು ನಗರ ಸಭೆಗಳ ರೂಪ ತಾಳಿದವು.

ತಲಾ 32 ಜನ ಸದಸ್ಯ ಬಲದ ಸಭೆಗಳು ಅವಾಗಿದ್ದವು. ಅವರಲ್ಲಿ 22 ಜನರನ್ನು ಚುನಾವಣೆ ಮೂಲಕ ಆಯ್ಕೆ ಮಾಡಿದರೆ, ಮಿಕ್ಕವರನ್ನು ನೇಮಕ ಮಾಡಲಾಗುತ್ತಿತ್ತು. ಆಗ ಅವರ ಸದಸ್ಯತ್ವ ಅವಧಿ ಮೂರು ವರ್ಷಗಳಾಗಿತ್ತು. ಆಗಲೂ ಹಿಂದೂ, ಮುಸ್ಲಿಂ, ಯುರೋಪಿಯನ್‌. ಹೀಗೆ ಧರ್ಮ ಮತ್ತು ಸಮುದಾಯವಾರು ಆದ್ಯತೆ ನೀಡಲಾಗುತ್ತಿತ್ತು. ಆಸ್ತಿ ತೆರಿಗೆ ತುಂಬಿದವರಿಗಷ್ಟೇ ಮತದಾನ ಮಾಡಲು ಅವಕಾಶ ನೀಡಲಾಗಿತ್ತು.

1947ರಲ್ಲಿ ಸ್ವತಂತ್ರ ಸಿಕ್ಕಾಗ ಮೈಸೂರು ರಾಜ್ಯದ ಭಾಗವಾಗಿ ಉಳಿಯಿತು ಬೆಂಗಳೂರು. ಹೆಸರು ಮೈಸೂರು ರಾಜ್ಯವಾದರೂ ರಾಜಧಾನಿಯಾಗಿ ಆಗುವ ಅವಕಾಶ ಸಿಕ್ಕಿದ್ದು ಬೆಂಗಳೂರಿಗೆ. 1949ರ ಡಿ.8ರಂದು ಪೇಟೆ ಮತ್ತು ಕಂಟೋನ್ಮೆಂಟ್‌ಗಳು ಬೆಂಗಳೂರು ನಗರ ಪಾಲಿಕೆ ಆಡಳಿತದಲ್ಲಿ ಒಂದಾದವು. ಅದಕ್ಕಾಗಿ ಬೆಂಗಳೂರು ನಗರ ಪಾಲಿಕೆ ಕಾಯ್ದೆ–1949 ಜಾರಿಗೆ ತರಲಾಯಿತು. ನಗರ ಪಾಲಿಕೆಯಲ್ಲಿ ಆಡಳಿತದ ದೃಷ್ಟಿಯಿಂದ 50 ವಿಭಾಗಗಳನ್ನು ಸೃಜಿಸಲಾಯಿತು. ಮೇಯರ್‌ ಮತ್ತು ಉಪಮೇಯರ್‌ ಆಡಳಿತ ವ್ಯವಸ್ಥೆ ಸಹ ಇದೇ ಸಂದರ್ಭದಲ್ಲಿ ಜಾರಿಗೆ ಬಂತು.

ಪಾಲಿಕೆ ಕೌನ್ಸಿಲ್‌ ಹಾಗೂ ಸ್ಥಾಯಿ ಸಮಿತಿ ಸದಸ್ಯರು ಮತ್ತು ಆಯುಕ್ತರು ನಗರದ ಆಗು–ಹೋಗುಗಳನ್ನು ನಿಭಾಯಿಸುವ ಜವಾಬ್ದಾರಿ ಹೊತ್ತರು. 64 ಕೌನ್ಸಿಲರ್‌ಗಳ ಸಾಮರ್ಥ್ಯದ ಪಾಲಿಕೆಯಲ್ಲಿ 50 ಜನ ಚುನಾವಣೆ ಮೂಲಕ ಆಯ್ಕೆ ಆಗುತ್ತಿದ್ದರು. ಉಳಿದ ಸ್ಥಾನಗಳಿಗೆ ನಗರ ವಿಷಯಗಳ ತಜ್ಞರನ್ನು ಸರ್ಕಾರವೇ ನೇಮಕ ಮಾಡುತ್ತಿತ್ತು. ಬೆಂಗಳೂರು ನಗರ ಪಾಲಿಕೆ ರಚನೆ ಬಳಿಕ ನಗರದ ಮೊದಲ ಮೇಯರ್‌ ಆಗಿ ಆರ್‌. ಸುಬ್ಬಣ್ಣ ಅಧಿಕಾರ ವಹಿಸಿಕೊಂಡರು. ಅಲ್ಲಿಂದ ಈವರೆಗೆ ಬೆಂಗಳೂರು 48 ಮೇಯರ್‌ಗಳನ್ನು ಕಂಡಿದೆ.
*
ಎತ್ತಿನ ಗಾಡಿ, ತೆರಿಗೆ
ಮುನ್ಸಿಪಲ್‌ ಬೋರ್ಡ್‌ಗಳಿಗೆ ವರಮಾನದ ವ್ಯವಸ್ಥೆಗಾಗಿ 1871ರ ಏಪ್ರಿಲ್‌ 1ರಂದು ತೆರಿಗೆ ಸಂಗ್ರಹಕ್ಕೆ ಅವಕಾಶ ಕಲ್ಪಿಸಿ ಕಾಯ್ದೆ ಜಾರಿ ಮಾಡಲಾಯಿತು. ಮನೆ, ಕಟ್ಟಡ ಮತ್ತು ಭೂಮಿ ಮೇಲೆ ಆಸ್ತಿ ತೆರಿಗೆ, ವ್ಯಾಪಾರ ಮತ್ತು ವೃತ್ತಿ ತೆರಿಗೆ, ಎತ್ತಿನ ಗಾಡಿ ಹಾಗೂ ಸರಕು ಸಾಗಾಟದ ವಾಹನಗಳ ಮೇಲೆ ತೆರಿಗೆ, ನಗರಕ್ಕೆ ಬಂದು ಹೋಗುವ ವಾಹನಗಳಿಂದ ಟೋಲ್‌, ಪರವಾನಗಿ ಶುಲ್ಕ ಹಾಗೂ ಇಟ್ಟಿಗೆ ಮತ್ತು ಟೈಲ್ಸ್‌ಗಳ ಮೇಲೆ ತೆರಿಗೆ ವಿಧಿಸಲು ಮುನ್ಸಿಪಲ್‌ ಬೋರ್ಡ್‌ಗಳಿಗೆ ಅವಕಾಶ ನೀಡಲಾಗಿತ್ತು.

ಕೈಮಗ್ಗಗಳು, ಎಣ್ಣೆ ತೆಗೆಯುವ ಮಿಲ್‌ಗಳು ಅಂಗಡಿಗಳು ಮತ್ತು ಮನೆಗಳು ಆಗ ವರಮಾನದ ಮುಖ್ಯ ಮೂಲಗಳಾಗಿದ್ದವು. ನಗರಕ್ಕೆ ಬರುತ್ತಿದ್ದ ತೆಂಗಿನಕಾಯಿ, ವೀಳ್ಯದೆಲೆ, ಬೆಲ್ಲ, ಆಡು, ಕುರಿ, ಎಣ್ಣೆ, ತಂಬಾಕು, ಬಟ್ಟೆ ಮೊದಲಾದವುಗಳ ಮೇಲೆ ಸುಂಕ ಸಂಗ್ರಹಿಸುವ ವ್ಯವಸ್ಥೆ ಜಾರಿಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT