ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರೀಶ್‌, ಶರತ್‌ಗೆ ಕಂಚು

ಪ್ಯಾರಾ ಏಷ್ಯನ್‌ ಕ್ರೀಡಾಕೂಟ; ಭಾರತಕ್ಕೆ ಎರಡು ಚಿನ್ನ
Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಇಂಚೆನ್‌ (ಪಿಟಿಐ): ಕರ್ನಾಟಕದ ಎಚ್‌.ಎನ್‌. ಗಿರೀಶ್‌ ಮತ್ತು ಶರತ್‌ ಗಾಯಕ್ವಾಡ್‌ ಅವರು ಇಂಚೆನ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

2012ರ ಲಂಡನ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಗಿರೀಶ್‌ ಸೋಮವಾರ ನಡೆದ ಪುರುಷರ ಹೈಜಂಪ್‌ನಲ್ಲಿ ಮೂರನೇ ಸ್ಥಾನ ಪಡೆದುಕೊಂಡರು. ಅವರು 1.68 ಮೀ. ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. 1.80 ಮೀ. ಎತ್ತರ ಜಿಗಿದ ಭಾರತದವರೇ ಆದ ಶರದ್‌ ಕುಮಾರ್‌ ಚಿನ್ನದ ಪದಕ ಗೆದ್ದುಕೊಂಡರು. ಥಾಯ್ಲೆಂಡ್‌ನ ಚನಾಬುನ್‌ ಬೆಳ್ಳಿ ಪದಕ ಜಯಿಸಿದರು.

ಶರತ್‌ ಗಾಯಕ್ವಾಡ್‌  ಪುರುಷರ ಈಜು ಸ್ಪರ್ಧೆಯ 100 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅವರು ಒಂದು ನಿಮಿಷ 8.30 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಒಂದು ನಿಮಿಷ 1.32 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಚೀನಾದ ಮಾವೊಡಂಗ್‌ ಸೊಂಗ್‌ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಚೀನಾದವರೇ ಆದ ವಾಂಗ್‌ ಯಿಹಾನ್‌ ಎರಡನೇ ಸ್ಥಾನ ಪಡೆದರು.

ಪ್ರಸಕ್ತ ಕೂಟದಲ್ಲಿ ಶರತ್‌ಗೆ ದೊರೆತ ಎರಡನೇ ಪದಕ ಇದು. ಕರ್ನಾಟಕದ ಈಜುಪಟು ಮೊದಲ ದಿನವಾದ ಭಾನುವಾರ 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಸೋಮವಾರ ಭಾರತ ಎರಡು ಬಂಗಾರ ಜಯಿಸಿತು. ಪುರುಷರ ಕ್ಲಬ್‌ ಥ್ರೋ ಸ್ಪರ್ಧೆಯಲ್ಲಿ ಅಮಿತ್‌ ಕುಮಾರ್‌ ಸ್ವರ್ಣ ಪಡೆದರು. ಈ ಹಾದಿಯಲ್ಲಿ ಅವರು ಪ್ಯಾರಾ ಏಷ್ಯನ್‌ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಯಿಸಿಕೊಂಡರು.

ದೇವೇಂದ್ರ ಜಜಾರಿಯಾ ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿದರು. ದೇವೇಂದ್ರ ಅವರು 2013ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಜಯಿಸಿದ್ದರು.

ದಿನದ ಮತ್ತೊಂದು ಪದಕವನ್ನು ಅಂಕುತ್‌ ಧಾಮಾ ತಂದಿತ್ತರು. ಅವರು ಪುರುಷರ 1500 ಮೀ. ಓಟದಲ್ಲಿ ಕಂಚು ಗೆದ್ದರು.
ಭಾರತ ಮೊದಲ ದಿನ ನಾಲ್ಕು ಬೆಳ್ಳಿ ಮತ್ತು ಎರಡು ಕಂಚು ಒಳಗೊಂಡಂತೆ ಒಟ್ಟು ಆರು ಪದಕಗಳನ್ನು ಗೆದ್ದುಕೊಂಡಿತ್ತು. ಕರ್ನಾಟಕದ ಫರ್ಮಾನ್‌ ಬಾಷಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಸಂದೀಪ್‌ ಸಿಂಗ್‌ ಮನ್‌ (ಪುರುಷರ 200 ಮೀ. ಓಟ), ಅಮಿತ್‌ ಕುಮಾರ್‌ (ಪುರುಷರ ಡಿಸ್ಕಸ್‌ ಥ್ರೋ), ರಾಮಕಿರಣ್‌ ಸಿಂಗ್‌ (ಪುರುಷರ 800 ಮೀ. ಓಟ) ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಕೂಟದ ಮೊದಲ ಎರಡು ದಿನಗಳಲ್ಲಿ ಭಾರತ ಒಟ್ಟು 12 ಪದಕಗಳನ್ನು (2 ಚಿನ್ನ, 5 ಬೆಳ್ಳಿ, 5 ಕಂಚು) ಗೆದ್ದುಕೊಂಡಿದ್ದು, ಪದಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಭಾರತದ 90 ಅಥ್ಲೀಟ್‌ಗಳು ಈ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

115 ಪದಕಗಳನ್ನು ಗೆದ್ದಿರುವ ಚೀನಾ ಅಗ್ರಸ್ಥಾನದಲ್ಲಿದೆ. ಕೊರಿಯ (54) ಮತ್ತು ಜಪಾನ್‌ (52) ಬಳಿಕದ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT