ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಗೆ ಯುವಕ ಬಲಿ ಪ್ರಕರಣ: ಇಬ್ಬರು ಪೊಲೀಸರ ಬಂಧನ

Last Updated 19 ಏಪ್ರಿಲ್ 2015, 6:35 IST
ಅಕ್ಷರ ಗಾತ್ರ

ಶ್ರೀನಗರ(ಐಎಎನ್ ಎಸ್): ಕಾಶ್ಮೀರ ಕಣಿವೆಯಲ್ಲಿ ಹುರಿಯತ್ ಸಂಘಟನೆ ಶನಿವಾರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಹದಿಹರೆಯದ ಯುವಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.

ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಅಶಿಸ್ತಿನಿಂದ ವರ್ತಿಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಗುಂಡಿನ ದಾಳಿ ನಡೆಸಲಾಗಿದೆ. ಪ್ರಕರಣ ಸಂಬಂಧ ಶನಿವಾರ ರಾತ್ರಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನ್ ಸ್ಟೇಬಲ್ ಹಾಗೂ ಎಎಸ್ ಐ ಇಬ್ಬರನ್ನು ಬಂಧಿಸಿದ್ದು, ಪ್ರಾಥಮಿಕ ಮಾಹಿತಿ ವರದಿ ಪಡೆಯಲಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಮಗಮ್ ಠಾಣೆ ಅಧಿಕಾರಿ ಖುರ್ಷಿದ್ ಉರ್ ರೆಹಮಾನ್ ತಿಳಿಸಿದ್ದಾರೆ.

ವಿವರ: ಪುಲ್ವಾಮಾ ಜಿಲ್ಲೆಯ ತ್ರಾಲ್ ಎಂಬಲ್ಲಿ ಸೋಮವಾರ ಯುವಕರಿಬ್ಬರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದನ್ನು ಖಂಡಿಸಿ ಹುರಿಯತ್‌ ಸಂಘಟನೆ ಕಾಶ್ಮೀರ ಕಣಿವೆಯಲ್ಲಿ ಶನಿವಾರ ಕರೆ ನೀಡಿದ್ದ ಪ್ರತಿಭಟನೆ ಹಲವೆಡೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಬಡಗಾಂವ್ ಜಿಲ್ಲೆಯ ನರ್ಬಾಲ್‌ನಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದರಿಂದ ಹದಿಹರೆಯದ ಯುವಕನೊಬ್ಬ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿತ್ತು.

ಮೃತ ಯುವಕನನ್ನು ಸುಹೇಲ್‌ ಅಹಮದ್‌ ಸೋಫಿ (17) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮ್ಯಾಜಿಸ್ಟಿರಿಯಲ್‌ ತನಿಖೆಗೆ ಆದೇಶಿಸಿದೆ. ಭದ್ರತಾ ಸಿಬ್ಬಂದಿ ಗುಂಡು ಹಾರಿಸದೇ ಪರಿಸ್ಥಿತಿ ನಿಯಂತ್ರಿಸಬಹುದಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ತಪ್ಪು ಎಂಬುದು ಮೇಲ್ನೋಟಕ್ಕೆ ಸಾಬೀತಾದ ಬೆನ್ನಲ್ಲೇ  ಪೊಲಿಸ್‌ ಇಲಾಖೆ ವಿಷಾದ ವ್ಯಕ್ತಪಡಿಸಿದೆ.  ಮಗಮ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT