ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತಿ ಸಂಗೀತಾ ಕನ್ನಡದಲ್ಲಿ ಕುಹೂ ಕುಹೂ

Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

‘ನಿಜ ಹೇಳಲಾ? ದಿಗಂತ್‌ ಎಷ್ಟೊಂದು ಸುಂದರ ಅಂದರೆ, ಯಾವ ಸುಂದರ ಹುಡುಗಿ ಕೂಡ ಅವರ ಜತೆ ಸಮಾನವಾಗಿ ಹೋಲಿಕೆ ಆಗುವುದಿಲ್ಲ. ಪಿಂಕ್ ಕಲರ್... ಗುಳಿ ಬಿದ್ದ ಅವರ ಕೆನ್ನೆ ನೋಡಿ! ಹೀ ಈಸ್ ಎಕ್ಸ್‌ಟ್ರೀಮ್‌ಲೀ ಕ್ಯೂಟ್‌!’

ನಟಿ ಸಂಗೀತಾ ಕಣ್ಣರಳಿಸಿ ಗುಟ್ಟಿನಲ್ಲಿ ಹೇಳಿದರು. ‘ಶಾರ್ಪ್ ಶೂಟರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವ ಈ ಗುಜರಾತಿ ಚೆಲುವೆಯ ಮಾತುಗಳಲ್ಲಿ, ಮೊದಲ ಚಿತ್ರದಲ್ಲೇ ದಿಗಂತ್ ಜತೆ ತೆರೆ ಮೇಲೆ ಕಾಣಿಸಿಕೊಳ್ಳುವ ಪುಳಕವಿತ್ತು.

ಅಂದಹಾಗೆ ಸಂಗೀತಾಗೆ ಸಿನಿಮಾ ಲೋಕ ಪ್ರವೇಶಿಸುವ ಇರಾದೆಯೇ ಇರಲಿಲ್ಲ. ಅವರ ಕನಸು ಮನಸೆಲ್ಲ ಮಾಡಲಿಂಗ್‌ ಮೇಲಿತ್ತು. ಸ್ನೇಹಿತೆಯೊಬ್ಬಳ ಸಲಹೆ ಮೇರೆಗೆ ಸುಮ್ಮನೇ ಹೋಗಿ ಆಡಿಷನ್ ಕೊಟ್ಟಿದ್ದಷ್ಟೇ. ಕನ್ನಡ ಚಿತ್ರವೊಂದಕ್ಕೆ ನಾಯಕಿಯಾಗುವ ಅವಕಾಶ ದಕ್ಕಿತು. ‘ನಾನು ಊಹಿಸಿರಲೇ ಇಲ್ಲ, ಹೀಗೆಲ್ಲ ಆಗುತ್ತೆ ಅಂತ’ ಎಂದು ಮುಗುಳ್ನಕ್ಕರು ಸಂಗೀತಾ ಚೌಹಾಣ್.

ಕಾಲೇಜಿನಲ್ಲಿ ಓದುತ್ತಿರುವಾಗಲೇ ರೂಪದರ್ಶಿಯಾಗುವ ಕನಸು ಕಾಣುತ್ತಿದ್ದ ಸಂಗೀತಾ, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 2008ರಲ್ಲಿ ‘ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಪಾಲ್ಗೊಂಡು, ‘ಟಾಪ್–5’ ಮಾಡಲ್‌ಗಳಲ್ಲಿ ಇವರೂ ಒಬ್ಬರಾಗಿ ಆಯ್ಕೆಯಾದರು. ‘ಮಿಸ್ ಇಂಡಿಯಾ’ ಕಿರೀಟ ಮುಡಿಗೇರಲಿಲ್ಲ ಎಂಬ ಬೇಸರ ಅವರಲ್ಲಿ ಮೂಡಲಿಲ್ಲ. ಯಾಕೆಂದರೆ ಮನಮೋಹಕ ಮುಗುಳ್ನಗೆಯು ಅವರಿಗೆ ‘ಬ್ಯೂಟಿಫುಲ್ ಸ್ಮೈಲ್’ ಪ್ರಶಸ್ತಿ ತಂದುಕೊಟ್ಟಿತು. ಅಲ್ಲಿಂದ ಮಾಡಲಿಂಗ್ ಲೋಕಕ್ಕೆ ಸಂಗೀತಾ ಪ್ರವೇಶ ಪಡೆದರು.

ಮಾಡಲಿಂಗ್‌ ಲೋಕದಲ್ಲಿ ಅವರು ಎಷ್ಟರ ಮಟ್ಟಿಗೆ ‘ಬಿಜಿ’ಯಾದರೆಂದರೆ, ಸಹಜವಾಗಿ ರೂಪದರ್ಶಿಯರು ಆಯ್ಕೆ ಮಾಡಿಕೊಳ್ಳುವ ಸಿನಿಮಾ ಲೋಕದತ್ತ ಯೋಚಿಸಲೇ ಇಲ್ಲ. ಈ ಮಧ್ಯೆ ಹಿಂದಿ ಚಿತ್ರವೊಂದಕ್ಕೆ ಆಹ್ವಾನ ಬಂದಾಗಲಷ್ಟೇ ಅವರಿಗೆ ಈ ಕಡೆ ಗಮನಹರಿದಿದ್ದು.
‘ಸಿನಿಮಾದಲ್ಲಿ ಅಭಿನಯಿಸುತ್ತೀರಾ ಅಂತ ನಿರ್ದೇಶಕರೊಬ್ಬರಿಂದ ಆಹ್ವಾನ ಬಂದಾಗ ನಾನು ಮೊದಲು ಯೋಚಿಸಿದ್ದು ಅಭಿನಯ ನನಗೆ ಬರುತ್ತದೆಯೇ ಎಂಬ ಬಗ್ಗೆ. ತಕ್ಷಣ ಮಾಡಲಿಂಗ್‌ನಿಂದ ಬ್ರೇಕ್‌ ತೆಗೆದುಕೊಂಡು ಮುಂಬೈನಲ್ಲಿರುವ ಅಭಿನಯ ತರಬೇತುದಾರ ಮೀರಜ್‌ ಕಬಿ ಅವರ ಕಾರ್ಯಾಗಾರಕ್ಕೆ ಸೇರಿಕೊಂಡೆ. ನಟನೆ ಒಳಗುಟ್ಟು ಎಲ್ಲವನ್ನೂ ಮೀರಜ್‌ ಹೇಳಿಕೊಟ್ಟರು. ಅವರೇ ನನ್ನ ಗುರು’ ಎನ್ನುತ್ತಾರೆ ಸಂಗೀತಾ.

ಕನ್ನಡ ಚಿತ್ರಗಳಿಗೆ ಸಾಹಿತ್ಯ–ಸಂಭಾಷಣೆ ಬರೆದುಕೊಂಡಿದ್ದ ಗೌಸ್‌ ಪೀರ್‌, ತಮ್ಮ ಮೊದಲ ನಿರ್ದೇಶನದ ‘ಶಾರ್ಪ್ ಶೂಟರ್’ ಸಿನಿಮಾಕ್ಕೆ ತಕ್ಕುದಾದ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆಸಿದ್ದರು. ಅದು ವಕೀಲೆಯೂ ಆಗಿರುವ ರೂಪದರ್ಶಿಯ ಪಾತ್ರ. ಅದಕ್ಕಾಗಿ ಮುಂಬೈಗೆ ತೆರಳಿದ ಗೌಸ್‌ಪೀರ್, ಆಡಿಷನ್ ನಡೆಸಿದರು. ಕೊನೆಗೆ ಆಯ್ಕೆ ಮಾಡಿದ್ದು ಸಂಗೀತಾ ಅವರನ್ನು.

‘...ಶೂಟರ್’ ಶೂಟಿಂಗ್‌ಗೆಂದು ಉದ್ಯಾನನಗರಿಯಲ್ಲಿ ಬೀಡು ಬಿಟ್ಟಿರುವ ಸಂಗೀತಾ, ಈಗ ಮುಂಬೈಗಿಂತ ಬೆಂಗಳೂರೇ ಇಷ್ಟ ಅನ್ನುತ್ತಾರೆ. ಚಿತ್ರಕ್ಕೆ ಸಹಿ ಮಾಡುತ್ತಲೇ ಅವರು ಮೊದಲು ನೋಡಿದ್ದು ‘ಪಾರಿಜಾತ’ ಚಿತ್ರವನ್ನು. ‘ಮೊದಲೆಲ್ಲ ಕನ್ನಡ ತೀರಾ ಅಪರಿಚಿತ ಭಾಷೆ ಅನಿಸುತ್ತಿತ್ತು. ಆದರೆ ಈಗ ಅರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ಕನ್ನಡ ಪರಿಚಿತ’ ಎಂದು ನಗುತ್ತಾರೆ. ಇಲ್ಲಿನ ಉಪ್ಪಿಟ್ಟು, ಕೇಸರಿಬಾತ್, ಬಿಸಿಬೇಳೆ ಬಾತ್ ರುಚಿಗೆ ಅವರು ಮನಸೋತಿರುವುದೂ ಉಂಟು. ‘ಇವೇ ತಿಂಡಿಗಳನ್ನು ನಮ್ಮ ಮನೆಯಲ್ಲಿ ಮಾಡಿದರೂ ಯಾಕೋ ಏನೋ ಇಷ್ಟೊಂದು ರುಚಿ ಬರುವುದೇ ಇಲ್ಲ’ ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಾರೆ.

‘ನಾನು ತುಂಬಾ ತೆಳ್ಳಗಿದ್ದೆ. ಹಾಗಾಗಿ ನಾಯಕಿ ಪಾತ್ರಕ್ಕೆ ತಕ್ಕಂತೆ ನಿರ್ದೇಶಕ ಗೌಸ್‌ಪೀರ್‌ ಸಲಹೆ ಮೇರೆಗೆ ಒಂದಷ್ಟು ತೂಕ ಹೆಚ್ಚಿಸಿಕೊಂಡಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಮೊದಲ ಅವಕಾಶ ಕನ್ನಡ ಚಿತ್ರದಲ್ಲಿ ಅಭಿನಯಿಸಲು ಸಿಕ್ಕಿದೆ. ಇದು ಕನ್ನಡದ ಜತೆಗೆ ನನ್ನ ಭಾವನಾತ್ಮಕ ನಂಟು ಹೆಚ್ಚಿಸಿದೆ’ ಎನ್ನುವ ಸಂಗೀತಾ, ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕರೂ ಕನ್ನಡ ಚಿತ್ರರಂಗ ಮಾತ್ರ ಮರೆಯಲಾರೆ ಎನ್ನುತ್ತಾರೆ.

ಅಳೆದು, ತೂಗಿ ಪಾತ್ರ ಒಪ್ಪಿಕೊಳ್ಳುವ ಜಾಯಮಾನ ಅವರದು. ಈಗಾಗಲೇ ಬೇರೆ ಬೇರೆ ಭಾಷೆಯ ಎರಡು–ಮೂರು ಚಿತ್ರಗಳಿಗೆ ಆಹ್ವಾನ ಬಂದಿದ್ದರೂ ಸ್ಕ್ರಿಪ್ಟ್ ಹಾಗೂ ಪಾತ್ರ ಪೋಷಣೆ ಚೆನ್ನಾಗಿಲ್ಲ ಎಂಬ ಕಾರಣದಿಂದ ಒಪ್ಪಿಕೊಂಡಿಲ್ಲ. ಮಾಡರ್ನ್‌ ಅಥವಾ ತುಂಟ ಹುಡುಗಿ ಪಾತ್ರಗಳೆಂದರೆ ಬೋರು ಎನ್ನುವ ಸಂಗೀತಾಗೆ ಗಂಭೀರ ಅಭಿನಯಕ್ಕೆ ಸವಾಲೊಡ್ಡುವ ಪಾತ್ರಗಳು ಇಷ್ಟವಂತೆ. ವಿದ್ಯಾಬಾಲನ್ ಥರ ಚಿತ್ರರಂಗದಲ್ಲಿ ಛಾಪು ಮೂಡಿಸುವ ಬಯಕೆ ಅವರದು. ‘ಶಾರ್ಪ್ ಶೂಟರ್ ಚಿತ್ರದಲ್ಲಿ ನನ್ನ ಪಾತ್ರ ತುಂಬ ಚೆನ್ನಾಗಿದೆ. ಅವತ್ತು ಗೌಸ್‌ಪೀರ್‌ ಕಥೆ ಹಾಗೂ ನನ್ನ ಪಾತ್ರದ ಬಗ್ಗೆ ಕೇಳಿದಾಗ ಒಲ್ಲೆ ಎನ್ನಲು ಆಗಲಿಲ್ಲ’ ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT