ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ಗೆ ಮೊದಲ ಕೊಡುಗೆ

ಮೂರು ಒಪ್ಪಂದಗಳಿಗೆ ಸಹಿ; ಗಡಿ ಸಮಸ್ಯೆ ಇಂದು ಚರ್ಚೆ ಸಂಭವ
Last Updated 17 ಸೆಪ್ಟೆಂಬರ್ 2014, 19:53 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಮೂರು ದಿನಗಳ ಭಾರತ ಭೇಟಿಗೆ ಇಲ್ಲಿಗೆ ಬುಧವಾರ ಬಂದಿಳಿದ ಕೆಲ ಹೊತ್ತಿನಲ್ಲೇ ಗುಜರಾತ್‌ ಸರ್ಕಾರದೊಂದಿಗಿನ ಮೂರು ಒಪ್ಪಂದಗಳಿಗೆ ಸಹಿ ಬಿದ್ದಿತು.

ಚೀನಾದ ಗ್ವಾಂಗ್‌ಷು ಮತ್ತು ಅಹಮ­ದಾ­ಬಾದ್‌ ನಗರಗಳನ್ನು ‘ಸೋದರ ನಗರ’ಗಳಾಗಿ ಅಭಿವೃ­ದ್ಧಿ­ಪಡಿಸುವುದು, ಗುಜರಾತ್‌ನಲ್ಲಿ ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆ ಮತ್ತು ಚೀನಾದ ಗ್ವಾಂಗ್‌ಡಾಂಗ್‌ ಪ್ರಾಂತ್ಯ ಹಾಗೂ ಗುಜರಾತ್‌ಗಳ ನಡುವೆ ಸಾಂಸ್ಕೃತಿಕ, ಸಾಮಾಜಿಕ ಬಾಂಧವ್ಯ ವೃದ್ಧಿ ಈ ಮೂರು ಒಪ್ಪಂದಗಳಿಗೆ ಅಂಕಿತ ಬಿದ್ದಿತು. 

ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆಗಾಗಿ ಚೀನಾ ಡೆವಲಪ್‌ಮೆಂಟ್‌ ಬ್ಯಾಂಕ್‌ (ಸಿಡಿಬಿ) ಮತ್ತು ಗುಜರಾತ್‌ ಸರ್ಕಾರ ಕೈಗಾರಿಕಾ ವಿಸ್ತರಣೆ ಬ್ಯೂರೊ (ಇಂಡೆಕ್ಸ್ಟ್ ಬಿ) ಒಪ್ಪಂದಕ್ಕೆ ಸಹಿ ಹಾಕಿವೆ. ಈ ಕೈಗಾರಿಕಾ ಪಾರ್ಕ್‌ಗಳಲ್ಲಿ ಎಲೆಕ್ಟ್ರಾನಿಕ್‌ ಮತ್ತು ಎಲೆಕ್ಟ್ರಿಕಲ್‌ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು.

ಈ ಮೂರು ಒಪ್ಪಂದಗಳು ಗುಜರಾತ್‌ ಮತ್ತು ಚೀನಾ ನಡುವೆ ಚಿಂತನೆ ಹಾಗೂ ವಿವಿಧ ಸೇವೆಗಳ ನಡುವಣ ವಿನಿಮಯಕ್ಕೆ ಅವಕಾಶ ಮಾಡಿಕೊ­ಡು­ತ್ತವೆ. ಈ  ಒಪ್ಪಂದಗಳು ಏರ್ಪಟ್ಟ ಸಂದರ್ಭದಲ್ಲಿ ಗುಜರಾತ್‌ನ ಮುಂಚೂಣಿ ಉದ್ಯಮಿಗಳು ಕೂಡ ಹಾಜರಿದ್ದರು.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌­ನೊಂದಿಗೆ ಭಾರತ ಪ್ರವಾಸ ಆರಂಭಿಸಿರುವುದು ಗಮನಾರ್ಹ ಅಂಶ.

ಕ್ಸಿ ಅವರು ತಮ್ಮ  ಭೇಟಿಯನ್ನು ಗುಜರಾತ್‌­ನಿಂದ ಆರಂಭಿಸಲು ನಿರ್ಧರಿ­ಸಿ­ರುವುದು ಶಿಷ್ಟಾ­ಚಾ­ರಕ್ಕೆ ಹೊರತಾದ ನಿರ್ಧಾರ ಎನ್ನಲಾಗಿದೆ. ಸಾಮಾನ್ಯವಾಗಿ ವಿದೇಶದ ಪ್ರಮುಖರು ಮೊದಲಿಗೆ ದೆಹಲಿಗೆ ಭೇಟಿ ನೀಡುವುದು ವಾಡಿಕೆ. ಇದು  ಇಬ್ಬರು ನಾಯಕರ ನಡುವಣ (ಮೋದಿ ಮತ್ತು ಕ್ಸಿ ಜಿನ್‌ಪಿಂಗ್‌) ಆತ್ಮೀಯ ಸಂಬಂಧದ ದ್ಯೋತಕ ಎಂಬ ಮಾತು ಕೇಳಿಬರುತ್ತಿದೆ. ಮೋದಿ ಅವರ ೬೪ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಇದು ನಡೆದಿರುವುದು ಮತ್ತೊಂದು ವಿಶೇಷ.

ಇದಕ್ಕೂ ಮುನ್ನ ಜಿನ್‌ಪಿಂಗ್‌ ಅವರು ಏರ್‌ ಚೀನಾ ವಿಶೇಷ ವಿಮಾನದಲ್ಲಿ ಇಲ್ಲಿಗೆ ಬಂದಿಳಿದರು. ಕ್ಸಿ ಅವರೊಂದಿಗೆ ಪತ್ನಿ ಪೆಂಗ್‌ ಲಿಯುಆನ್‌,  ಪಕ್ಷದ ಪ್ರಮುಖರು ಮತ್ತು ಸರ್ಕಾರಿ ಅಧಿಕಾರಿಗಳ ಪರಿವಾರ ಆಗಮಿಸಿದೆ. ಗುಜರಾತ್‌ ರಾಜ್ಯಪಾಲ ಒ.ಪಿ.ಕೊಹ್ಲಿ, ಮುಖ್ಯ­ಮಂತ್ರಿ ಆನಂದಿಬೆನ್‌ ಪಟೇಲ್‌,  ಸಂಪುಟದ ಹಿರಿಯ ಸಚಿವರು ಕ್ಸಿ ಮತ್ತವರ ಬಳಗಕ್ಕೆ ಭವ್ಯ ಸ್ವಾಗತ ನೀಡಿದರು. ಇದೇ ವೇಳೆ ವಿಮಾನ ನಿಲ್ದಾಣದಲ್ಲಿ ಕಣ್ಸೆಳೆಯುವ ಸಾಂಪ್ರ­ದಾಯಿಕ ಗುಜ­ರಾತಿ ನೃತ್ಯ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು.

ಚೀನಾದ ಗಣ್ಯರಿಗೆ ಸ್ವಾಗತ ಕೋರುವ ಚೀನಾ, ಗುಜರಾತಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿದ್ದ ದೊಡ್ಡ ದೊಡ್ಡ ಫಲಕಗಳು ಗಮನ ಸೆಳೆದವು. ಕ್ಸಿ ಮತ್ತು ಅವರ ಪತ್ನಿ ಪೆಂಗ್‌ ಲಿಯುಆನ್‌ ಅವರನ್ನು ಪ್ರಧಾನಿ ಮೋದಿ ಅವರು ಹಯಾತ್‌ ಹೋಟೆಲ್‌ನ ಪ್ರವೇಶ ದ್ವಾರದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದರು. 

ನಂತರ ಮೋದಿ ಅವರು ಕ್ಸಿ ದಂಪತಿಗೆ ಹೋಟೆಲ್‌ನಲ್ಲಿ ವಿಶೇಷ­ವಾಗಿ ಸಿದ್ಧಪಡಿಸಲಾದ ಛಾಯಾಚಿತ್ರ­ಗಳ ಗ್ಯಾಲರಿ, ಬೌದ್ಧ ಕಲಾಕೃತಿಗಳು, ಕರಕುಶಲ ವಸ್ತುಗಳನ್ನು ತೋರಿಸಿದರು. ಜತೆಗೆ ಸ್ಲೈಡ್‌ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ನಂತರ ಇಬ್ಬರೂ ನಾಯ­ಕರು ಕೆಲ ಹೊತ್ತು ಅನೌಪಚಾರಿಕ ಮಾತುಕತೆ ನಡೆಸಿದರು.

ಇದಾದ ಮೇಲೆ ಕ್ಸಿ ದಂಪತಿ ಹಾಗೂ ಅವ­ರೊಂದಿಗಿನ ನಿಯೋಗವನ್ನು ಐತಿಹಾಸಿಕ ಸಬರಮತಿ ನದಿ ದಂಡೆಗೆ ಕರೆದೊಯ್ಯಲಾಯಿತು. ಅಲ್ಲಿ ಹೆಸರಾಂತ ಗರ್ಭಾ ನೃತ್ಯ ಸೇರಿದಂತೆ ಪರಂಪರೆ ಬಿಂಬಿಸುವ ಸಾಂಪ್ರ­ದಾಯಕ ವಿವಿಧ ನೃತ್ಯ ಪ್ರಕಾರಗಳ ಪ್ರದರ್ಶನ ಮುದ ನೀಡಿತು.

ಗಡಿಯಲ್ಲಿ ಉದ್ವಿಗ್ನತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಸಮ್ಮುಖದಲ್ಲಿ ಗುಜರಾತ್‌ನ ಸಬರಮತಿ ದಂಡೆಯಲ್ಲಿ 3 ಒಪ್ಪಂದಗಳಿಗೆ ಸಹಿ ಬಿದ್ದಿ­ದ್ದರೂ ಲಡಾಖ್‌ನ ಗಡಿಯಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಪ್ರಕ್ಷುಬ್ಧತೆ­ಯನ್ನು ಕಡಿಮೆ­ಗೊಳಿಸುವ ಉದ್ದೇಶದಿಂದ ಬುಧವಾರ ನಡೆದ ಗಡಿ ಶಾಂತಿ ಸಭೆಯು ವಿಫಲವಾಯಿತು. ಚೀನಾದ ಗಡಿ ಭಾಗದಲ್ಲಿ ೧೦೦ಕ್ಕೂ ಹೆಚ್ಚು ಸೈನಿಕರು ಹೊಸದಾಗಿ ಕಾಣಿಸಿಕೊಂಡಿದ್ದಾರೆ.


‘ಇಬ್ಬರಿಗೂ ಲಾಭ’
ತಯಾರಿಕಾ ಕ್ಷೇತ್ರದಲ್ಲಿ ಮುಂಚೂಣಿ­ಯಲ್ಲಿರುವ ಚೀನಾವು ಜಗತ್ತಿನ ಕಾರ್ಖಾನೆ­ಯಾಗಿದೆ. ಅದೇ ರೀತಿ ಭಾರತವು ಸೇವಾ ಕ್ಷೇತ್ರದಲ್ಲಿ ಅಗ್ರಮಾನ್ಯ ರಾಷ್ಟ್ರ. ಇವೆರಡೂ ಒಟ್ಟಾದರೆ ಅತ್ಯಂತ ಸ್ಪರ್ಧಾತ್ಮಕವಾದ ಉತ್ಪಾ­ದನಾ ನೆಲೆಯನ್ನು ಹಾಗೂ ಅತ್ಯಾಕರ್ಷಕ ಗ್ರಾಹಕ ಮಾರುಕಟ್ಟೆ ಸೃಷ್ಟಿಸಲು ಸಾಧ್ಯವಾಗುತ್ತದೆ

– ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT