ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಟ್ಟು ಕಾಯುವ ಜಾಣೆಗೆ ತೈವಾನ್ ಚುಕ್ಕಾಣಿ

ವ್ಯಕ್ತಿ
Last Updated 30 ಜನವರಿ 2016, 19:30 IST
ಅಕ್ಷರ ಗಾತ್ರ

ತೈವಾನ್ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. 59 ವರ್ಷದ  ತ್ಸಾಯಿ ಇಂಗ್ ವೆನ್ ಅವರಿಗೆ ಮೊದಲ ಅಧ್ಯಕ್ಷೆ ಎಂಬುದರ ಜತೆಗೆ ಇನ್ನೊಂದು ಹೆಮ್ಮೆ ಪಡಬಹುದಾದ ಹೆಗ್ಗಳಿಕೆಯೂ ಇದೆ. ಇವರು ಯಾವುದೇ ರಾಜಕೀಯ ಕುಟುಂಬದಿಂದ ಬಂದವರಲ್ಲ (ಇವರ ಅಪ್ಪ ಗ್ಯಾರೇಜ್ ಮಾಲೀಕ). ಹಾಗೆಯೇ ಏಷ್ಯಾದ ಯಾವ ದೇಶದಲ್ಲಿಯೂ ಈವರೆಗೆ ರಾಜಕೀಯ ಕುಟುಂಬದ ಹಿನ್ನೆಲೆಯಿಲ್ಲದವರು ದೇಶವೊಂದರ ಮುಖ್ಯಸ್ಥರಾಗಿಲ್ಲ.  

ತ್ಸಾಯಿ ಅವರ ಮುಂದೆ ಭಾರಿ ಸವಾಲುಗಳೇ ಇವೆ. ಅವರು ಎದುರಿಸಬೇಕಿರುವ ಸವಾಲುಗಳು ಅರ್ಥವಾಗಬೇಕಾದರೆ ತೈವಾನ್‌ನ ಇಂದಿನ ಪರಿಸ್ಥಿತಿಯನ್ನೂ ಅರಿಯಬೇಕಾಗುತ್ತದೆ. ತೈವಾನ್ ಸಾರ್ವಭೌಮ ದೇಶ ಅಲ್ಲ. ಅಮೆರಿಕ, ಆಫ್ರಿಕಾ ಖಂಡಗಳ ಕೆಲವು ಸಣ್ಣ ರಾಷ್ಟ್ರಗಳನ್ನು ಹೊರತುಪಡಿಸಿ ಜಗತ್ತಿನ ಯಾವ ದೇಶವೂ ತೈವಾನ್ ಜತೆ ರಾಜತಾಂತ್ರಿಕ ಸಂಬಂಧ ಹೊಂದಿಲ್ಲ, ತೈವಾನನ್ನು ಸಾರ್ವಭೌಮ ದೇಶ ಎಂದು ಅಂಗೀಕರಿಸಿಲ್ಲ. ಇದಕ್ಕೆ ಕಾರಣ ಚೀನಾದ ಭಯ. ತೈವಾನನ್ನು ಸಾರ್ವಭೌಮ ದೇಶ ಎಂದು ಯಾವ ರಾಷ್ಟ್ರ ಅಂಗೀಕರಿಸುತ್ತದೆಯೋ ಆ ದೇಶದೊಂದಿಗೆ ತನಗೆ ಯಾವುದೇ ಸಂಬಂಧ ಇಲ್ಲ ಎಂದು ಚೀನಾ ಘೋಷಿಸಿದೆ.

ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟ ಮಾಡುವ ಮತ್ತು ರಕ್ಷಣೆಯ ಹೊಣೆ ಹೊತ್ತಿರುವ ಅಮೆರಿಕ ಕೂಡ ಈ ದೇಶವನ್ನು ಸಾರ್ವಭೌಮ ಎಂದು ಒಪ್ಪಿಕೊಂಡಿಲ್ಲ. ಚೀನಾ ವಿರುದ್ಧ ತೈವಾನ್ ಜತೆ ಸ್ನೇಹ ಬೆಳೆಸಿರುವ ಜಪಾನ್ ಕೂಡ ತೈವಾನ್‌ಗೆ ರಾಷ್ಟ್ರದ ಅಂಗೀಕಾರ ನೀಡಿಲ್ಲ. ಚೀನಾದಿಂದ 180 ಕಿಲೊ ಮೀಟರ್ ಆಗ್ನೇಯಕ್ಕೆ ತೈವಾನ್ ಜಲಸಂಧಿಯಲ್ಲಿ ಇರುವ ಈ ದ್ವೀಪ 1950ರಿಂದಲೇ ಎಲ್ಲ ರೀತಿಯಲ್ಲಿಯೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಇದು ಚೀನಾದ್ದೇ ಭೂಭಾಗ. ಸದ್ಯಕ್ಕೆ ಬಂಡಾಯ ಎದ್ದು ದೂರವಾಗಿದೆ. ಬಲಪ್ರಯೋಗ ನಡೆಸಿದರೂ ಸರಿ ಒಂದಲ್ಲ ಒಂದು ದಿನ ಅದನ್ನು ಚೀನಾದೊಂದಿಗೆ ಸೇರಿಸಲಾಗುವುದು ಎಂಬುದು ತೈವಾನ್ ಬಗ್ಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ನಿಲುವು.

ಚೀನಾದಲ್ಲಿ 1949ರಲ್ಲಿ ಚಿಯಾಂಗ್ ಕೈ ಶೆಕ್ ನೇತೃತ್ವದ ಚೀನೀ ರಾಷ್ಟ್ರೀಯವಾದಿಗಳು (ಕೌಮಿನ್‌ಟ್ಯಾಂಗ್) ಮತ್ತು ಮಾವೊತ್ಸೆ ತುಂಗ್ ನೇತೃತ್ವದ ಚೀನಾ ಕಮ್ಯುನಿಸ್ಟ್ ಪಾರ್ಟಿ ನಡುವೆ ನಡೆದ ಆಂತರಿಕ ಯುದ್ಧದಲ್ಲಿ ರಾಷ್ಟ್ರೀಯವಾದಿಗಳಿಗೆ ಸೋಲಾಯಿತು. ಅವರು ತೈವಾನ್‌ಗೆ ಪಲಾಯನ ಮಾಡಿ ಅಲ್ಲಿ ನೆಲೆಯಾದರು. ತಮ್ಮದು ರಿಪಬ್ಲಿಕ್ ಆಫ್‌ ಚೀನಾ ಎಂದು ಹೇಳಿದರು. ತೈಪೆಯನ್ನು ಕೇಂದ್ರ ಸ್ಥಾನವಾಗಿ ಇರಿಸಿಕೊಂಡ ಅವರು ಇಡೀ ಚೀನಾ ತಮ್ಮದು, ತೈಪೆ ತಾತ್ಕಾಲಿಕ ರಾಜಧಾನಿ ಎಂದರು.

ತೈಪೆಯನ್ನು ಯುದ್ಧ ಕಾಲದ ರಾಜಧಾನಿ ಎಂದು ಚಿಯಾಂಗ್ ಕರೆದರು. ತೈವಾನ್ ಕೈಗಾರಿಕೀಕರಣಗೊಂಡು, ಆರ್ಥಿಕವಾಗಿ ಬೆಳೆದ ಪರಿ ಇಡೀ ಜಗತ್ತಿಗೆ ಒಂದು ಅಚ್ಚರಿ. ಹಾಗಾಗಿಯೇ ಜಗತ್ತಿನ ಎಲ್ಲ ದೇಶಗಳೂ ತೈವಾನ್ ಜತೆಗೆ ಆರ್ಥಿಕ ಸಂಬಂಧವನ್ನು ಹೊಂದಿವೆ. ತೈವಾನ್ ಕೂಡ ಆ ಎಲ್ಲ ದೇಶಗಳಲ್ಲಿ ಪ್ರತಿನಿಧಿ ಕಚೇರಿಗಳನ್ನು ತೆರೆದು ಅದರ ಮೂಲಕ ರಾಯಭಾರ ಕಚೇರಿಯ ಕೆಲಸಗಳನ್ನು ಮಾಡಿಕೊಳ್ಳುತ್ತಿದೆ.

ಇನ್ನೂ ಒಂದು ವಿಚಿತ್ರ ಎಂದರೆ, ಚೀನಾದ ಆಕ್ರಮಣದ ಭೀತಿಯಲ್ಲೇ ಸದಾ ಕಾಲ ಇರುವ ತೈವಾನ್‌ನ ಅತ್ಯಂತ ದೊಡ್ಡ ಮಾರುಕಟ್ಟೆ ಚೀನಾ. ಹೀಗಾಗಿಯೇ ತೈವಾನ್‌ನಲ್ಲಿ ಮೂರು ಚಿಂತನಧಾರೆಯ ಜನರಿದ್ದಾರೆ. 2000ನೇ ಇಸವಿಯವರೆಗೆ ತೈವಾನ್‌ನಲ್ಲಿ ನಿರಂಕುಶ ಆಡಳಿತ ನಡೆಸಿದ ಕೌಮಿನ್‌ಟ್ಯಾಂಗ್ ಪಕ್ಷ (ಕೆಎಂಟಿ) ಕಮ್ಯುನಿಸ್ಟೇತರ ಏಕೀಕೃತ ಚೀನಾದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತದೆ. ಹಾಗಿದ್ದರೂ ಈ ಪಕ್ಷದ ಆಡಳಿತದ ಅವಧಿಯಲ್ಲಿ ಚೀನಾ ಜತೆಗಿನ ವ್ಯಾಪಾರ ಸಂಬಂಧ ಅತ್ಯುತ್ತಮವಾಗಿತ್ತು. ಚೀನಾದ ಜತೆ ವ್ಯಾಪಾರದ ಯಥಾಸ್ಥಿತಿ ಮುಂದುವರಿಯಲಿ ಎಂಬ ದೊಡ್ಡ ವರ್ಗವೂ ಇಲ್ಲಿ ಇದೆ.

ಕೆಎಂಟಿಯನ್ನು ಸೋಲಿಸಿ 2000ದಲ್ಲಿ ಅಧಿಕಾರಕ್ಕೆ ಬಂದ ಡೆಮಾಕ್ರೆಟಿಕ್ ಪೀಪಲ್ಸ್ ಪಾರ್ಟಿ (ಡಿಪಿಪಿ) ಸ್ವತಂತ್ರ ತೈವಾನ್ ದೇಶ ಕಟ್ಟುವ ಕನಸನ್ನು ಹೊತ್ತಿತ್ತು. ಆದರೆ ಅಧ್ಯಕ್ಷರಾಗಿದ್ದ ಚೆನ್ ಶುಯ್ ಬಿಯನ್ ಭ್ರಷ್ಟಾಚಾರ ಆರೋಪ ಮತ್ತು ದುರಾಡಳಿತದಿಂದ ಜನಪ್ರಿಯತೆ ಕಳೆದುಕೊಂಡರು. 2008ರ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿತು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ತ್ಸಾಯಿ ಪಕ್ಷದ ನೇತೃತ್ವ ವಹಿಸಿಕೊಂಡರು. ಹಲವು ಸೋಲುಗಳ ನಂತರ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ತ್ಸಾಯಿ ಅಭೂತಪೂರ್ವ ಗೆಲುವು ಪಡೆದಿದ್ದಾರೆ.

ಈ ಗೆಲುವಿನಲ್ಲಿ ಸನ್‌ಫ್ಲವರ್ ಮೂವ್‌ಮೆಂಟ್ ಎಂಬ ಹೋರಾಟದ ಪಾತ್ರವೂ ದೊಡ್ಡದಿದೆ. 2009ರ ಮಾರ್ಚ್‌ನಲ್ಲಿ ತೈವಾನ್‌ನ ಆಗಿನ ಅಧ್ಯಕ್ಷರಾಗಿದ್ದ ಮಾ ಯಿಂಗ್ ಜೋ ಮತ್ತು ಚೀನಾದ ಮುಖಂಡರ ನಡುವೆ 60 ವರ್ಷದಲ್ಲಿ ಮೊದಲ ಬಾರಿ ಸಂದೇಶಗಳು ವಿನಿಮಯವಾದವು. ನಂತರ ಚೀನಾ ಪರವಾದ ಹಲವು ವ್ಯಾಪಾರ ಒಪ್ಪಂದಗಳಿಗೆ ತೈವಾನ್ ಸಿದ್ಧವಾಗಿತ್ತು. ಆದರೆ 2014ರ ಮಾರ್ಚ್‌ನಲ್ಲಿ ನೂರಾರು ಯುವ ಕಾರ್ಯಕರ್ತರು ಸಂಸತ್ತಿಗೆ ನುಗ್ಗಿ ಇಂತಹ ಒಪ್ಪಂದಗಳನ್ನು ತಡೆದರು. ಚೀನಾ ವಿರೋಧಿ ಮನೋಭಾವ ತೈವಾನ್‌ನಲ್ಲಿ ವ್ಯಾಪಕವಾಗಿತ್ತು. ತ್ಸಾಯಿ ಅವರಿಗೆ ತೈವಾನ್‌ನೊಳಗಿನ ಈ ಪ್ರವೃತ್ತಿಯೇ ವರವಾಯಿತು.

ತ್ಸಾಯಿ ತಮ್ಮ ತಂದೆಗೆ ನಾಲ್ಕನೇ ಹೆಂಡತಿಯಲ್ಲಿ ಜನಿಸಿದ 11ನೆಯ ಮತ್ತು ಕೊನೆಯ ಮಗು. ಶ್ರೀಮಂತಿಕೆಯಲ್ಲಿಯೇ ಬೆಳೆದ ತ್ಸಾಯಿ, ನ್ಯಾಷನಲ್ ತೈವಾನ್ ಯೂನಿವರ್ಸಿಟಿಯಿಂದ ಕಾನೂನು ಪದವಿ, ಕಾರ್ನೆಲ್ ಯೂನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪಿಎಚ್‌.ಡಿ. ಪದವಿ ಪಡೆದರು.

ಕಾನೂನು ಪ್ರಾಧ್ಯಾಪಕಿಯಾಗಿದ್ದ, ಡಾ. ತ್ಸಾಯಿ ಎಂದೇ ಕರೆಸಿಕೊಳ್ಳುವ ಇವರು ಉತ್ಸಾಹದಲ್ಲಿ ರಾಜಕೀಯಕ್ಕೆ ಬಂದವರಲ್ಲ. ನಾಚಿಕೆ ಸ್ವಭಾವದ ಆದರೆ ಉಕ್ಕಿನ ಮನೋಭಾವದ ಇವರನ್ನು 1990ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಟಿಒ) ಸದಸ್ಯತ್ವಕ್ಕೆ ನಡೆದ ಮಾತುಕತೆಯಲ್ಲಿ ತೈವಾನನ್ನು ಪ್ರತಿನಿಧಿಸುವಂತೆ ಕೋರಲಾಯಿತು. ಅರ್ಥಶಾಸ್ತ್ರದ ಅರಿವಿನ ಜತೆಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲರು ಎಂಬುದು ಇದಕ್ಕೆ ಕಾರಣವಾಗಿತ್ತು.

ನಂತರ ಅಧ್ಯಕ್ಷರ ಭದ್ರತಾ ಸಲಹೆಗಾರ್ತಿಯಾಗಿ ತೈವಾನ್‌ನ ವಿದೇಶಾಂಗ ನೀತಿಯ ಕರಡು ರೂಪಿಸಲು ನೆರವಾದರು. ತೈವಾನ್ ಮತ್ತು ಚೀನಾ ನಡುವಣ ಸಂಬಂಧ ಎರಡು ದೇಶಗಳ ನಡುವಣ ಸಂಬಂಧದಂತೆಯೇ ಇರಬೇಕು ಎಂದು ಇದರಲ್ಲಿ ಹೇಳಿದ್ದು ಚೀನಾದ ಆಕ್ರೋಶಕ್ಕೆ ಕಾರಣವಾಗಿತ್ತು. 2001ರಲ್ಲಿ ಚೀನಾ ವ್ಯವಹಾರಗಳ ಸಮಿತಿಯ ಮುಖ್ಯಸ್ಥೆಯಾಗಿ ತೈವಾನ್ ಮತ್ತು ಚೀನಾ ನಡುವೆ ಹಡಗು ಸಂಚಾರ ಸಾಧ್ಯವಾಗುವಂತೆ ಮಾಡಿದರು. ಎರಡೂ ದೇಶಗಳ ನಡುವೆ ಖಾಸಗಿ ವಿಮಾನ ಹಾರಾಟದ ಯೋಜನೆ ಮುಂದಿಟ್ಟವರೂ ಇವರೇ.

2003ರ ಹೊತ್ತಿಗೆ, ಚೀನಾಕ್ಕೆ ತೈವಾನ್ ಅಗತ್ಯಕ್ಕಿಂತ ಹೆಚ್ಚು ಹತ್ತಿರವಾಗುತ್ತಿದೆ ಎಂಬ ಆತಂಕ ವ್ಯಾಪಕವಾಗಿತ್ತು. ಅಂತಹ ಸಂದರ್ಭದಲ್ಲೂ, ತೈವಾನ್‌ನ ಉದ್ಯಮಿಗಳು ಚೀನಾದಲ್ಲಿ ಹೂಡಿಕೆ ಮಾಡುವುದನ್ನು ಕಾನೂನುಬದ್ಧಗೊಳಿಸುವ ಕಾಯ್ದೆ ತರುವಂತೆ ಆಗಿನ ಅಧ್ಯಕ್ಷ ಚೆನ್ ಅವರ ಮನವೊಲಿಸಿದರು. ತೈವಾನ್‌ನ ಭವಿಷ್ಯ ಅಲ್ಲಿನ ಜನರ ಅಪೇಕ್ಷೆಯಂತೆ ಇರುತ್ತದೆ ಎಂದು ಅಧ್ಯಕ್ಷೆಯಾಗಿ ಆಯ್ಕೆಯಾದ ತಕ್ಷಣ ತ್ಸಾಯಿ ಹೇಳಿದರು. ಇದು ಚೀನಾಕ್ಕೆ ಎಸೆದ ಸವಾಲೆಂದೇ ವ್ಯಾಖ್ಯಾನಿಸಲಾಗುತ್ತದೆ. ಆದರೆ ತಮ್ಮ ನಿಲುವನ್ನು ತ್ಸಾಯಿ ಬಹಿರಂಗಪಡಿಸಿಯೇ ಇಲ್ಲ. ಸಾರ್ವಭೌಮತ್ವಕ್ಕೆ ಸಂಬಂಧಿಸಿ ಅವರ ನಿಲುವೇನು, ಮುಂದಿನ ನಡೆ ಏನಾಗಿರಬಹುದೆಂಬ ಬಗ್ಗೆ ಚೀನಾಕ್ಕೆ ಸದ್ಯಕ್ಕಂತೂ ಯಾವ ಸುಳಿವೂ ಇಲ್ಲ.

ತ್ಸಾಯಿ ಚೀನಾಕ್ಕೆ ಮಾತ್ರ ನಿಗೂಢವಲ್ಲ, ಅವರನ್ನು ಅತ್ಯಂತ ಹತ್ತಿರದಿಂದ ಬಲ್ಲವರು ಹೇಳುವ ಪ್ರಕಾರವೂ ಅವರ ಮನಸ್ಸಲ್ಲೇನಿದೆ ಎಂಬುದು ಅವರಿಗಷ್ಟೇ ಗೊತ್ತು. ಗುಟ್ಟನ್ನು ಎಂದೂ ಅವರು ಬಿಟ್ಟುಕೊಡುವುದೇ ಇಲ್ಲ.  ಚೀನಾದೊಂದಿಗೆ ಹೆಚ್ಚು ನಿಕಟವಾಗಿರಬಾರದು ಎಂಬ ಜನರ ಕಳವಳವನ್ನೇ ನೆಚ್ಚಿಕೊಂಡು ಆರಿಸಿ ಬಂದಿರುವ ತ್ಸಾಯಿ ಚೀನಾ ವಿರೋಧಿ ಅಲ್ಲ, ಜತೆಗೆ ಅವರೆಂದೂ ತೈವಾನ್ ಸ್ವಾತಂತ್ರ್ಯದ ಪರವಾಗಿ ಮಾತನಾಡಿಲ್ಲ ಎಂದು ಅವರ ಬಗ್ಗೆ ಪುಸ್ತಕ ಬರೆದಿರುವ ಚಾಂಗ್ ಜಿಂಗ್ ವೆನ್ ಹೇಳುತ್ತಾರೆ.

ಆದರೆ ತ್ಸಾಯಿ ಅವರ ಪಕ್ಷ ತೈವಾನ್ ಸ್ವಾತಂತ್ರ್ಯವನ್ನೇ ಪ್ರತಿಪಾದಿಸುತ್ತದೆ. ತ್ಸಾಯಿ ಅವರಿಗೆ ಇನ್ನೊಂದು ಅನುಕೂಲವೂ ಇದೆ. ತೈವಾನನ್ನು ಈವರೆಗೆ ಆಳಿದವರೆಲ್ಲರೂ ಚೀನಾ ಮೂಲದ ಜನರು. ಆದರೆ ತ್ಸಾಯಿ ಅವರ ತಂದೆ, ತಾಯಿ, ಅಜ್ಜ, ಅಜ್ಜಿ ಎಲ್ಲರೂ ತೈವಾನ್‌ನ ವಿವಿಧ ಜನಾಂಗಗಳಿಗೆ ಸೇರಿದವರು. ಹಾಗಾಗಿ ಅಲ್ಲಿನ ಜನರಿಗೆ ತ್ಸಾಯಿ ಬಗ್ಗೆ ಹೆಚ್ಚಿನ ವಿಶ್ವಾಸವೂ ಇದೆ. ಆ ಕಾರಣಕ್ಕೇ ಚೀನಾಕ್ಕೆ ಇವರ ಜತೆ ವ್ಯವಹರಿಸುವುದು ಸುಲಭವೂ ಆಗಬಹುದು.

ಅವರೇನೂ ಖಟ್ಟರ್ ಸಿದ್ಧಾಂತವಾದಿ ಅಲ್ಲ. ಬಹಳ ಜಾಣೆ.  ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರಬಾರದು ಎಂಬ ನಿಲುವಷ್ಟೇ ಅವರಿಗಿದೆ. ಅವರು ವಾಸ್ತವವಾದಿ ಎಂದು ತ್ಸಾಯಿ ಅವರನ್ನು ನ್ಯಾಷನಲ್ ಚೆಂಗ್‌ಜಿ ವಿಶ್ವವಿದ್ಯಾಲಯದ ರಾಜಕೀಯಶಾಸ್ತ್ರ ಪ್ರಾಧ್ಯಾಪಕ ಕೌ ಚಿಯನ್ ವೆನ್ ಬಣ್ಣಿಸುತ್ತಾರೆ. ಚೀನಾದೊಂದಿಗೆ ಉತ್ತಮ ವ್ಯಾಪಾರ ಸಂಬಂಧ ಇಲ್ಲದಿದ್ದರೆ ತೈವಾನ್ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಹತ್ತಿರ ಹೋದರೂ ಚೀನಾ ನುಂಗಿಬಿಡಬಹುದು. 

ಜತೆಗೆ ಸ್ವಾತಂತ್ರ್ಯ ಘೋಷಿಸಿಕೊಂಡು ಚೀನಾ ಜತೆಗಿನ ಎಲ್ಲ ಸಂಬಂಧ ಕಡಿದುಕೊಳ್ಳಬೇಕು ಎಂಬ ತೈವಾನ್‌ನೊಳಗಿನ ಗುಂಪುಗಳ ಒತ್ತಡವೂ ಇದೆ. ಸಹಮತ ರೂಪಿಸುವಲ್ಲಿ ಪ್ರವೀಣೆ ಅನಿಸಿಕೊಂಡಿರುವ ತ್ಸಾಯಿಗೆ ಈ ನಾಜೂಕು ಸ್ಥಿತಿಯಲ್ಲಿ ತೈವಾನನ್ನು ಮುನ್ನಡೆಸುವ ಸಾಮರ್ಥ್ಯವಿದೆ ಎಂಬ ಭರವಸೆಯನ್ನು ಅಲ್ಲಿನ ಜನ ಹೊಂದಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT