ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಾರ ಇದ್ದಲ್ಲೇ ಟೆಂಟ್‌ ಶಾಲೆ!

Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ಎಲ್ಲಿ ವಲಸೆಯೋ ಅಲ್ಲಿ ಶಾಲೆ’ ಎಂಬ ಘೋಷಣೆಯಡಿ ಆರಂಭವಾಗಿರುವ ಟೆಂಟ್ ಶಾಲೆಗಳಲ್ಲಿ ವಲಸೆ ಮಕ್ಕಳಿಗೆ ಸದ್ದಿಲ್ಲದೆ ಶಿಕ್ಷಣ ನೀಡಲಾಗುತ್ತಿದೆ. 2005-06ನೇ ಶೈಕ್ಷಣಿಕ ಸಾಲಿನಲ್ಲಿ ಟೆಂಟ್‌ ಶಾಲೆಗಳು ಪ್ರಾರಂಭವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಸಾವಿರಾರು ಮಕ್ಕಳಿಗೆ ವಿಶೇಷ ತರಬೇತಿ ಮೂಲಕ ಶಿಕ್ಷಣ ನೀಡಲಾಗಿದೆ. ಈ ರೀತಿ ತರಬೇತಿ ಪಡೆದ ಬಹುತೇಕ ಮಂದಿ ಸಾಂಪ್ರದಾಯಿಕ ಶಾಲೆಗಳಲ್ಲಿ ಶಿಕ್ಷಣವನ್ನು ಮುಂದುವರಿಸಿದ್ದಾರೆ.

ಮುಖ್ಯವಾಗಿ ವಲಸೆ ಮಕ್ಕಳನ್ನು ಗಮನದಲ್ಲಿಟ್ಟು ಕೊಂಡು ಈ ಶಾಲೆಗಳನ್ನು ಆರಂಭಿಸಿದ್ದು, ಸದ್ಯ ರಾಜ್ಯದಲ್ಲಿನ ಒಟ್ಟು 84 ಟೆಂಟ್ ಶಾಲೆಗಳಲ್ಲಿ 3705 ಮಕ್ಕಳು ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಜೀವನೋಪಾಯಕ್ಕಾಗಿ ಬೇರೆ ಬೇರೆ ರಾಜ್ಯಗಳು, ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಅಧಿಕ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ವಲಸೆ ಬರುತ್ತಿದ್ದು, ಅಂತಹವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೂಲಿ ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳದಲ್ಲೇ ಟೆಂಟ್ ಶಾಲೆಗಳನ್ನು ತೆರೆಯಲಾಗಿದೆ.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿರುವವರು ಅಧಿಕ ಸಂಖ್ಯೆಯಲ್ಲಿ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಈ ರೀತಿ ವಲಸೆ ಬರುವವರ ಬಗ್ಗೆ ಪೊಲೀ ಸರು, ಕಾರ್ಮಿಕ ಇಲಾಖೆಯಿಂದ ಮಾಹಿತಿ ಪಡೆದು, ಸಾಧ್ಯ ವಾದಷ್ಟು ಅವರು ಇರುವ ಸ್ಥಳ­­ದಲ್ಲೇ ಟೆಂಟ್‌ ಶಾಲೆ ತೆರೆಯ ಲಾಗುತ್ತದೆ. ಅಲ್ಲದೆ ಪೋಷಕರು ಒಪ್ಪಿದರೆ ಸಾಮಾನ್ಯ ಶಾಲೆಗಳಲ್ಲೇ ಅಂತಹ ಮಕ್ಕಳಿಗೆ ವಿಶೇಷ ತರಬೇತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರಲಾಗುತ್ತದೆ. ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಟೆಂಟ್ ಶಾಲೆ ಗಳು ಶುರುವಾಗಿದ್ದು, ಸರ್ಕಾರೇತರ ಸಂಘ ಸಂಸ್ಥೆಗಳನ್ನೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ.

ಟೆಂಟ್‌ ಶಾಲೆಗೆ ಒಬ್ಬ ಶಿಕ್ಷಕ ಮತ್ತು ಒಬ್ಬ ಸ್ವಯಂ ಸೇವಕನನ್ನು ನಿಯೋಜಿಸ ಲಾಗುತ್ತದೆ. ಪ್ರತಿಯೊಂದು ಮಗುವಿಗೆ ಕನಿಷ್ಠ ಆರು ತಿಂಗಳ ಕಾಲ ವಿಶೇಷ ತರಬೇತಿ ನೀಡಲು ತಗಲುವ ಘಟಕ ವೆಚ್ಚವನ್ನು ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಲಭ್ಯವಾಗುವ ಅನುದಾನದಡಿ ಭರಿಸಲಾಗುತ್ತದೆ. ಬೆಳಿಗ್ಗೆ ಸ್ನ್ಯಾಕ್ಸ್, ಮಧ್ಯಾಹ್ನದ ಬಿಸಿಯೂಟವನ್ನು ಶಿಕ್ಷಣ ಇಲಾಖೆ ವತಿಯಿಂದಲೇ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಪಾಠೋಪಕರಣಗಳನ್ನು ಒದಗಿಸಲಾಗುತ್ತದೆ. ಶಾಲೆಯಲ್ಲಿ ಲಭ್ಯವಿರುವ ನಲಿ-ಕಲಿ ಕಾಡರ್‌ಗಳ ಬಳಕೆ ಸೇರಿದಂತೆ ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ.

ವಲಸೆ ಮಕ್ಕಳ ವೈಯಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಶೇಷ ತರಬೇತಿ ನೀಡಲಾಗುತ್ತದೆ. ವಯಸ್ಸಿಗೆ ಅನುಗುಣ ವಾದ ಸಾಮರ್ಥ್ಯ ಪಡೆದಿದ್ದರೆ ಸಾಮಾನ್ಯ ಶಾಲೆಯಲ್ಲಿ ದಾಖಲು ಮಾಡಲಾಗುತ್ತದೆ. ಉದಾಹರಣೆಗೆ ಮಗುವಿಗೆ ಏಳು ವರ್ಷವಾಗಿದ್ದು, 2ನೇ ತರಗತಿಯ ವಿದ್ಯಾರ್ಥಿಯಲ್ಲಿ ಇರಬೇಕಾದ ಸಾಮರ್ಥ್ಯ ಹೊಂದಿದ್ದರೆ, 2ನೇ ತರಗತಿಗೆ ಸೇರಿಸಲಾಗುತ್ತದೆ. ಒಂದು ವೇಳೆ ಅಷ್ಟೊಂದು ಸಾಮರ್ಥ್ಯ ಹೊಂದಿಲ್ಲದೆ ಇದ್ದರೆ ಮತ್ತೆ ತರಬೇತಿ ನೀಡಲಾಗುತ್ತದೆ.

ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಸಾಧ್ಯವಾದಷ್ಟು ವಿಶೇಷ ತರಬೇತಿಯನ್ನು ಶಾಲೆಗಳಲ್ಲಿಯೇ ನೀಡಲಾಗುತ್ತದೆ. ಶಾಲಾ ಶಿಕ್ಷಕರು ಈ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ಮುಖ್ಯವಾಹಿನಿಗೆ ಬಂದ ನಂತರ ಅವರತ್ತ ವಿಶೇಷ ಗಮನಹರಿಸುವ ಕೆಲಸವನ್ನು ಶಾಲಾ ಶಿಕ್ಷಕರು ಮಾಡ ಬೇಕಾಗುತ್ತದೆ. ವಿಶೇಷ ತರಬೇತಿಗೆ ಒಳಪಟ್ಟ ಮಕ್ಕಳು ವಾರದಲ್ಲಿ ಕನಿಷ್ಠ ಎರಡು ದಿನ ಶಾಲಾ ಅವಧಿಯಲ್ಲೇ ಹತ್ತಿರದ ಶಾಲೆಗೆ ಮಕ್ಕಳ ವಯಸ್ಸಿಗೆ ಅನುಗುಣವಾಗಿ ತರಗತಿಗೆ ಹಾಜರಾಗಲು, ಸಹಪಾಠಿಗಳ ಜೊತೆ ಬೇರೆಯಲು ಅವಕಾಶ ಮಾಡಿಕೊಡಲಾಗುತ್ತದೆ.

ಶಾಲೆಯ ಶಿಕ್ಷಕರು ಮಕ್ಕಳ ಕಲಿಕಾ ಮಟ್ಟವನ್ನು ಗುರುತಿಸಿ ಅವರಿಗೆ ಸೂಕ್ತವಾದ ಮಾರ್ಗದರ್ಶನವನ್ನು ಮಾಡುತ್ತಾರೆ. ಇನ್ನುಳಿದ ದಿನಗಳಲ್ಲಿ ವಿಶೇಷ ತರಬೇತಿ ಕೇಂದ್ರಗಳಲ್ಲಿ ಮಕ್ಕಳು ಹಾಜರಾಗಿ, ತರಬೇತಿ ಪಡೆಯಲು ಬೇಕಾದ ವ್ಯವಸ್ಥೆ ಮಾಡಲಾಗುತ್ತದೆ. ಮಕ್ಕಳಿಗೆ ಅಗತ್ಯವಿರುವ ವಿಶೇಷ ತರಬೇತಿಯ ಅವಧಿ ಮತ್ತು ವಿಧಾನವನ್ನು ಶಾಲಾ ಅಭಿವೃದ್ಧಿ ಸಮಿತಿ ನಿರ್ಧರಿಸಲಿದೆ.

ಆಯಾ ಭಾಷೆಯಲ್ಲೇ ಸಂವಹನ
ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದು, ಅವರ ಮಾತೃಭಾಷೆಯಲ್ಲೇ ಉಪಕರಣಗಳ ಮೂಲಕ ಕಲಿಸಲಾಗುತ್ತದೆ. ಮರಾಠಿ, ತೆಲುಗು, ಉರ್ದು ಸೇರಿದಂತೆ ಅವರ ಮಾತೃ ಭಾಷೆಯಲ್ಲೇ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಆಯಾ ಭಾಷೆ ಬಲ್ಲ ಶಿಕ್ಷಕರನ್ನು ನಿಯೋಜಿಸಲಾಗಿದೆ.

ವಲಸೆ ಮಕ್ಕಳನ್ನು ಗುರುತಿಸಿ, ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರುವುದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ. ವಲಸಿಗರು ಹೆಚ್ಚು ಕಾಲ ಒಂದೇ ಕಡೆ ಇರುವುದಿಲ್ಲ. ಕೆಲಸಕ್ಕಾಗಿ ಒಂದೆಡೆಯಿಂದ ಮತ್ತೊಂದೆಡೆ ಗುಳೆ ಹೋಗುತ್ತಾರೆ. ಅವರನ್ನು ಪತ್ತೆ ಹಚ್ಚಿ ಶಿಕ್ಷಣ ನೀಡುವುದು ಬಹಳ ಕಷ್ಟದ ಕೆಲಸ. ಆದರೂ ಸಂಘ ಸಂಸ್ಥೆಗಳ ನೆರವಿನೊಂದಿಗೆ ಈ ಕಾರ್ಯವನ್ನು ಮಾಡಿಕೊಂಡು ಬರಲಾಗುತ್ತಿದೆ.

ಒಂದೆಡೆಯಿಂದ ಮತ್ತೊಂದೆಡೆಗೆ ಪೋಷಕರು ವಲಸೆ ಹೋದಾಗ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಲಸೆ ಕಾಡರ್ ನೀಡಲಾಗಿದೆ. ವಲಸೆ ಕಾಡರ್‌ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿರುತ್ತದೆ. ಮಗುವಿನ ಸಾಮರ್ಥ್ಯ, ಏನನ್ನು ಕಲಿತಿದೆ ಎಂಬುದು ಸೇರಿದಂತೆ ಎರಡು ಪುಟಗಳ ಟಿಪ್ಪಣಿ ಇರುತ್ತದೆ. ಅದನ್ನು ಆಧರಿಸಿ ಮತ್ತೊಂದು ಟೆಂಟ್ ಶಾಲೆ ಅಥವಾ ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಮುಂದುವರೆಸ ಲಾಗುತ್ತದೆ. ಯಾವ ಯಾವ ವಿಷಯಗಳಲ್ಲಿ ಮಗು ಸಾಮರ್ಥ್ಯ ಹೊಂದಿದೆ ಎಂಬ ವಿವರಗಳು ಕಾಡರ್‌ನಲ್ಲಿ ಇರುವುದರಿಂದ ಮುಂದಿನ ಹಂತದಲ್ಲಿ ಮಗುವಿಗೆ ಕಲಿಸಿಕೊಡಲು ಸುಲಭವಾಗುತ್ತದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ವಲಸೆ ಮಕ್ಕಳ ಸಮಸ್ಯೆ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಅಲ್ಲಿ ಸದ್ಯಕ್ಕೆ 69 ಟೆಂಟ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 3312 ಮಕ್ಕಳು ಇದ್ದಾರೆ. ರಾಜಧಾನಿಯಲ್ಲಿ ಸುಮಾರು ಒಂದು ಕೋಟಿ ಜನಸಂಖ್ಯೆ ಇದ್ದು, ಅಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳು ಸದಾ ಕಾಲ ಇರುತ್ತವೆ. ದಕ್ಷಿಣ ರಾಜ್ಯಗಳಿಂದ ಅಷ್ಟೇ ಅಲ್ಲದೆ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬರುತ್ತಾರೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ವಲಸೆ ಬರುತ್ತಾರೆ. ಅಂತಹ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಅವರಿಗಾಗಿಯೇ ಈ ಶಾಲೆಗಳನ್ನು ನಡೆಸಲಾಗುತ್ತಿದೆ.

ಕೇವಲ ಹತ್ತು ಮಂದಿ ಇದ್ದರೂ ವಿಶೇಷ ತರಬೇತಿ ನೀಡಲಾಗುತ್ತದೆ. ಸಂಖ್ಯೆಗೆ ಯಾವುದೇ ಮಿತಿ ಇಲ್ಲ. ಹೀಗಾಗಿಯೇ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟೆಂಟ್ ಶಾಲೆಗಳು ಇವೆ. ಇಲ್ಲಿ ಬಹು ಸಂಸ್ಕೃತಿ, ನಾನಾ ಸಮುದಾಯದ ಜನರು ಜೀವನ ನಡೆಸುತ್ತಿದ್ದು, ಸಾಧ್ಯವಾದಷ್ಟು ಅವರ ಮಾತೃಭಾಷೆ ಯಲ್ಲೇ ತರಬೇತಿ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವಿಶೆಷ ತರಬೇತಿಗಾಗಿ ಘಟಕ ವೆಚ್ಚಕ್ಕೆ ಸದ್ಯ ನಿಗದಿ ಮಾಡಿರುವ ಅನುದಾನ ಕಡಿಮೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಿನ ಖರ್ಚು  ವೆಚ್ಚ ಆಧರಿಸಿ ಅವರಿಗೆ ಇನ್ನೂ ಹೆಚ್ಚಿನ ಅನುದಾನ, ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಮಕ್ಕಳು ಬರುವುದಿಲ್ಲ. ಟೆಂಟ್‌ ಶಾಲೆ ಆರಂಭಿಸಿದ ಉದ್ದೇಶ ಪೂರ್ಣ ಪ್ರಮಾಣದಲ್ಲಿ ಸಫಲವಾಗುವು ದಿಲ್ಲ ಎನ್ನುತ್ತಾರೆ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿ ರುವ ಸಂಘ ಸಂಸ್ಥೆಗಳ ಪ್ರತಿನಿಧಿಗಳು.

ಆರೋಗ್ಯಕ್ಕೂ ಒತ್ತು
‘ಟೆಂಟ್‌ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಆರೋಗ್ಯಕ್ಕೂ ಒತ್ತು ನೀಡಲಾಗಿದೆ. ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದು, ವೈದೇಹಿ ಮತ್ತು ಮಣಿಪಾಲ್ ಆಸ್ಪತ್ರೆ ಈ ಕಾರ್ಯ ದಲ್ಲಿ ತೊಡಗಿವೆ. ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಯಾವ ಆಹಾರ, ಔಷಧಿ ನೀಡಬೇಕು ಎಂಬ ಮಾಹಿತಿಯನ್ನು ಪೋಷಕರಿಗೆ ನೀಡಲಾಗುತ್ತದೆ’ ಎನ್ನುತ್ತಾರೆ ಅಜೀಂ ಪ್ರೇಮ್‌ಜೀ ಪ್ರತಿಷ್ಠಾನದ ಮೂಲಕ ವಲಸೆ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶುಭಾ.

ಅಜೀಂ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಎರಡು ಟೆಂಟ್ ಶಾಲೆಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದ್ದು, ಸುಮಾರು 120 ಮಕ್ಕಳು ಕಲಿಯುತ್ತಿದ್ದಾರೆ. ಇದರಲ್ಲಿ 6 ತಿಂಗಳಿಂದ 14 ವರ್ಷ ವಯೋಮಾನದ ಮಕ್ಕಳು ಇದ್ದಾರೆ. ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಕೆಲಸಕ್ಕೆ ದೊಡ್ಡ ಮಕ್ಕಳನ್ನು ತೊಡಗಿಸುತ್ತಾರೆ. ಹೀಗಾಗಿ ದೊಡ್ಡ ಮಕ್ಕಳು ಬರುವುದಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ದೊಡ್ಡ ಮಕ್ಕಳ ಜೊತೆ ಚಿಕ್ಕಮಕ್ಕಳನ್ನೂ ಸೇರಿಸಿಕೊಳ್ಳಲಾಗಿದೆ ಎಂಬುದು ಶುಭಾ ಅವರ ವಿಶ್ಲೇಷಣೆ.

‘ವಲಸೆ ಮಕ್ಕಳು ಆಸಕ್ತಿ ಯಿಂದ ಕಲಿಯುತ್ತಾರೆ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಮಕ್ಕಳನ್ನು ಗುಂಪುಗಳಾಗಿ ವಿಂಗ ಡಿಸಿ ಪ್ರತ್ಯೇಕವಾಗಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಏನನ್ನು ಕಲಿತಿದ್ದಾರೆ ಎಂಬುದನ್ನು ಪೋಷಕರಿಗೆ ತಿಳಿಸಿಕೊಡುವುದರ ಜೊತೆಗೆ ಶಿಕ್ಷಣದ ಮಹತ್ವದ ಕುರಿತೂ ಮನವರಿಕೆ ಮಾಡಿಕೊಡುತ್ತೇವೆ. ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎನ್ನುತ್ತಾರೆ ಶುಭಾ.
***
ಋತುಮಾನ ವಸತಿ ಶಾಲೆ
ಜೀವನೋಪಾಯಕ್ಕಾಗಿ ಉದ್ಯೋಗವನ್ನು ಅರಸುತ್ತ ಪೋಷಕರು ಒಂದೆಡೆ ಯಿಂದ ಮತ್ತೊಂದೆಡೆ ವಲಸೆ ಹೋದಾಗ, ಮಕ್ಕಳನ್ನು ಇದ್ದಲ್ಲಿಯೇ ಉಳಿಸಿ ಕೊಂಡು ಶಿಕ್ಷಣ ನೀಡಲು ಋತುಮಾನ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ಸದ್ಯಕ್ಕೆ 227 ಋತುಮಾನ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 7,725 ಮಕ್ಕಳು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಹಾವೇರಿ, ಬೀದರ್, ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಇಂತಹವರ ಸಂಖ್ಯೆ ಜಾಸ್ತಿ ಇದೆ. ಸಾಮಾನ್ಯ ಮಕ್ಕಳಂತೆ ಇವರು ಶಾಲೆಗೆ ಹೋಗುತ್ತಾರೆ. ಅವರನ್ನು ಅಲ್ಲಿಯೇ ಉಳಿಸಿಕೊಂಡು ಊಟದ ವ್ಯವಸ್ಥೆ ಮಾಡಲಾಗುತ್ತದೆ. ವಸತಿ ಸೌಲಭ್ಯದ ಜೊತೆಗೆ ಮಕ್ಕಳ ಸುರಕ್ಷತೆಗೂ ಒತ್ತು ನೀಡಲಾಗುತ್ತದೆ. ಇಂತಹ ಮಕ್ಕಳನ್ನು ಗರಿಷ್ಠ ಆರು ತಿಂಗಳ ಕಾಲ ಶಾಲೆಯಲ್ಲಿ ಇಟ್ಟುಕೊಳ್ಳಲಾಗುತ್ತದೆ.

***
ಇದ್ದಿಲು ಸುಡುವ ಕೈಯಲ್ಲಿ ಬಳಪ
ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಲಕ್ಷ್ಮೀಪುರ ಎಂಬ ಕುಗ್ರಾಮದಲ್ಲೂ ಇಂಥದ್ದೊಂದು ಟೆಂಟ್‌ ಶಿಕ್ಷಣ ಕಾಣಬಹುದು. ಇದ್ದಿಲು ಸುಡುವ ಕಾಯಕಕ್ಕೆ ಬಿಹಾರ, ರಾಜಸ್ತಾನದಿಂದ ಬಂದ ಸುಮಾರು 20 ಕುಟುಂಬದ 15–20 ಮಕ್ಕಳಿಗೆ ಕಳೆದ ಡಿಸೆಂಬರ್ ತಿಂಗಳಿನಿಂದ ಅವರು ವಾಸಿಸುವ ಸ್ಥಳದಲ್ಲಿಯೇ ‘ಟೆಂಟ್ ಶಾಲೆ’ ಯನ್ನು ನಿರ್ಮಾಣ ಮಾಡಿಕೊಂಡು ಅವರ ಭಾಷೆಯಲ್ಲಿಯೇ ಶಿಕ್ಷಣ ನೀಡಲಾಗುತ್ತಿದೆ. ಈ ಮಕ್ಕಳಿಗೆ ಹಾಗೂ ಪೋಷಕರಿಗೆ ಕನ್ನಡ ಭಾಷೆಯೇ ಬರುವುದಿಲ್ಲ, ಅವರ ಭಾಷೆ ಹಿಂದಿ ಮಿಶ್ರಿತ ಮರಾಠಿಯಿಂದ ಕೂಡಿದೆ.

ಅಂತಹ ಮಕ್ಕಳೂ ಶಿಕ್ಷಣದಿಂದ ವಂಚಿತವಾಗ ಬಾರದೆಂಬ ಉದ್ದೇಶದಿಂದ ಮರಾಠಿ ಹಿಂದಿ ಭಾಷೆ ಬಳಕೆ ಮಾಡಿಕೊಂಡು ಶಿಕ್ಷಣ ನೀಡಲಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಜಣ್ಣ ಮತ್ತು ಕ್ಷೇತ್ರ ಸಮನ್ವಾಧಿಕಾರಿ ಆರ್.ಹನುಮಂತರಾಜುರವರ ಪಾತ್ರ ಇದರಲ್ಲಿ ತುಂಬಾ ಮುಖ್ಯವಾದದ್ದು. ‘ಹೊಟ್ಟೆ ತುಂಬಿದರೆ ಸಾಕು, ಶಿಕ್ಷಣ ಬೇಡವೇ ಬೇಡ’ ಎಂದು ಮಕ್ಕಳನ್ನು ಶಾಲೆಗೆ ಕಲಿಸಲು ಒಪ್ಪದ ಪೋಷಕರ ಮನವೊಲಿಸಿದರು. ಶಿಕ್ಷಣ ಕೊಡಬೇಡಿ ಎಂದು ಪೋಷಕರು ಶಿಕ್ಷಕರನ್ನೇ ಬೈದರೂ ಛಲ ಬಿಡದೇ ಮಕ್ಕಳನ್ನು ಕರೆದುಕೊಂಡು ಬರುವಲ್ಲಿ ಇವರು ಯಶಸ್ವಿಯಾಗಿದ್ದಾರೆ.
-ಚಳ್ಳಕೆರೆ ವೀರೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT