ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರ ಶೋಧದಲ್ಲಿ ಜಾಣ್ಮೆ ಇರಲಿ...

ಅಕ್ಷರ ಗಾತ್ರ

ಮನೆ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಹಣವೊಂದಿದ್ದರೇ ಮನೆ ನಿರ್ಮಾಣ ಆಗಿಹೋಗುವುದಿಲ್ಲ. ಮನೆ ಕಟ್ಟುವುದಕ್ಕೆ ಬೇಕಾದ ಸರಕು ಸರಂಜಾಮು ಹೊಂದಿಸುವುದೇ ದೊಡ್ಡ ಕೆಲಸ. ಇನ್ನೊಂದೆಡೆ ಹಲವು ಅನುಮತಿಗಳಿಗಾಗಿ ಕಚೇರಿಗಳ ಅಲೆದಾಟ. ಮತ್ತೊಂದೆಡೆ ಮನೆ ನಿರ್ಮಾಣದ ವೇಳೆ ನಿವೇಶನದ ಬಳಿ ಒಬ್ಬರಾದರೂ ಇದ್ದು ಉಸ್ತುವಾರಿ ವಹಿಸಿಕೊಳ್ಳಬೇಕು.

ಮೊಟ್ಟ ಮೊದಲಿಗೆ ಸೂಕ್ತ ನಿವೇಶನಕ್ಕಾಗಿ ಹುಡುಕಾಟ. ನಂತರ ಖರೀದಿ ಮಾತುಕತೆ, ನೋಂದಣಿ, ಖಾತೆ ಮಾಡಿಸಬೇಕು. ಕಂದಾಯ ಪಾವತಿಸಬೇಕು. ಇದೆಲ್ಲದಕ್ಕಾಗಿ ಐದಾರು ಬಾರಿಯಾದರೂ ಉಪ ನೋಂದಣಾಧಿಕಾರಿ ಕಚೇರಿ, ನಗರ ಅಭಿವೃದ್ಧಿ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತದ ಕಚೇರಿ (ಗ್ರಾಮೀಣ ಭಾಗದಲ್ಲಾದರೆ ಕಂದಾಯ ಕಚೇರಿ ಅಥವಾ ಗ್ರಾಮ ಪಂಚಾಯಿತಿ) ಎಂದು ಅಲೆದಾಡಬೇಕು.

ಇದೆಲ್ಲಾ ಮುಗಿಯಿತು, ಮನೆ ಕಟ್ಟೋಣ ಎಂದರೆ ಮತ್ತೊಂದು ಸುತ್ತಿನ ಕಚೇರಿ ಓಡಾಟ ಶುರು. ಅನುಭವಿ ಎಂಜಿನಿಯರ್ ಅಥವಾ ವಾಸ್ತುಶಿಲ್ಪಿಯನ್ನು ಗುರುತಿಸಿ ಅವರಿಂದ ನಮ್ಮ ಕನಸಿನ ಮನೆಯ ನೀಲನಕ್ಷೆಯನ್ನು (ಸ್ಥಳೀಯ ಆಡಳಿತದ ನಿಯಮಗಳಿಗೆ ತಕ್ಕಂತೆ) ರಚಿಸಿಕೊಳ್ಳಬೇಕು. ಆ ನಕ್ಷೆಗೆ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದುಕೊಳ್ಳಬೇಕು. ಇದರೊಟ್ಟಿಗೇ ಮನೆ ಕಟ್ಟುವಾಗ ನೀರು ವಿದ್ಯುತ್ ಸಹ ಬೇಕಲ್ಲ. ನಲ್ಲಿ ವಿದ್ಯುತ್ ಸಂಪರ್ಕ ಪಡೆದು ಕೊಳ್ಳಲು ಮತ್ತೆ ಸ್ಥಳೀಯ ಆಡಳಿತದ ನೀರು ಸರಬರಾಜು ಇಲಾಖೆ ಮತ್ತು ವಿದ್ಯುತ್ ಕಚೇರಿಯ ಮೆಟ್ಟಿಲೇರಬೇಕು.

ಇದೆಲ್ಲವೂ ಮುಗಿಯಿತು. ಇನ್ನು ಮನೆ ಕಟ್ಟುವುದು ಸುಲಭ ಎಂದುಕೊಳ್ಳುವಂತಿಲ್ಲ. ಮೊದಲಿಗೆ ನಿಮಗೆ ಕಟ್ಟಡ ನಿರ್ಮಾಣಕ್ಕೆ ಅನುಭವಿ ಮೇಸ್ತ್ರಿ ಮತ್ತು ನುರಿತ ಗಾರೆ ಕೆಲಸದ ತಂಡ ಬೇಕು. ಜತೆಗೇ ನಲ್ಲಿ ಕೆಲಸದವರು, ವಿದ್ಯುತ್ ವೈರಿಂಗ್ ಕೆಲಸದವರು, ಮರಗೆಲಸ ದವರು, ಟೈಲ್ಸ್ ಜೋಡಿಸುವವರು, ಬಣ್ಣ ಬಳಿಯುವವರು... ಹೀಗೆ ವಿವಿಧ ಕೆಲಸಗಳಿಗೆ ಅದರಲ್ಲೇ ನುರಿತ ತಂಡವನ್ನು ಹುಡುಕಿ ಕೆಲಸದ ವೈಖರಿ ಏನು, ಎಷ್ಟು ಚದರಡಿ ವಿಸ್ತಾರ, ಕೂಲಿ ಎಷ್ಟು ಎಂಬುದ ನ್ನೆಲ್ಲಾ ಕೆಲಸ ಆರಂಭಿಸುವುದಕ್ಕೂ ಮೊದಲೇ ನಿರ್ಧರಿಸಿಕೊಂಡುಬಿಡ ಬೇಕು.

ಕೆಲಸದ ವೈಖರಿ, ಬಳಸಬೇಕಾದ ಸಾಮಗ್ರಿ ಗುಣಮಟ್ಟ ಮತ್ತು ಕೂಲಿ ವಿಚಾರದಲ್ಲಿ ಆದ ಮಾತುಕತೆ ಒಪ್ಪಂದಗಳನ್ನು ಆದಷ್ಟೂ ಲಿಖಿತ ರೂಪದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಮನೆ ಕಟ್ಟಿಸುವ ವರು ಮತ್ತು ಆಯಾ ವಿಭಾಗದ ಕೆಲಸದವರು ಒಪ್ಪಿ ಸಹಿ ಹಾಕಿದಂತೆ ದಾಖಲೆ ಇರುವುದಂತೂ ಬಹಳ ಒಳ್ಳೆಯದು. ಆಗ ನೀವು ಅಂದು ಕೊಂಡಂತೆಯೇ ಕೆಲಸ ಮುಗಿಯುತ್ತದೆ. ಹಣದ ವಿನಿಯೋಜನೆಯೂ ನಿರ್ದಿಷ್ಟವಾಗಿರುತ್ತದೆ. ಹಣ ವ್ಯರ್ಥವಾಗುವುದೂ ತಪ್ಪುತ್ತದೆ.

ಅಯ್ಯೋ ಮನೆ ಕಟ್ಟುವುದು ಎಂದರೆ ಇಷ್ಟೆಲ್ಲ ರಗಳೆಯೇ! ಇದಾ ವುದೇ ಶ್ರಮ ಬೇಡಪ್ಪ. ಅದೆಷ್ಟು ಖರ್ಚು ಆಗುತ್ತೋ ಅಷ್ಟನ್ನು ಕೊಟ್ಟುಬಿಡುತ್ತೇವೆ. ನಮಗೆ ನಮ್ಮ ಕನಸಿನಂತೆ ಮನೆ ಆದರೆ ಸಾಕು ಎಂದು ಹೇಳುವವರಿಗೂ ಒಂದು ದಾರಿ ಇದೆ. ಅದುವೇ ಇಡೀ ಮನೆಯ ನಿರ್ಮಾಣದ ಕೆಲಸವನ್ನು ಗುತ್ತಿಗೆ ನೀಡಿಬಿಡುವುದು.

ಕಟ್ಟಡ ಕಟ್ಟುವ ವಿಚಾರದಲ್ಲಿ ನುರಿತ ಗುತ್ತಿಗೆದಾರರ ಎಲ್ಲ ನಗರ, ಪಟ್ಟಣ, ಹಳ್ಳಿಗಳಲ್ಲಿಯೂ ಇದ್ದಾರೆ. ಆದರೆ, ಒಬ್ಬೊಬ್ಬರದು ಒಂದು ರೀತಿ. ಕೆಲಸ ಅಚ್ಚುಕಟ್ಟಾಗಿ ಮಾಡಿಸಿ ಸುಂದರವಾಗಿ ಮನೆ ನಿರ್ಮಿಸಿ ಕೊಡುತ್ತಾರೆ ಎಂದು ಹೆಸರಾಗಿರುವವರು ಹಣದ ವಿಚಾರದಲ್ಲಿ ಮಾತ್ರ ಆಗಸದಲ್ಲೇ ಇರುತ್ತಾರೆ. ಪರವಾಗಿಲ್ಲ, ತಕ್ಕಮಟ್ಟಿಗೆ ಕಡಿಮೆ ಹಣದಲ್ಲಿಯೇ ಮನೆ ಕಟ್ಟಿಸಿಕೊಡುತ್ತಾರೆ ಎಂದುಕೊಂಡರೆ ಅವರು ಬಳಸುವ ಸಾಮಗ್ರಿಗಳು, ಮನೆಯ ನಿರ್ಮಾಣ ಕೆಲಸದ ಗುಣಮಟ್ಟ ಅದಕ್ಕೆ ತಕ್ಕಂತೆಯೇ ಇರುತ್ತದೆ.

ಹಣವನ್ನೂ ಮಿತಿಮೀರಿ ಕೇಳದ, ಮನೆಯನ್ನೂ ಅಚ್ಚುಕಟ್ಟಾಗಿ ಕಟ್ಟಿಸಿಕೊಡುವವರು ಇದ್ದಾರಾ? ನಕ್ಷೆ, ನಲ್ಲಿ, ವಿದ್ಯುತ್ ಸಂಪರ್ಕ, ಅನುಮತಿ, ಕಚೇರಿ ಕೆಲಸ ಎಂದು ಎಲ್ಲವನ್ನೂ ಆದಷ್ಟೂ ಕಡಿಮೆ ವೆಚ್ಚ ದಲ್ಲಿಯೇ ಮಾಡಿಸಿಕೊಂಡು ಬರುವವರು, ಮಧ್ಯೆ ಮಧ್ಯೆ ತಗಾದೆ ಮಾಡದೆ, ವಿಳಂಬ ಮಾಡದೇ ಒಟ್ಟಾರೆಯಾಗಿ ಮನೆಯನ್ನು ನಿರ್ಮಿಸಿಕೊಡುವವರು ಸಿಗುತ್ತಾರಾ? ಎಂದು ಹುಡುಕಿದರೆ ಬಹಳ ಅಪರೂಪಕ್ಕೆ ಎಂಬಂತೆ ಅಲ್ಲೊಬ್ಬರು ಇರಬಹುದು. ಇಲ್ಲಿ ಅಂತಹವರನ್ನು ಹುಡುಕಿ ಕಂಡುಕೊಳ್ಳುವುದೇ ಸವಾಲಿನ ಕೆಲಸ.

ಮನೆ ಕಟ್ಟಿಕೊಡುವುದನ್ನೇ ಪೂರ್ಣಾವಧಿ ವೃತ್ತಿಯಾಗಿಸಿಕೊಂಡಿ ರುವ ಬಹುತೇಕ ಎಲ್ಲ ಗುತ್ತಿಗೆದಾರರೂ ವರ್ಷಗಳ ಕಾಲದಿಂದ ಸಾಮಗ್ರಿ ಖರೀದಿ, ಕೆಲಸದ ವೈಖರಿ, ಕಚೇರಿ ಓಡಾಟಗಳಲ್ಲಿ ಬಹಳ ವಾಗಿ ನುರಿತಿರುತ್ತಾರೆ. ಮೊದಲ ಬಾರಿಗೆ ಮನೆ ಕಟ್ಟಲು ಹೊರಟವ ರಿಗಿಂತ ಈ ವಿಚಾರದಲ್ಲಿ ಸಾಕಷ್ಟು ಅನುಭವಿಗಳಾದ ಗುತ್ತಿಗೆದಾರರು ಎಲ್ಲ ಕೋನಗಳಲ್ಲಿಯೂ ಹಣ ಉಳಿಸಿಕೊಳ್ಳಬಹುದಾಗಿರುತ್ತದೆ.

ಉದಾಹರಣೆಗೆ ನಾವು ಇಟ್ಟಿಗೆ ಖರೀದಿಸುವುದಾದರೆ ಮಾರುವ ವರು ₨೫ ಬೆಲೆ ಹೇಳುತ್ತಾರೆ. ಗುತ್ತಿಗೆದಾರರು ನಿರಂತರವಾಗಿ ಖರೀದಿ ಸುವುದರಿಂದ ಅವರಿಗೆ ₨೪.೫೦ಕ್ಕೇ ಸಿಗುತ್ತದೆ. ಸಿಮೆಂಟ್ ಚೀಲದ ಬೆಲೆಯೂ ಅಷ್ಟೆ. ಗುತ್ತಿಗೆದಾರ ಒಬ್ಬನೇ ಮಾರಾಟಗಾರನ ಬಳಿಯೇ ಸಿಮೆಂಟ್ ಖರೀದಿಸುತ್ತಾ ‘ರೆಗ್ಯುಲರ್ ಕಸ್ಟಮರ್‘ ಆಗಿಬಿಟ್ಟಿರುವುದ ರಿಂದ ಪ್ರತಿ ಚೀಲದ ಬೆಲೆಯಲ್ಲೂ ₨೫ರಿಂದ ೧೦ರಷ್ಟು ಕಡಿಮೆಗೇ ಸಿಗುತ್ತದೆ. ಅಲ್ಲದೇ, ಸಗಟು ಲೆಕ್ಕದಲ್ಲಿ ಖರೀದಿಸುವುದರಿಂದ ಕಟ್ಟಡ ನಿರ್ಮಾಣದ ಸ್ಥಳಕ್ಕೇ ಸಿಮೆಂಟ್ ಸರಬರಾಜು ಆಗುತ್ತದೆ. ಇಲ್ಲಿ ಸಾಗಣೆ ವೆಚ್ಚವೂ ಉಳಿಯುತ್ತದೆ.

ಇದೇ ರೀತಿ, ಮರಳು, ಕಬ್ಬಿಣ, ಮರಮುಟ್ಟು, ವಿದ್ಯುತ್ ಉಪಕ ರಣ, ನಲ್ಲಿ ಫಿಟ್ಟಿಂಗ್ಸ್, ಟೈಲ್ಸ್ ಎಲ್ಲವನ್ನೂ ಗುತ್ತಿಗೆದಾರ ನಿಗದಿತ ವಾಗಿ ಖರೀದಿಸುತ್ತಲೇ ಇರುವುದರಿಂದ ಅವರಿಗೆ ಯಾವ ಅಂಗಡಿ ಯಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ, ಯಾವ ಗುಣಮಟ್ಟದ ಸಾಮಗ್ರಿ ಬಳಸಿದರೆ ಸಾಕು ಎಂಬುದೆಲ್ಲ ಬಹಳ ಸ್ಪಷ್ಟವಾಗಿರುತ್ತದೆ. ಹಾಗಾಗಿ ಇದೆಲ್ಲದರಲ್ಲಿಯೂ ಗುತ್ತಿಗೆದಾರರಿಗೆ ಸಾಕಷ್ಟು ಹಣ ಉಳಿತಾಯ ವಾಗುತ್ತದೆ. ಅಲ್ಲದೇ, ಗಾರೆ ಕೆಲಸಕ್ಕೆ, ನಲ್ಲಿ ಜೋಡಣೆಗೆ, ವಿದ್ಯುತ್ ಕೆಲಸ, ಟೈಲ್ಸ್ ಅಳವಡಿಕೆ, ಬಣ್ಣ ಬಳಿಯುವುದು ಎಲ್ಲದಕ್ಕೂ ಒಂದು ನಿಗದಿತ ತಂಡವನ್ನೇ ಗುತ್ತಿಗೆದಾರ ತನ್ನ ಎಲ್ಲ ಕಟ್ಟಡಗಳ ಕೆಲಸಗಳಿಗೂ ಆಧರಿ ಸುವುದರಿಂದ ಅವರೆಲ್ಲರ ಜತೆಗೂ ಒಂದು ನಂಟು ಬೆಸೆದುಕೊಂಡಿ ರುತ್ತದೆ. ಹಾಗಾಗಿ ಅವರು ತಮ್ಮ ಕೂಲಿಯಲ್ಲಿ ಸಾಕಷ್ಟು ವಿನಾಯ್ತಿ ಯನ್ನೂ ನೀಡುತ್ತಾರೆ. ಅಂದರೆ, ಹೊಸದಾಗಿ ಮನೆ ಕಟ್ಟುವವರಿಗೆ ಹೇಳುವ ಕೂಲಿಯೇ ಬೇರೆ, ನಿರಂತರವಾಗಿ ಕೆಲಸ ವಹಿಸಿಕೊಡುವ ಗುತ್ತಿಗೆದಾರನಿಂದ ಪಡೆಯುವ ಮೊತ್ತವೇ ಬೇರೆ. ಹಾಗಾಗಿ ಈ ಎಲ್ಲ ವಿಭಾಗಗಳ ಕೆಲಸದ ಕೂಲಿಯಲ್ಲಿಯೂ ಸಹ ಗುತ್ತಿಗೆದಾರರಿಗೆ ವೆಚ್ಚ ಕಡಿಮೆಯೇ ಇರುತ್ತದೆ.

ಉದಾಹರಣೆಗೆ ಪ್ಲಂಬರ್ ಅಡುಗೆ ಕೋಣೆ, ಒಂದು ಸ್ನಾನದ ಮನೆ, ಶೌಚಾಲಯ, ಬಟ್ಟೆ ಒಗೆಯುವ ಜಾಗಕ್ಕೊಂದು ನಲ್ಲಿ ಹಾಗೂ ಸಂಪ್ ಮತ್ತು ಓವರ್ ಹೆಡ್ ಟ್ಯಾಂಕ್ ಸಂಪರ್ಕ ಎಲ್ಲವೂ ಸೇರಿದಂತೆ ಒಂದು ಮನೆಯ ನಲ್ಲಿ ಕೆಲಸಕ್ಕೆ ₨೨೦ ಸಾವಿರ ಕೂಲಿ ಹೇಳಿದರೆ, ಇಷ್ಟೇ ಕೆಲಸವನ್ನು ಗುತ್ತಿಗೆದಾರರಿಗಾದರೆ ₨೧೭ರಿಂದ ೧೮ ಸಾವಿರ ಕ್ಕೆಲ್ಲಾ ಮಾಡಿಕೊಡುತ್ತಾರೆ. ವಿದ್ಯುತ್ ವೈರಿಂಗ್, ಕಾರ್ಪೆಂಟರ್, ಬಣ್ಣದವರು ಎಲ್ಲರ ಜತೆಗೂ ಗುತ್ತಿಗೆದಾರರಿಗೆ ಹೀಗೊಂದು ಮೈತ್ರಿ ಸಾಧ್ಯವಾಗಿರುತ್ತದೆ. ಹೀಗೆ ಇಡೀ ಮನೆ ನಿರ್ಮಾಣದ ಎಲ್ಲ ವಿಭಾಗದಲ್ಲೂ ಗುತ್ತಿಗೆದಾರ ಹಣ ಉಳಿಸಬಲ್ಲ. ಮೊದಲ ಬಾರಿಗೆ ಮನೆ ಕಟ್ಟಿಸಲು ಹೊರಡುವವರಿಗೆ ಈ ‘ಉಳಿತಾಯ’ ಕಷ್ಟಸಾಧ್ಯ.
ಹಾಗೆಂದು ಗುತ್ತಿಗೆದಾರರೇನೂ ನಿಮಗೆ ಕಡಿಮೆ ಹಣಕ್ಕೆ ಮನೆ ಕಟ್ಟಿಕೊಡಲು ಸಿದ್ಧರಿರುವುದಿಲ್ಲ. ಅವರಿಗೆ ಹೆಚ್ಚು ಹಣ ಮಾಡೋಣ ಎಂಬ ಆಸೆ ಸಹಜ. ಹಾಗಾಗಿ ಮನೆ ನಿರ್ಮಾಣಕ್ಕೆ ಮುಂದಾದವರ ಮನಸ್ಥಿತಿ, ಅಭಿರುಚಿ, ಅನುಭವ ಎಲ್ಲವನ್ನೂ ಮೊದಲ ಭೇಟಿಯಲ್ಲೇ ಅಳೆದುಬಿಡುತ್ತಾರೆ. ಅದಕ್ಕೆ ತಕ್ಕಂತೆಯೇ ಮನೆ ನಿರ್ಮಾಣದ ಗುತ್ತಿಗೆ ಮೊತ್ತವನ್ನೂ ನಿರ್ಧರಿಸಿಬಿಡುತ್ತಾರೆ.

ಏನು ಮಾಡುವುದು, ನಮಗೆ ಮನೆ ಕಟ್ಟಿ ಅನುಭವವಿಲ್ಲ. ನಾವೇ ಮುಂದೆ ನಿಂತು ಕಟ್ಟಿಸಿ ಅನುಭವ ಪಡೆದುಕೊಳ್ಳೋಣ ಎಂದರೆ ಕುಟುಂಬದಲ್ಲಿ ನೆರವಿಗೆ ಬರುವವರು, ಸಾಮಗ್ರಿ ಖರೀದಿ ಓಡಾಡಲು ಸಿದ್ಧರಿರುವವರು ಯಾರೂ ಇಲ್ಲ. ಒಬ್ಬಂಟಿಗರಾಗಿ ಎಲ್ಲ ಕೆಲಸಗ ಳನ್ನೂ ಮಾಡಲಾಗುವುದಿಲ್ಲ. ಹಾಗಾಗಿ ಗುತ್ತಿಗೆ ನೀಡುವುದು ಅನಿ ವಾರ್ಯ ಎನ್ನುವವರೇ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಗುತ್ತಾರೆ. ಹಾಗಾಗಿಯೇ ಮನೆ ಕಟ್ಟಿಸಿಕೊಡುವ ವೃತ್ತಿ ಯಲ್ಲಿರುವ ಗುತ್ತಿಗೆದಾರರಿಗೆ ಹಬ್ಬವೋ ಹಬ್ಬ. ವರ್ಷಕ್ಕೆ ಮೂರು ನಾಲ್ಕು ಮನೆಗಳ ನಿರ್ಮಾಣ ಕೆಲಸದ ಗುತ್ತಿಗೆ ಹಿಡಿಯುವ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ.

ಹಾಗೆಂದೇ ಮನೆ ನಿರ್ಮಿಸಲು ಗುತ್ತಿಗೆ ಹಿಡಿಯುವ ಕ್ಷೇತ್ರದಲ್ಲಿ ಎಂಜಿನಿಯರ್‌ಗಳೂ ಇದ್ದಾರೆ. ಅನುಭವಿ ಮೇಸ್ತ್ರಿಗಳೂ ಇದ್ದಾರೆ. ವರ್ಷಗಳಿಂದ ಗಾರೆ ಕೆಲಸ ಮಾಡುತ್ತಾ ಮನೆ ನಿರ್ಮಾಣದ ಎಲ್ಲ ಹಂತಗಳ ಸೂಕ್ಷ್ಮವನ್ನೂ ಅರಿತುಕೊಳ್ಳುವ ಕರಣೆ ಹಿಡಿದವರೂ ನಂತರದಲ್ಲಿ ಗುತ್ತಿಗೆದಾರರಾಗಿ ಬಡ್ತಿ ಹೊಂದುತ್ತಿದ್ದಾರೆ.

ಇದೇನಿದ್ದರೂ ಅನುಭವವನ್ನು ಆಧರಿಸಿದ ಕ್ಷೇತ್ರ. ಹಾಗಾಗಿಯೇ ಇಲ್ಲಿ ಅಕ್ಷರವನ್ನೇ ಕಲಿಯದವರಿಗೂ ಅವಕಾಶವಿದೆ. ಹಾಗಾಗಿಯೇ ಗ್ರಾಮೀಣ ಭಾಗದಲ್ಲಷ್ಟೆ ಅಲ್ಲ. ನಗರ ಪಟ್ಟಣಗಳಲ್ಲಿ ಅಂತಹವರ ಸಂಖ್ಯೆ ಹೆಚ್ಚಿನದಾಗಿದೆ. ಎಂಜಿನಿಯರ್‌ಗಳಿಗೆ ಏನಿದ್ದರೂ ದೊಡ್ಡ ನಗರಗಳಲ್ಲಿ ಮಾತ್ರವೇ ಅವಕಾಶ.

ಅದೆಲ್ಲ ಒತ್ತಟ್ಟಿಗಿರಲಿ, ಈಗ ನಿಮ್ಮ ಕನಸಿನ ಮನೆ ನಿರ್ಮಾಣಕ್ಕೆ ಹೊರಟಿದ್ದೀರಾ? ಗುತ್ತಿಗೆದಾರರಿಗೇ ಎಲ್ಲ ಕೆಲಸ ವಹಿಸಿಕೊಡಲು ನಿರ್ಧರಿಸಿದ್ದೀರಾ? ಹಾಗಾದರೆ ಮೊದಲಿಗೆ ಒಳ್ಳೆಯ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರನ್ನು ಹುಡುಕಿಕೊಳ್ಳಿ. ಒಳ್ಳೆಯ ಗುತ್ತಿಗೆದಾರರನ್ನು ಗುರುತಿಸುವುದು ಹೇಗೆ? ಅದೇನೂ ದೊಡ್ಡ ಸವಾಲಿನ ಕೆಲಸವಲ್ಲ. ಹೊಸ ಬಡಾವಣೆಗಳಲ್ಲಿ, ಕಟ್ಟಡ ನಿರ್ಮಾಣಗೊಳ್ಳುತ್ತಿರುವೆಡೆ ಒಂದೆರಡು ಬಾರಿ ಸುತ್ತಾಡಿರಿ. ಅಚ್ಚು ಕಟ್ಟಾಗಿ ನಿರ್ಮಾಣವಾಗಿವೆ ಎಂಬಂತಹ ಎರಡು ಮೂರು ಮನೆಗ ಳನ್ನು ಗುರುತಿಸಿಕೊಳ್ಳಿ. ಆದರೆ, ಅವೆಲ್ಲವೂ ತಿಂಗಳುಗಳ ಹಿಂದೆ ನಿರ್ಮಾಣಗೊಂಡಿರಬೇಕು. ಏಕೆಂದರೆ ವರ್ಷದ ಹಿಂದೆ ನಿರ್ಮಾಣದ ಮನೆಯಾದರೆ ಸಿಮೆಂಟ್, ಮರಳ, ಕಬ್ಬಿಣದ ಬೆಲೆಯಲ್ಲಿ ವ್ಯತ್ಯಾಸ ವಿರುತ್ತದೆ ಅಲ್ಲವೇ? ಆಗ ನಿಮಗೆ ನಿಖರವಾದ ಲೆಕ್ಕ ಸಿಗುವುದಿಲ್ಲ. ಆ ಮನೆಗಳ ಮಾಲೀಕರನ್ನು ಪರಿಚಯಿಸಿಕೊಳ್ಳಿ. ಅವರು ಯಾರಿಗೆ ಗುತ್ತಿಗೆ ವಹಿಸಿದ್ದರು. ಕೆಲಸ ಗುಣಮಟ್ಟ ಹೇಗಿತ್ತು? ಯಾವ ಲೆಕ್ಕದಲ್ಲಿ ಗುತ್ತಿಗೆ ಮೊತ್ತ ನಿರ್ಧರಿಸಿದ್ದರು ಎಂಬುದನ್ನೆಲ್ಲ ಕೂಲಂಕಷವಾಗಿ ವಿಚಾರಿಸಿಕೊಂಡು ಬರೆದಿಟ್ಟುಕೊಳ್ಳಿ. ಆಗ ಮನೆ ನಿರ್ಮಾಣ ವೆಚ್ಚದ ಒಂದು ಅಂದಾಜಾದರೂ ಸಿಗುತ್ತದೆ. ಅಲ್ಲದೇ ಯಾವ ಗುತ್ತಿಗೆದಾರರ ಇರುವುದರಲ್ಲಿ ಉತ್ತಮ ಎಂಬುದೂ ಅರಿವಾಗುತ್ತದೆ.

ನೀವು ಎಷ್ಟು ಹೆಚ್ಚು ಮನೆಗಳನ್ನು ಸುತ್ತಾಡಿ ಮಾಹಿತಿ ಸಂಗ್ರಹಿಸಿಕೊಳ್ಳುತ್ತೀರೋ ಅಷ್ಟೂ ಉತ್ತಮ. ಇರುವುದರಲ್ಲೇ ಜಗಳಗಂಟನಲ್ಲದ, ಹೆಚ್ಚು ಹಣ ವೆಚ್ಚ ಮಾಡಿಸದ, ಗುಣಮಟ್ಟದಲ್ಲೂ ಕಳಪೆ ಮಾಡದ ಗುತ್ತಿಗೆ ದಾರನನ್ನು ಕಂಡುಕೊಳ್ಳಬಹುದು. ಪ್ರಯತ್ನಿಸಿ. ನಿಮ್ಮ ಕನಸಿನ ಮನೆ ಯನ್ನು ತರಲೆ, ತಗಾದೆ ಇಲ್ಲದೇ ಪೂರ್ಣಗೊಳಿಸಿಕೊಳ್ಳಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT