ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಕಾರ್ಮಿಕರಿಗೆ ಇಲ್ಲದ ಸುರಕ್ಷತೆ

ವಿಐಎಸ್ಎಲ್ ಅವಘಡ: ಪರಿಹಾರ ಮರೀಚಿಕೆ
Last Updated 30 ಜುಲೈ 2014, 11:17 IST
ಅಕ್ಷರ ಗಾತ್ರ

ಭದ್ರಾವತಿ: ಅಂದು 2003 ಜುಲೈ 30ರ ಬೆಳಗಿನ ಜಾವ ವಿಐಎಸ್ಎಲ್ ಕಾರ್ಖಾನೆಯ ಎಸ್ಎಂಎಸ್ ವಿಭಾಗದಲ್ಲಿನ  ಕನ್ವರ್ಟರ್ ಸ್ಫೋಟದ ಅವಘಡದಲ್ಲಿ ಒಂಭತ್ತು ಮಂದಿ ಕಾರ್ಮಿಕರು ಮೃತರಾಗಿ ಇಂದಿಗೆ ಹನ್ನೊಂದು ವರ್ಷ. 

ಅಂದು ನಿಧನರಾದ ಕಾಯಂ ಕಾರ್ಮಿಕರಾದ ಜಿ. ಮೂರ್ತಿ, ಹುಚ್ಚಯ್ಯ, ಲಕ್ಕಣ್ಣ, ಶಿವಶಂಕರ್, ಶ್ರೀಧರಮೂರ್ತಿ, ಚಂದ್ರಶೇಖರಪ್ಪ, ಲಾರೆನ್ಸ್ ಪಿಂಟೊ, ಅಂಥೋಣಿ ಅವರ ಕುಟುಂಬಕ್ಕೆ ಒಂದಿಷ್ಟು ನೆರವಿನ ಭಾಗ್ಯ ಸಿಕ್ಕಿದ್ದು ಬಿಟ್ಟರೆ ಗುತ್ತಿಗೆ ಕಾರ್ಮಿಕ ವೆಂಕಟೇಶ್‌ ಕುಟುಂಬಕ್ಕೆ ನಗದು ಪರಿಹಾರ ಹೊರತಾಗಿ ಮತ್ಯಾವುದೇ ಸೌಲಭ್ಯ ಸಿಕ್ಕಿಲ್ಲ. ಈ ಅವಘಡದಲ್ಲಿ ಸಾಕಷ್ಟು ಗಾಯದಿಂದ ಬದುಕುಳಿದ ಜಾಫರ್ ತನ್ನ ಹಕ್ಕಿಗಾಗಿ ಹಲವು ವರ್ಷದ ಹೋರಾಟ ನಡೆಸಿ, ಗುತ್ತಿಗೆ ಕೆಲಸ  ಪಡೆದು ಕೆಲಸ ಮಾಡುತ್ತಿದ್ದರೂ, ತನ್ನ ಹಕ್ಕಿಗಾಗಿ ಹೋರಾಟ ನಡೆಸಿದ್ದಾರೆ.

ಪ್ರಸ್ತುತ ಸ್ಥಿತಿ: ಅವಘಡ ನಡೆದಾಗ ಎರಡು ಸಾವಿರಕ್ಕೂ ಅಧಿಕ ಕಾಯಂ ಕಾರ್ಮಿಕರಿದ್ದು, ಸುಮಾರು 200 ಮಂದಿ ಗುತ್ತಿಗೆ ಕಾರ್ಮಿಕರಿದ್ದರು. ಆದರೆ, ಇಂದು ಬದಲಾದ ಪರಿಸ್ಥಿತಿ ಯಲ್ಲಿ 535ಕಾಯಂ ನೌಕರರು, 200 ಅಧಿಕಾರಿಗಳು, ಸುಮಾರು 1,300ಮಂದಿ ಗುತ್ತಿಗೆ ಕಾರ್ಮಿಕರು ಕೆಲಸ ನಿರ್ವಸುತ್ತಿದ್ದಾರೆ.

ಇದೇ ರೀತಿ ಸುರಕ್ಷತಾ ಸಾಧನಗಳ ಬಳಕೆಯಲ್ಲೂ ಸಾಕಷ್ಟು ಹೊಸತನ ಬೆಳೆದಿದೆ. ಆಡಳಿತ ಮಂಡಳಿ ಇದಕ್ಕೆ ಹೆಚ್ಚಿನ ಒತ್ತು ನೀಡುವ ಜತೆಗೆ ಎಲ್ಲರಿಗೂ ಸಮಾನವಾಗಿ ತಿಳಿವಳಿಕೆ ನೀಡುವ ಕೆಲಸ ಮಾಡಿದೆ. ಆದರೆ, ಈ ಸಾಧನಗಳ ವಿತರಣೆ ಯಲ್ಲಿ ಭಿನ್ನತೆ ಇರುವುದು ಈಗ ಚರ್ಚೆಯ ವಿಷಯವಾಗಿದೆ. ಆಡಳಿತ ಮಂಡಳಿಯೇ ನೇರವಾಗಿ ಇದರ ವಿತರಣೆ ಮಾಡಬೇಕು ಎಂಬುದು ಗುತ್ತಿಗೆ ಕಾರ್ಮಿಕರ ಬೇಡಿಕೆಯಾಗಿದೆ.

ಗಣಿ ಪರಿಸ್ಥಿತಿ: ಈ ಅವಘಡದ ವರ್ಷದ ನಂತರ ಕೆಮ್ಮಣ್ಣುಗುಂಡಿ ಅದಿರು ಕಳೆದುಕೊಂಡ ಕಾರ್ಖಾನೆ ಅಂದಿನಿಂದ ಸ್ವಂತ ಗಣಿಗಾಗಿ ಪ್ರಯತ್ನ ನಡೆಸಿದೆ. ಆದರೂ, ದಶಕ ಕಳೆದರೂ ಗಣಿ ಮಾತ್ರ ಕಾರ್ಖಾನೆ ಮಡಿಲಿಗೆ ಸೇರುವುದು ವಿಳಂಬವಾಗುತ್ತಲೇ ಇದೆ.
ಈ ನಡುವೆ ಸೊಂಡೂರು ಬಳಿ 140 ಹೆಕ್ಟೇರ್ ಗಣಿ ಮಂಜೂರಾತಿ ಆಗಿದ್ದರು. ಅದರ ಒತ್ತುವರಿ ತೆರವಿಗಾಗಿ ಗಣಿ ಮತ್ತು ಭೂ ವಿಜ್ಞಾನ ಪ್ರಾಧಿಕಾರದ ಮುಂದೆ ನಡೆದಿರುವ ವ್ಯಾಜ್ಯ ಇನ್ನು ಅಂತ್ಯ ಕಾಣದೆ ಮುಂದೆ ಸಾಗಿರುವುದು ಗಣಿ ಮಂಜೂರಾತಿ ಕನಸಾಗಿಯೇ ಉಳಿದಿದೆ.

ವೇತನ ಒಪ್ಪಂದ: ಕಳೆದ ಐದು ವರ್ಷದಿಂದ ನೆನಗುದಿಯಲ್ಲಿದ್ದ ಸೈಲ್‌ ವೇತನ ಒಪ್ಪಂದ ಪ್ರಸ್ತಾವಕ್ಕೆ ಅಂತೂ ಇಂತೂ ಈ ತಿಂಗಳು ಮಂಜೂರಾತಿ ದೊರೆತ ನಂತರ ಇಲ್ಲಿನ ಕಾರ್ಮಿಕರಿಗೂ ಉತ್ತಮ ವೇತನ ಮಂಜೂರಾಗಿದೆ. ಜತೆಗೆ ಗುತ್ತಿಗೆ ಕಾರ್ಮಿಕರಿಗೂ ಸಹ ₨1,300 ಮಾಸಿಕ ವೇತನವನ್ನು ಇದೇ ತಿಂಗಳ ಆರಂಭದಿಂದ ಮಾಸಿಕ ಸಂಬಳದ ಜತೆ ಸೇರ್ಪಡೆ ಮಾಡಿ ರುವುದು ಸಹ ಅವರಲ್ಲಿನ ಉತ್ಸಾಹ ಹೆಚ್ಚು ಮಾಡಿದೆ. ಕಾರ್ಖಾನೆ ಸದ್ಯ ಕಾಯಂ ನೌಕರರಿಗಿಂತ ಹೆಚ್ಚಾಗಿ ಗುತ್ತಿಗೆ ಕಾರ್ಮಿಕರನ್ನೇ ಅವಲಂಬಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT