ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಪದ್ಧತಿ ಮುಂದುವರಿಸಲು ಒತ್ತಾಯ

ಬೆಳಗಾವಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗುತ್ತಿಗೆ ನೌಕರರ ಪ್ರತಿಭಟನೆ
Last Updated 4 ಜುಲೈ 2015, 8:20 IST
ಅಕ್ಷರ ಗಾತ್ರ

ಬೆಳಗಾವಿ: ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಪದ್ಧತಿ ಯನ್ನು ಕೈಬಿಟ್ಟು ಗುತ್ತಿಗೆ ಪದ್ಧತಿಯಲ್ಲೇ ಸಿಬ್ಬಂದಿಯನ್ನು ಮುಂದುವರಿಸಲು ಒತ್ತಾಯಿಸಿ ರಾಜ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗುತ್ತಿಗೆ ನೌಕರರ ಸಂಘದ ಸದಸ್ಯರು ಸ್ಥಳೀಯ ಸುವರ್ಣ ವಿಧಾನ ಸೌಧದ ಬಳಿ ಶುಕ್ರವಾರ ಪ್ರತಿಭಟಿಸಿದರು.

ಸಂಘದ ಅಧ್ಯಕ್ಷ ಭರತೇಶ ಶೀಲವಂತರ, ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ಘಟಕಗಳ ಮತ್ತು ರಾಜ್ಯ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಆತಂಕಕಾರಿಯಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳು ವುದರಿಂದ ಸರಿಯಾಗಿ ವೇತನ ಹಾಗೂ ಸೇವಾಭದ್ರತೆ ಸಿಗುವುದಿಲ್ಲ’ ಎಂದರು.

‘2012ರಲ್ಲಿ ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣಾ ಘಟಕಗಳು ಜಾರಿಗೆ ಬಂದಿವೆ. ಬಾಲ್ಯ ವಿವಾಹ ತಡೆಯುವುದು ಸೇರಿದಂತೆ ಮಕ್ಕಳ ರಕ್ಷಣಾ ಕಾರ್ಯದಲ್ಲಿ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮಾತ್ರ ಇಲಾಖೆಯ ಕಾಯಂ ನೌಕರರಾಗಿದ್ದಾರೆ. ಉಳಿದ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇದೀಗ ಕೆಲವು ಜಿಲ್ಲೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಮಾನವ ಸಂಪನ್ಮೂಲ ಏಜನ್ಸಿಗಳ ಮೂಲಕ ಸಿಬ್ಬಂದಿ ನೇಮಿಸಿಕೊಳ್ಳಲಾಗುತ್ತಿದೆ. ಇದು ಅಭದ್ರತೆ ಕಾಡಲಿದೆ’ ಎಂದು ಅವರು ಹೇಳಿದರು.

‘ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಈ ವ್ಯವಸ್ಥೆಯನ್ನು ರದ್ದುಪಡಿಸಿ ಗುತ್ತಿಗೆ ಪದ್ಧತಿ ಯಲ್ಲೇ ಸಿಬ್ಬಂದಿಯನ್ನು ಮುಂದುವರಿಸ ಬೇಕು’ ಎಂದು ಆಗ್ರಹಿಸಿದರು.

‘ಕೆಲವು ಜಿಲ್ಲೆಗಳಲ್ಲಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸಿ ಅನುಭವ ಇರುವ ಸಿಬ್ಬಂದಿಯೇ ಮುಂದುವರಿಸಬೇಕು. ನಿಗದಿತ ಪ್ರಯಾಣ ಭತ್ಯೆ, ವೇತನ ಸಹಿತ ಹೆರಿಗೆ ರಜೆಯನ್ನು ಜಾರಿಗೊಳಿಸಬೇಕು. ಅಪಘಾತ ಸಂಭವಿಸಿದರೆ ವೈದ್ಯಕೀಯ ನೆರವು ಹಾಗೂ ಪರಿಹಾರ ನೀಡಬೇಕು. ಸರ್ಕಾರಿ ನೌಕರರಿಗೆ ಜಾರಿಯಲ್ಲಿರುವ ಸಾಂದರ್ಭಿಕ ರಜೆಯಂತೆಯೇ ರಜೆಯನ್ನು ಅನುಷ್ಠಾನಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು. ಸಂಘದ ಕಾರ್ಯದರ್ಶಿ ಕಾಂತರಾಜು, ಸಲಹೆಗಾರ ವೈಜುಶಾ ಅಡಕೆ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT