ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಪ್ತಾಂಗ ವರ್ಣನೆಯೇ ಹಬ್ಬ!

ಆಚಾರ ವಿಚಾರ–2
Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಅಂದು ಕೈಮಗ್ಗದ ರೇಷ್ಮೆ ಸೀರೆಯ ನೆನಪನ್ನು ಕಿಕ್ಕೇರಿ ನೆನಪಿಸಿದರೆ, ಇಂದು ಕಿಕ್ಕೇರಮ್ಮನ ಜಾತ್ರೆಯ ವಸಂತನ ಹಬ್ಬ ಗ್ರಾಮದತ್ತ ಸೆಳೆಯುವಂತೆ ಮಾಡಿದೆ. ಬಯಲು ಸೀಮೆಯ ಸಕ್ಕರೆ ನಾಡಾದ ಮಂಡ್ಯ ಜಿಲ್ಲೆಯ ಗಡಿಭಾಗವಾದ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿಯವರ ತವರೂರು.

ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆ ಸದಾ ನಡೆಯುವ ಗ್ರಾಮದಲ್ಲಿ ಜಾನಪದ ಹಬ್ಬಗಳೇ ಪ್ರಧಾನವಾಗಿದೆ. ಇದರಲ್ಲಿ ವಸಂತನ ಹಬ್ಬ ರಾಜ್ಯದ ಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ವಸಂತ ಋತುವಿನ ಯುಗಾದಿ ಪಾಡ್ಯದಿಂದ ಆರಂಭವಾಗುವ ಕಿಕ್ಕೇರಮ್ಮನ ಜಾತ್ರೆಯಲ್ಲಿ ನವಮಿ ದಿನದಂದು ವಸಂತನ ಹಬ್ಬ ಆಚರಿಸಲಾಗುತ್ತದೆ.

ಊರ ಹೊರಗಿನ ಕಿಕ್ಕೇರಮ್ಮ (ಮಹಾಲಕ್ಷ್ಮೀ) ದೇಗುಲದಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಿ,  ದೇವಿಯನ್ನು ಹೊತ್ತು ಮೆರವಣಿಗೆಯಿಂದ ಆರಂಭವಾಗುವ ಹಬ್ಬಕ್ಕೆ ರಂಗೇನಹಳ್ಳಿಯ ದೇವರ ಒಕ್ಕಲಿನ ಗುಡ್ಡಪ್ಪರೆ ಪಾತ್ರಧಾರಿಗಳು. ಶ್ರದ್ಧಾಭಕ್ತಿಯಿಂದ ಮರದಲ್ಲಿ ನಿರ್ಮಿಸಿರುವ ಪುರುಷ ಗುಪ್ತಾಂಗ ಹೋಲುವ ಕೊಂತಪ್ಪನನ್ನು ಪೂಜಿಸಿ ದೇವರ ಮುಂದೆ ಗುಡ್ಡಪ್ಪನ ಸೊಂಟಕ್ಕೆ ಕಟ್ಟಿಕೊಂಡು, ಕಾಲಿಗೆ ಗೆಜ್ಜೆ, ತಲೆಗೆ ಕೆಂಪು ಪೇಟ, ಮೈಗೆ ಕೆಂಪು ಜರತಾರಿ ಅಡ್ಡ ಹೊದಿಕೆ ಹೊದ್ದು ಹಬ್ಬದ ವಸಂತನ ಕುಣಿತಕ್ಕೆ ಸಿದ್ಧವಾಗುತ್ತಾನೆ. 

ಕೊಂತಪ್ಪ ಊರ ಕೇರಿಗಳನ್ನು ಸುತ್ತಿ ರಥ ಬೀದಿಯಲ್ಲಿ ಸಾಗುತ್ತ ಎಲ್ಲರೆಡೆಗೆ ಕೊಂತಪ್ಪನನ್ನು ತೋರಿಸುತ್ತ ಉಯ್ ಉಯ್ ಎಂದು ಜಿಗಿಯುತ್ತಾನೆ. ಚಕ್ರವಾದ್ಯ ನಾದಕ್ಕೆ ಕುಣಿಯುವ ಗುಡ್ಡಪ್ಪನಿಗೆ ಸಹಭಂಟ ಮರಿಗುಡ್ಡಪ್ಪರು ‘ಡುಮ್ಮಿ ಸಾಲೇನ್ನಿರೇ’ ಎಂದು ಹಾಡುತ್ತ ಕುಣಿಯಲು ಪ್ರಚೋದಿಸುತ್ತಾರೆ.

ಊರಲೆಲ್ಲ ಸುತ್ತಿ ಅಂತಿಮವಾಗಿ ದೇವಿಯ ಗಂಡನಾದ ಲಕ್ಷ್ಮೀನರಸಿಂಹಸ್ವಾಮಿ ಗುಡಿಯ ಹೆಬ್ಬಾಗಿಲಿಗೆ ದೇವಿ ಬಂದಾಗ ಊರ ಪ್ರಮುಖರು ಕೊಂತಪ್ಪನೊಂದಿಗೆ ಸೇರಿಕೊಂಡು ವಿವಿಧ ಸಮುದಾಯದವರ ಗುಪ್ತಾಂಗಗಳನ್ನು ವರ್ಣಿಸುತ್ತ ದೇವರನ್ನು ಜರಿಯುತ್ತಾರೆ. ದೇವರನ್ನು ಸಮಾಗಮಗೊಳಿಸುವ ರೀತಿ ಓಲೈಕೆ, ರಮಿಸುವ ಹಾಡು ಹಾಡಲಾಗುತ್ತದೆ. ಅರ್ಚಕ ಮುಚ್ಚಿದ ಲಕ್ಷ್ಮೀನರಸಿಂಹಸ್ವಾಮಿ ಗುಡಿಯ ಬಾಗಿಲು ತೆಗೆದು ದೇವಿಗೆ ಆರತಿ ಎತ್ತಿದಾಗ ಹಬ್ಬದ ಮೊದಲ ಭಾಗಕ್ಕೆ ತೆರೆ ಎಳೆಯಲಾಗುತ್ತದೆ. 

ದೇವಿಯ ಮೆರವಣಿಗೆ ಅಂತಿಮವಾಗಿ ಅಮಾನಿಕೆರೆಯ ಗಂಗೆ ಕಡಕ್ಕೆ ಸಾಗಿ ಮಹಾ ಪೂಜೆ ನಡೆಯುತ್ತದೆ. ದೇವಿಯ ಆರಾಧಕರಾದ ಹಾಲುಮತಸ್ಥ ಜನಾಂಗದವರಿರುವ ಲಕ್ಷ್ಮೀಪುರ ಗ್ರಾಮಕ್ಕೆ ಸಾಗುತ್ತದೆ. ಪ್ರತಿ ಮನೆಯಲ್ಲಿಯೂ ಉಪವಾಸ ವ್ರತಾಚರಣೆಯಿಂದ ದೇವಿಗೆ ಆರತಿ ಎತ್ತುವ ಮೂಲಕ ಬರಮಾಡಿಕೊಳ್ಳಲಾಗುತ್ತದೆ. ಅಂಗಾತ ಮಲಗಿದ್ದ ಹರಕೆ ಹೊತ್ತ ಭಕ್ತರನ್ನು ದಾಟುತ್ತ ದೇವಿಯ ಮೆರವಣಿಗೆ ಸಾಗಿ ಅಂತಿಮವಾಗಿ ಗುಡಿಗೆ ಪ್ರವೇಶಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಗುವುದು ಹಬ್ಬದ ವಿಶೇಷ.

ಆಚರಣೆ– ಬೇಕು ಬದಲಾವಣೆ: ಮರದ ಕೊಂತಪ್ಪನನ್ನು ನೋಡಿದರೆ ಸಂತಾನ ಪ್ರಾಪ್ತಿಯಾಗಲಿದೆ ಎಂಬ ನಂಬುಗೆಯಿಂದ ಆಚರಣೆಯಿರುವ ಈ ಹಬ್ಬ ಇಂದು ಯುವಕರಿಗೆ ಮೋಜಿನ ಹಬ್ಬವಾಗಿ ಪರಿಣಮಿಸಿದ್ದು, ಯುವಕರದ್ದೇ ಈ ಹಬ್ಬದಲ್ಲಿ ಕಾರುಬಾರು ಎನ್ನುವಂತಾಗಿದೆ. ಇಂತಹ ಪುರಾತನ ಆಚರಣೆಗಳು ವಿಕೃತ ಭಾವನೆಯನ್ನು ಯುವಕರಲ್ಲಿ ಮೂಡಿಸಿ ಸಮಾಜವನ್ನು ಅಸ್ಥಿರವಾಗಿಸುವ ಆತಂಕ ಮೂಡಿಸಬಹುದಾಗಿದೆ.

ಯಾವುದೇ ಶಾಸ್ತ್ರ ಪುರಾಣಗಳಲ್ಲಿ ಈ ರೀತಿಯ ಆಚರಣೆ ಕಂಡು ಬಂದಿಲ್ಲ. ವೈಜ್ಞಾನಿಕ ಯುಗಕ್ಕೆ ತಕ್ಕಂತೆ ಹಬ್ಬವನ್ನು ಮಾರ್ಪಡಿಸಲು ಹಿರಿಯರ ದೊಡ್ಡ ಮನಸ್ಸು ಬೇಕಿದೆ. ಎಲ್ಲವೂ ಆದಲ್ಲಿ ‘ಹೊಸ ಚಿಗುರು ಹಳೆ ಬೇರು ಕೂಡಿದರೆ ಮರ ಸೊಬಗು, ಹೊಸ ಯುಕ್ತಿ ಹಳೆ ತತ್ವದೊಡೆಗೂಡೆ ಧರ್ಮ’ ಎನ್ನುವಂತೆ ನಾಡಿನ ಬಲು ದೊಡ್ಡ ಜಾನಪದ ಹಬ್ಬವಾಗಿ ಕಿಕ್ಕೇರಿಯ ವಸಂತ ಹಬ್ಬವನ್ನು ನೆನೆದು, ಇತ್ತ ಎಲ್ಲರ ಮನಸ್ಸು ಸೆಳೆಯುವಂತಾಗಲಿದೆ ಎನ್ನುವುದು ಕರ್ನಾಟಕ ಭ್ರಷ್ಟಾಚಾರ ವಿರೋಧಿ ರಂಗದ ಕಾರ್ಯದರ್ಶಿ ಮಾದಾಪುರ ಸುಬ್ಬಣ್ಣರ ಮಾತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT