ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿಯ ಬಾಕ್ಸಿಂಗ್!

Last Updated 19 ನವೆಂಬರ್ 2015, 19:38 IST
ಅಕ್ಷರ ಗಾತ್ರ

‘ಇದುವರೆಗಿನ ನನ್ನ ಸಿನಿಮಾಗಳಲ್ಲಿ ಕೆಲವು ಗೆದ್ದಿವೆ, ಖುಷಿ ಕೊಟ್ಟಿವೆ. ಫಲಿತಾಂಶ ಏನೇ ಆಗಲಿದ್ದರೂ ವೈಯಕ್ತಿಕವಾಗಿ ನನಗೆ ತೃಪ್ತಿ ನೀಡಿರುವ ಚಿತ್ರ ‘ಬಾಕ್ಸರ್’ ಎಂದರು ನಿರ್ದೇಶಕ ಪ್ರೀತಮ್‌ ಗುಬ್ಬಿ.

‘ದಿಲ್‌ ರಂಗೀಲಾ’ ಚಿತ್ರದ ಬಳಿಕ ಪ್ರೀತಮ್ ಗುಬ್ಬಿ ನಿರ್ದೇಶಿಸಿರುವ ‘ಬಾಕ್ಸರ್‌’ ಇಂದು (ನ.20) ತೆರೆಕಾಣುತ್ತಿದೆ. ‘ಮುಂಗಾರುಮಳೆ’ಯಲ್ಲಿ ಪಯಣ ಪ್ರಾರಂಭಿಸಿದ ತಮ್ಮೊಳಗಿನ ಕಥೆಗಾರನಿಗೆ ಹೆಚ್ಚು ಸವಾಲು ಎನಿಸಿದ್ದು ‘ಬಾಕ್ಸರ್‌’ ಎನ್ನುತ್ತಾರೆ ಅವರು.

‘ಇದು ವೃತ್ತಿಪರ ಬಾಕ್ಸರ್‌ನ ಕಥೆಯಲ್ಲ. ಕಿಕ್ ಬಾಕ್ಸಿಂಗ್‌ ಅನ್ನೇ ತನ್ನ ಬದುಕನ್ನಾಗಿಸಿಕೊಂಡ, ಅದರಿಂದಾಚೆಗಿನ ಜಗತ್ತನ್ನೇ ತಿಳಿಯದ ರಾಜ ಎಂಬ ಯುವಕನ ಕಥೆಯಿದು. ಆತನ ಜೀವನದೊಳಗೆ ಪ್ರವೇಶಿಸುವ ಲಕ್ಷ್ಮಿ ಎಂಬ ಯುವತಿ ಆತನಲ್ಲಿ ಎಂಥ ಬದಲಾವಣೆ ತರುತ್ತಾಳೆ, ಆಕೆಗಾಗಿ ಅವನು ಏನೇನು ಮಾಡುತ್ತಾನೆ ಎನ್ನುವುದು ‘ಬಾಕ್ಸರ್‌’ನ ಮೂಲವಸ್ತು.

ಚಿತ್ರದಲ್ಲಿ ಇರುವುದು ನಾಲ್ಕು ಫೈಟ್‌ಗಳು ಮಾತ್ರ. ಅದೂ ಆತನ ಬದುಕನ್ನು ತೋರಿಸುವ ಫೈಟ್‌ಗಳು. ಅದರಿಂದ ಹೊರತಾಗಿ ಖಳನಾಯಕರೊಂದಿಗೆ ಕಾದಾಟಗಳಿಲ್ಲ. ಎರಡು ಪಾತ್ರಗಳ ಮೇಲೆಯೇ ಕಥೆ ಸಾಗುತ್ತದೆ. ಶೀರ್ಷಿಕೆಯಲ್ಲಿ ಆ್ಯಕ್ಷನ್‌ ಕಾಣಿಸಿದರೂ ಇದೊಂದು ಭಾವನಾತ್ಮಕ ಪ್ರೇಮಕಥೆ ಎಂದು ಪ್ರೀತಮ್‌ ಬಣ್ಣಿಸುತ್ತಾರೆ.

ನಿರ್ದೇಶಕನಾಗಿ ಪ್ರೀತಮ್‌ ಅವರಿಗೆ ಚಿತ್ರ ಹೆಚ್ಚು ತೃಪ್ತಿ ನೀಡಲು ಕಾರಣ ಅವರನ್ನು ಅದು ತಮ್ಮ ಏಕತಾನತೆಯ ಶೈಲಿಯಿಂದ ಹೊರತಂದದ್ದು. ಸ್ವತಃ ಅವರಿಗೇ ಈ ಮಾದರಿ ಸಿನಿಮಾಗಳಿಂದ ಹೊರಗೆ ಬರಬೇಕು ಎನಿಸಿತ್ತಂತೆ. ಅದು ಅನಿವಾರ್ಯವೂ ಆಗಿತ್ತು.

ಅವರ ಈವರೆಗಿನ ಸಿನಿಮಾಗಳಲ್ಲಿನ ನಾಯಕರು ಉಡಾಫೆ, ಅಧಿಕ ಮಾತುಗಳನ್ನಾಡುತ್ತಿದ್ದರು. ಆದರೆ ಇಲ್ಲಿ ನಾಯಕನಿಗೆ ಮಾತು ಕಮ್ಮಿ. ಪಾತ್ರ ಪೋಷಣೆಯೂ ಗಂಭೀರವಾಗಿದೆ. ಇಡೀ ಸಿನಿಮಾ ಸಾಗುವ ರೀತಿ ವಿಭಿನ್ನ. ಹೀಗಾಗಿ ‘ಬಾಕ್ಸರ್‌’ ಹೆಚ್ಚು ಸವಾಲಿನದ್ದು ಎನಿಸಿದೆ. ಒಬ್ಬ ತಂತ್ರಜ್ಞನಾಗಿಯೂ ಸಿನಿಮಾ ಅವರಿಗೆ ಹೆಚ್ಚು ಖುಷಿ ನೀಡಿದೆ. ತಮ್ಮ ಮುಂದಿನ ಸಿನಿಮಾಗಳೂ ವಿಭಿನ್ನ ಶೈಲಿಯಲ್ಲಿ ಇರಲಿವೆ ಎಂಬ ಭರವಸೆಯನ್ನು ಅವರು ನೀಡುತ್ತಾರೆ.

ನಟ ಧನಂಜಯ್‌ ಅವರ ಬದ್ಧತೆಯನ್ನು ಪ್ರೀತಮ್‌ ನೆನಪಿಸಿಕೊಳ್ಳುತ್ತಾರೆ. ಆರು ತಿಂಗಳು ಬೇರೆ ಸಿನಿಮಾ ಮಾಡದೆಯೇ ಕಿಕ್ ಬಾಕ್ಸಿಂಗ್‌ ತರಬೇತಿ ಪಡೆದು, ಅದಕ್ಕೆ ಅನುಗುಣವಾಗಿ ದೇಹವನ್ನು ರೂಪಿಸಿಕೊಳ್ಳಬೇಕಾದ ನಟ ಅವರಿಗೆ ಬೇಕಾಗಿದ್ದರು. ಏಕೆಂದರೆ ಸೆಟ್‌ ಅಥವಾ ಹೊಡೆದಾಟದ ವೇಳೆ ಮಾತ್ರ ಆತ ಕಿಕ್‌ ಬಾಕ್ಸರ್‌ ಆಗಿ ಕಾಣಿಸಬಾರದು. ಆತನನ್ನು ನೋಡಿದಾಗಲೇ ಅಂತಹ ಭಾವನೆ ಬರುವಂತಿರಬೇಕು. ಅದಕ್ಕಾಗಿ ಧನಂಜಯ್‌ ತೀವ್ರ ಶ್ರಮ ಹಾಕಿದ್ದಾರೆ.

ಪಾತ್ರಕ್ಕೆ ಬೇಕಾಗಿದ್ದ ದೇಹಭಾಷೆಯನ್ನು ಅವರು ರೂಢಿಸಿಕೊಂಡಿದ್ದರು. ಜೊತೆಗೆ ಸನ್ನಿವೇಶ ಹೀಗೆ ಎಂದರೆ, ಅದರಲ್ಲಿ ತಾವು ಹೇಗೆ ಇರಬೇಕು ಎನ್ನುವುದನ್ನು ವಿವರಿಸುವ ಅಗತ್ಯ ಇಲ್ಲದೆಯೇ ಅರ್ಥಮಾಡಿಕೊಂಡು ಅಭಿನಯಿಸುವ ಸಾಮರ್ಥ್ಯ ಧನಂಜಯ್ ಅವರಲ್ಲಿದೆ ಎನ್ನುತ್ತಾರೆ ಅವರು.

‘ಒಗ್ಗರಣೆ’ ಚಿತ್ರದಲ್ಲಿ ಕೆಲಸ ಮಾಡಿದ್ದ ಪ್ರೀತ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರತಿ ತಂತ್ರಜ್ಞರ ಶ್ರಮವೂ ಸಿನಿಮಾ ಪರದೆ ಮೇಲೆ ಪ್ರಕಟವಾಗುತ್ತದೆ ಎನ್ನುತ್ತಾರೆ ಪ್ರೀತಮ್‌. ಚಿತ್ರ ಮೂಡಿಬಂದ ಬಗೆಯ ಕುರಿತು ಇಡೀ ತಂಡ ಖುಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT