ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗಳ ಗುರುವೆನಿಸಿದವರು...

ನುಡಿನಮನ
Last Updated 30 ಆಗಸ್ಟ್ 2015, 19:33 IST
ಅಕ್ಷರ ಗಾತ್ರ

ಇಂದು ಬೆಳಿಗ್ಗೆ ನಡೆಯಿತು ಘೋರ ದುರಂತ. ಅದು ಇಡೀ ಸಾಹಿತ್ಯ ವಲಯವನ್ನು ತಲ್ಲಣಗೊಳಿಸಿದ ಆಘಾತ. ಕನ್ನಡದ ಶ್ರೇಷ್ಠ ಸಾಹಿತಿ, ಕರ್ನಾಟಕದ ನಿರ್ಭೀತ ವಿಚಾರವಾದಿ ಪ್ರೊ. ಎಂ.ಎಂ. ಕಲಬುರ್ಗಿ ಅವರನ್ನು ಅಪರಿಚಿತರು ಗುಂಡಿಕ್ಕಿ ಕೊಂದರೆಂಬ ದುರ್ವಾರ್ತೆ ಕಾಳ್ಗಿಚ್ಚಿನಂತೆ ಹಬ್ಬಿತು.

ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ ಎಂದು ನಂಬಿ ದಿಟದ ದಾರಿಯಲ್ಲಿ ಸಾಗಿಬಂದ ಧೀಮಂತ ಎಂ.ಎಂ. ಕಲಬುರ್ಗಿ. ಕಲಬುರ್ಗಿಯವರು ಪಾಂಡಿತ್ಯದೊಂದಿಗೆ ಪ್ರತಿಭೆಯೂ ಮೇಳೈಸಿದ ಅಪರೂಪದ ಸಾಹಿತಿ. ಸಂಶೋಧನೆಗೆ ಅರ್ಥವಂತಿಕೆಯೊಂದಿಗೆ ಹೊಸ ವಿನ್ಯಾಸವನ್ನು ರೂಪಿಸಿ ಆಕರ ಸಂಶೋಧನೆ, ವಿಶ್ಲೇಷಣಾತ್ಮಕ ಸಂಶೋಧನೆ ಮತ್ತು ವ್ಯಾಖ್ಯಾನಾತ್ಮಕ ಸಂಶೋಧನೆಯೆಂದು ವಿಂಗಡಿಸಿದ್ದು ಅವರ ಕೊಡುಗೆ.

ಅವರದು ಬಹುಮುಖ ಪ್ರತಿಭೆ. ಅವರ ಬರವಣಿಗೆಯ ಹಾಸು, ಹರಹು ದೊಡ್ಡದು. ಅವರ ಸಂಶೋಧನ ಕ್ಷೇತ್ರದ ಆಯಾಮದೊಳಗೆ ಗ್ರಂಥ ಸಂಪಾದನಶಾಸ್ತ್ರ, ಹಸ್ತಪ್ರತಿಶಾಸ್ತ್ರ, ಶಾಸನ, ನಿಘಂಟು, ಛಂದಸ್ಸು, ವ್ಯಾಕರಣ, ಜಾನಪದ, ಚರಿತ್ರೆ, ನಾಮಶಾಸ್ತ್ರ, ಭಾಷಾಶಾಸ್ತ್ರ– ಇನ್ನೂ ಮುಂತಾದವು ಸೇರಿವೆ. ಮುಖ್ಯವಾಗಿ ಅವರು ದೇಶೀಯ ಚಿಂತನೆಗೆ ಒತ್ತುಕೊಟ್ಟು ನೆಲದ ಮರೆಯ ನಿದಾನವನ್ನು ಅರಸಿದವರು. ಹೀಗೆ ವೈವಿಧ್ಯಮಯ ಪೂರಕ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದು ಅಮೂಲ್ಯವಾದ ಹೊಚ್ಚ ಹೊಸ ನೋಟಗಳನ್ನು ನೀಡಿ ಕನ್ನಡದ ಸಂಶೋಧನೆಗೆ ಸೃಜನಶೀಲತೆಯ ಮೆರುಗು ಕೊಟ್ಟ ಮರೆಯಲಾಗದ ವಿಶಿಷ್ಟ ಸಾಹಿತಿ ಕಲಬುರ್ಗಿ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕು ಗುಬ್ಬೇವಾಡ ಗ್ರಾಮದಲ್ಲಿ ಮಡಿವಾಳಪ್ಪ ಗುರವ್ವ ದಂಪತಿಗಳಿಗೆ 28–11–1938ರಂದು ಹುಟ್ಟಿದ ಮಲ್ಲಪ್ಪ ಕಲಬುರ್ಗಿಯು ಕರ್ನಾಟಕದ ಮೂರ್ಧನ್ಯ  ಸಾಹಿತ್ಯ ವರೇಣ್ಯನಾಗಿ ಬೆಳೆದು ಬಂದ ದಾರಿ ರೋಚಕವಾದದ್ದು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿ ಅಲ್ಲಿಯ ಕನ್ನಡ ಅಧ್ಯಯನ ಪೀಠದಲ್ಲಿ ಅಧ್ಯಾಪಕರಾದ ಕಲಬುರ್ಗಿ ತಮ್ಮ ಅಧ್ಯಯನ, ಅಧ್ಯಾಪನ, ಲೇಖನಗಳಿಂದ, ಕುಶಾಗ್ರಬುದ್ಧಿಯಿಂದ ‘ಗುರುಗಳ ಗುರುವೆನಿಸಿದ’ ಗೌರವ ಗಳಿಸಿದರು. ಈ ನಿಶಿತಮತಿಯ ಪಾಠ ಮತ್ತು ಕೃತಿಗಳು ಉತ್ತರ ಕರ್ನಾಟಕದಲ್ಲಿ ಬಲ್ಲಿದರ ಪಡೆಯನ್ನು ಸಜ್ಜುಗೊಳಿಸಿತು.

ಪ್ರೊ. ಎಂ.ಎಂ. ಕಲಬುರ್ಗಿಯವರ ತಲಸ್ಪರ್ಶಿ ಅಧ್ಯಯನ ಕನ್ನಡ ಸಾಹಿತ್ಯದ ಮೂಲಚೂಲಗಳನ್ನು ಅನ್ವೇಷಿಸಿ ಅನೇಕ ಹೊಸ ಶೋಧಗಳಿಗೆ ಹಾದಿ ನಿರ್ಮಿಸಿತು. ಅವರದು ಆತುರದ ನಡೆ, ಅದರಲ್ಲಿ ವೇಗವೂ ಬೆರೆತಿತ್ತು. ಮೈಸೂರು ಮಾದರಿ, ಧಾರವಾಡದ ಮಾದರಿ, ಮದರಾಸು ಮಾದರಿ ಎಂದು ಆಧುನಿಕ ಅಧ್ಯಯನ ವಿಧಾನದ ಕವಲುಗಳನ್ನು ಏಕಮಾದರಿಗೆ ತಂದು ಕೂಡಿಸುವ ಪ್ರಯತ್ನಗಳಲ್ಲಿ ಕಲಬುರ್ಗಿಯವರಿಗೆ ಸಿಂಹಪಾಲು. ಇದರಂತೆ ಪುಣೆಯ ಸಾಂಸ್ಕೃತಿಕ ಶೋಧ ಮತ್ತು ಮದ್ರಾಸಿನ ಚಾರಿತ್ರಿಕ ಶೋಧ ಪರಿಕಲ್ಪನೆಯ ರೂಪರೇಖೆಗಳನ್ನು ಅವರು ಬಿಡಿಸಿ ತೋರಿಸಿದರು. ಅಲ್ಲದೆ ಚಾರಿತ್ರಿಕ ಶೋಧದ ಜತೆಗೆ ಸಾಮಾಜಿಕ ಪ್ರಕ್ರಿಯಾ ಶೋಧ ಮತ್ತು ಸಾಮಾಜಿಕ ಕಾರಣ ಶೋಧಗಳ ಆಯಾಮವನ್ನು ಕಾಣಿಸಿದ ಹೆಗ್ಗಳಿಕೆಯೂ ಅವರದೆ.

ಶಾಸನಗಳೆಂದರೆ ಅವರಿಗೆ ಬಲು ಅಕ್ಕರೆ. ಅವರ ಕೃತಿ ರಾಶಿಯಲ್ಲಿ ಧಾರವಾಡ ಮತ್ತು ವಿಜಾಪುರ ಜಿಲ್ಲೆಯ ಶಾಸನ ಸೂಚಿ, ಶಾಸನ ಸಂಪದ, ಶಾಸನ ಸೂಕ್ತಿ ಸುಧಾರ್ಣವ, ಶಾಸನಗಳಲ್ಲಿ ಶಿವಶರಣರು, ಬಸವಣ್ಣನವರನ್ನು ಕುರಿತ ಶಾಸನಗಳು, ಮಹಾರಾಷ್ಟ್ರದ ಕನ್ನಡ ಶಾಸನಗಳು, ಶಾಸನ ವ್ಯಾಸಂಗ–1,2 ಕೃತಿಗಳು ಮೌಲಿಕವಾಗಿವೆ. ಆಯಾ ಶಾಸನವನ್ನು, ಅದರ ವಿಷಯ ವ್ಯಾಪ್ತಿಯನ್ನು ಬಿಡಿಸಿ ನೋಡುವಾಗ ತಿರುಳನ್ನು ಗುರುತಿಸುತ್ತಾರೆ, ಚಾರಿತ್ರಿಕ ಮಹತ್ವವನ್ನು ನಿರ್ದೇಶಿಸುತ್ತಾರೆ. ‘‘ಇಂದಿನ ಕರ್ನಾಟಕಕ್ಕೆ ಭೂಗೋಲ ಸಣ್ಣದು, ಇತಿಹಾಸ ದೊಡ್ಡದು. ಇಂದಿನ ಮಹಾರಾಷ್ಟ್ರಕ್ಕೆ ಭೂಗೋಲ ದೊಡ್ಡದು, ಇತಿಹಾಸ ಸಣ್ಣದು’’. ಇಂಥ ಸೂತ್ರ ಪ್ರಾಯದ ಮಾತುಗಳು ಅವರ ಬರವಣಿಗೆಯಲ್ಲಿ ಹೇರಳ.

ಇನ್ನೊಂದು ಉದಾಹರಣೆ: ‘‘ಉತ್ತರ ಕರ್ನಾಟಕದಲ್ಲಿ ಕುಟುಂಬ ಪ್ರಧಾನವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ವ್ಯಕ್ತಿ ಪ್ರಧಾನವಾಗಿ ಕುಟುಂಬ ಅಪ್ರಧಾನವಾಗಿದೆ. ಉತ್ತರ ಕರ್ನಾಟಕದವರು ಪ್ರಾಚೀನತಾ ಪ್ರಿಯರೂ ಜಾನಪದೀಯರೂ ಆಗಿದ್ದರೆ, ದಕ್ಷಿಣ ಕರ್ನಾಟಕದವರು ವರ್ತಮಾನ ನಿಷ್ಠರೂ ಶಿಷ್ಟಪದೀಯರೂ ಆಗಿದ್ದಾರೆ’’.

ಅವರ ಕೃತಿ ಶ್ರೇಣಿಯಲ್ಲಿ ಕರ್ನಾಟಕ ಸರ್ಕಾರದ ನೆರವಿನಿಂದ ಹೊರಬಂದ ‘ಸಮಗ್ರ ವಚನ’ದ 15 ಸಂಪುಟಗಳು ಉಪಾದೇಯವಾಗಿವೆ. ಕನ್ನಡ ಗ್ರಂಥ ಸಂಪಾದನ ಶಾಸ್ತ್ರ, ಕರ್ನಾಟಕ ಕೈಫಿಯತ್ತುಗಳು, ಉತ್ತರ ಕರ್ನಾಟಕದ ಜನಪದ ಸಾಹಿತ್ಯ ಮೊದಲಾದುವು ಉಲ್ಲೇಖನೀಯ. ‘ಕವಿರಾಜಮಾರ್ಗ ಪರಿಸರದ ಸಾಹಿತ್ಯ’ ಎಂದೆಂದಿಗೂ ಒಂದು ಮೈಲಿಗಲ್ಲು. ಇವೆಲ್ಲಕ್ಕೂ ಮಿಗಿಲಾಗಿ ‘ಮಾರ್ಗ’ ಸಂಪುಟಗಳು ಅವಿರತ ಶ್ರಮದ ಅಮೃತ ಫಲಗಳು. ಇವು ‘ಪಂಪ ಪ್ರಶಸ್ತಿ’ಯನ್ನು ಮುಡಿಗೇರಿಸಿದ ಚಿನ್ನದ ಗಟ್ಟಿಗಳು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗಲೂ ಮಾರ್ಗದಿಂದ ವಿಚಲಿತ ಆಗಲಿಲ್ಲ.

ಎಂ.ಎಂ. ಕಲಬುರ್ಗಿ ಸ್ನೇಹಜೀವಿಯೂ ಹೌದು ಸ್ವಾಭಿಮಾನಿಯೂ ಹೌದು. ಧಾರವಾಡದ ವಿದ್ಯಾವರ್ಧಕ ಸಂಘದ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆಯಿತ್ತು ಹೊರಬಂದುದು ಅಂಥದೊಂದು ಸಂದರ್ಭ. ಕೆಲವು ವರ್ಷಗಳ ಕೆಳಗೆ ಶರಣ ಚೆನ್ನಬಸವಣ್ಣನವರ ವಿಚಾರದಲ್ಲಿ ಅವರು ನೀಡಿದ ಅಭಿಪ್ರಾಯ ಅಲ್ಲೋಲ ಕಲ್ಲೋಲಕ್ಕೆ ಎಡೆಮಾಡಿತು. ಮಠಾಧೀಶರೂ ಉಗ್ರಶರಣಾಭಿಮಾನಿಗಳೂ ಬೀದಿಗಿಳಿದು ಪ್ರತಿಭಟಿಸಿದರು.

ಈ ಧೀಮಂತ ದೃತಿಗೆಡಲಿಲ್ಲ. ಎಂ.ಎಂ. ಕಲಬುರ್ಗಿಗೂ ಒಳಗೊಳಗೆ ಹಗೆಗಳ ವಿಚಾರದಲ್ಲಿ ಗುಮಾನಿಗಳಿದ್ದುವು: ‘ಭಾರತದಂಥ ಭಾವನಿಷ್ಠ ರಾಷ್ಟ್ರದಲ್ಲಿ ಸಂಶೋಧನೆ ಸರಳ ದಾರಿಯಲ್ಲ. ಕಹಿ ಸತ್ಯ ಹೇಳಬಾರದು ಎಂಬ ಸಂಪ್ರದಾಯದ ವಾರಸುದಾರರಾದ ಭಾರತೀಯರಿಗೆ ಅಂಥ ಸತ್ಯ ಸಹಜವಾಗಿಯೇ ಸಿಹಿ ಎನಿಸುವುದಿಲ್ಲ. ಈ ರಾಷ್ಟ್ರದಲ್ಲಿ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗಳನ್ನೇರಬೇಕಾಗುತ್ತದೆ. ಜಾಣರು ಮುಗ್ಧರನ್ನು ಬಳಸಿಕೊಂಡು ಸಂಶೋಧಕನನ್ನು, ಸತ್ಯವನ್ನು ಹಿಂಸಿಸುವುದರಲ್ಲಿ ತೃಪ್ತಿ ಪಡುತ್ತಾರೆ. ಇಂಥ ಪ್ರಸಂಗಗಳಿಂದಾಗಿ ಭಾರತೀಯ ಸಂಶೋಧಕ ಅನೇಕ ಅಗ್ನಿ ಕುಂಡಗಳನ್ನು ದಾಟಬೇಕಾಗುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಬಹುಶಃ ನನ್ನ ತಲೆಮಾರಿನ ಇತರ ಸಂಶೋಧಕರಿಗಿಂತ ಪರಿಸರವು ನನ್ನ ಕಾಲ ಕೆಳಗೆ ತೋಡಿದ ಅಗ್ನಿ ಕುಂಡಗಳೇ ದೊಡ್ಡವೆಂದು ತೋರುತ್ತದೆ. ಆದರೆ ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಳಕು ದೊಡ್ಡದೆಂಬ ನನ್ನ ನಂಬಿಕೆ ನನ್ನನ್ನು ಈವರೆಗೆ ಉಳಿಸಿದೆ, ಬೆಳಸಿದೆಯೆಂದು ಭಾವಿಸಿದ್ದೇನೆ’.

ಗೆಳೆಯ ಕಲಬುರ್ಗಿಗೆ ಸಾವಿನ ಅರಿವಿತ್ತೆ, ಭವಿಷ್ಯದರ್ಶಿ ಆಗಿದ್ದರೆ– ಎಂದು ಮೇಲಿನ ಸಾಲುಗಳಿಂದ ಅನುಮಾನ ಬರುತ್ತದೆ. ಅಂತೂ ಮೂಲಭೂತವಾದಿಗಳು ಬಲಿ ತೆಗೆದುಕೊಂಡರು. ಅವರು ಗುಂಡಿಟ್ಟು ಕೊಂದದ್ದು ಎಂ.ಎಂ. ಕಲಬುರ್ಗಿಯವರನ್ನು ಮಾತ್ರ ಅಲ್ಲ. ಸತ್ಯ ಹೇಳಲು ಹಿಂಜರಿಯದ ಸಾಹಿತ್ಯರತ್ನವನ್ನು, ಸಂಶೋಧಕ ಸಾಮ್ರಾಟನನ್ನು. ರಾಜಕಾರಣಿಗಳನ್ನು, ರಾಷ್ಟ್ರ ವರಿಷ್ಠರನ್ನು ಕೊಲ್ಲುವುದು ಹೊಸದಲ್ಲ.

ಒಬ್ಬ ಅಮಾಯಕ ನಿರುಪದ್ರವಿ ಸಾಹಿತಿಯನ್ನು ಕೊಲೆ ಮಾಡಿರುವುದು ಅಪೂರ್ವ ಘಟನೆ. ಕಲಬುರ್ಗಿ ಬಹುಕಾಲ ನಿಲ್ಲುವ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅದನ್ನು ಯಾರೂ ಕೊಲ್ಲಲಾಗುವುದಿಲ್ಲ. ಅವರು ನಡೆದದ್ದು ಸತ್ಯಶೋಧನ ಪಥದಲ್ಲಿ. ಅವರು ತೋರಿದ್ದು ಸಂಶೋಧನೆಯ ಮಹಾಮಾರ್ಗ.
*

ಸನ್ಮಾನ ಒಪ್ಕೋಬಾರದು...
ಧಾರವಾಡ:
ಅದು ಅಣ್ಣಿಗೇರಿಯಲ್ಲಿ ನಡೆದ ಈ ಬಾರಿಯ ಪಂಪ ಉತ್ಸವದಲ್ಲಿ ಕಲಬುರ್ಗಿ ಅವರಿಗೆ ಸನ್ಮಾನ ಕಾರ್ಯಕ್ರಮ. ನಿಗದಿತ ಸಮಯಕ್ಕೆ ಅವರು ಬಂದಿದ್ದರು. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಬೇಕಿತ್ತು. ಅವರು ಬರುವವರೆಗೆ ಇವರು ಕಾಯಬೇಕಿತ್ತು. ವೇದಿಕೆಯ ಬಲಭಾಗದಲ್ಲಿ ಬಂದು ಕುಳಿತ ಡಾ.ಕಲಬುರ್ಗಿ ಅವರು ‘ಇನ್ನೂ ಎಷ್ಟೊತ್ತು ಕಾಯಬೇಕು. ಅವರು ಬರೋವರೆಗೆ ನಾವು ಚಹಾ ಆದ್ರೂ ಕುಡಿದು ಬರ್ತೇವಿ. ಏನೇ ಆದರೂ ರಾಜಕಾರಣಿಗಳು ಬರೋ ಕಾರ್ಯಕ್ರಮದಾಗ ಸನ್ಮಾನ ಒಪ್ಕೋಬಾರದು ನೋಡ್ರಿ’ ಎನ್ನುತ್ತಾ ತಮ್ಮ ಅಭಿಮಾನಿಗಳೊಂದಿಗೆ ಚಹಾಕ್ಕೆ ತೆರಳಿದರು.
*

ಗಣ್ಯರ ‍ಪ್ರತಿಕ್ರಿಯೆಗಳು...
ಸಂವೇದನೆ ಮೇಲಿನ ದಾಳಿ
ಕಲಬುರ್ಗಿ ಅವರ ಹತ್ಯೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂವೇದನೆಯ ಮೇಲೆ ನಡೆದ ಗುಂಡಿನ ದಾಳಿ. ಇಂತಹ ಘಟನೆಗಳು ಇಲ್ಲಿಗೇ ನಿಲ್ಲಬೇಕು. ಕೊಂಚ ಎಚ್ಚರತಪ್ಪಿದರೂ ದುಷ್ಕರ್ಮಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಕರಣದ ತನಿಖೆಗೆ ನೇಮಕ ಮಾಡುವ ವಿಶೇಷ ತನಿಖಾ ತಂಡಕ್ಕೆ ಸಮರ್ಥ ಅಧಿಕಾರಿಗಳನ್ನು ನೇಮಿಸಿಬೇಕು.
–ದೇವನೂರ ಮಹದೇವ
ಸಾಹಿತಿ
*

ವೈಚಾರಿಕತೆಗೆ ಬಿದ್ದ ಗುಂಡು
ಸತ್ಯದೆಡೆಗೆ ಸಾಗುವ ಸಂಶೋಧಕನನ್ನು ರಾಷ್ಟ್ರ ಕಳೆದುಕೊಂಡಿದೆ. ಕಲಬುರ್ಗಿ ಅವರ ದೇಹಕ್ಕಲ್ಲ ಸತ್ಯ, ವೈಚಾರಿಕತೆಗೆ ಬಿದ್ದ ಗುಂಡು. ಕೊಲೆಪಾತಕಿಗಳು ತಾಲಿಬಾನಿಗಳಿಂತಲೂ ಹೇಡಿಗಳು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ದುಷ್ಕರ್ಮಿಗಳ ಬಂಧನವಾಗಬೇಕು
–ಪ್ರೊ.ಕೆ.ಎಸ್‌. ಭಗವಾನ್‌
ಚಿಂತಕ
*


ಸಾವಿನಿಂದ ದಿಗ್ಭ್ರಮೆ
ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆ ದಿಗ್ಭ್ರಮೆ ಮೂಡಿಸಿದೆ. ರಾಜ್ಯದಲ್ಲಿ  ಕಾನೂನು–ಸುವ್ಯವಸ್ಥೆ ಹದಗೆಟ್ಟಿದೆ. ಅದನ್ನು ಸರ್ಕಾರವೇ ಸರಿಪಡಿಸಬೇಕು
–ಎಚ್‌.ಡಿ. ದೇವೇಗೌಡ
ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ
*


ಕ್ರೌರ್ಯದ ಪರಮಾವಧಿ
ಈಚೆಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕರ್ನಾಟಕದಲ್ಲಿ ಇಷ್ಟೊಂದು ಧಕ್ಕೆಯಾಗಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಆತಂಕಕಾರಿಯಾದ ಬೆಳವಣಿಗೆ ಇದು. ಕಲಬುರ್ಗಿ ಸತ್ಯ ಹೇಳುತ್ತಿದ್ದರು. ಅವರೊಬ್ಬ ಸರಳ, ಪ್ರಾಮಾಣಿಕ ವ್ಯಕ್ತಿ. ಅವರೊಂದಿಗೆ ಭಿನ್ನಾಭಿಪ್ರಾಯ ಇದೆ ಎಂದು ಅವರನ್ನು ಕೊಲ್ಲುವ ಮಟ್ಟಕ್ಕೆ ಹೋಗುವುದು ಕ್ರೌರ್ಯದ ಪರಮಾವಧಿ. ಸತ್ಯ ಹೇಳಿದ ಬಸವಣ್ಣ ಅವರನ್ನು ಈ ಸಮಾಜ 40 ವರ್ಷವೂ ಬದುಕಲು ಬಿಡಲಿಲ್ಲ
–ಪ್ರೊ.ಕಾಳೇಗೌಡ ನಾಗವಾರ
ಸಾಹಿತಿ
*

ನಾನು–ಕಲಬುರ್ಗಿ ಕ್ಲಾಸ್‌ಮೇಟು...

ಕಲಬುರ್ಗಿ ನನ್ನ ಕ್ಲಾಸ್‌ಮೇಟು, ಬ್ಯಾಚ್‌ಮೇಟು ಕೂಡ ಹೌದು. ನನ್ನ ವಿಚಾರ ಅವನಿಗೆ, ಅವನ ವಿಚಾರ ನನಗೆ ಇಷ್ಟ ಆಗುತ್ತಿರಲಿಲ್ಲ. ಆದರೆ ಯಾರೇ ನಾಟಕಕಾರರ ಬಗ್ಗೆ ಕೇಳಿದರೆ ಕಲಬುರ್ಗಿ ನನ್ನ ಬಗ್ಗೆ ಹೇಳುತ್ತಿದ್ದ. ಅದೇ ರೀತಿ ಸಂಶೋಧನಕಾರರ ಬಗ್ಗೆ ನನಗೆ ಕೇಳಿದರೆ ನಾನು ಕಲಬುರ್ಗಿ ಹೆಸರು ಹೇಳುತ್ತಿದ್ದೆ. ಅಂತಹ ಒಳ್ಳೆಯ ಸ್ನೇಹಿತ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.
–ಚಂದ್ರಶೇಖರ ಕಂಬಾರ
ಸಾಹಿತಿ
*

ವಿದ್ವತ್ತಿನ ಕಳಸ ಕಳಚಿದೆ
ಕಲಬುರ್ಗಿಯವರು ಅನಿಸಿದ್ದನ್ನು ನಿರ್ಭಯವಾಗಿ ಹೇಳುತ್ತಿದ್ದರು. ಅನೇಕ ವಿಚಾರಗಳಲ್ಲಿ ನನಗೂ, ಅವರಿಗೂ ಭಿನ್ನಾಭಿಪ್ರಾಯಗಳಿದ್ದವು. ಆದರೂ, ನಮ್ಮ ಸ್ನೇಹಕ್ಕೆ ಭಂಗ ಬಂದಿರಲಿಲ್ಲ.
ಅವರ ಅಗಲಿಕೆಯಿಂದ ರಾಜ್ಯದಲ್ಲಿ ವಿದ್ವತ್ತಿನ ಕಳಸವೊಂದು ಕಳಚಿ ಬಿದ್ದಂತಾಗಿದೆ. ಅವರ ಸಾವು ನನಗೆ ಅಪಾರ ನೋವುಂಟು ಮಾಡಿದೆ.
–ಎಂ.ಚಿದಾನಂದಮೂರ್ತಿ
ಹಿರಿಯ ಸಂಶೋಧಕ

*

ಕನ್ನಡ ವಿದ್ವತ್‌ ಲೋಕಕ್ಕೆ ನಷ್ಟ
ಕಲಬುರ್ಗಿ ಅವರ ಹತ್ಯೆಯಿಂದ ಕನ್ನಡ ವಿದ್ವತ್‌ ಲೋಕಕ್ಕೆ ನಷ್ಟವಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ.
ಕೃತ್ಯ ನಡೆಸಿದವರನ್ನು ಬಂಧಿಸಿ ಅವರ  ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
–ಸಿದ್ಧಲಿಂಗಯ್ಯ
ಸಾಹಿತಿ
*

ಪ್ರಜಾತಾಂತ್ರಿಕ ಮನಸ್ಸಿನ ವ್ಯಕ್ತಿ
ಅನೇಕ ವಿಷಯಗಳಲ್ಲಿ ನನ್ನ ಹಾಗೂ ಕಲಬುರ್ಗಿ ಅವರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು. ಆದರೆ ಅವರು ಪ್ರತಿಯೊಂದರ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸುತ್ತಿದ್ದರು. ಪ್ರಜಾತಾಂತ್ರಿಕ ಮನಸ್ಸಿನ ವ್ಯಕ್ತಿಯಾಗಿದ್ದರು.
ಅವರು ನನಗೆ ಹಿರಿಯಣ್ಣನಂತಿದ್ದರು. ಸಿಕ್ಕಾಗಲೆಲ್ಲ ‘ಹೊರಗಣವನು’ ಎಂದು ವ್ಯಂಗ್ಯವಾಗಿ ಕರೆಯುತ್ತಿದ್ದರು. ಅವರನ್ನು ಗುಂಡಿಟ್ಟು ಕೊಂದದ್ದು ನೀಚ ಕೃತ್ಯ.
–ಬಂಜಗೆರೆ ಜಯಪ್ರಕಾಶ್‌
ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ

*

‘ಪ್ರಜಾಪ್ರಭುತ್ವದ ಕೊಲೆ’
‘ಇಂದು ಬೆಳಿಗ್ಗೆ 8.33ಕ್ಕೆ ಕಲಬುರ್ಗಿ ಅವರು ನನಗೆ ಕರೆ ಮಾಡಿ ಅಕಾಡೆಮಿ ವಿಷಯವಾಗಿ ಮಾತನಾಡಿದ್ದರು. ಆದರೆ 8.45ಕ್ಕೆ ಅವರ ಹತ್ಯೆ ನಡೆದ ಸುದ್ದಿ ಬಂತು.  ಇದನ್ನು ಕೇಳಿ ಆಶ್ಚರ್ಯವಾಯಿತು. ತನ್ನ ಅಭಿಪ್ರಾಯ ಹೇಳಿದವರಿಗೆ ಗುಂಡಿನ ಮೂಲಕ ಉತ್ತರ ಎಂದರೆ ನಾವು ಯಾವ ಸಮಾಜದಲ್ಲಿ ಇದ್ದೇವೆ. ಇದು ಕಲಬುರ್ಗಿ ಅವರ ಕೊಲೆಯಲ್ಲ. ಪ್ರಜಾಪ್ರಭುತ್ವದ ಕೊಲೆ.
–ನರಹಳ್ಳಿ ಬಾಲಸುಬ್ರಹ್ಮಣ್ಯ
ವಿಮರ್ಶಕ
*

ನಂಬಲು ಆಗುತ್ತಿಲ್ಲ
ಕಲಬುರ್ಗಿ ಅವರು ತಮ್ಮ ವೈಚಾರಿಕ ನಿಲುವುಗಳಿಗೆ ಸದಾ ಬದ್ಧರಾಗಿ ಇರುತ್ತಿದ್ದರು. ಯಾರ ವಿರೋಧವನ್ನೂ ಲೆಕ್ಕಿಸದೇ ತಮಗೆ ಸರಿ ಎನಿಸಿದ್ದನ್ನು ಹೇಳುತ್ತಿದ್ದರು. ಒಬ್ಬ ಸಾಹಿತಿ, ಸಂಶೋಧಕನನ್ನು ಈ ರೀತಿ ಕೊಲೆ ಮಾಡಲಾಗಿದೆ ಎಂದರೆ ನಂಬಲು ಆಗುತ್ತಿಲ್ಲ.
–ಸಿ.ಎನ್‌. ರಾಮಚಂದ್ರನ್‌
ವಿಮರ್ಶಕ
*

ಇಂತಹ ಅಂತ್ಯ ನಿರೀಕ್ಷಿಸಿರಲಿಲ್ಲ

ಡಾ.ಎಂ.ಎಂ.ಕಲಬುರ್ಗಿ ಒಬ್ಬ ಸಜ್ಜನ ವ್ಯಕ್ತಿ. ಅಂತಹವರಿಗೆ ಇಂತಹ ಅಂತ್ಯ ಬರುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಕಲಬುರ್ಗಿ ಅವರಂತಹ ವ್ಯಕ್ತಿಗೇ ರಾಜ್ಯದಲ್ಲಿ ರಕ್ಷಣೆ ಇರಲಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲು ಸಹ ಭಯವಾಗುತ್ತದೆ.
–ಡಾ.ಎಂ.ಮೋಹನ ಆಳ್ವ
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ
*

ಅಣ್ಣ–ತಂಗಿ ಸಂಬಂಧ
ಸಾಹಿತಿ ಡಾ.ಎಂ.ಎಂ.ಕಲಬುರ್ಗಿ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿರುವ ಸುದ್ದಿ ತಿಳಿದು ದಿಗ್ಭ್ರಮೆಯಾಯಿತು. ಮೊದಲೆರಡು ನಿಮಿಷ ಈ ಕರಾಳ ಸುದ್ದಿ ನಂಬಲಾಗಲಿಲ್ಲ. ಕಲಬುರ್ಗಿ ಅವರದ್ದು ನನ್ನದು ಅಣ್ಣ–ತಂಗಿಯ ಸಂಬಂಧ. ನಾವಿಬ್ಬರೂ ಏಕವಚನದಲ್ಲೇ ಮಾತನಾಡುತ್ತಿದ್ದೆವು. ಅವರು ಕಟುವಾಗಿ, ನಿಷ್ಠುರವಾಗಿ ಸತ್ಯವನ್ನು ಹೇಳುತ್ತಿದ್ದರು ಖರೆ. ಆದರೆ, ಮನಸ್ಸು ಮೃದು. ಯಾರನ್ನಾದರೂ ಒಮ್ಮೆ ಹಚ್ಚಿಕೊಂಡರೆ ಅವರೊಂದಿಗೆ ಆತ್ಮೀಯರಾಗಿ ಬಿಡುವ ಹೃದಯವಂತಿಕೆ ಅವರದ್ದು. ಕಲಬುರ್ಗಿ ಅವರು ನನ್ನ ಪ್ರೀತಿಯ ಅಣ್ಣ. ಅವರನ್ನು ಕಳೆದುಕೊಂಡ ನಾನು ಕಂಗಾಲಾಗಿದ್ದೇನೆ.
-ಡಾ. ಗೀತಾ ನಾಗಭೂಷಣ
ಹಿರಿಯ ಸಾಹಿತಿ, ಕಲಬುರ್ಗಿ
*

40 ವರ್ಷಗಳ ಒಡನಾಟ
ಡಾ.ಎಂ.ಎಂ.ಕಲಬುರ್ಗಿ ಅವರ ಜತೆಗಿನ ನನ್ನ ಒಡನಾಟ 40 ವರ್ಷಗಳಷ್ಟು ಹಳೆಯದು. ವಚನಗಳನ್ನು ತುಳು ಭಾಷೆಗೂ ಅನುವಾದ ಮಾಡಿಸಲು ಉತ್ಸಾಹ ತೋರಿಸಿದರು. ಕಳೆದ ವರ್ಷ ಮಂಗಳೂರಿನಲ್ಲಿ ಕಮ್ಮಟ ನಡೆಸಿ ತುಳು ಭಾಷೆಗೆ ವಚನಗಳನ್ನು ತರುವ ಕಾಯಕಕ್ಕೆ ಚಾಲನೆ ನೀಡಿದರು. ತುಳುವಿನಲ್ಲಿ ವಚನ ಸಂಪುಟ ಸಿದ್ಧಗೊಂಡಿದೆ. ಹೀಗಾಗಿ ತುಳು ಭಾಷೆಯ ಶ್ರೀಮಂತಿಕೆಯನ್ನು ಅವರು ಹೆಚ್ಚಿಸಿದಂತಾಗಿದೆ. ಬೇಸರದ ಸಂಗತಿಯೆಂದರೆ, ಅವರು ಮಂಗಳೂರಿಗೆ ಭೇಟಿ ನೀಡಿದ ಕೊನೆಯ ಸಂದರ್ಭವೂ ಅದೇ ಆಗಿಬಿಟ್ಟಿತು. ಕಲಬುರ್ಗಿ ಒಬ್ಬ ಅಸಾಮಾನ್ಯ ಸಂಘಟಕ. ಸಂಸ್ಥೆಗಳನ್ನು ಕಟ್ಟುವುದನ್ನು ಅವರಿಂದ ಕಲಿಯಬೇಕು. ನಾನು ಹಂಪಿ ಕನ್ನಡ ವಿವಿ ಕುಲಪತಿಯಾಗಿದ್ದಾಗ ವಿಜಯಪುರದ ಪಾ.ಗು.ಹಳಕಟ್ಟಿ ಅವರ ಹೆಸರಿನ ಸಂಸ್ಥೆಗೆ ಸಂಶೋಧನಾ ಮಾನ್ಯತೆ ದೊರಕಿಸಿಕೊಡುವಂತೆ ನನ್ನಲ್ಲಿ ಕೇಳಿಕೊಂಡಾಗಲೇ ಅವರ ದೂರದೃಷ್ಟಿಯ ಅರಿವಾಗಿತ್ತು. ಅವರಿಂದ ಅಂತಹ ಅದೆಷ್ಟೋ ಸಂಸ್ಥೆಗಳು ಬೆಳೆದಿವೆ.
–ಪ್ರೊ.ಬಿ.ಎ.ವಿವೇಕ ರೈ
ವಿಶ್ರಾಂತ ಕುಲಪತಿ
*

ಈ ಸುದ್ದಿ ಕೇಳಿ ನಮ್ಮೆದೆಗೇ ಗುಂಡು ಹೊಡೆದಂತಾಗಿದೆ. ಯಾರಿಗೂ ಕೇಡು ಬಯಸದ ವ್ಯಕ್ತಿತ್ವ ಅವರದು. ಸಾಹಿತಿಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದು ಅದೂ ಧಾರವಾಡದಲ್ಲಿ ಎಂಬುದೇ ವಿಷಾದದ ಸಂಗತಿ.
- ಡಾ. ಮಾಲತಿ ಪಟ್ಟಣಶೆಟ್ಟಿ
ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ
*

ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಕಲಬುರ್ಗಿ ಅವರನ್ನು ಸರಿಗಟ್ಟುವವರು ಯಾರೂ ಇಲ್ಲ. ಅವರ ಪಾಂಡಿತ್ಯ ಸ್ವಯಾರ್ಜಿತ. ಅವರನ್ನು ವಿದ್ಯಾರ್ಥಿ ದೆಸೆಯಿಂದಲೂ ನಾನು ಬಲ್ಲೆ. ಅವರು ವಿಜಯಪುರ ಜಿಲ್ಲೆಯಿಂದ ಬಂದಿದ್ದ ಕಾರಣ ನನಗೆ ಅವರ ಬಗ್ಗೆ ವಿಶೇಷ ಪ್ರೀತಿ ಇತ್ತು. ಇಂತಹ ದುರ್ಭರ ಮರಣ ಯಾರಿಗೂ ಬರಬಾರದು.
- ಪಾಟೀಲ ಪುಟ್ಟಪ್ಪ,
ಹಿರಿಯ ಪತ್ರಕರ್ತ
*

ಡಾ. ಕಲಬುರ್ಗಿ ಅವರ ಹತ್ಯೆಯು ಸಾಹಿತ್ಯ ಲೋಕಕ್ಕೆ ದಿಗ್ಭ್ರಮೆ ಉಂಟುಮಾಡಿದೆ. ಇದು ಸಾರಸ್ವತ ಲೋಕಕ್ಕೆ, ಚಿಂತಕರಿಗೆ ತುಂಬಲಾರದ ನಷ್ಟ. ಕನ್ನಡ ಸಾರಸ್ವತ ಲೋಕಕ್ಕೆ ಹಿಂಸೆ ಪ್ರವೇಶ ಮಾಡಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಖಂಡಿಸುತ್ತೇನೆ. ಕಲಬುರ್ಗಿ ಅವರ ವೈಚಾರಿಕ ಹೇಳಿಕೆಯಿಂದ ಅಥವಾ ಕೌಟುಂಬಿಕ ಕಾರಣಕ್ಕೆ ಹತ್ಯೆ ನಡೆಯಿತೋ ಎಂಬ ಬಗ್ಗೆ ಸರ್ಕಾರ ಸಮಗ್ರವಾಗಿ ತನಿಖೆ ನಡೆಸಬೇಕು. ವೈಚಾರಿಕ ಹೇಳಿಕೆಯಿಂದಾಗಿಯೇ ಈ ಕೃತ್ಯ ನಡೆದಿದ್ದರೆ ಇಡೀ ಸಾರಸ್ವತ ಲೋಕ ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಪ್ರಭುತ್ವವು ಸಾರಸ್ವತ ಲೋಕದಲ್ಲಿ ಉಂಟಾಗಿರುವ ಭಯದ ವಾತಾವರಣವನ್ನು ಹೋಗಲಾಡಿಸಬೇಕು.
- ಪುಂಡಲೀಕ ಹಾಲಂಬಿ,
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT