ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಗಳ ನೆನಕೆಯಲ್ಲಿ...

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ವಿಶ್ವ ನೃತ್ಯ ದಿನವನ್ನು ವಿಭಿನ್ನವಾಗಿ ಆಚರಿಸುವ ಸಲುವಾಗಿ ನೃತ್ಯ ಗುರುಗಳಿಂದ ವಿಶೇಷ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದೆ ಶಾಂಭವಿ ನೃತ್ಯ ಶಾಲೆ. ಈ ಮೂಲಕ ಹಿರಿಯರನ್ನು ಗೌರವಿಸುವ, ಗುರು ಪರಂಪರೆಯ ಮಹತ್ವವನ್ನು ಈಗಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಉಮೇದಿನೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ನೃತ್ಯವೆಂದರೆ ಧ್ಯಾನ. ನೃತ್ಯದಲ್ಲಿ ಪಳಗಿದರಷ್ಟೇ ಸಿದ್ಧಿ ಸಾಧ್ಯ. ಆದರೆ ಹೀಗೆ ಪಳಗಿದ್ದ ಅನುಭವಿಗಳು ವಯಸ್ಸಾಗುತ್ತಿದ್ದಂತೆ ಹಲವು ಕಾರಣಗಳಿಗೆ ವೇದಿಕೆ ಹತ್ತುವುದನ್ನೇ ನಿಲ್ಲಿಸಿರುತ್ತಾರೆ.

ಅಂಥವರನ್ನು ವೇದಿಕೆಗೆ ತರುವ ಪ್ರಯತ್ನ ಮೊದಲ ಬಾರಿಗೆ ವಿಶ್ವ ನೃತ್ಯ ದಿನದಂದು ಪ್ರಸ್ತುತಪಡಿಸಲಾಗುತ್ತಿದೆ’– ವಿಶ್ವ ನೃತ್ಯ ದಿನ  ವಿಶೇಷ ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿರುವ ಶಾಂಭವಿ ನೃತ್ಯ ಶಾಲೆಯ ನಿರ್ದೇಶಕಿ ಹಾಗೂ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಅವರು ಕಾರ್ಯಕ್ರಮವನ್ನು ಪರಿಚಯಿಸಿಕೊಂಡಿದ್ದು ಹೀಗೆ.

ವಿಶ್ವ ನೃತ್ಯ ದಿನ (ಏಪ್ರಿಲ್ 29)ದ ಪ್ರಯುಕ್ತ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಅರವತ್ತು ವಯಸ್ಸು ದಾಟಿದ ಪ್ರಸಿದ್ಧ ನೃತ್ಯ ಗುರುಗಳಿಗೆಂದೇ ವೇದಿಕೆಯನ್ನು ಮೀಸಲಿಡಲಾಗಿದೆ. ಬೆಂಗಳೂರಿನ ಎಂಟು ನೃತ್ಯಗುರುಗಳು ವಿವಿಧ ಪ್ರಕಾರದ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.

ಈ ರೀತಿ ಒಂದು ಆಲೋಚನೆ  ಮೂಡಲು ಕಾರಣವೂ ಇದೆಯಂತೆ. ಆ ಆಲೋಚನೆ ಎಳೆಯನ್ನು ವೈಜಯಂತಿ ಕಾಶಿ ಅವರು  ಬಿಡಿಸಿದ್ದು ಹೀಗೆ: ‘ಈಗ ಎಲ್ಲೆಲ್ಲೂ ಯುವ ನೃತ್ಯಗಾರರು ತಮ್ಮ ಪ್ರತಿಭೆಯಿಂದ ಮಿಂಚುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ. ಆದರೆ ಆ ಪ್ರತಿಭೆಗಳನ್ನು ಮೇಲೆ ತಂದ ಗುರುಗಳು ಮಾತ್ರ ಮೂಲೆ ಗುಂಪಾಗುತ್ತಾರೆ.

ಮೊದಲೆಲ್ಲಾ ನೃತ್ಯ ಗುರು ಎನ್ನಿಸಿಕೊಳ್ಳಲು ಕನಿಷ್ಠ ಇಪ್ಪತ್ತು ವರ್ಷಗಳಾದರೂ ನೃತ್ಯ ಕಾರ್ಯಕ್ರಮಗಳನ್ನು ನೀಡಿರಬೇಕಿತ್ತು. ಆದರೆ ಇತ್ತೀಚೆಗೆ ಆ ನಿಲುವೇ ಬದಲಾಗಿದೆ. ಎಲ್ಲೆಲ್ಲೂ ತಕ್ಷಣದ ಬೆಳವಣಿಗೆಗೇ ಆದ್ಯತೆ. ನೃತ್ಯಗಾರರಿಗೆ ವಯಸ್ಸು ಹೆಚ್ಚುತ್ತಿದ್ದಂತೆ ಅವಕಾಶಗಳೂ ಕಡಿಮೆಯಾಗುತ್ತಾ ಬರುತ್ತದೆ.

ತಮ್ಮ ಸಮಯ, ಖಾಸಗಿ ಜೀವನವನ್ನು ತ್ಯಾಗ ಮಾಡಿದ ಗುರುಗಳು ನೃತ್ಯ ಪ್ರದರ್ಶನದಿಂದ ದೂರವೇ ಉಳಿಯುತ್ತಾರೆ. ಆದ್ದರಿಂದ ಅರವತ್ತು ದಾಟಿದ ನೃತ್ಯ ಗುರುಗಳಿಂದ ಈ ಬಾರಿ ನೃತ್ಯ ಪ್ರದರ್ಶನವನ್ನು ಏರ್ಪಡಿಸುವ ಆಲೋಚನೆ ಹೊಳೆಯಿತು’.

ಗುರು ಶಿಷ್ಯ ಪರಂಪರೆ ಎಂಬ ಕೊಂಡಿಯನ್ನು ಬಲಗೊಳಿಸುವುದೂ ಕಾರ್ಯಕ್ರಮದ ಮುಖ್ಯ ಉದ್ದೇಶ. ಆದ್ದರಿಂದ ಬೆಂಗಳೂರಿನ ನೃತ್ಯ ಪರಂಪರೆಯಲ್ಲಿ 19ನೇ ಶತಮಾನದಿಂದಲೂ ನೃತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಎಂಟು ಸ್ಟಾರ್‌ ಗುರುಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕಲೆಗೆ ವಯಸ್ಸಿನ ಹಂಗಿಲ್ಲ ಎಂಬ ಸಂದೇಶ ಸಾರುವುದೂ ಕಾರ್ಯಕ್ರಮದ ಉದ್ದೇಶವಾಗಿದೆ.

ಭರತನಾಟ್ಯ, ಒಡಿಸ್ಸಿ, ಕಥಕ್, ಮೋಹಿನಿ ಅಟ್ಟಂ ಹೀಗೆ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ಬೆಂಗಳೂರಿನ ಕಲಾವಿದರಾದ ರಾಧಾ ಶ್ರೀಧರ್, ಡಾ. ಚೂಡಾಮಣಿ ನಂದಗೋಪಾಲ್, ಪದ್ಮಾ ಮುರಳಿ, ಗಾಯತ್ರಿ ಕೇಶವನ್ ಭರತನಾಟ್ಯವನ್ನು ಪ್ರದರ್ಶಿಸಲಿದ್ದಾರೆ.

ಶ್ರೀದೇವಿ ಉನ್ನಿ ಅವರು ಮೋಹಿನಿ ಅಟ್ಟಂ, ಕುಚಿಪುಡಿಯನ್ನು ಸುನಂದಾ ದೇವಿ, ಕಥಕ್ ನೃತ್ಯ ಪ್ರಕಾರವನ್ನು ನಯನಾ ಮೋರೇ ಹಾಗೂ ಒಡಿಸ್ಸಿ ನೃತ್ಯ ಪ್ರಕಾರವನ್ನು ಕ್ಷಮಾ ರಾವ್ ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮ ಸಂಜೆ 6.30ಗೆ ಆರಂಭವಾಗಲಿದ್ದು, ಸಂಗೀತಗಾರರು ಹಾಗೂ ಅತಿಥಿಗಳೂ ಹಿರಿಯರೇ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ.

ಕಳೆದುಹೋಗುತ್ತಿರುವ ಗುರು ಪರಂಪರೆ ಕುರಿತು ಯುವ ಕಲಾವಿದರಿಗೆ  ಮನವರಿಕೆ ಮಾಡಿಕೊಡುವ ಜೊತೆಗೆ ಗುರುಗಳಿಗೆ ತಮ್ಮ ಹಿಂದಿನ ದಿನಗಳನ್ನು ನೆನಪಿಸುವ ಹಂಬಲ ಕಾರ್ಯಕ್ರಮದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT