ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜು ನೃತ್ಯ ಪ್ರೀತಿ

Last Updated 27 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಶಾಲಾ ದಿನಗಳಲ್ಲಿ ಜಾನಪದ, ಸಮಕಾಲೀನ ಮುಂತಾದ ಶೈಲಿಯ ನೃತ್ಯಗಳನ್ನು ಮಾಡಿ ಸೈ ಎನಿಸಿಕೊಂಡಿದ್ದ ಹುಡುಗನಿಗೆ ಶಾಸ್ತ್ರೀಯ ನೃತ್ಯಗಳೆಡೆಗೆ ಅದೇನೋ ಒಲವು. ಹೆಜ್ಜೆಗೆಜ್ಜೆಗಳ ನಾದದಲ್ಲಿ ಒಂದಾಗುವ ಬಯಕೆ.

ಆದೇ ಆಸೆಗೆ ಕಟ್ಟುಬಿದ್ದು ನೃತ್ಯಾಭ್ಯಾಸ ಮಾಡಿದ ಗುರುರಾಜು ಅವರದ್ದು ಕೂಚಿಪುಡಿ ಪ್ರಕಾರದಲ್ಲಿ ಜನಪ್ರಿಯ ಹೆಸರು. ಕಳೆದ 12 ವರ್ಷದಿಂದ ನೃತ್ಯ ಕ್ಷೇತ್ರದಲ್ಲಿರುವ ಅವರು ವೈಜಯಂತಿ ಕಾಶಿ ಅವರ ನೆಚ್ಚಿನ ಶಿಷ್ಯ. ಎಂಟನೇ ವರ್ಷದಿಂದಲೇ ಶಾಸ್ತ್ರೀಯ ನೃತ್ಯ ಪ್ರಕಾರ ತನ್ನ ಒಲವು ಎಂದು ಗುರುತಿಸಿಕೊಂಡಿದ್ದ ಗುರುರಾಜ ಅವರು ನೃತ್ಯ ತರಬೇತಿಗೆ ಸೇರಿಕೊಂಡಿದ್ದು ಬಿ.ಎ. ಪದವಿ ಮುಗಿಸಿದ ನಂತರವೇ.

‘ಎಲ್ಲರೂ ಐಟಿ ಉದ್ಯೋಗ ಸೇರಿದಂತೆ ಬಹುದೊಡ್ಡ ಉದ್ಯೋಗಗಳತ್ತ ಮನಸೋಲುತ್ತಾರೆ. ಈ ಕ್ಷೇತ್ರದಲ್ಲಿ ಸಂಪಾದನೆ ಕಮ್ಮಿ ಇರಬಹುದು ಆದರೆ ನನಗೇ ಅರಿವಿಲ್ಲದೆ ನೃತ್ಯದ ಬಗ್ಗೆ ನನ್ನಲ್ಲಿ ಪ್ರೀತಿ ಆವರಿಸಿಕೊಂಡುಬಿಟ್ಟಿತ್ತು. ನೃತ್ಯ ಎನ್ನುವುದು ಹುಡುಗಿಯರಿಗೆ ಮಾತ್ರ ಯಾಕಾಗಬೇಕು, ನಾನೂ ಕಲಿತು ಎಲ್ಲರಿಂದಲೂ ಭಲೇ ಎನ್ನಿಸಿಕೊಳ್ಳಬೇಕು ಎಂದು ಮನಸ್ಸು ಹಾತೊರೆಯಿತು. ಗುರುವಿನ ಹುಡುಕಾಟದಲ್ಲಿದ್ದ ನನಗೆ ವೈಜಯಂತಿ ಕಾಶಿ ಅವರ ಪರಿಚಯವಾಯಿತು. ಅವರು ತುಂಬಿದ ಧೈರ್ಯ, ಆತ್ಮವಿಶ್ವಾಸ ಕನಸನ್ನು ನನಸು ಮಾಡಿಕೊಳ್ಳಲು ಪ್ರೋತ್ಸಾಹ ನೀಡಿತು’ ಎನ್ನುತ್ತಾರೆ ಗುರುರಾಜು.

ನಾಟ್ಯ ಕಲಿಕೆ ಅಷ್ಟು ಸುಲಭವಲ್ಲ. ನಿರಂತರ ಅಭ್ಯಾಸ, ದಣಿವಿನಲ್ಲೂ ನೃತ್ಯ ಮಾಡಬಲ್ಲ ಶಕ್ತಿ, ನಿಷ್ಠೆ ಎಲ್ಲವನ್ನೂ ಮೈಗೂಡಿಸಿಕೊಂಡಿದ್ದ ಅವರು ನೃತ್ಯಾಭ್ಯಾಸ ಪ್ರಾರಂಭಿಸಿದ 12 ವರ್ಷಗಳಲ್ಲಿ ದೇಶ, ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸ್ಪರ್ಧೆಗಳಲ್ಲೂ ಜಯಗಳಿಸಿ ಬೀಗಿದ್ದಾರೆ. ಗುಂಪು ನೃತ್ಯ, ಏಕವ್ಯಕ್ತಿ ನೃತ್ಯಗಳಲ್ಲಿ ಭಾಗವಹಿಸಿರುವ ಇವರು ಇದುವರೆಗೆ 300ಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ದೂರದರ್ಶನದ ಗ್ರೇಡೆಡ್‌ ಕಲಾವಿದರಾಗಿರುವ ಗುರುರಾಜು ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. 2010ರಲ್ಲಿ ನಲಂದ ವಿಶ್ವವಿದ್ಯಾಲಯ ಏರ್ಪಡಿಸಿದ್ದ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. 2011ರಲ್ಲಿ ನೃತ್ಯ ಜ್ಯೋತಿ, 2012ರಲ್ಲಿ ನಾಟ್ಯ ಕುಮಾರ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

‘ಇಂದಿಗೂ ನೃತ್ಯ ಎಂದರೆ ಹೆಣ್ಣುಮಕ್ಕಳಿಗೆ ಮಾತ್ರ. ಅವರು ನೃತ್ಯ ಮಾಡಿದರೆ ಮಾತ್ರ ಜನರು ನೋಡುತ್ತಾರೆ ಎನ್ನುವ ಮನೋಭಾವ ಅನೇಕರಿಗಿದೆ. ಆಯೋಜಕರನೇಕರಲ್ಲೂ ಇಂಥದ್ದೇ ಮನೋಭಾವ ಇರುವುದು ಹಲವಾರು ಬಾರಿ ನನ್ನ ಬೇಸರಕ್ಕೆ ಕಾರಣವಾಗಿದೆ. ಆದರೆ ನೃತ್ಯವನ್ನು ಶಾಸ್ತ್ರೀಯ ರೀತಿಯಲ್ಲಿ, ಶ್ರದ್ಧೆ ಪ್ರೀತಿಯಿಂದ ಕಲಿತು, ಸಮರ್ಥವಾಗಿ ನರ್ತಿಸಬಲ್ಲ ಕಲಾವಿದ ವೇದಿಕೆಗೆ ಮೆರುಗು ನೀಡಬಲ್ಲ. ಹೀಗಾಗಿ ಪುರುಷರಿಗೂ ಈ ಕ್ಷೇತ್ರದಲ್ಲಿ ಉತ್ತಮ ಪ್ರೋತ್ಸಾಹ ನೀಡಬೇಕಿದೆ’ ಎನ್ನುವ ಗುರುರಾಜ ಪೂರ್ಣಕಾಲಿಕವಾಗಿ ನೃತ್ಯಕ್ಷೇತ್ರವನ್ನೇ ವೃತ್ತಿಯಾಗಿಸಿಕೊಂಡವರು.

ಹಾಡಿಗೆ ಕಿವಿಯಾಗಬೇಕು, ತಾಳಕ್ಕೆ ಸರಿಯಾಗಿ ಹೆಜ್ಜೆ ಇಟ್ಟು ನಲಿಯಬೇಕು, ಗೆಜ್ಜೆಯ ಶಬ್ದದೊಂದಿಗೆ ಕುಣಿಯಬೇಕು ಎಂಬ ಆಸೆಯೊಂದನ್ನೇ ಮನಸ್ಸಲ್ಲಿಟ್ಟುಕೊಂಡು ನೃತ್ಯ ಕ್ಷೇತ್ರ ಆರಿಸಿಕೊಂಡ ಇವರಿಗೆ ನಟನಾ ಅವಕಾಶಗಳು ಬಂದಿವೆ. ಆದರೆ ಅತ್ತ ನಡೆದರೆ ನೃತ್ಯದೆಡೆಗಿನ ಸಾಧನೆ ಕುಂಠಿತವಾಗಿಬಿಡುತ್ತದೆ ಎಂಬ ಅಳುಕು ಅವರಿಗಿದೆ. ಹೀಗಾಗಿ ಇದೇ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅವರು ನೃತ್ಯ ಸಂಯೋಜಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಅಪ್ಪ ಅಮ್ಮನಿಂದ ಸಂಪೂರ್ಣ ಬೆಂಬಲ ಇದೆ ಎಂದು ಹಿಗ್ಗುವ ಅವರು ‘ನೃತ್ಯ ಕಲಿಯುವ ನಿಜವಾದ ಆಸಕ್ತಿ ಇದ್ದರೆ ಪ್ರೀತಿಯಿಂದ ಕಲಿಯಿರಿ. ಹುಡುಗ ನೃತ್ಯ ಮಾಡುತ್ತೀಯಾ ಎಂದು ಹೀಯಾಳಿಸುವವರು ಅನೇಕರಿದ್ದಾರೆ. ಅಂಥವುಗಳಿಗೆ ಕಿವಿಗೊಡದೆ ಆಸಕ್ತಿಯ ಕಲೆಯನ್ನು ಶ್ರದ್ಧೆಯಿಂದ ಅಭ್ಯಸಿಸಿ. ಕಲಿಯುವ ಹಂಬಲವೊಂದೇ ನಿಮ್ಮಲ್ಲಿರಲಿ’ ಎನ್ನುವ ಗುರುರಾಜ ನಿರಂತರವಾದ ನೃತ್ಯ ಚಿಂತನೆ ತನ್ನನ್ನು ಬೆಳೆಸಿದೆ ಎನ್ನಲು ಮರೆಯುವುದಿಲ್ಲ.

ಮಹಿಳೆಯರೇ ಇರಲಿ ಅಥವಾ ಪುರುಷರೇ ಇರಲಿ ಈ ಕ್ಷೇತ್ರದಲ್ಲಿರುವವರು ಅಂದವಾದ ಆಂಗಿಕ ಹೊಂದಿರಬೇಕು. ಹೀಗಾಗಿಯೇ ಪ್ರತಿನಿತ್ಯ ಬೆಳಿಗ್ಗೆ ಒಂದು ಗಂಟೆ ಯೋಗಾಭ್ಯಾಸ ಮಾಡುತ್ತಾರೆ. ಕಾರ್ಯಕ್ರಮ ಇರಲಿ ಬಿಡಲಿ ನಿತ್ಯ ಒಂದು ಗಂಟೆ ನೃತ್ಯಾಭ್ಯಾಸ ಮಾಡುತ್ತಾರೆ. ‘ಹುಡುಗ್ರು ದೈಹಿಕವಾಗಿ ಫಿಟ್‌ ಆಗಿರಲೇಬೇಕು. ಹೊಟ್ಟೆಬಿಟ್ಟುಕೊಂಡು ನೃತ್ಯಕ್ಕಿಳಿದೆವೆಂದಾದರೆ ನಮ್ಮ ನೃತ್ಯಾಭಿನಯ ವೀಕ್ಷಿಸುವ ಬದಲಿಗೆ ತಮಾಷೆ ಮಾಡಲು ಪ್ರಾರಂಭಿಸುತ್ತಾರೆ’ ಎಂದು ವಾಸ್ತವವನ್ನು ತೆರೆದಿಡುತ್ತಾರೆ.

***
ಗುರುರಾಜು ಅವರ ನೃತ್ಯ ಕಾರ್ಯಕ್ರಮ ಶನಿವಾರ (ನ.28) ನಗರದಲ್ಲಿ ನಡೆಯಲಿದೆ. ಕಲಾಂಶು ಡಾನ್ಸ್‌ ಅಂಡ್‌ ಮ್ಯೂಸಿಕ್‌ ಇನ್‌ಸ್ಟಿಟ್ಯೂಟ್‌ ಆಯೋಜಿಸಿರುವ ಝೇಂಕಾರ ಉತ್ಸವದಲ್ಲಿ ಅವರು ಕೂಚಿಪುಡಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.  ಸ್ಥಳ: ಕಲಾಚಾವಡಿ, ಕಲ್ಯಾಣ ನಗರ, 2ನೇ ಬ್ಲಾಕ್‌, ನಾಗರಭಾವಿ. ಪ್ರತಿಬಾರಿಯೂ ನೃತ್ಯ, ಆಂಗಿಕ ಹಾಗೂ ಅಭಿನಯಗಳ ಮೂಲಕ ಕಲಾರಸಿಕರ ಮನಸೂರೆಗೊಳ್ಳುವ ಗುರುರಾಜು ಈ ಬಾರಿ ಮೊದಲಿಗೆ ಪೂರ್ವರಂಗ ವಿಧಿ ಪ್ರಸ್ತುತಪಡಿಸಿ ಬ್ರಹ್ಮಾಂಜಲಿ ನಡೆಸಿಕೊಡಲಿದ್ದಾರೆ. ನಂತರ ರಾಮಾಯಣದ ಸನ್ನಿವೇಶ ಅಭಿನಯಿಸಿ ತರಂಗಂನಲ್ಲಿ ಕೃಷ್ಣನ ಕಥೆಗೆ ನೃತ್ಯ ಮಾಡಲಿದ್ದಾರೆ. ಕೂಚಿಪುಡಿಯ ನೃತ್ಯ ಪ್ರಕಾರದಂತೆ ತಟ್ಟೆ ಮೇಲೆ ಈ ನೃತ್ಯವನ್ನು ಅವರು ಪ್ರಸ್ತುತಪಡಿಸಲಿದ್ದಾರೆ. ನಂತರ ಶಿವಸ್ತುತಿ ಮೂಲಕ ಜನರನ್ನು ರಂಜಿಸಲಿದ್ದಾರೆ ಗುರುರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT