ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೆ ಹೋದವರಿಗೆ ಗಾಳ ಹಾಕಿರುವ ಅಭ್ಯರ್ಥಿಗಳು

ಜಾತ್ರೆ, ಮದುವೆಗೆ ಮರಳುವ ಗ್ರಾಮಸ್ಥರಿಗೆ ಎಲ್ಲಿಲ್ಲದ ಆತಿಥ್ಯ
Last Updated 28 ಮೇ 2015, 7:23 IST
ಅಕ್ಷರ ಗಾತ್ರ

ಯಾದಗಿರಿ: ಚುನಾವಣೆಗಳು ಬಂದಾಗಲೊಮ್ಮೆ ತಾಲ್ಲೂಕಿನ ಗುರುಮಠಕಲ್‌ ಭಾಗದಲ್ಲಿ ಅತಿ ಹೆಚ್ಚು ಚಟುವಟಿಕೆಗಳು ನಡೆಯುತ್ತವೆ. ಉಳಿದೆಲ್ಲೆಡೆ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರೆ, ಗುರುಮಠಕಲ್‌ ಭಾಗದಲ್ಲಿ ಮಾತ್ರ ದೂರದ ಬೆಂಗಳೂರು, ಮುಂಬೈ, ಪುಣೆ ಮುಂತಾದ ಮಹಾನಗರಗಳಿಗೆ ಮೊಬೈಲ್‌ ಕರೆಗಳ ಅಬ್ಬರ ಹೆಚ್ಚಾಗುತ್ತದೆ.

ಹೌದು, ಗುರುಮಠಕಲ್‌ ಮತಕ್ಷೇತ್ರದಲ್ಲಿನ ಬಹುತೇಕ ಮತದಾರರು ದೊಡ್ಡ ನಗರಗಳಿಗೆ ಗುಳೆ ಹೋಗುತ್ತಾರೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು, ಮತದಾರ ಪಟ್ಟಿಗಿಂತ ಮೊದಲು, ಗುಳೆ ಹೋದವರ ವಿಳಾಸ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸುತ್ತಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಭ್ಯರ್ಥಿಗಳಿಂದ ಮೊಬೈಲ್‌ ಕರೆಗಳು ಹೆಚ್ಚಾಗುತ್ತವೆ. ಮರಳಿ ಊರಿಗೆ ಬಂದು ಮತ ಹಾಕುವಂತೆ ಮನವಿಗಳ ಮಹಾಪೂರವೇ ಹರಿಯುತ್ತದೆ. ವಿಧಾನಸಭೆ, ಲೋಕಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಯಾವುದೇ ಚುನಾವಣೆಗಳು ಇರಲಿ, ಇಲ್ಲಿ ಗುಳೆ ಹೋದವರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಗುರುಮಠಕಲ್‌ ಮತಕ್ಷೇತ್ರದ ಶೇ 45 ರಷ್ಟು ಮತದಾರರು ಬೇರೆ ಪಟ್ಟಣಗಳಲ್ಲಿಯೇ ವಾಸಿಸುತ್ತಿದ್ದಾರೆ. ‘ಗುಳೆ ಹೋದವರ ಮತದಾರ ಗುರುತಿನ ಚೀಟಿಗಳು ಆಯಾ ನಗರದಲ್ಲಿ ಇಲ್ಲ. ಗುಳೆ ಹೋಗುವ ಎಲ್ಲ ಜನರ ಹೆಸರುಗಳು ಗುರುಮಠಕಲ್‌ ಕ್ಷೇತ್ರದ ಮತದಾರರ ಪಟ್ಟಿಯಲ್ಲಿಯೇ ಇವೆ. ಹೀಗಾಗಿ ಮತ ಚಲಾಯಿಸುವುದಕ್ಕೆ ಅವರು ಬರಲೇಬೇಕು.

ಹಾಗಂತ ಅವರು ಸುಮ್ಮನೆ ಬಂದು ಮತ ಹಾಕುವುದಿಲ್ಲ. ಅವರನ್ನು ಕರೆತಂದು ಮರಳಿ ಕಳುಹಿಸುವ ಜವಾಬ್ದಾರಿ ಹೊತ್ತುಕೊಳ್ಳುವ ಅಭ್ಯರ್ಥಿಗಳಿಗೆ ಮಾತ್ರ ಅವರು ಆದ್ಯತೆ ನೀಡುತ್ತಾರೆ. ಇದಕ್ಕಾಗಿಯೇ ಈ ಭಾಗದ ಅಭ್ಯರ್ಥಿಗಳು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು.

ಅಭ್ಯರ್ಥಿಗಳ ಖರ್ಚು ತಗ್ಗಿಸಿದ ಜಾತ್ರೆ, ಮದುವೆ: ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು, ಇದೀಗ ಜಾತ್ರೆ ಹಾಗೂ ಮದುವೆಯ ಸಂಭ್ರಮವೂ ಹೆಚ್ಚಾಗಿದೆ. ಹೀಗಾಗಿ ಗುಳೆ ಹೋಗಿರುವ ಬಹುತೇಕ ಜನರು ಕುಟುಂಬದೊಂದಿಗೆ ಸ್ವಗ್ರಾಮಗಳಿಗೆ ಮರಳುತ್ತಾರೆ. ಹೀಗಾಗಿ ಅಭ್ಯರ್ಥಿಗಳಿಗೆ ಗುಳೆ ಹೋದವರನ್ನು ಕರೆತರುವ ಖರ್ಚು ಕಡಿಮೆಯಾಗಿದೆ.

ಬೇಸಿಗೆಯಲ್ಲಿ ಜಾತ್ರೆ, ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳು ಈ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತವೆ. ಎಷ್ಟೇ ತೊಂದರೆ ಇದ್ದರೂ ಗುಳೆ ಹೋದವರು ಈ ಎಲ್ಲ ಕಾರ್ಯಕ್ರಮಗಳಿಗೆ ಬಂದೇ ಬರುತ್ತಾರೆ. ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿರುವುದರಿಂದ ಇನ್ನೆರಡು ದಿನ ಹೆಚ್ಚಿಗೆ ಸ್ವಗ್ರಾಮದಲ್ಲಿ ಕಳೆಯಲು ಅವಕಾಶ ಸಿಕ್ಕಂತಾಗಿದೆ. ಇದರಿಂದ ಅಭ್ಯರ್ಥಿಗಳೂ ಸುಲಭವಾಗಿ ಈ ಜನರನ್ನು ಸಂಪರ್ಕಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಜನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT