ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಸಾಲ ಪಡೆಯಲು ಸಕಾಲ

Last Updated 29 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ ಎಂಬ ದಾಸರ ಪದವನ್ನು ದೇಶದ ಬ್ಯಾಂಕ್‌ಗಳೆಲ್ಲವೂ ಈಗ ‘ಮನೆ ಸಿಕ್ಕರೆ ಕೊಳ್ಳಿರೋ’ ಎಂದು ಹಾಡುತ್ತಾ ಗ್ರಾಹಕರನ್ನು ಆಕರ್ಷಿಸಲು ಯತ್ನಿಸುತ್ತಿವೆ.

ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ ಇದು ಸಕಾಲವಾಗಿದೆ. ಏಕೆಂದರೆ ಬ್ಯಾಂಕ್‌ಗಳಲ್ಲಿನ ಗೃಹಸಾಲದ ಬಡ್ಡಿದರ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಜನವರಿಯಿಂದೀಚೆಗೆ ನಡೆಸಿದ ಹಣಕಾಸು ನೀತಿ ಪರಾಮರ್ಶೆಗಳ ಅವಧಿಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮೂರು ಬಾರಿ ಬಡ್ಡಿದರ ಕಡಿತಗೊಳಿಸಿದೆ. ಪ್ರತಿ ಬಾರಿ ಶೇ 0.25ರಂತೆ ಈ ವರ್ಷದಲ್ಲಿಯೇ ಈವರೆಗೆ ಒಟ್ಟು ಶೇ 0.75ರಷ್ಟು ಬಡ್ಡಿದರವನ್ನು ಕಡಿತ ಮಾಡಿದೆ.

ಆರ್‌ಬಿಐನಿಂದ ದೊರೆಯುವ ಸಾಲದ ಮೇಲಿನ ಬಡ್ಡಿಯಲ್ಲಿ ಶೇ 0.75ರಷ್ಟು ಇಳಿಕೆ ಆಗಿರುವುದರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಬಡ್ಡಿದರವನ್ನು ತಗ್ಗಿಸಿವೆ. ಶೇ 0.75ರಷ್ಟು ಅಲ್ಲವಾದರೂ ಕನಿಷ್ಠ ಶೇ 0.25, ಗರಿಷ್ಠ ಶೇ 0.50ರಷ್ಟು ಬಡ್ಡಿ ಇಳಿಕೆ ಮಾಡಿವೆ. ಇದರಿಂದಾಗಿ ಗೃಹಸಾಲ, ವಾಹನ ಸಾಲ ಸೇರಿದಂತೆ ಎಲ್ಲ ಸಾಲಗಳ ಮೇಲಿನ ಬಡ್ಡಿದರದಲ್ಲಿ ಸಾಕಷ್ಟು ಇಳಿಕೆಯಾಗಿದೆ. ಅದರಲ್ಲೂ ಗೃಹ ಸಾಲ ಪಡೆಯಲಂತೂ ಇದು ಅತ್ಯಂತ ಸೂಕ್ತ ಸಮಯವಾಗಿದೆ.

ಗೃಹಿಣಿಗೇ ಅಗ್ಗದ ಗೃಹಸಾಲ!
ಇಡೀ ಗೃಹಸಾಲ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ), ಶೇ 9.75ರಷ್ಟು ಬಡ್ಡಿದರ ವಿಧಿಸುತ್ತಿದೆ. ಇದು ಬ್ಯಾಂಕಿಂಗ್‌ ವಲಯದಲ್ಲಿಯೇ ಅತ್ಯಂತ ಕಡಿಮೆ ಬಡ್ಡಿದರದ ಗೃಹಸಾಲ ಎನಿಸಿಕೊಂಡಿದೆ. ಮಹಿಳೆಯರಿಗಾದರೆ ಶೇ 9.70 ಬಡ್ಡಿದರ ಇದೆ.

ಇನ್ನು ಕೆನರಾ ಬ್ಯಾಂಕ್‌ ಸಹ ಸಾಲಗಳ ಮೇಲಿನ ಮೂಲ ಬಡ್ಡಿದರವನ್ನು ಶೇ 9.90ಕ್ಕೆ ತಗ್ಗಿಸಿದೆ. ಈ ಮೊದಲು ಇದು ಶೇ 10.20ರಷ್ಟು ಇತ್ತು. ಮೂಲ ಬಡ್ಡಿದರದಲ್ಲಿಯೇ ಶೇ 0.30ರಷ್ಟು ಇಳಿಕೆ ಆಗಿರುವುದರಿಂದ ಕೆನರಾ ಬ್ಯಾಂಕ್‌ನ ಎಲ್ಲ ಸಾಲಗಳ ಬಡ್ಡಿದರವೂ ಕಡಿಮೆ ಆಗಿದೆ. ಗೃಹಸಾಲದ ಬಡ್ಡಿದರ ಶೇ 10ಕ್ಕೆ ಇಳಿಕೆಯಾಗಿದೆ. ‘ಸ್ವಂತ ಮನೆ’ ಹೊಂದಬೇಕು ಎಂದುಕೊಳ್ಳುತ್ತಿ ದ್ದವರಿಗೆ ಕನಸನ್ನು ಸುಲಭದಲ್ಲಿ ನನಸು ಮಾಡಿಕೊಳ್ಳಲು ಅವಕಾಶವಾಗಿದೆ.

ಬಹುತೇಕ ಎಲ್ಲ ಬ್ಯಾಂಕ್‌ಗಳೂ ಪರ್ಸನಲ್‌ ಫೈನಾನ್ಸ್‌ ವಿಭಾಗದಲ್ಲಿ ಗೃಹ ಮತ್ತು ವಾಹನ ಸಾಲ ವಿತರಣೆಗೇ ಆದ್ಯತೆ ನೀಡುತ್ತಿವೆ. ಹಾಗಾಗಿ ಬಡ್ಡಿದರವನ್ನು ಆದಷ್ಟೂ ಕಡಿಮೆ ಮಟ್ಟಕ್ಕಿಳಿಸಿವೆ. ಮಾರುಕಟ್ಟೆ ಪೈಪೋಟಿಯಿಂದಾಗಿ ಬ್ಯಾಂಕ್‌ಗಳ ಲ್ಲಿನ ಬಡ್ಡಿದರದಲ್ಲಿ ಗಣನೀಯವಾಗಿ ಇಳಿಕೆ ಆಗಿದೆ. ಗೃಹಸಾಲದ ಸಮಾನ ಮಾಸಿಕ ಕಂತು(ಇಎಂಐ) ₹859ರಷ್ಟು ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದು ₹1 ಲಕ್ಷ ಗೃಹಸಾಲಕ್ಕೆ 30 ವರ್ಷಗಳ ಅವಧಿಗೆ ಶೇ 9.75ರ ಬಡ್ಡಿದರದಲ್ಲಿ ಪ್ರತಿ ತಿಂಗಳೂ ಕಟ್ಟಬೇಕಾದ ಅಸಲು ಮತ್ತು ಬಡ್ಡಿಯ ಕಂತು ಮೊತ್ತ.

ಗೃಹಸಾಲ ಪಡೆಯುವುದು ಹೇಗೆ?
ಹಾಗೆಂದು ಬ್ಯಾಂಕ್‌ ಪ್ರವೇಶಿಸುತ್ತಿದ್ದಂತೆಯೇ ಗೃಹಸಾಲ  ಸಿಕ್ಕಿ ಬಿಡುವುದಿಲ್ಲ. ಸಾಲ ಪಡೆಯಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳ ಬೇಕಿದೆ. ಸಮೀಪದ ಬ್ಯಾಂಕ್‌ ಶಾಖೆಗೆ ತೆರಳಿ ‘ನನಗೆ ಗೃಹಸಾಲ ಲಭ್ಯವಿದೆಯೆ? ಎಷ್ಟು ಮೊತ್ತ, ಎಷ್ಟು ವರ್ಷಗಳ ಅವಧಿಗೆ ಸಿಗಬಹುದು?’ ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕು. ಬ್ಯಾಂಕ್‌ ನವರು ಕೇಳುವ ದಾಖಲೆ ಪತ್ರಗಳನ್ನು ಹೊಂದಿಸಿಕೊಳ್ಳಬೇಕು.

ಬ್ಯಾಂಕ್‌ನಿಂದ ಗೃಹಸಾಲ ಪಡೆಯಲು ನಿಮ್ಮಲ್ಲಿ ಕೆಲವು ಅರ್ಹತೆಗಳೂ ಇರಬೇಕು. ಗೃಹಸಾಲ ಪಡೆಯಲು ಬಯಸುವವರ ವಯಸ್ಸು 21ರಿಂದ 65 ವರ್ಷದ ವಯೋಮಿತಿಯಲ್ಲಿರಬೇಕು. 75 ವರ್ಷ ತುಂಬುವುದರೊಳಗೆ ಗೃಹಸಾಲ ಮರುಪಾವತಿ ಪೂರ್ಣಗೊಳ್ಳಬೇಕು.

ವೇತನದಾರರಾಗಿದ್ದರೆ 75 ತಿಂಗಳಲ್ಲಿ ಪಡೆಯುವ ಒಟ್ಟು ವೇತನದಷ್ಟು ಗರಿಷ್ಠ  ಮೊತ್ತವನ್ನು ಗೃಹಸಾಲವಾಗಿ ಪಡೆಯ ಬಹುದು. ಹೆಚ್ಚಿನ ಮೊತ್ತ ಬೇಕಿದ್ದರೆ ಅರ್ಜಿದಾರರು ಪತ್ನಿ/ಪತಿ, ಮಕ್ಕಳು ಗಳಿಸುವ  ಆದಾಯವನ್ನು ಆಧರಿಸಿ ಹೆಚ್ಚು ಗೃಹಸಾಲ ಪಡೆಯಬಹುದು. ನಿರ್ಮಿಸಲಿರುವ ಮನೆಯನ್ನು ಬಾಡಿಗೆ ನೀಡಿದರೆ ಅದರಿಂದ ಬರುವ ಆದಾಯವನ್ನೂ ಉಲ್ಲೇಖಿಸಿ ಗೃಹಸಾಲ ಮೊತ್ತ ಹೆಚ್ಚಿಸುವಂತೆ ಬ್ಯಾಂಕ್‌ಗೆ ಮನವಿ ಮಾಡಬಹುದು.

ನಿವೇಶನ/ಮನೆ ಖರೀದಿಸುವುದಾದರೆ ನೋಂದಣಿ ಶುಲ್ಕ, ಛಾಪಾ ಕಾಗದ ಶುಲ್ಕ, ತೆರಿಗೆ ಮೊದಲಾದ ಆಡಳಿತಾತ್ಮಕ ವೆಚ್ಚಗಳನ್ನು ಅರ್ಜಿದಾರರೇ ಭರಿಸಬೇಕು. ಖರೀದಿಸುವ ಸ್ಥಿರಾಸ್ತಿಯ ಒಟ್ಟು ಮೌಲ್ಯದ ಅಥವಾ ನಿರ್ಮಿಸಲಿರುವ ಮನೆಯ ಅಂದಾಜು ವೆಚ್ಚದ ಶೇ 20ರಷ್ಟು ಮೊತ್ತವನ್ನು ಅರ್ಜಿದಾರರೇ ಹೊಂದಿಸಿಕೊಳ್ಳಬೇಕು.

ಏನೇನು ದಾಖಲೆ ಪತ್ರ ಬೇಕು?
*ಅರ್ಜಿದಾರರ ಪಾಸ್‌ಪೋರ್ಟ್‌ ಅಳತೆಯ ಎರಡು ಭಾವಚಿತ್ರ

*ಗುರುತು ದೃಢೀಕರಣ ದಾಖಲೆ (ಸರ್ಕಾರಿ ಸಂಸ್ಥೆಗಳಿಂದ ಪಡೆದ ಗುರುತಿನ ಚೀಟಿ/ಪಾಸ್‌ಪೋರ್ಟ್‌/ಮತದಾರರ ಗುರುತಿನ ಚೀಟಿ/ವಾಹನ ಚಾಲನಾ ಪರವಾನಗಿ ಪತ್ರ/ಪ್ಯಾನ್‌ಕಾರ್ಡ್/ಆಧಾರ್‌)

*ನಿವಾಸ ದೃಢೀಕರಣ ಪತ್ರ (ಕಂದಾಯದ ರಶೀತಿ/ದೂರವಾಣಿ ಅಥವಾ ವಿದ್ಯುತ್‌ ಬಿಲ್‌)

*ಅರ್ಜಿದಾರರು ಮತ್ತು ಜಾಮೀನುದಾರರು ಬ್ಯಾಂಕ್‌ನಲ್ಲಿ ಖಾತೆ ಹೊಂದಿ ಸೂಕ್ತ ರೀತಿಯಲ್ಲಿ ವಹಿವಾಟು ನಡೆಸುತ್ತಿರುವುದಕ್ಕೆ ದಾಖಲೆಯಾಗಿ ಕಳೆದ ಒಂದು ವರ್ಷ ಅವಧಿಯ ಬ್ಯಾಂಕ್‌ ವಹಿವಾಟು ದಾಖಲೆಯ ಪ್ರತಿ

*ಅರ್ಜಿದಾರ ಮತ್ತು ಜಾಮೀನುದಾರರು ಇತ್ತೀಚಿನ ಎರಡು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ಐ.ಟಿ ರಿಟರ್ನ್‌ (ವಾರ್ಷಿಕ ಲೆಕ್ಕಪತ್ರ) ಪ್ರತಿ ಹಾಗೂ ಇತ್ತೀಚಿನ ಮೂರು ತಿಂಗಳ ವೇತನದ ಚೀಟಿ (ವೇತನದಾರರಾಗಿದ್ದರೆ)

*ವೃತ್ತಿನಿರತರು, ಸ್ವಉದ್ಯೋಗಿಗಳು ಅಥವಾ ವಾಣಿಜ್ಯ ಚಟುವಟಿಕೆಯಲ್ಲಿ ಇರುವರಾದರೆ ಕಳೆದ ಎರಡು ವರ್ಷಗಳ ಆದಾಯವನ್ನು ದೃಢೀಕರಿಸುವ ಲಾಭ, ನಷ್ಟದ ವಿವರ ವರದಿ ಅಥವಾ ಬ್ಯಾಲೆನ್ಸ್‌ ಷೀಟ್‌ (ಚಾರ್ಟರ್ಡ್‌ ಅಕೌಂಟೆಂಟ್‌ ಅವರಿಂದ  ದೃಢೀಕೃತವಾಗಿರ ಬೇಕು).

*ವಾರ್ಷಿಕ ಆದಾಯ ಲೆಕ್ಕಹಾಕಿ ತೆರಿಗೆ ಸಲ್ಲಿಸಿದ ವಿವರ/ ಆದಾಯ ತೆರಿಗೆ ಲೆಕ್ಕಪತ್ರವಾದರೆ ಕಳೆದ ಮೂರು ವರ್ಷಗಳದ್ದು ಸಲ್ಲಿಸಬೇಕು.

* ಗೃಹಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವವರು ಕೃಷಿಕ ರಾಗಿದ್ದರೆ ಕಂದಾಯ ಇಲಾಖೆಯಿಂದ ಆದಾಯ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸಬೇಕು.

*ಉಳಿದಂತೆ ಸ್ಥಿರಾಸ್ಥಿಗೆ ಸಂಬಂಧಿಸಿದಂತೆ ಕೆಲವು ದಾಖಲೆ ಪತ್ರಗಳನ್ನು ಬ್ಯಾಂಕ್‌ಗೆ ಸಲ್ಲಿಸಬೇಕು. ನಿವೇಶನ/ಮನೆ ಖರೀದಿಗೆ ಸಂಬಂಧಿಸಿದಂತೆ ಖರೀದಿಯ ಮೂಲ ದಾಖಲೆಪತ್ರ. ಪಿತ್ರಾರ್ಜಿತವಾಗಿ ಬಂದ ನಿವೇಶನ/ಮನೆ ಆಗಿದ್ದರೆ ಆಸ್ತಿ ವಿಭಜನೆ ದಾಖಲೆ, ಗಿಫ್ಟ್‌ ಡೀಡ್‌ ಮೊದಲಾದ ದಾಖಲೆ ಪತ್ರಗಳ ಮೂಲ ಹಾಗೂ ನಕಲು ಪ್ರತಿ ಸಲ್ಲಿಸಬೇಕು. ಭೂಪರಿವರ್ತನೆ ಪ್ರದೇಶದಲ್ಲಿನ ನಿವೇಶನವಾದರೆ ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲು ಪಡೆದ ಅನುಮತಿ ಪತ್ರದ ಪ್ರತಿ ಲಗತ್ತಿಸಬೇಕು. ಆಸ್ತಿಯ ಮೇಲಿನ ಋಣಭಾರ ಪತ್ರವನ್ನು ಕಳೆದ 13 ವರ್ಷಗಳ ಅವಧಿಗೆ ಉಪ ನೋಂದಣಾಧಿಕಾರಿ ಕಚೇರಿಯಿಂದ ಪಡೆದು ಸಲ್ಲಿಸಬೇಕು.

*ನಿವೇಶನ/ಮನೆ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿ ಮಾರಾಟ ಒಪ್ಪಂದ ಕರಾರು ಪತ್ರದ ನಕಲು ಪ್ರತಿ, ಇತ್ತೀಚೆಗೆ ಕಂದಾಯ ಪಾವತಿಸಿದ ರಶೀದಿಯ (ಮುಂಗಡ ತೆರಿಗೆ, ಸ್ಥಿರಾಸ್ತಿ ತೆರಿಗೆ, ಮುನ್ಸಿಪಲ್‌ ಟ್ಯಾಕ್ಸ್‌ ಇತ್ಯಾದಿ) ನಕಲು ಪ್ರತಿ ಸಲ್ಲಿಸಬೇಕು.

*ಖಾಸಗಿ ಬಡಾವಣೆ/ ವಸತಿ ಸಂಕೀರ್ಣವಾಗಿದ್ದರೆ ನಿರ್ಮಾಣ ಸಂಸ್ಥೆ ಅಥವಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಪಡೆದ ನಿರಕ್ಷೇಪಣಾ ಪತ್ರ ಅಥವಾ ಷೇರುಪತ್ರದ ನಕಲು ಪ್ರತಿ.

*ಮನೆ ನಿರ್ಮಾಣ ಮಾಡುವುದಿದ್ದರೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತ ಸಂಸ್ಥೆಯಿಂದ ಪಡೆದಿರುವ ಅನುಮತಿ ಪತ್ರ, ಕಟ್ಟಡದ ನೀಲನಕ್ಷೆ/ ಅನುಮೋದನೆಗೊಂಡಿರುವ ಕಟ್ಟಡದ ಯೋಜನೆ/ವಸತಿ ಸಂಕೀರ್ಣವಾಗಿದ್ದರೆ ಅದರ ಕಟ್ಟಡದ ನೀಲನಕ್ಷೆ ಹಾಗೂ ಕಟ್ಟಡ ನಿರ್ಮಾಣದ ಅಂದಾಜು ವೆಚ್ಚದ ವಿವರ ವರದಿಯ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಸಾಲದ ಮೊತ್ತ– ಅವಧಿ?
*ಬ್ಯಾಂಕ್‌ನಿಂದ ಗರಿಷ್ಠ 30 ವರ್ಷಗಳಿಗೆ ಗೃಹಸಾಲ ಪಡೆಯಬಹುದು. ಮನೆ ಕಟ್ಟಲು ಸಾಲ ಪಡೆದಿದ್ದರೆ ಮುಂದಿನ ತಿಂಗಳಿನಿಂದಲೇ ಸಾಲದ ಕಂತು (ಇಎಂಐ) ಪಾವತಿ ಆರಂಭಿಸಬೇಕಿಲ್ಲ. ಅದಕ್ಕೆ 18 ತಿಂಗಳುಗಳವರೆಗೂ ರಜೆಯ ಪ್ರಯೋಜನ ಇರುತ್ತದೆ.

*ನಿಗದಿತ ಅವಧಿಗೂ ಮುನ್ನ ಸಾಲ ತೀರಿಸಲು ಅವಕಾಶವಿದೆ. ಅದಕ್ಕಾಗಿ ಯಾವುದೇ ದಂಡ ವಿಧಿಸಲಾಗುವುದಿಲ್ಲ.

*ಸಾಲದ ಅರ್ಜಿ ಪರಿಶೀಲನೆ ಮತ್ತು ಸಾಲ ಮಂಜೂರು ಪ್ರಕ್ರಿಯೆಗೆ ಸಾಲದ ಮೊತ್ತದ ಶೇ 0.25ರಷ್ಟು ಶುಲ್ಕವನ್ನು (ಗರಿಷ್ಠ ₹10 ಸಾವಿರ) ಬ್ಯಾಂಕ್‌ ಅರ್ಜಿದಾರರಿಂದ ಕಟ್ಟಿಸಿಕೊಳ್ಳುತ್ತದೆ.

*ಯಾವುದಕ್ಕಾಗಿ ಸಾಲ ಪಡೆಯಲಾಗಿದೆಯೋ ಆ ಮನೆ/ನಿವೇಶನ/ಫ್ಲ್ಯಾಟನ್ನು ಬ್ಯಾಂಕ್‌ಗೆ ಅಡಮಾನ ಮಾಡಬೇಕಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT