ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದು ಬಂದರು, ಭರವಸೆಯ ಬೆಳಕಾದರು...

Last Updated 29 ನವೆಂಬರ್ 2015, 19:47 IST
ಅಕ್ಷರ ಗಾತ್ರ

ಭಾರತದ ಮಹಿಳೆಯರು ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದು, ಜೂನಿಯರ್‌ ತಂಡದವರು ಏಷ್ಯಾಕಪ್‌ ಜಯಿಸಿದ್ದು, ಪುರುಷರ ತಂಡದ ಉತ್ತಮ ಪ್ರದರ್ಶನ, ಹಾಕಿ ಇಂಡಿಯಾ ಲೀಗ್‌ನ ಪ್ರಖ್ಯಾತಿ... ಇವೆಲ್ಲವೂ ಭಾರತದ ಹಾಕಿಯಲ್ಲಿ ಮತ್ತೆ ಅಪೂರ್ವ ಕ್ಷಣಗಳು ಸೃಷ್ಟಿಯಾಗುತ್ತಿರುವುದಕ್ಕೆ ಸಾಕ್ಷಿ. ಅದರಲ್ಲೂ ಪಾಕ್‌ ತಂಡವನ್ನು ಮಣಿಸಿ ಜೂನಿಯರ್‌ ಏಷ್ಯಾಕಪ್‌ ಜಯಿಸಿದ ಹುಡುಗರು ಭಾರಿ ಭರವಸೆ ಮೂಡಿಸಿದ್ದಾರೆ. ಆ ಸಾಧನೆಯ ಮೇಲೆ ಕೆ. ಓಂಕಾರ ಮೂರ್ತಿ ಬೆಳಕು ಚೆಲ್ಲಿದ್ದಾರೆ.

ಇದೊಂದು ಅಪೂರ್ವ ಸಾಧನೆ. ಆದರೆ, ಖುಷಿ ಜೊತೆ ಬೇಸರವೂ ಆಗುತ್ತಿದೆ. ಏಕೆಂದರೆ ಫೈನಲ್‌ನಲ್ಲಿ ನಮ್ಮ ಹುಡುಗರು ಪಾಕಿಸ್ತಾನ ತಂಡವನ್ನು ಸೋಲಿಸಿ ಏಷ್ಯಾಕಪ್‌ ಗೆದ್ದಿದ್ದು ದೊಡ್ಡ ಸುದ್ದಿಯೇ ಆಗಲಿಲ್ಲ. ಕೆಲ ಪತ್ರಿಕೆಗಳು ಹಾಗೂ ಸುದ್ದಿ ವಾಹಿನಿಗಳಲ್ಲಿ ಆಟಗಾರರು ಟ್ರೋಫಿ ಎತ್ತಿ ಹಿಡಿದ ಕ್ಷಣದ ಫೋಟೊವೇ ಬರಲಿಲ್ಲ. ಹೀಗಾದರೆ ಈ ಹುಡುಗರಿಗೆ ಸ್ಫೂರ್ತಿ ನೀಡುವವರಾರು, ಮತ್ತೊಂದು ಟೂರ್ನಿಯಲ್ಲಿ ಗೆಲ್ಲಬೇಕೆಂಬ ಹುಮ್ಮಸ್ಸು ಬರುವುದಾದರೂ ಹೇಗೆ?

–ಹೀಗೆಂದು ಬೇಸರದಿಂದಲೇ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್‌ ಪಿಳ್ಳೈ. ಮಲೇಷ್ಯಾದ ಕುಂಟಾನದಲ್ಲಿ ಜೂನಿಯರ್‌ ತಂಡದವರು ಏಷ್ಯಾಕಪ್‌ ಜಯಿಸುವ ಮೂಲಕ ಅದ್ಭುತ ಸಾಧನೆ ತೋರಿರುವುದು ಹಾಕಿಯಲ್ಲಿ ಭಾರತದ  ಭವಿಷ್ಯದ ಬಗ್ಗೆ ಭಾರಿ ಭರವಸೆ ಸೃಷ್ಟಿಸಿದೆ. ಆದರೆ, ಇದಕ್ಕೆ ಕಾರಣವಾಗಿರುವ ಆಟಗಾರರಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂಬುದು ಪಿಳ್ಳೈ ಅವರ ನೋವು. ಅವರ ಮಾತು ನಿಜ, ಜೂನಿಯರ್‌ ತಂಡದ ಸಾಧನೆಗೆ ಶಹಬ್ಬಾಸ್‌ಗಿರಿಯೂ ಸಿಗಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳೂ ಹರಿದಾಡಲಿಲ್ಲ!

ಫೈನಲ್‌ನಲ್ಲಿ 6–2 ಗೋಲುಗಳಿಂದ ಪಾಕ್‌ ತಂಡವನ್ನು ಮಣಿಸಿದ ಭಾರತದ ಹುಡುಗರು ಅಜೇಯವಾಗಿ ಟ್ರೋಫಿ ಎತ್ತಿ ಹಿಡಿದರು. ಅದರಲ್ಲೂ ಡ್ರ್ಯಾಗ್‌ ಫ್ಲಿಕರ್‌ ಹರ್ಮನ್‌ಪ್ರೀತ್‌ ಸಿಂಗ್ ಅವರು ಈ ಟೂರ್ನಿಯಲ್ಲಿ 15 ಗೋಲು ಗಳಿಸುವ ಮೂಲಕ ಭರವಸೆಯ ಬೆಳಕಾಗಿ ಹೊರಹೊಮ್ಮಿದರು. ಕಳೆದ ತಿಂಗಳು ಈ ತಂಡದವರು ಸುಲ್ತಾನ್‌ ಜೊಹಾರ್‌ ಕಪ್ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಗಿದ್ದರು. ವೊಲ್ವೊ ಇಂಟರ್‌ನ್ಯಾಷನಲ್‌ ಟೂರ್ನಿಯಲ್ಲಿ 4ನೇ ಸ್ಥಾನ ಪಡೆದಿದ್ದರು.

‘ಉತ್ತಮ ಆಡಳಿತ, ಉತ್ತಮ ಕೋಚ್‌ ಇದ್ದರೆ ನಾವಂದುಕೊಂಡ ಗುರಿಯನ್ನು ಸಾಧಿಸಬಹುದು. ಯಾವ ತಂಡದ ಎದುರು ಗೆದ್ದಿದ್ದಾರೆ ಎಂದು ವಿಶ್ಲೇಷಿಸುವ ಅಗತ್ಯವಿಲ್ಲ. ಏಕೆಂದರೆ, ಈಗಿನ ಜೂನಿಯರ್‌ ತಂಡದ ಆಟದ ವೈಖರಿ ನನಗೆ ಖುಷಿ ನೀಡಿದೆ. ಪ್ರದರ್ಶನ ಮಟ್ಟದಲ್ಲಿ ಸ್ಥಿರತೆ ಕಾಯ್ದುಕೊಂಡರೆ ಇನ್ನು 3–4 ವರ್ಷಗಳಲ್ಲಿ ಭಾರತ ಮತ್ತೆ ವಿಶ್ವ ಹಾಕಿಯಲ್ಲಿ ಪ್ರಜ್ವಲಿಸಬಹುದು’ ಎನ್ನುತ್ತಾರೆ ಒಲಿಂಪಿಯನ್‌ ಧನರಾಜ್‌.

‘ಜೂನಿಯರ್‌ ವಿಶ್ವಕಪ್‌ ಮುಂದಿನ ವರ್ಷ ಭಾರತದಲ್ಲಿಯೇ ನಡೆಯುತ್ತಿದೆ. ಹಾಗಾಗಿ ನಮಗಿದು ಸುಂದರ ಅವಕಾಶ. ಆದರೆ, ಈಗ ತಂಡದಲ್ಲಿರುವ ಆಟಗಾರರು ಕೆಲವೇ ರಾಜ್ಯಗಳಿಂದ ಬಂದವರು. ಈ ಬಗ್ಗೆ ಹಾಕಿ ಇಂಡಿಯಾ ಗಮನ ಹರಿಸಬೇಕು. ಅದಕ್ಕಾಗಿ ಪ್ರತಿ ರಾಜ್ಯದಲ್ಲಿ ಅಕಾಡೆಮಿ ಸ್ಥಾಪಿಸಿ ಹರಿಯಾಣ ಮಾದರಿಯಲ್ಲಿ ಹಾಕಿ ಅಭಿವೃದ್ಧಿಗೆ ಮುಂದಾಗಬೇಕು’ ಎಂಬುದು ಅವರ ಸಲಹೆ.

ಜೂನಿಯರ್ ತಂಡದ ಈಗಿನ ಸಾಧನೆ ಭಾರತದ ಹಾಕಿಗೆ ನವಚೈತನ್ಯ ತುಂಬಿದೆ. ಬಹಳ ವರ್ಷಗಳ ಬಳಿಕ ಮಹಿಳಾ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರೆ ಇತ್ತ ಪುರುಷರ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಹಲವು ವಿವಾದಗಳ ಬಳಿಕ ಸದ್ಯ ನಿರಾಳವಾಗಿರುವ ಹಾಕಿ ಇಂಡಿಯಾದಿಂದಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕೆಲವರ್ಷಗಳಿಂದ ಭಾರತದ ಕಳಪೆ ಪ್ರದರ್ಶನಕ್ಕೆ ಮುಖ್ಯ ಕಾರಣವಾಗಿದ್ದೇ ಆಡಳಿತದಲ್ಲಿನ ತಿಕ್ಕಾಟ. ಆದರೆ, ಈಗಿನ ಆಡಳಿತವು ಹಾಕಿ ಸುಧಾರಣೆಗೆ ಹಲವು ಯೋಜನೆ ರೂಪಿಸಿದೆ. ಇದು ನಿಧಾನವಾಗಿ ಫಲ ನೀಡುತ್ತಿದೆ. ಕೋಚ್‌ಗಳನ್ನು ಪದೇಪದೇ ಬದಲಾಯಿಸಬಾರದಷ್ಟೆ.

ಜೂನಿಯರ್‌ ತಂಡದ ಪೆನಾಲ್ಟಿ ಕಾರ್ನರ್‌ ಪರಿಣತ ಹರ್ಮನ್‌ಪ್ರೀತ್‌, ನಾಯಕ ಹರ್ಜೀತ್‌ ಸಿಂಗ್‌, ವಿಕ್ರಮ್‌ಜೀತ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌, ಗೋಲ್‌ ಕೀಪರ್‌ ವಿಕಾಸ್‌ ದಹಿಯಾ ಅವರ ಮೇಲೆ ಭರವಸೆ ಇಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಕೋಚ್‌ ಹರೇಂದ್ರ ಸಿಂಗ್‌ ಅವರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ.

‘ತಂಡದಲ್ಲಿ ಆರೇಳು ಮಂದಿ ಉತ್ತಮ ಆಟಗಾರರಿದ್ದಾರೆ. ವಿಶ್ವ ಹಾಕಿಯಲ್ಲಿ ಮೇಲಿನ ಸ್ಥಾನ ತಲುಪಲು 11 ಮಂದಿಯೂ ಉತ್ತಮ ಪ್ರದರ್ಶನ ನೀಡಬೇಕು. ಪ್ರತಿ ಆಟಗಾರನಿಗೆ ಒತ್ತು ನೀಡಿ ತರಬೇತಿ ನೀಡಲಾಗುತ್ತಿದೆ. ಈ ಪ್ರಕ್ರಿಯೆ ಈಗಷ್ಟೆ ಆರಂಭವಾಗಿದೆ’ ಎನ್ನುತ್ತಾರೆ ಹರೇಂದ್ರ ಸಿಂಗ್‌.

2013ರ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತ ತಂಡ 10ನೇ ಸ್ಥಾನ ಪಡೆದಿತ್ತು. ಆಗಲೂ ತಂಡದ ಮೇಲೆ ಭಾರಿ ನಿರೀಕ್ಷೆ ಇತ್ತು. ಈ ವಿಷಯ ಅವರಿಗೆ ಚೆನ್ನಾಗಿ ಗೊತ್ತಿದೆ.

ಒಂದೇ ಆಕಾಡೆಮಿಯ 6 ಮಂದಿ
ಜಲಂಧರ್‌ನಲ್ಲಿರುವ ಸುರ್ಜೀತ್‌ ಹಾಕಿ ಅಕಾಡೆಮಿಯ ಆರು ಮಂದಿ ಆಟಗಾರರು ಈಗ ಭಾರತ ಜೂನಿಯರ್‌ ತಂಡದಲ್ಲಿದ್ದಾರೆ. ಅವರೆಂದರೆ ಹರ್ಮನ್‌ಪ್ರೀತ್‌, ಹರ್ಜೀತ್‌, ವರುಣ್‌ ಕುಮಾರ್, ವಿಕ್ರಮ್‌ಜೀತ್‌, ಮನ್‌ದೀಪ್‌ ಸಿಂಗ್‌ ಹಾಗೂ ಗುರ್ಜಾಂತ್‌ ಸಿಂಗ್‌. ಇವರೆಲ್ಲರ ಕೋಚ್‌ ಅವತಾರ್‌ ಸಿಂಗ್‌.

ಉದ್ಯೋಗ ಕೊಡಿಸಿ
ಭಾರತ ಸೀನಿಯರ್‌ ಹಾಕಿ ತಂಡದ ಆಯ್ಕೆ ಸಮಿತಿ ಸದಸ್ಯ ಅರ್ಜುನ ಹಾಲಪ್ಪ ಅವರ ವಾದವೇ ಬೇರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಆಟಗಾರರಿಗೆ ಉದ್ಯೋಗ ನೀಡಿ ಸಾಮಾಜಿಕ ಭದ್ರತೆ ಕಲ್ಪಿಸಬೇಕು. ಆಗ ಮಾತ್ರ ಕ್ರೀಡೆಯತ್ತ ಆಸಕ್ತಿ ಬೆಳೆಯಲು ಸಾಧ್ಯ ಎನ್ನುತ್ತಾರೆ.

‘ಗೆದ್ದು ಬಂದಾಗ ಸರ್ಕಾರವು ಒಂದಿಷ್ಟು ಹಣವನ್ನು ಬಹುಮಾನವಾಗಿ ನೀಡಿದರೆ ಸಾಲದು. ಉದ್ಯೋಗ ನೀಡಬೇಕು. ರಾಷ್ಟ್ರೀಯ ತಂಡದಲ್ಲಿ ಆಡಿರುವ ಪೊನ್ನಮ್ಮ ಅವರಿಗೂ ಕೇವಲ ನಗದು ಬಹುಮಾನ ನೀಡಿ ಕೈತೊಳೆದುಕೊಂಡರು. ಇಂಥ ಸಾಧಕಿಯರಿಗೆ ಉದ್ಯೋಗ ಕಲ್ಪಿಸಬೇಕು. ಹಾಗಾದಾಗ ಮಾತ್ರ ರಾಷ್ರೀಯ ತಂಡದಲ್ಲಿ ಆಡಿದ್ದಕ್ಕೂ ಅವರಿಗೆ ಖುಷಿಯಾಗುತ್ತದೆ. ಮುಂದೆಯೂ ಆಡಲು ಉತ್ಸಾಹ ತೋರುತ್ತಾರೆ’ ಎಂದು ಅವರು ಹೇಳುತ್ತಾರೆ. 

ಎರಡನೇ ಬಾರಿ ಕಿರೀಟ
ಭಾರತ ಜೂನಿಯರ್‌ ತಂಡ ಏಷ್ಯಾಕಪ್‌ ಜಯಿಸುತ್ತಿರುವುದು ಇದು ಎರಡನೇ ಬಾರಿ. 2004ರಲ್ಲಿ ಕರಾಚಿಯಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಆಗಲೂ ಹರೇಂದ್ರ ಸಿಂಗ್‌ ಭಾರತ ತಂಡದ ಕೋಚ್‌ ಆಗಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ಅವರು ‘ನಮ್ಮ ಗುರಿ 2016ರ ಜೂನಿಯರ್‌ ವಿಶ್ವಕಪ್ ಗೆಲ್ಲುವುದು. ಅದಕ್ಕಾಗಿ ಒಂದು ವರ್ಷದ ಹಿಂದೆಯೇ ಯೋಜನೆ ರೂಪಿಸಿ ಆಟಗಾರರಿಗೆ ತರಬೇತಿ ನೀಡಲಾಗುತ್ತಿದೆ. ಏಷ್ಯಾಕಪ್‌ ಜಯಿಸಿರುವುದು ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಆದರೆ, ಇಷ್ಟಕ್ಕೆ ವಿರಮಿಸುವಂತಿಲ್ಲ’ ಎಂದರು. ಹರೇಂದ್ರ ಅವರು ಸೀನಿಯರ್‌ ತಂಡದ ಕೋಚ್‌ ಆಗಿಯೂ ಕೆಲಸ ಮಾಡಿದ್ದಾರೆ. ಸಿಡ್ನಿ ಒಲಿಂಪಿಕ್ಸ್‌ (2000), ವಿಶ್ವಕಪ್‌ (2005–ಜೂನಿಯರ್‌, 2006 ಮತ್ತು 2010), ಏಷ್ಯನ್‌ ಕ್ರೀಡಾಕೂಟ (2006 ಮತ್ತು 2010) ಹಾಗೂ ಏಷ್ಯಾಕಪ್‌ನಲ್ಲಿ (2004–ಜೂನಿಯರ್, 2009, 2015–ಜೂನಿಯರ್‌) ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.

***
ಖುಷಿಯ ವಿಚಾರವೆಂದರೆ ಹಾಕಿ ಇಂಡಿಯಾ ಲೀಗ್‌ನಿಂದಾಗಿ ಸಾಮಾನ್ಯ ಆಟಗಾರ ಕೂಡ ವರ್ಷಕ್ಕೆ 10 ಲಕ್ಷ ರೂಪಾಯಿ ಸಂಪಾದಿಸಬಹುದು. ಹಾಗಾಗಿ ಆಟಗಾರರಿಗೆ ಈಗ ಸಾಮಾಜಿಕ ಭದ್ರತೆ ಸಿಗುತ್ತಿದೆ
–ಧನರಾಜ್‌ ಪಿಳ್ಳೈ,
ಭಾರತ ಹಾಕಿ ತಂಡದ ಮಾಜಿ ನಾಯಕ

***
ಬೆಂಗಳೂರು, ಕೊಡಗಿನಲ್ಲೇ ಎಲ್ಲಾ ಸೌಲಭ್ಯ
‘ರಾಜ್ಯದಲ್ಲಿ ಹಾಕಿ ಕ್ರೀಡೆ ಕೇವಲ ಬೆಂಗಳೂರು ಹಾಗೂ ಕೊಡಗಿಗೆ ಸೀಮಿತವಾದಂತಿದೆ. ತರಬೇತಿ, ಪರಿಣತ ಕೋಚ್‌ಗಳು, ಉತ್ತಮ ಸೌಲಭ್ಯ ಎಲ್ಲವೂ ಈ ಭಾಗದ ಮಕ್ಕಳಿಗೆ ಲಭಿಸುತ್ತಿದೆ. ಹಾಕಿ ಶಿಬಿರದಲ್ಲಿ ಅಥವಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಉತ್ತರ ಕರ್ನಾಟಕದಿಂದ ಸ್ವಂತ ಖರ್ಚು ಮಾಡಿಕೊಂಡು ರಾಜಧಾನಿಗೆ ಬರಬೇಕಾದ ಪರಿಸ್ಥಿತಿ ನೆಲೆಸಿದೆ. ಹಾಗಾಗಿ ಅವರಿಗೆ ಹಾಕಿ ಬಗ್ಗೆ ಆಸಕ್ತಿಯೇ ಇಲ್ಲ’ ಎಂದಿದ್ದು ಕೂಡಿಗೆ ಕ್ರೀಡಾ ಹಾಸ್ಟೆಲ್‌ನಲ್ಲಿ ಹಾಕಿ ಕೋಚ್ ಆಗಿರುವ ಕಲಬುರ್ಗಿಯ ಸಂಜಯ್‌ ಬನಾದ್‌.

‘ಉತ್ತರ ಕರ್ನಾಟಕದ ಭಾಗದಲ್ಲಿ ಸರಿಯಾದ ಕ್ರೀಡಾ ಹಾಸ್ಟೆಲ್‌ ಇಲ್ಲ. ಟರ್ಫ್‌ ಕ್ರೀಡಾಂಗಣಗಳಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಪ್ರೋತ್ಸಾಹ ನೀಡುವವರೇ ಇಲ್ಲ. ಇಂಥ ವ್ಯವಸ್ಥೆಯಲ್ಲಿ ಪ್ರತಿಭೆಗಳು ಉದಯಿಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸುತ್ತಾರೆ ‘ಟೂರ್ನಿ ನಡೆಯುತ್ತೆ ಎಂದಾಗ ಹತ್ತು ದಿನ ಶಿಬಿರ ಏರ್ಪಡಿಸಲಾಗುತ್ತದೆ. ಜೊತೆಗೆ ಪಂಜಾಬ್‌, ಹರಿಯಾಣದ ಆಟಗಾರರ ರೀತಿ ನಮ್ಮ ಆಟಗಾರರು ಫಿಟ್‌ನೆಸ್‌ ಹೊಂದಿಲ್ಲ. ಅಷ್ಟೇ ಅಲ್ಲ; ನಮ್ಮಲ್ಲಿ ಹಾಕಿ ಅಕಾಡೆಮಿಗಳೇ ಇಲ್ಲ’ ಎನ್ನುತ್ತಾರೆ.
- ಭಾರತದ ಹರ್ಮನ್‌ ಪ್ರೀತ್‌ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT