ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದು ಬನ್ನಿ... ಖುಷಿ ತನ್ನಿ...

Last Updated 14 ಆಗಸ್ಟ್ 2016, 14:01 IST
ಅಕ್ಷರ ಗಾತ್ರ

‘ಸ್ಥಳೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದಾಗಲೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಮಗಳಿಗೆ ಇತ್ತು. ಆ ಆಸೆ ಹೇಳಿಕೊಂಡಾಗಲೆಲ್ಲಾ ಎಲ್ಲರೂ ತಮಾಷೆ ಮಾಡುತ್ತಿದ್ದರು. ಈಗ ನೋಡಿ ಕುಂದಾಪುರ ತಾಲ್ಲೂಕಿನ ಕುಗ್ರಾಮ ಅಕ್ಕುಂಜಿ ಹುಡುಗಿ ರಿಯೊ ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿದ್ದಾಳೆ.

ಈ ಕ್ರೀಡಾಕೂಟದಲ್ಲಿ ಅವಳಿಂದ ಯಾವ ರೀತಿ ಸಾಧನೆ ಮೂಡಿಬರುತ್ತೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಅವಕಾಶ ಲಭಿಸಿರುವುದೇ ನಮ್ಮೆಲ್ಲರಲ್ಲಿ ಅತೀವ ಖುಷಿ ಉಂಟು ಮಾಡಿದೆ’

ಹೀಗೆಂದು ಹೇಳಿ ಖುಷಿಪಟ್ಟಿದ್ದು ಅಶ್ವಿನಿ ಅಕ್ಕುಂಜಿ ಅವರ ತಂದೆ ಚಿದಾನಂದ ಶೆಟ್ಟಿ. ಕರ್ನಾಟಕದಿಂದ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ 12 ಕ್ರೀಡಾಳುಗಳಲ್ಲಿ ಅಶ್ವಿನಿ ಕೂಡ ಒಬ್ಬರು.

2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿಯೇ ಅಕ್ಕುಂಜಿ ಪಾಲ್ಗೊಳ್ಳಬೇಕಿತ್ತು. ಆದರೆ, ನಿಷೇಧಿತ ಮದ್ದು ಸೇವನೆ ವಿವಾದ ಅಡ್ಡಿಯಾಯಿತು. ‘ಅರಿವಿಲ್ಲದೆ ಆದ ಪ್ರಮಾದ’ ಎಂದು ವಿಚಾರಣಾ ಸಮಿತಿ ವರದಿ ನೀಡಿದರೂ ನಿಷೇಧ ಹಿಂಪಡೆಯಲಿಲ್ಲ. ಅವಕಾಶ ಕೈತಪ್ಪಿ ಹೋಗಿದ್ದಕ್ಕೆ ಹತಾಶರಾಗದೆ ಆ ಅವಧಿಯನ್ನು ಧೈರ್ಯದಿಂದಲೇ ಎದುರಿಸಿದರು.

ಸವಾಲುಗಳನ್ನು ದಾಟಿ ಛಲ ಹಾಗೂ ಕಠಿಣ ತಾಲೀಮಿನ ಮೂಲಕ ರಿಯೊ ಡಿ ಜನೈರೊ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ. ಅವರು 4x400 ಮೀಟರ್‌ ರಿಲೇ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ.

ರಾಜ್ಯದವರೇ ಆದ ಎಂ.ಆರ್‌.ಪೂವಮ್ಮ ಕೂಡ ರಿಲೇ ತಂಡದ ಸದಸ್ಯೆ. ಏಷ್ಯನ್‌ ಕ್ರೀಡಾಕೂಟದಲ್ಲಿ ರಿಲೇಯಲ್ಲಿ ಚಿನ್ನ, ಏಷ್ಯನ್‌ ಅಥ್ಲೆಟಿಕ್ಸ್‌ನಲ್ಲಿ 400 ಮೀಟರ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಇವರು ಭರವಸೆಯ ಓಟಗಾರ್ತಿ. ಎರಡು ಬಾರಿ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಅನುಭವವಿದೆ. ಭಾರತದಿಂದ ಒಟ್ಟು 120 ಕ್ರೀಡಾಳು ಆಯ್ಕೆಯಾಗಿದ್ದಾರೆ. ಅದರಲ್ಲಿ ರಾಜ್ಯದ ಪಾಲು ಶೇ 10ರಷ್ಟು ಎಂಬುದು ವಿಶೇಷ.

ಗಾಯದ ಆತಂಕ: ಹೆಚ್ಚಿನ ನಿರೀಕ್ಷೆ ಇರುವುದು ಡಿಸ್ಕಸ್‌ ಥ್ರೋ ಸ್ಪರ್ಧಿ ವಿಕಾಸ್‌ ಗೌಡ ಅವರ ಮೇಲೆ. ಏಕೆಂದರೆ ಅವರು ಹಿಂದಿನ ಒಲಿಂಪಿಕ್ಸ್‌ ಹಾಗೂ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ 10ರೊಳಗಿನ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಹೆಚ್ಚು ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಇದು ಕ್ರೀಡಾ ವಲಯದಲ್ಲಿ ತುಸು ಆತಂಕ ಮೂಡಿಸಿರುವುದು ನಿಜ.

ಹೆಚ್ಚಿದ ಅವಕಾಶ
ಬ್ಯಾಡ್ಮಿಂಟನ್‌ ಮಹಿಳೆಯರ ಡಬಲ್ಸ್‌ನಲ್ಲಿ ಹೈದರಾಬಾದ್‌ನ ಜ್ವಾಲಾ ಗುಟ್ಟಾ ಜೊತೆಗೂಡಿ ಆಡುವ ಅಶ್ವಿನಿ ಪೊನ್ನಪ್ಪ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಲಭಿಸಿದ್ದ ಉತ್ತಮ ಅವಕಾಶವನ್ನು ಕೊಂಚದರಲ್ಲಿ ಕಳೆದುಕೊಂಡಿದ್ದರು. ಆದರೆ, ಈ ಬಾರಿ ಉತ್ತಮ ಫಾರ್ಮ್‌ನಲ್ಲಿದ್ದು ಪದಕದ ಅವಕಾಶ ಹೆಚ್ಚಿದೆ.

ಪದಕದ ಭರವಸೆ
ಅನುಭವಿ ಲಿಯಾಂಡರ್‌ ಪೇಸ್‌ ಜೊತೆಗೂಡಿ ಡಬಲ್ಸ್‌ನಲ್ಲಿ ಕಣಕ್ಕಿಳಿಯುತ್ತಿರುವ ರೋಹನ್ ಬೋಪಣ್ಣ ಪದಕದ ಭರವಸೆ ಮೂಡಿಸಿದ್ದಾರೆ. ಪೇಸ್‌ ಜೊತೆಗೂಡಿ ಆಡಲು ಆರಂಭದಲ್ಲಿ ನಿರಾಸಕ್ತಿ ತೋರಿಸಿದ್ದ ಅವರು ಕೊನೆಯಲ್ಲಿ ಟೆನಿಸ್‌ ಫೆಡರೇಷನ್‌ನ ಕಟ್ಟಪ್ಪಣೆಗೆ ಮಣಿಯಬೇಕಾಯಿತು. ಗ್ರ್ಯಾಂಡ್‌ಸ್ಲಾಮ್‌ ಹಾಗೂ ಇತರ ಟೂರ್ನಿಗಳಲ್ಲಿ ಗಮನ ಸೆಳೆದಿರುವ ಅವರು ಕೊನೆಯ ಕ್ಷಣದ ಸಿದ್ಧತೆ ನಡೆಸುತ್ತಿದ್ದಾರೆ.

ಡೇವಿಸ್‌ ಕಪ್‌ ಟೂರ್ನಿಯಲ್ಲಿ ಭಾರತ ಈಚೆಗಷ್ಟೇ ದಕ್ಷಿಣ ಕೊರಿಯಾ ಮಣಿಸಿ ವಿಶ್ವ ಗುಂಪಿನ ಪ್ಲೇಆಫ್‌ ಅರ್ಹತೆ ಗಿಟ್ಟಿಸಿದೆ. ಅದರಲ್ಲಿ ಪೇಸ್‌ ಹಾಗೂ ರೋಹನ್‌ ಜೊತೆಗೂಡಿ ಆಡಿ ಗೆಲುವು ಸಾಧಿಸಿದ್ದರು. ಇವರಿಬ್ಬರ ನಡುವಿನ ಹೊಂದಾಣಿಕೆಯೂ ಚೆನ್ನಾಗಿದೆ. ಇದು ಬೋಪಣ್ಣ ಪಾಲಿಗೆ ಎರಡನೇ ಒಲಿಂಪಿಕ್ಸ್‌. 

ಗೆದ್ದು ಬರುವರೇ ಪ್ರಕಾಶ್‌
ಪ್ರತಿ ಭಾರಿ ಭಾರತದ ಪದಕದ ಭರವಸೆ ಇರುವುದು ಶೂಟಿಂಗ್‌ ಸ್ಪರ್ಧಿಗಳ ಮೇಲೆ. ಅಥೆನ್ಸ್‌ ಒಲಿಂಪಿಕ್ಸ್‌ನಿಂದಲೂ ಆ ಭರವಸೆ ಹೆಚ್ಚುತ್ತಲೇ ಇದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ ಸ್ಪರ್ಧೆಯ 15 ವಿಭಾಗಗಳಲ್ಲಿ ವಿಶ್ವದ ಸುಮಾರು 390 ಶೂಟರ್‌ಗಳು ಪೈಪೋಟಿ ನಡೆಸಲಿದ್ದಾರೆ. ಭಾರತದ 12 ಸ್ಪರ್ಧಿಗಳು ಇದ್ದಾರೆ.

ಹೆಚ್ಚಿದ ನಿರೀಕ್ಷೆ
ಈ ಬಾರಿ ಹಾಕಿ ತಂಡದಲ್ಲಿ ರಾಜ್ಯದವರೇ ನಾಲ್ವರು ಆಟಗಾರರು ಇದ್ದಾರೆ. ಶೇ 25 ಪಾಲು ಎನ್ನಬಹುದು. ಅವರೆಂದರೆ ಎಸ್‌.ವಿ.ಸುನಿಲ್‌, ವಿ.ಆರ್‌.ರಘುನಾಥ್, ಎಸ್‌.ಕೆ.ಉತ್ತಪ್ಪ ಹಾಗೂ ನಿಕಿನ್ ತಿಮ್ಮಯ್ಯ. ಇವರೆಲ್ಲರೂ ಕೊಡಗು ಮೂಲದವರು.

‘ಸ್ಥಿರ ಪ್ರದರ್ಶನ ನೀಡುವುದು ಪ್ರತಿ ಕ್ರೀಡಾಪಟುವಿನ ಮುಂದಿರುವ ಪ್ರಮುಖ ಸವಾಲು. ಈ ಸವಾಲನ್ನು ನಾವು ಸಮರ್ಥವಾಗಿ ನಿಭಾಯಿಸಿದ್ದೇವೆ. ಪದಕ ಗೆಲ್ಲುವ ಗುರಿಯೊಂದಿಗೆ ಕಠಿಣ ಅಭ್ಯಾಸವನ್ನೂ ನಡೆಸಿದ್ದೇವೆ’ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ ವಿ.ಆರ್‌.ರಘುನಾಥ್‌.

ಗಾಲ್ಫ್‌ನಲ್ಲಿ ರಾಜ್ಯದ ಅನಿರ್ಬನ್‌ ಲಾಹಿರಿ ಹಾಗೂ ಅದಿತಿ ಅಶೋಕ್ ಅರ್ಹತೆ ಪಡೆದಿದ್ದಾರೆ. ಅನಿರ್ಬನ್ ಭಾರತದ ವೃತ್ತಿಪರ ಗಾಲ್ಫರ್‌. ಅದಿತಿ ಈಚೆಗೆ ಯುರೋಪಿಯನ್ ಮಹಿಳಾ ಟೂರ್ನಿಯಲ್ಲಿ ಗಮನ ಸೆಳೆಯುವ ಆಟವಾಡಿದ್ದರು. ಒಲಿಂಪಿಕ್ಸ್‌ನಲ್ಲಿ 24 ದೇಶಗಳ ಗಾಲ್ಫರ್‌ಗಳು ಸ್ಪರ್ಧಿಸಲಿದ್ದಾರೆ. ಏಷ್ಯಾದಿಂದ 17 ಗಾಲ್ಫರ್‌ಗಳು ಭಾಗವಹಿಸಲಿದ್ದಾರೆ.

ಹಾಕಿ ಹೊರತುಪಡಿಸಿ ರಾಜ್ಯಕ್ಕೆ ಇದುವರೆಗೆ ಒಲಿಂಪಿಕ್ಸ್‌ನಲ್ಲಿ ಪದಕ ಬಂದಿಲ್ಲ. ಹೀಗಾಗಿ, ಈ ಬಾರಿ ಅಥ್ಲೀಟ್‌ಗಳು ಹಾಗೂ ಇತರ ಕ್ರೀಡಾಪಟುಗಳ ಮೇಲೂ ರಾಜ್ಯದ ಕ್ರೀಡಾಭಿಮಾನಿಗಳ ನಿರೀಕ್ಷೆಯ ಭಾರವಿದೆ.

ರಾಜ್ಯದ ಆಟಗಾರರ ನೋಟ
ಎಂ.ಆರ್‌.ಪೂವಮ್ಮ (4x400ರಿಲೇ)
ಮಂಗಳೂರು ನಗರದಲ್ಲಿ ತಮ್ಮ ಅಥ್ಲೆಟಿಕ್ಸ್‌ ಬದುಕು ಆರಂಭಿಸಿದ ಎಂ.ಆರ್.ಪೂವಮ್ಮ ಅವರಿಗೆ ಇದು ಎರಡನೇ ಒಲಿಂಪಿಕ್ಸ್‌. ಬೀಜಿಂಗ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಅವರು ಗಾಯದ ಕಾರಣ ಲಂಡನ್‌ ಒಲಿಂಪಿಕ್ಸ್‌ ಗೆ ಹೋಗಿರಲಿಲ್ಲ. ಇಂಚೆನ್ ಏಷ್ಯನ್‌ ಕ್ರೀಡಾಕೂಟದ ರಿಲೇಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಅವರನ್ನೊಳಗೊಂಡ ರಿಲೇ ತಂಡ ಕೊನೆಯ ಕ್ಷಣದಲ್ಲಿ ರಿಯೊ ಒಲಿಂಪಿಕ್ಸ್‌ಗೆ ಅವಕಾಶ ಪಡೆದುಕೊಂಡಿದೆ.

ರೋಹನ್‌ ಬೋಪಣ್ಣ (ಟೆನಿಸ್‌)
ಕೊಡಗು ಜಿಲ್ಲೆಯ ರೋಹನ್‌ ಬೋಪಣ್ಣ ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಜೊತೆಗೂಡಿ ಆಡಲಿದ್ದಾರೆ. ಈ ಜೋಡಿಗಳು ಪದಕದ ಭರವಸೆ ಮೂಡಿಸಿವೆ. ಗ್ರ್ಯಾಂಡ್‌ಸ್ಲಾಮ್‌ ಹಾಗೂ ಇತರ ಟೂರ್ನಿಗಳಲ್ಲಿ ಗಮನ ಸೆಳೆದಿರುವ ಇವರು ಕೊನೆಯ ಕ್ಷಣದ ಸಿದ್ಧತೆ ನಡೆಸುತ್ತಿದ್ದಾರೆ.

ವಿಕಾಸ್‌ ಗೌಡ (ಡಿಸ್ಕಸ್‌ ಥ್ರೋ)
ವಿಕಾಸ್‌ ಗೌಡ ಅವರಿಗಿದು ನಾಲ್ಕನೇ ಒಲಿಂಪಿಕ್ಸ್‌. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಎಂಟನೇ ಸ್ಥಾನ ಪಡೆದಿದ್ದ ಅವರು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು. ಹೋದ ವರ್ಷ ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ನಡೆದ ಅಥ್ಲೆಟಿಕ್‌ ಕೂಟದಲ್ಲಿ 65.14 ಮೀಟರ್ಸ್‌ ದೂರ ಡಿಸ್ಕ್‌ ಎಸೆದು ರಿಯೊಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಬೆಳೆದು ಅಲ್ಲಿಯೇ ತರಬೇತಿ ಪಡೆಯುತ್ತಿರುವ ವಿಕಾಸ್‌ ಮೈಸೂರು ಮೂಲದವರು.

ಅಶ್ವಿನಿ ಪೊನ್ನಪ್ಪ  (ಬ್ಯಾಡ್ಮಿಂಟನ್‌)
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಕೊಡಗಿನ ಅಶ್ವಿನಿ ಪೊನ್ನಪ್ಪ ಅವರಿಗಿದು ಎರಡನೇ ಒಲಿಂಪಿಕ್ಸ್‌. ಹೈದರಾಬಾದ್‌ನ ಜ್ವಾಲಾ ಗುಟ್ಟಾ ಜೊತೆಗೂಡಿ ಏಳೆಂಟು ವರ್ಷಗಳಿಂದ ಮಹಿಳೆಯರ ಡಬಲ್ಸ್‌ನಲ್ಲಿ ಆಡುತ್ತಿದ್ದಾರೆ.  ಪ್ರಸಕ್ತ ಹೈದರಾಬಾದ್‌ನಲ್ಲಿ ನೆಲೆಸಿ ತರಬೇತಿ ಪಡೆಯುತ್ತಿದ್ದಾರೆ.

ಪಿ.ಎನ್‌.ಪ್ರಕಾಶ್‌ (ಶೂಟಿಂಗ್‌)
ಬೆಂಗಳೂರಿನ ಪಿ.ಎನ್‌.ಪ್ರಕಾಶ್‌ ಅವರು 50 ಮೀಟರ್ಸ್‌ ಪಿಸ್ತೂಲ್‌ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಅವರು 2015ರ ಆಗಸ್ಟ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ಶೂಟಿಂಗ್ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಈ ಅವಕಾಶ ಪಡೆದುಕೊಂಡಿದ್ದಾರೆ. ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ರಜತ ಪದಕ ಜಯಿಸಿದ್ದರು. ದಕ್ಷಿಣ ಕೊರಿಯದ ಚಾಂಗ್ವಾನ್‌ನಲ್ಲಿ ನಡೆದ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.  ಇಂಚೆನ್‌ ಏಷ್ಯನ್‌ ಕೂಟದ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅದಿತಿ ಅಶೋಕ್‌ (ಗಾಲ್ಫ್)
18ರ ಹರೆಯದ ಅದಿತಿ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತದ ಕ್ರೀಡಾಪಟುಗಳಲ್ಲಿ ಅತ್ಯಂತ ಕಿರಿಯ ಸ್ಪರ್ಧಿ. ಶ್ರೇಯಾಂಕದ ಆಧಾರದ ಮೇಲೆ ಬೆಂಗಳೂರು ಮೂಲದ ಇವರಿಗೆ ರಿಯೊಗೆ ತೆರಳಲು ಅವಕಾಶ ಲಭಿಸಿದೆ. ಏಷ್ಯನ್‌ ಕ್ರೀಡಾಕೂಟ ಹಾಗೂ ಯೂತ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಇವರು ಬ್ರಿಟಿಷ್‌ ಹವ್ಯಾಸಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಮಹಿಳೆ.

ಅನಿರ್ಬನ್‌ ಲಾಹಿರಿ (ಗಾಲ್ಫ್‌)
ಪಶ್ಚಿಮ ಬಂಗಾಳದ ಮೂಲದ ಲಾಹಿರಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಏಷ್ಯನ್ ಟೂರ್ ಜಯಿಸಿರುವ ಅವರು ಪ್ರಸಕ್ತ ಸಾಲಿನ ‘ಏಷ್ಯನ್ ಟೂರ್ ಆರ್ಡರ್ ಆಫ್ ಮೆರಿಟ್ ಕಿರೀಟ’ ಗೆದ್ದುಕೊಂಡಿದ್ದಾರೆ. ಪ್ರೆಸಿಡೆಂಟ್‌ ಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತ ಪ್ರಥಮ ಗಾಲ್ಫರ್‌ ಎಂಬ ಹಿರಿಮೆಯೂ ಲಾಹಿರಿ ಅವರದ್ದಾಗಿದೆ.


ಅಶ್ವಿನಿ ಅಕ್ಕುಂಜಿ (4x400 ರಿಲೇ)
ಹಲವು ವಿವಾದಗಳನ್ನು ದಾಟಿ ಬಂದಿರುವ ಉಡುಪಿ ಜಿಲ್ಲೆಯ ಅಶ್ವಿನಿ ಅಕ್ಕುಂಜಿ ಅವರಿಗಿದು ಚೊಚ್ಚಲ ಒಲಿಂಪಿಕ್ಸ್‌. ದೆಹಲಿ ಕಾಮನ್‌ವೆಲ್ತ್‌ ಹಾಗೂ ಗುವಾಂಗ್‌ಜೌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ತಮ್ಮ ಪ್ರತಿಭೆ ಮೆರೆದಿರುವ ಅವರು ಒಲಿಂಪಿಕ್ಸ್‌ನಲ್ಲಿ ಅದೃಷ್ಟ ಪಣಕ್ಕೊಡ್ಡಲು ಸಿದ್ಧರಾಗಿದ್ದಾರೆ. ಗುವಾಂಗ್‌ಜೌನಲ್ಲಿ ರಿಲೇ ಹಾಗೂ 400 ಮೀಟರ್ಸ್‌ ಓಟದಲ್ಲಿ ಚಿನ್ನ ಜಯಿಸಿದ್ದರು.

ಎಸ್‌.ಕೆ.ಉತ್ತಪ್ಪ
ನಾಲ್ಕು ವರ್ಷಗಳ ಹಿಂದೆಯಷ್ಟೇ ಪದಾರ್ಪಣೆ ಮಾಡಿದ ಕೊಡಗಿನ ಮೂಲದ ಉತ್ತಪ್ಪ ಅವರ ಒಲಿಂಪಿಕ್ಸ್‌ ಕನಸು ಬಹುಬೇಗನೇ ಸಾಕಾರಗೊಂಡಿತು. ಅದೇ ವರ್ಷ ಲಂಡನ್‌ ಒಲಿಂಪಿಕ್ಸ್‌ಗೆ ತಂಡದಲ್ಲಿ ಸ್ಥಾನ ಪಡೆದರು.

ಎಸ್‌.ವಿ.ಸುನಿಲ್‌
2007ರಿಂದ ರಾಷ್ಟ್ರೀಯ ತಂಡ ಪ್ರತಿನಿಧಿಸುತ್ತಿರುವ ಕೊಡಗಿನ ಮೂಲದ ಸುನಿಲ್‌ ಅವರಿಗಿದು ಎರಡನೇ ಒಲಿಂಪಿಕ್ಸ್‌. 2012ರಲ್ಲಿ ಕೊನೆಯ ಸ್ಥಾನ ಪಡೆದಿದ್ದು ಅವರನ್ನು ಇನ್ನೂ ಕಾಡುತ್ತಿದೆ. ಆದರೆ, ಈಚೆಗೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬೆಳ್ಳಿ ಜಯಿಸಿರುವುದು ವಿಶ್ವಾಸ ತುಂಬಿದೆ.

ನಿಕಿನ್‌ ತಿಮ್ಮಯ್ಯ
ಹಾಕಿ ಇಂಡಿಯ ಲೀಗ್‌ನಲ್ಲಿ ಉದಯಿಸಿದ ಕೊಡಗಿನ ಈ ಪ್ರತಿಭೆಗೆ ಇದು ಚೊಚ್ಚಲ ಒಲಿಂಪಿಕ್ಸ್‌. ಮುಂಚೂಣಿ ಆಟಗಾರ ನಿಕಿನ್‌, 73 ಅಂತರ ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 15 ಗೋಲುಗಳನ್ನು ಗಳಿಸಿದ್ದಾರೆ.

ವಿ.ಆರ್‌.ರಘುನಾಥ್‌
ಡ್ರ್ಯಾಗ್‌ ಫ್ಲಿಕರ್‌ ಪರಿಣತ ರಘುನಾಥ್‌ ತಂಡದ ನಂಬಿಕಸ್ತ ಆಟಗಾರ. ಕೊಡಗಿನ ಮೂಲದ ಈ ಆಟಗಾರ 2005ರಿಂದ ಸೀನಿಯರ್ ತಂಡದಲ್ಲಿ ಆಡುತ್ತಿದ್ದು, ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ, ಇಂಚೆನ್‌ ಏಷ್ಯನ್‌ ಕೂಟದಲ್ಲಿ ಚಿನ್ನ ಗೆದ್ದ ತಂಡದ ಸದಸ್ಯ.

***
4X400 ಮೀಟರ್ಸ್‌ ರಿಲೇಯಲ್ಲಿ ನಮ್ಮ ತಂಡ ಬಲಿಷ್ಠವಾಗಿದೆ. ಕೆಲ ವರ್ಷಗಳಿಂದ ಸಾಕಷ್ಟು ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವುದು ಅನುಭವ ಹೆಚ್ಚಿಸಿದೆ. ಈ ಬಾರಿ ಫೈನಲ್‌ ತಲುಪಲು ಉತ್ತಮ ಅವಕಾಶವಿದೆ
–ಎಂ.ಆರ್‌.ಪೂವಮ್ಮ, ರಿಲೇ ತಂಡದ ಸದಸ್ಯೆ

***

ಒಲಿಂಪಿಕ್ಸ್ ಆರಂಭಕ್ಕೂಎರಡು ವರ್ಷ ಮೊದಲೇ ಅರ್ಹತೆ ಗಿಟ್ಟಿಸಿದ್ದರಿಂದ ಅಭ್ಯಾಸ ನಡೆಸಲು ಮತ್ತು ಯೋಜನೆ ರೂಪಿಸಲು ಅನುಕೂಲವಾಯಿತು. ತಂಡ ಈ ಬಾರಿ ಪದಕ ಗೆಲ್ಲಬಹುದೇ ಎಂಬ ಪ್ರಶ್ನೆಗಳು ತೂರಿಬರುತ್ತಿವೆ. ಅದಕ್ಕೆ ಈಗ ಉತ್ತರಿಸುವುದಿಲ್ಲ. ತಂಡದ ಪ್ರದರ್ಶನ ಹೇಗಿರುತ್ತದೆ ಎಂಬುದನ್ನೇ ನೋಡಿ.
–ಎಸ್‌.ವಿ.ಸುನಿಲ್‌, ಹಾಕಿ ತಂಡದ ಉಪನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT