ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿಗಾಗಿ ಭಾರತ ಕಾತರ

ಫಿಫಾ ವಿಶ್ವಕಪ್‌ ಅರ್ಹತಾ ಫುಟ್‌ಬಾಲ್‌ ಟೂರ್ನಿ
Last Updated 28 ಮಾರ್ಚ್ 2016, 19:58 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ಸತತ ಸೋಲುಗಳಿಂದ ನಿರಾಸೆಗೊಂಡಿರುವ ಭಾರತ ತಂಡ ಫಿಫಾ ವಿಶ್ವಕಪ್‌ ಅರ್ಹತಾ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆಲುವಿಗಾಗಿ ಹವಣಿಸುತ್ತಿದೆ.

ಮಂಗಳವಾರ ನಡೆಯುವ ‘ಡಿ’ ಗುಂಪಿನ ಪಂದ್ಯದಲ್ಲಿ  ಆತಿಥೇಯರು ತುರ್ಕಮೆನಿಸ್ತಾನದ ವಿರುದ್ಧ ಸೆಣಸಲಿದ್ದು ತವರಿನ ಅಭಿಮಾನಿಗಳಿಗೆ ಜಯದ ಉಡುಗೊರೆ ನೀಡಲು ಕಾದಿದ್ದಾರೆ. ಭಾರತ ‘ಡಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.  ಒಂದು ವೇಳೆ ಮಂಗಳವಾರದ ಪಂದ್ಯದಲ್ಲಿ ಗೆಲುವು ಗಳಿಸಿದರೂ ಈ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಆದರೆ ಏಷ್ಯನ್‌ ಕಪ್‌ ಅರ್ಹತಾ ಟೂರ್ನಿಗೂ ಮುನ್ನ ವಿಶ್ವಾಸ ಹೆಚ್ಚಿಸಿಕೊಳ್ಳಲು ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಗಳಿಸುವುದು ಅಗತ್ಯ.
ಹೋದ ವರ್ಷದ ನವೆಂಬರ್‌ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 1–0 ಗೋಲಿನಿಂದ ಗ್ವಾಮ್‌ ತಂಡವನ್ನು ಮಣಿಸಿ ಪೂರ್ಣ ಮೂರು ಪಾಯಿಂಟ್‌ ಕಲೆಹಾಕಿತ್ತು. ಆ ಬಳಿಕ ತಂಡಕ್ಕೆ ಗೆಲುವು ಕೈಗೆಟುಕಿಲ್ಲ.

ತನ್ನ ಹಿಂದಿನ ಪಂದ್ಯದಲ್ಲಿ ಭಾರತ 0–4 ಗೋಲುಗಳಿಂದ ಇರಾನ್‌ ಎದುರು ಸೋತಿತ್ತು. ಆ ಪಂದ್ಯದಲ್ಲಿ ಪ್ರಮುಖ ಆಟಗಾರ ಸುನಿಲ್‌ ಚೆಟ್ರಿ ಆಡಿರಲಿಲ್ಲ. ಮಂಗಳವಾರ ಜವಾಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯುವುದಾಗಿ ಚೆಟ್ರಿ ಹೇಳಿದ್ದಾರೆ. ಆದರೆ ತಂಡದ ಕೋಚ್‌ ಸ್ಟೀಫನ್‌ ಕಾನ್ಸ್‌ಟಂಟೈನ್‌ ಈ ಬಗ್ಗೆ ಏನೂ ಹೇಳಿಲ್ಲ. ಹೀಗಾಗಿ ತುರ್ಕಮೆನಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಚೆಟ್ರಿ ಆಡುವುದು ಅನುಮಾನ ಎನಿಸಿದೆ. ಒಂದು ವೇಳೆ ಅವರು ಕಣಕ್ಕಿಳಿದರೆ ಆತಿಥೇಯರಿಗೆ ಆನೆ ಬಲ ಬಂದಂತಾಗುತ್ತದೆ.

ಚೆಟ್ರಿ ಅನುಪಸ್ಥಿಯಲ್ಲಿ ಇರಾನ್‌ ವಿರುದ್ಧ ಭಾರತ ತಂಡ ಛಲದ ಆಟ ಆಡಿ ಗಮನಸೆಳೆದಿತ್ತು. ಮೊದಲರ್ಧದಲ್ಲಿ ಎದುರಾಳಿಗಳ ಗೋಲು ಗಳಿಕೆಗೆ ಕಡಿವಾಣ ಹಾಕಿದ್ದ ಜೆಜೆ ಲಾಲ್‌ ಪೆಕ್ಲುವಾ ಸಾರಥ್ಯದ ತಂಡ ದ್ವಿತೀಯಾರ್ಧದಲ್ಲಿ ನಿರಾಯಾಸವಾಗಿ ಗೋಲು ಬಿಟ್ಟುಕೊಟ್ಟು ಸೋಲಿಗೆ ಶರಣಾಗಿತ್ತು. ತಂಡದ ಪ್ರಮುಖ ಆಟಗಾರ ಯೂಜೆನ್ಸನ್‌ ಲಿಂಗ್ಡೊ ಅನಾರೋಗ್ಯದ ಕಾರಣ ಈ ಪಂದ್ಯದಲ್ಲಿ ಆಡುತ್ತಿಲ್ಲ. ಇದು ಕೂಡಾ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಕೋಚ್‌ ಹುದ್ದೆ ವಹಿಸಿಕೊಂಡ ಮೇಲೆ ಒಂದಿಲ್ಲೊಂದು ಪ್ರಯೋಗಕ್ಕೆ ಮುಂದಾಗುತ್ತಿರುವ ಕಾನ್ಸ್‌ಟಂಟೈನ್‌ ಈ ಪಂದ್ಯದಲ್ಲಿಯೂ ಗೆಲುವಿಗಾಗಿ ಭಿನ್ನ ರಣತಂತ್ರ ಹೆಣೆದು ತಂಡವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ‘ ತುರ್ಕಮೆನಿಸ್ತಾನ ಬಲಿಷ್ಠ ತಂಡ. ಈ ತಂಡದ ಎದುರು ಗೆಲುವು ಗಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ’ ಎಂದು ಕಾನ್ಸ್‌ಟಂಟೈನ್‌ ತಿಳಿಸಿದ್ದಾರೆ.

‘ವಿಶ್ವಕಪ್‌ ಅರ್ಹತಾ ಟೂರ್ನಿ ನಮಗೆ ಕೆಲವು ಪಾಠಗಳನ್ನು ಕಲಿಸಿದೆ. ಈ ಟೂರ್ನಿಯಲ್ಲಿ ನಮ್ಮ ತಂಡ ಒಮನ್‌ನಂತಹ ಬಲಿಷ್ಠ ತಂಡಗಳ ಎದುರು ಗಮನಾರ್ಹ ಸಾಮರ್ಥ್ಯ ತೋರಿದೆ. ಇದು ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಇರಾನ್‌ ವಿರುದ್ಧ ನಮ್ಮಿಂದಾದ ತಪ್ಪುಗಳನ್ನು ತಿದ್ದಿಕೊಂಡು ತುರ್ಕಮೆನಿಸ್ತಾನ ವಿರುದ್ಧ ಗೆಲುವು ಗಳಿಸುವುದು ಸದ್ಯ ನಮ್ಮ ಮುಂದಿರುವ ಗುರಿ ’ ಎಂದಿದ್ದಾರೆ.

ತುರ್ಕಮೆನಿಸ್ತಾನ ತಂಡ ಪ್ರತಿಭಾನ್ವಿತ ಆಟಗಾರರ ಕಣಜ ಎನಿಸಿದೆ. ಈ ತಂಡದ ಖಾತೆಯಲ್ಲಿ 10 ಪಾಯಿಂಟ್ಸ್‌ ಇದ್ದು ಭಾರತದ ವಿರುದ್ಧ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.  ತುರ್ಕಮೆನಿಸ್ತಾನ ಈಗಾಗಲೇ 2019ರ ಎಎಫ್‌ಸಿ ಏಷ್ಯನ್‌ ಕಪ್‌ ಟೂರ್ನಿಯ ಮೂರನೇ ಅರ್ಹತಾ ಸುತ್ತಿಗೆ ಅರ್ಹತೆ ಗಳಿಸಿದೆ. ಹೀಗಾಗಿ ಭಾರತದ ಪಾಲಿಗೆ ಇದು ಅಗ್ನಿ ಪರೀಕ್ಷೆಯ ಪಂದ್ಯ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT