ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿಗೆ ಮತ್ತೊಂದು ಹೆಸರು ಗೇಲ್‌

Last Updated 6 ಮೇ 2015, 20:35 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಸ್‌ ಗೇಲ್‌... ಇದೊಂದು ಹೆಸರು ಸಾಕು ಆರ್‌ಸಿಬಿ ತಂಡದ ಮೇಲೆ ಭರವಸೆ ಇಡಲು. ಗೇಲ್‌ ಅಂಗಳದಲ್ಲಿದ್ದರೆ ಅಭಿಮಾನಿಗಳಿಗೆ ಅದೇನೋ ಪುಳಕ. ಗೇಲ್‌ ಸಾಮರ್ಥ್ಯ ಏನೆಂಬುದು ಮತ್ತೊಮ್ಮೆ ಸಾಬೀತಾಯಿತು. ಚಿನ್ನಸ್ವಾಮಿ ಅಂಗಳದಲ್ಲಿ ಬುಧವಾರ ರಾತ್ರಿ ಹರಿದ ರನ್ ಹೊಳೆಯೇ ಇದಕ್ಕೆ ಸಾಕ್ಷಿ.

ಗೇಲ್‌ ಈ ಬಾರಿಯ ಐಪಿಎಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಕೋಲ್ಕತ್ತ ಎದುರು 96 ರನ್ ಗಳಿಸಿದ್ದರು. ಆ ಬಳಿಕ ಅವರಿಂದ ಹೇಳಿಕೊಳ್ಳುವಂಥ ಆಟ ಮೂಡಿ ಬಂದಿರಲಿಲ್ಲ. ಆದ್ದರಿಂದ ಚೆನ್ನೈ ಸೂಪರ್‌ ಕಿಂಗ್ಸ್ ಎದುರಿನ ಎರಡೂ ಪಂದ್ಯಗಳಿಗೂ ಅವರನ್ನು ಕೈಬಿಡಲಾಗಿತ್ತು. ಆದರೆ, ಬುಧವಾರ ಇಲ್ಲಿ ನಡೆದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಎದುರಿನ ಪಂದ್ಯದಲ್ಲಿ ಗೇಲ್‌ ಅಬ್ಬರದ ಮುಂದೆ ತಬ್ಬಿಬ್ಬಾಗುವ ಸರದಿ ಅಭಿಮಾನಿಗಳದ್ದಾಗಿತ್ತು.

ಆಜಾನುಭಾಹು ಬ್ಯಾಟ್ಸ್‌ಮನ್‌ ಗೇಲ್‌ ಶತಕದ ಬಲದಿಂದ ಆರ್‌ಸಿಬಿ 20 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 226 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ ಬ್ಯಾಟಿಂಗ್‌ ಆರಂಭಿಸುವ ಮುನ್ನವೇ ಸೋತು ಹೋಗಿತ್ತು. ಈ ತಂಡ 13.4 ಓವರ್‌ಗಳಲ್ಲಿ 88 ರನ್‌ ಗಳಿಸಿ ಆಲೌಟ್‌ ಆಯಿತು. ಇದರಿಂದ ಪ್ರೀತಿ ಜಿಂಟಾ ಒಡೆತನದ ಪಂಜಾಬ್‌ ತಂಡದ ‘ಪ್ಲೇ ಆಫ್‌’ ಕನಸು ಭಗ್ನಗೊಂಡಿತು.

ಟಾಸ್‌ ಗೆದ್ದ ಪಂಜಾಬ್‌ ತಂಡ ಫೀಲ್ಡಿಂಗ್‌ ಮಾಡಲು ಮುಂದಾಯಿತು. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆರ್‌ಸಿಬಿ ಇದೇ ಅವಕಾಶ ಬಳಸಿಕೊಂಡು ಅಪೂರ್ವ ಇನಿಂಗ್ಸ್‌ ಕಟ್ಟಿತು. ಇದಕ್ಕೆ ಕಾರಣವಾಗಿದ್ದು ಗೇಲ್‌ ಮತ್ತು ಡಿವಿಲಿಯರ್ಸ್.
ಮೊದಲ ಓವರ್‌ನಲ್ಲಿ ಒಂದು ರನ್‌ ಮಾತ್ರ ಗಳಿಸಿದ ಆರ್‌ಸಿಬಿ ಅಬ್ಬರ ಎರಡನೇ ಓವರ್‌ನಲ್ಲಿ ಆರಂಭವಾಯಿತು. ಶ್ರೇಷ್ಠ ವೇಗಿಗಳಲ್ಲಿ ಒಬ್ಬರೆನಿಸಿರುವ ಮಿಷೆಲ್‌ ಜಾನ್ಸನ್ ಬೌಲಿಂಗ್‌ನಲ್ಲಿ ಗೇಲ್‌ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ ಸಿಡಿಸಿದರು. ನಂತರದ ಓವರ್‌ನಲ್ಲೂ 24 ರನ್‌ಗಳು ಬಂದವು.

ಹೀಗೆ ಆರಂಭವಾದ ಗೇಲ್‌ ಅಬ್ಬರ 17 ಓವರ್‌ಗಳವರೆಗೂ ಮುಂದುವರಿಯಿತು. 22 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಈ ಬ್ಯಾಟ್ಸ್‌ಮನ್‌ ಮೂರಂಕಿ ಮುಟ್ಟಲು ಹೆಚ್ಚು ಹೊತ್ತು ಬೇಕಾಗಲಿಲ್ಲ. 45 ಎಸೆತಗಳಲ್ಲಿ ಶತಕ ಗಳಿಸಿದರು. ಐಪಿಎಲ್‌ನಲ್ಲಿ ಗೇಲ್‌ ಗಳಿಸಿದ ಐದನೇ ಶತಕವಿದು.

ಅವಕಾಶ ಕೈ ಚೆಲ್ಲಿದರೆ ಏನೆಲ್ಲಾ ಸಂಕಷ್ಟಗಳು ಎದುರಾಗುತ್ತವೆ ಎನ್ನುವುದಕ್ಕೆ ಪಂಜಾಬ್‌ ತಂಡದ ಕೆಟ್ಟ ಫೀಲ್ಡಿಂಗ್‌ ಸಾಕ್ಷಿಯಾಯಿತು. ಆರ್‌ಸಿಬಿ ಸವಾಲಿನ ಮೊತ್ತ ಕಲೆ ಹಾಕಲು ಕಾರಣರಾದ ಗೇಲ್‌ ಅವರ ಎರಡು ಅಮೂಲ್ಯ ಕ್ಯಾಚ್‌ಗಳನ್ನು ‘ಪ್ರೀತಿ’ಯ ತಂಡ ಕೈಚೆಲ್ಲಿತು.

ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಲಾಂಗ್‌ ಆನ್‌ನಲ್ಲಿ ಜಾರ್ಜ್‌ ಬೇಲಿ ಕ್ಯಾಚ್‌ ಬಿಟ್ಟರು. ಆಗ ಗೇಲ್‌ 31 ರನ್‌ ಮಾತ್ರ ಗಳಿಸಿದ್ದರು. ಪಂಜಾಬ್‌ ಇನ್ನೊಂದು ಎಡವಟ್ಟು ಮಾಡಿದ್ದು ಒಂಬತ್ತನೇ ಓವರ್‌ನಲ್ಲಿ. ಅಕ್ಷರ್‌ ಪಟೇಲ್‌ ಬೌಲಿಂಗ್‌ನಲ್ಲಿ ಡೀಪ್‌ ಮಿಡ್‌ವಿಕೆಟ್ ಬಳಿ ಮನನ್‌ ವೋಹ್ರಾ ಕ್ಯಾಚ್‌ ಬಿಟ್ಟರು. ಈ ವೇಳೆ ಗೇಲ್‌ 53 ರನ್‌ ಗಳಿಸಿದ್ದರು. ಇದೇ ಅವಕಾಶ ಬಳಸಿಕೊಂಡು ಗೇಲ್‌ ಸೊಗಸಾದ ಇನಿಂಗ್ಸ್ ಕಟ್ಟಿದರು.

ಒಟ್ಟು 57 ಎಸೆತಗಳನ್ನು ಎದುರಿಸಿದ ಗೇಲ್‌ 117 ರನ್‌ ಬಾರಿಸಿದರು. 96 ರನ್‌ ಆಗಿದ್ದಾಗ ಫೈನ್‌ ಲೆಗ್‌ ಬಳಿ ಬೌಂಡರಿ ಬಾರಿಸಿ ಈ ಬಾರಿಯ ಐಪಿಎಲ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಈ ವೇಳೆಯಂತೂ ಅಭಿಮಾನಿಗಳ ಸಂಭ್ರಮ ಹೇಳತೀರದು. ಕ್ರೀಡಾಂಗಣದ ಮೂಲೆ ಮೂಲೆಗಳಿಂದಲೂ ‘ಗೇಲ್‌.... ಗೇಲ್‌...’ ಎನ್ನುವ ಘೋಷಣೆ ‘ಮೆಕ್ಸಿಕನ್’ ಅಲೆಯ ರೂಪದಲ್ಲಿ ವ್ಯಕ್ತವಾಯಿತು. ಗೇಲ್‌ ಬ್ಯಾಟ್‌ ಬದಿಗಿಟ್ಟು ಕ್ರೀಸ್‌ ಬದಿಯಲ್ಲಿಯೇ ಪ್ರೇಕ್ಷಕರತ್ತ ಮುಖ ಮಾಡಿ ಕುಣಿದು ಸಂಭ್ರಮಿಸಿದರು. ಆಗ ಅಭಿಮಾನಿಗಳ ಸಂಭ್ರಮ ಇಮ್ಮಡಿಗೊಂಡಿತ್ತು.

ಗೇಲ್‌ ಅಬ್ಬರಕ್ಕೆ ತತ್ತರಿಸಿ ಹೋಗಿದ್ದ ಪಂಜಾಬ್‌ ತಂಡದ ನಾಯಕ ಬೇಲಿ ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರು. 17ನೇ ಓವರ್‌ನಲ್ಲಿ ಗೇಲ್‌ ಅವರು ಅಕ್ಷರ್‌ ಪಟೇಲ್‌ ಕೈಗೆ ಕ್ಯಾಚ್‌ ನೀಡಿದರು. ಗೇಲ್‌ ಕ್ರೀಸ್‌ನಿಂದ ಹೊರ ನಡೆದಾಗಲೂ ಬ್ಯಾಟ್‌ ಎತ್ತಿ ಪ್ರೇಕ್ಷಕರತ್ತ ನೋಡಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಇವರ ಆಟಕ್ಕೆ ವಿರಾಟ್‌ ಕೊಹ್ಲಿ (32) ನೆರವಾದರು.

ಡಿವಿಲಿಯರ್ಸ್‌ ಅಬ್ಬರ: ಅಬ್ಬರದ ಆಟಕ್ಕೆ ಹೆಸರಾಗಿರುವ ಡಿವಿಲಿಯರ್ಸ್ ಕೂಡಾ ತಮ್ಮ ಮೇಲಿನ ನಿರೀಕ್ಷೆ ಹುಸಿಗೊಳಿಸಲಿಲ್ಲ. 24 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸೇರಿದಂತೆ 47 ರನ್‌ ಸಿಡಿಸಿದರು. ಸರ್ಫರಾಜ್‌ ಖಾನ್‌ (11) ನೆರವಾದರು. ನಾಲ್ಕು ಓವರ್‌ಗಳಲ್ಲಿ 50 ರನ್‌ ನೀಡಿದ ಅಕ್ಷರ್‌ ಪಟೇಲ್‌ ದುಬಾರಿಯೆನಿಸಿದರು.

ಪಂಜಾಬ್‌ ಕೆಟ್ಟ ಆಟ: ಹೋದ ಸಲದ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ಪಂಜಾಬ್‌ ತಂಡ ಅತ್ಯಂತ ಕೆಟ್ಟದಾಗಿ ಆಡಿತು. ಗೆಲುವು ದೂರದ ಮಾತಾದರೂ, ಕನಿಷ್ಠ ಹೋರಾಟದ ಛಲವನ್ನೂ ತೋರಲಿಲ್ಲ. ಮೊದಲ ಓವರ್‌ನಲ್ಲಿಯೇ ಮನನ್ ಔಟಾದರು. ಪಂಜಾಬ್‌ ತಂಡದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಮ್ಯಾಕ್ಸ್‌ವೆಲ್ (1), ಡೇವಿಡ್ ಮಿಲ್ಲರ್‌ (7) ಮತ್ತು ಜಾರ್ಜ್‌ ಬೇಲಿ (2) ಅವರಿಗೆ ಆರ್‌ಸಿಬಿ ತಂಡದ ಕರಾರುವಾಕ್ಕಾದ ಬೌಲಿಂಗ್ ಎದುರಿಸಲು ಸಾಧ್ಯವಾಗಲಿಲ್ಲ. 40 ರನ್‌ ಗಳಿಸಿದ ಅಕ್ಷರ್‌ ಪಟೇಲ್‌ ಗರಿಷ್ಠ ಸ್ಕೋರರ್ ಎನಿಸಿದರು.

ಗೇಲ್‌ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದರೆ, ವೇಗಿಗಳಾದ ಮಿಷೆಲ್‌ ಸ್ಟಾರ್ಕ್‌ ಮತ್ತು ಕರ್ನಾಟಕದ ಎಸ್. ಅರವಿಂದ್‌ ಬೌಲಿಂಗ್‌ನಲ್ಲಿ ವಿಜೃಂಭಿಸಿದರು. ಈ ಇಬ್ಬರೂ ಬೌಲರ್‌ಗಳು ತಲಾ ನಾಲ್ಕು ವಿಕೆಟ್‌ ಉರುಳಿಸಿದರು. ಪಂಜಾಬ್‌ ತಂಡದ ಒಟ್ಟು ಮೊತ್ತ 34 ರನ್ ಆಗುವಷ್ಟರಲ್ಲಿ ಐದು ವಿಕೆಟ್‌ ಪತನವಾಗಿದ್ದರಿಂದ ತಂಡದ ಸೋಲು ಖಚಿತವಾಗಿತ್ತು. ಈ ವೇಳೆ ಅಭಿಮಾನಿಗಳೂ ಹೊರನಡೆಯ ತೊಡಗಿದರು. ಗಾಯದ ಸಮಸ್ಯೆಯಿಂದ ಬಳಲಿದ್ದ ಆ್ಯಡಮ್‌ ಮಿಲ್ನೆ ಬದಲು ಅರವಿಂದ್‌ ಬೆಂಗಳೂರಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಅವಕಾಶವನ್ನು ಅವರು ಅಮೋಘವಾಗಿ ಬಳಸಿಕೊಂಡು ಹಿರಿಯ ಆಟಗಾರರ ಮೆಚ್ಚುಗೆಗೂ ಪಾತ್ರರಾದರು.

ಆದರೆ, ಎರಡೂವರೆ ಗಂಟೆ ನಡೆದ ಪಂದ್ಯದಲ್ಲಿ ಭಾರಿ ಸಂಭ್ರಮ ಪಟ್ಟು ಪ್ರತಿ ನಿಮಿಷವನ್ನೂ ಖುಷಿಯಾಗಿ ಕಳೆದದ್ದು ಕ್ರಿಕೆಟ್‌ ಪ್ರೇಮಿಗಳು. ಇಲ್ಲಿ ಹೋದ ವಾರ ನಡೆದಿದ್ದ ರಾಯಲ್ಸ್ ಮತ್ತು ನೈಟ್‌ ರೈಡರ್ಸ್ ಎದುರಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಆದ್ದರಿಂದ ಅಭಿಮಾನಿ ಗಳು ವರುಣನ ಭೀತಿಯಿಂದಲೇ ಕ್ರೀಡಾಂಗಣಕ್ಕೆ ಬಂದಿದ್ದರು. ಅಂಗಳದಲ್ಲಿಯೂ ಭರ್ಜರಿಯಾಗಿ ಮಳೆ ಸುರಿಯಿತು. ಅದು ನೀರಿನ ಮಳೆ ಅಲ್ಲ. ಗೇಲ್‌ ಸುರಿಸಿದ ರನ್‌ ಮಳೆ!

ನಾಯಕ ಕೊಹ್ಲಿಗೆ 50ನೇ ಪಂದ್ಯ
ಐಪಿಎಲ್‌ ಟೂರ್ನಿಯಲ್ಲಿ 50 ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.
ದೋನಿ (122), ಗಂಭೀರ್‌ (88), ಆ್ಯಡಮ್‌ ಗಿಲ್‌ಕ್ರಿಸ್ಟ್‌ (74), ಶೇನ್‌ ವಾರ್ನ್‌ (55), ವೀರೇಂದ್ರ ಸೆಹ್ವಾಗ್‌ (53) ಮತ್ತು ಸಚಿನ್‌ (51) ಹೆಚ್ಚು ಪಂದ್ಯಗಳಿಗೆ ನಾಯಕರಾದ ಕೀರ್ತಿ ಹೊಂದಿದ್ದಾರೆ.

ಹೆಚ್ಚು ಅಂತರದ ಗೆಲುವು
ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿ ಪಡೆದ ಎರಡನೇ ಅತಿ ದೊಡ್ಡ ಅಂತರದ ಗೆಲುವು ಇದು. 2008ರ ಆವೃತ್ತಿಯಲ್ಲಿ ನೈಟ್‌ ರೈಡರ್ಸ್‌ ತಂಡ ಆರ್‌ಸಿಬಿ ಎದುರು 140 ರನ್‌ ಜಯ ಸಾಧಿಸಿದ್ದು ಹೆಚ್ಚು ಅಂತರದ ಜಯವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT