ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ನಿರೀಕ್ಷೆಯಲ್ಲಿ ಸೂಪರ್‌ ಕಿಂಗ್ಸ್‌

ಇಂದು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಪೈಪೋಟಿ
Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಬುಧಾಬಿ (ಪಿಟಿಐ): ಎರಡು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ಕಿಂಗ್ಸ್‌ ತಂಡದವರು ಐಪಿಎಲ್‌ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಶುಕ್ರವಾರ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಎದುರಿಸಲಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣದ ವಿವಾದದ ಕಹಿಯನ್ನು ಮರೆತು ಟೂರ್ನಿಯಲ್ಲಿ ಶುಭಾರಂಭ ಮಾಡುವ ಲೆಕ್ಕಾಚಾರವನ್ನು ಮಹೇಂದ್ರ ಸಿಂಗ್‌ ದೋನಿ ಬಳಗ ಹೊಂದಿದೆ.

ಐಪಿಎಲ್‌ ಬೆಟ್ಟಿಂಗ್‌ ಹಗರಣದಲ್ಲಿ ಈ ತಂಡದ ಅಧಿಕಾರಿಗಳ ಹೆಸರು ಕೇಳಿಬಂದಿತ್ತು. ಅದೇ ರೀತಿ ಕೆಲವು ಆಟಗಾರರ ಬಗ್ಗೆಯೂ ಅನುಮಾನ ಎದ್ದಿತ್ತು. ಇದು ತಂಡದ ಪ್ರದರ್ಶನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

‘ಅಂಗಳದ ಹೊರಗಿನ ಘಟನೆಗಳು ಆಟಗಾರರನ್ನು ಕಾಡುವ ಸಾಧ್ಯತೆಯಿದೆ’ ಎಂದು ತಂಡದ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಈಗಾಗಲೇ ಹೇಳಿದ್ದಾರೆ. ಆದರೆ ತಂಡ ಈ ಬಾರಿಯೂ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವನ್ನು ದೋನಿ ವ್ಯಕ್ತಪಡಿಸಿದ್ದಾರೆ.

ಸೂಪರ್‌ಕಿಂಗ್ಸ್‌ ಈ ಬಾರಿ ಐವರು ಪ್ರಮುಖ ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಆದರೆ ಈವರೆಗೆ ತಂಡದಲ್ಲಿದ್ದ ಮೈಕ್‌ ಹಸ್ಸಿ ಮತ್ತು ಅಲ್ಬಿ ಮಾರ್ಕೆಲ್‌ ಅವರನ್ನು ಹರಾಜಿನಲ್ಲಿ ಪಡೆಯಲು ವಿಫಲವಾಗಿತ್ತು. ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕ್ಲಮ್‌ ಅವರನ್ನು ಸೇರಿಸಿಕೊಂಡಿರುವ ಕಾರಣ ತಂಡದ ಬ್ಯಾಟಿಂಗ್ ಬಲ ಹೆಚ್ಚಿದೆ.

ಈ ತಂಡ ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳಾದ ಆರ್‌. ಅಶ್ವಿನ್‌ ಮತ್ತು ವೆಸ್ಟ್‌ ಇಂಡೀಸ್‌ನ ಸ್ಯಾಮುಯೆಲ್‌ ಬದ್ರಿ ಅವರನ್ನು ನೆಚ್ಚಿಕೊಂಡಿದೆ. ಇತ್ತೀಚೆಗೆ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬದ್ರಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಈ ಬಾರಿ ಹೊಸ ಆಟಗಾರರನ್ನು ಸೇರಿಸಿಕೊಂಡು ತನ್ನ ಬಲ ವೃದ್ಧಿಸಿದೆ. ಜಾರ್ಜ್‌ ಬೇಲಿ ನೇತೃತ್ವದ ತಂಡ  ಸೂಪರ್‌ಕಿಂಗ್ಸ್‌ಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ವೀರೇಂದ್ರ ಸೆಹ್ವಾಗ್‌, ಡೇವಿಡ್‌ ಮಿಲ್ಲರ್‌, ಮಿಷೆಲ್‌ ಜಾನ್ಸನ್‌ ಮತ್ತು ಶಾನ್‌ ಮಾರ್ಷ್‌ ಅವರು  ತಂಡದಲ್ಲಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಸೆಹ್ವಾಗ್‌ಗೆ ಈ ಬಾರಿಯ ಐಪಿಎಲ್‌ ಮಹತ್ವದ್ದಾಗಿದೆ. ದೆಹಲಿಯ ಬ್ಯಾಟ್ಸ್‌ಮನ್‌ ಸೂಪರ್‌ಕಿಂಗ್ಸ್‌ ಬೌಲರ್‌ ಗಳಿಗೆ ಸವಾಲಾಗಿ ಪರಿಣಮಿಸುವರೇ ಎಂಬುದನ್ನು ನೋಡಬೇಕು.

‘ನಾಲ್ಕೈದು ದಿನಗಳಿಂದ ನಾವು ಕಠಿಣ ಅಭ್ಯಾಸ ನಡೆಸುತ್ತಿದ್ದೇವೆ. ಇದರಿಂದ ಆಟಗಾರರು ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂ ಡಿದ್ದಾರೆ. ಈ ಬಾರಿ ಟ್ರೋಫಿ ಗೆಲ್ಲುವ ಸಾಮರ್ಥ್ಯ ತಂಡಕ್ಕಿದೆ’ ಎಂದು ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT