ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳತಿಯ ಚಿನ್ನಾಭರಣ ದೋಚಿದ್ದ ಮಹಿಳೆ ಬಂಧನ

Last Updated 28 ಜನವರಿ 2015, 20:05 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ಚಾಲನೆ ಕಲಿಸುವ ಸೋಗಿನಲ್ಲಿ ಸ್ನೇಹಿತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಿನ್ನಾಭರಣ ದೋಚಿದ್ದ ಮಹಿಳೆ ಸೇರಿದಂತೆ ಮೂವ­ರನ್ನು ಬಂಧಿಸಿರುವ ಕೆಂಗೇರಿ ಪೊಲೀಸರು ₨ 2.50 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ಉಪನಗರ ಬಳಿಯ ನಂದನ ಗಾರ್ಡನ್‌ನ ಪ್ರತಿಮಾ (36), ಗಂಗಾಧರ (20) ಮತ್ತು  ಅಮಾ­ನುಲ್ಲಾ (19) ಬಂಧಿತರು.

ಕೇಬಲ್‌ ಕೆಲಸ ಮಾಡುತ್ತಿದ್ದ ಗಂಗಾಧರ, ಪ್ರತಿಮಾ ಅವರಿಗೆ ಪರಿಚಿತನಾಗಿದ್ದ. ಅವರಿಬ್ಬರಿಗೂ ತುರ್ತಾಗಿ ಹಣದ ಅಗತ್ಯವಿದ್ದರಿಂದ ಶೀಲಾ ಎಂಬುವರ ಆಭರಣ ­ಗಳನ್ನು ದೋಚಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪ್ರತಿಮಾ, ಸ್ನೇಹಿತೆ ಶೀಲಾ ಅವರಿಗೆ 2014ರ ಜೂ.25ರಂದು ದ್ವಿಚಕ್ರ ವಾಹನ ಚಾಲನೆ ಕಲಿಸುವುದಾಗಿ ನಂಬಿಸಿ ಕುಂಬಳಗೋಡು ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಪೂರ್ವಯೋಜಿತ ಸಂಚಿ­ನಂತೆ ಸ್ವಲ್ಪ ಸಮಯದಲ್ಲೇ ಅಲ್ಲಿಗೆ ಬಂದ ಗಂಗಾಧರ ಹಾಗೂ ಆತನ ಸಹ­ಚ­ರರು ಶೀಲಾ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಎರಡು ಚಿನ್ನದ ಸರಗಳನ್ನು ದೋಚಿದ್ದರು. ಅಲ್ಲದೇ, ಶೀಲಾ ಅವರಿಗೆ ಅನುಮಾನ ಬರಬಾರದೆಂಬ ಕಾರಣಕ್ಕೆ ಪ್ರತಿಮಾ ಅವರ ಕತ್ತಿನಲ್ಲಿದ್ದ ನಕಲಿ ಸರವನ್ನೂ ಕಿತ್ತುಕೊಂಡು ಪರಾರಿಯಾ­ಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪತಿಗೂ ಸುಳ್ಳು: ಘಟನೆ ಬಳಿಕ ಪ್ರತಿಮಾ, ಶೀಲಾ ಅವರ ಜತೆಯೇ ಕುಂಬಳಗೋಡು ಠಾಣೆಗೆ ಹೋಗಿ ದೂರು ದಾಖಲಿಸಿ­ದ್ದರು. ಅಲ್ಲದೇ, ದರೋಡೆಕೋರರು ಸರ ಕಿತ್ತುಕೊಂಡು ಹೋಗಿದ್ದಾಗಿ ಪತಿಗೂ ಸುಳ್ಳು ಹೇಳಿದ್ದರು. ಆದರೆ, ಘಟನಾ ದಿನ ಅವರು ಅಸಲಿ ಚಿನ್ನದ ಸರವನ್ನು ಮನೆಯಲ್ಲೇ ಬಿಚ್ಚಿಟ್ಟು ನಕಲಿ ಸರ ಹಾಕಿಕೊಂಡು ಹೋಗಿದ್ದರು. ಈ ಸಂಗತಿ ಪ್ರತಿಮಾ ಅವರನ್ನು ಬಂಧಿಸಿದ ನಂತರವಷ್ಟೇ ಅವರ ಪತಿಗೆ ಗೊತ್ತಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರು ಶೀಲಾ ಅವರ ಸರಗಳನ್ನು ಗಿರವಿ ಇಟ್ಟು, ಅದರಿಂದ ಬಂದ ಹಣ­ವನ್ನು ಹಂಚಿಕೊಂಡಿದ್ದರು. ಪ್ರಕರಣದ ಇತರೆ ಆರೋಪಿಗಳಾದ ಎಸ್‌.ಮಂಜು­ನಾಥ, ಕಿರಣ್‌ ಮತ್ತು ಮಂಜುನಾಥ್‌ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT