ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೈರುಹಾಜರಿಯಲ್ಲೇ ಪ್ರಶ್ನೋತ್ತರ!

Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಳಗಾವಿ: ವಿರೋಧ ಪಕ್ಷದ ಸದಸ್ಯರ ಅನುಪಸ್ಥಿತಿಯಲ್ಲೇ ಪ್ರಶ್ನೋತ್ತರ ಕಲಾಪ ನಡೆದ ಸನ್ನಿವೇಶಕ್ಕೆ ವಿಧಾನ ಪರಿಷತ್ತು ಗುರುವಾರ ಸಾಕ್ಷಿಯಾಯಿತು.

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಆಡಳಿತ ಪಕ್ಷದ ಸದಸ್ಯರು ಅಡ್ಡಿಪಡಿಸಿದರು ಎಂಬ ಕಾರಣ ನೀಡಿ ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಬಳಿಕವೂ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಕಲಾಪ  ಮುಂದುವರಿಸಿದರು.

ಪ್ರಶ್ನೋತ್ತರ ಆರಂಭವಾದ ಬಳಿಕವೂ ವಿರೋಧ ಪಕ್ಷದ ಸದಸ್ಯರು ಸದನದೊಳಗೆ ಬರಲಿಲ್ಲ.

‘ಸದನದಲ್ಲಿ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿದೆ. ವಿರೋಧ ಪಕ್ಷದ ಸದಸ್ಯರು ಪ್ರಶ್ನೋತ್ತರದ ಹೊತ್ತಿಗಾದರೂ ಸದನದೊಳಗೆ ಬರಬಹುದು ಎಂದು ನಿರೀಕ್ಷಿಸಿದ್ದೆ. ಅವರು ಬಂದಿಲ್ಲ. ಹಿಂದೆಂದೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ನಾನೇನು ಮಾಡಲಿ? ಮುಖ್ಯಮಂತ್ರಿ ಅಥವಾ ಸಭಾನಾಯಕರಾದರೂ ವಿರೋಧ ಪಕ್ಷದವರ ಮನವೊಲಿಸಿ’ ಎಂದು ಸಭಾಪತಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

‘ಅಧಿವೇಶನ ಯಶಸ್ವಿ ಆಗಬೇಕಾದರೆ ವಿರೋಧ ಪಕ್ಷದ ಸಹಕಾರವೂ ಅಗತ್ಯ. ಆದರೇನು ಮಾಡುವುದು, ಈಶ್ವರಪ್ಪ ಅವರು ಸಣ್ಣಪುಟ್ಟ ವಿಚಾರಕ್ಕೆ  ಹೊರಗೆ ಹೋಗುತ್ತೇನೆ ಎನ್ನುತ್ತಾರೆ. ನಮ್ಮ ಸಭಾನಾಯಕರೇ ಅವರನ್ನು ಸದನಕ್ಕೆ ಕರೆಯುತ್ತಾರೆ. ನಾನೇ ಮನವಿ ಮಾಡಿಕೊಳ್ಳುತ್ತೇನೆ. ಈಶ್ವರಪ್ಪ ಅವರೇ ದಯವಿಟ್ಟು ಬರ್ರೀ..., ಸಲಹೆ ಕೊಡ್ರೀ,  ತಪ್ಪಿದ್ದರೆ ಸರಿಮಾಡಿಕೊಳ್ಳುವ’ ಎಂದು ಸಿದ್ದರಾಮಯ್ಯ ಅವರು ಹಾಸ್ಯದ ಧಾಟಿಯಲ್ಲಿ ಮನವಿ ಮಾಡಿದರು. ಆದರೂ ವಿರೋಧ ಪಕ್ಷದವರು ಒಳಕ್ಕೆ ಬರಲಿಲ್ಲ.

ಸದನದಲ್ಲಿ ಕೇಳಿಸಿದ್ದು
* ಚುನಾವಣೆಯ ಹೆಸರಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಮಾರಾಟಕ್ಕೆ ಇರಿಸಲಾಗಿದೆ.      
-ರಮೇಶ್ ಕುಮಾರ್

* ಸದನದಲ್ಲಿ ಸಚಿವರ ಸಂಖ್ಯೆ ಕಡಿಮೆ ಇದೆ. ಎಲ್ಲರೂ ಗೋವಾಗೆ ಹೋಗಿದ್ದಾರಾ? ಇಲ್ಲ, ಸಿ.ಎಂ ಜತೆ ಅಸಹಕಾರವಿದೆ ಎಂಬುದನ್ನು ಹೀಗೆ ಸಾಬೀತು ಮಾಡುತ್ತಿದ್ದಾರಾ?
– ಗೋವಿಂದ ಕಾರಜೋಳ
* ನಮ್ಮ ಗುರುಗಳು ಹೇಳುತ್ತಿದ್ದರು. ಹೋರಾಟಕ್ಕೆ ಜೈಲು, ಅನ್ಯಾಯಕ್ಕೆ ಬಯಲು ಅಂತ!
- ಕಾಗೋಡು ತಿಮ್ಮಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT