ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದಲ್ಲಿ ಡೀಪ್ಸ್‌–ಸಲ್ಲು ಜೋಡಿ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ನಟ–ನಟಿಯರಿಗೆ ಸಹಸ್ರ, ಲಕ್ಷ ಸಂಖ್ಯೆಯಲ್ಲಿ ಅಭಿಮಾನಿಗಳು ಇರುವುದು ಎಷ್ಟು ನಿಜವೋ, ಆ ನಟ ಅಥವಾ ನಟಿ ಇನ್ನಾರದ್ದೋ ನಟ/ನಟಿಯ ಅಭಿಮಾನಿಯಾಗಿರುತ್ತಾರೆ ಎಂಬುದೂ ಅಷ್ಟೇ ದಿಟ. ಇದೇ ಕಾರಣಕ್ಕೆ ತಮ್ಮ ಇಷ್ಟದ ನಟ/ನಟಿಯ ಜೊತೆ ಒಮ್ಮೆಯಾದರೂ ನಟಿಸುವ ಆಸೆ ಅವರಲ್ಲಿ  ಅವಿತುಕೊಂಡಿರುತ್ತದೆ.

ಇಂಥದ್ದೊಂದು ಆಸೆ ಹೊತ್ತಿದ್ದ ದೀಪಿಕಾ ಪಡುಕೋಣೆ ಅವರ ಕನಸು ಬಹು ವರ್ಷಗಳ ನಂತರ ನನಸಾಗುವ ಕಾಲ ಬಂದಿದ್ದರೂ ಅದೀಗ ಗೊಂದಲದಲ್ಲಿದೆ. ಅದೇನೆಂದರೆ ದೀಪಿಕಾ, ಸಲ್ಮಾನ್‌ ಖಾನ್‌ ಅವರ ಫ್ಯಾನ್‌ ಅಂತೆ. ಆದರೆ ಸಲ್ಲು ಜೊತೆ ನಟಿಸುವ ಅವಕಾಶ ಇದುವರೆಗೂ ಅವರಿಗೆ ಬಂದಿರಲಿಲ್ಲ. ಆದರೆ ಮುಂದಿನ ಚಿತ್ರ ‘ಟ್ಯೂಬ್‌ಲೈಟ್‌’ನಲ್ಲಿ ಅಂಥದ್ದೊಂದು ಅವಕಾಶ ಈ ಬೆಡಗಿಗೆ ಸಿಕ್ಕಿ ಹಿರಿಹಿರಿ ಹಿಗ್ಗಿದ್ದರು.

ಚಿತ್ರ ನಿರ್ಮಾಪಕ ಕಬೀರ್‌ ಖಾನ್‌ ‘ಟ್ಯೂಬ್‌ಲೈಟ್‌’ ಚಿತ್ರದ ಕುರಿತು ದೀಪಿಕಾಗೆ ವಿವರಿಸಿದಾಗ ಆಕೆ ಮೊದಲು ಕೇಳಿದ್ದು ಅದರ ನಟ ಯಾರೆಂದು. ಕಬೀರ್‌ ಅವರು ಸಲ್ಮಾನ್‌ ಖಾನ್‌ ಅವರ ವಿಷಯ ಎತ್ತಿದಾಗ ದೀಪಿಕಾಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಂತಾಯಿತಂತೆ. ‘ನಾನು ಈ ವಿಷಯ ಕೇಳಿದ ತಕ್ಷಣ ರೋಮಾಂಚನಗೊಂಡೆ. ಏಕೆಂದರೆ ನಾನು ಅನೇಕ ನಾಯಕ ನಟರ ಜೊತೆ ನಟಿಸಿದ್ದೇನೆ. ಹಲವಾರು ಚಿತ್ರಗಳು ಸೂಪರ್‌ಹಿಟ್‌ ಕೂಡ ಆಗಿವೆ.

ಕೆಲವು ನಟರ ಜೊತೆ ನನ್ನ ಕೆಮಿಸ್ಟ್ರಿ ಚೆನ್ನಾಗಿದೆ ಎಂಬ ಹೊಗಳಿಕೆಯೂ ಇದೆ. ಆದರೆ ಇವೆಲ್ಲವುಗಳ ಹೊರತಾಗಿ ನನಗೆ ಸಲ್ಮಾನ್‌ ಖಾನ್‌ ಅವರ ಜೊತೆ ನಟಿಸುವ ಆಸೆ ಬಹಳ ಇತ್ತು. ಅದು ಇದುವರೆಗೂ ಕೈಗೂಡಿರಲಿಲ್ಲ. ಆದರೆ ಅಂಥದ್ದೊಂದು ಕಾಲ ಈಗ ಬಂದಿದೆ’ ಎಂದು ಕಳೆದ ವಾರ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.

ಈ ಚಿತ್ರದಲ್ಲಿ ಚಿಕ್ಕ ಪಾತ್ರ ಎಂದು ಕಬೀರ್‌ ಹೇಳಿದ್ದರೂ ಸಲ್ಮಾನ್‌ ಖಾನ್‌ ಇರುವ ಒಂದೇ ಕಾರಣಕ್ಕೆ ಅದನ್ನು ದೀಪಿಕಾ ಒಪ್ಪಿಕೊಂಡಿದ್ದರಂತೆ ಎಂಬುದೂ ಸುದ್ದಿಯಾಗಿತ್ತು.ಆದರೆ ಈಗ ಏಕಾಏಕಿಯಾಗಿ ದೀಪಿಕಾ ಈ ಚಿತ್ರದಿಂದ ಹಿಂದಕ್ಕೆ ಸರಿಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

‘ಟ್ಯೂಬ್‌ಲೈಟ್‌’ ಚಿತ್ರ ಇಂಡೊ–ಚೀನಾ ಗಡಿಯ ಕುರಿತಾದ ಕಥೆಯನ್ನು ಹೊಂದಿದೆಯಂತೆ. ಇದು ಸಹೋದರರಿಬ್ಬರ ಕಥೆ. ಒಬ್ಬ ಸಹೋದರ ಸಲ್ಮಾನ್‌ ಖಾನ್‌ ಆಗಿದ್ದರೆ, ಇನ್ನೊಬ್ಬರ ಹುಡುಕಾಟ ನಡೆದಿದೆ. ನಟಿಯಾಗಿ ಚೀನಾ ಮೂಲದ ಹುಡುಗಿಯನ್ನೇ ಈ ಚಿತ್ರದಲ್ಲಿ ಹಾಕಿಕೊಳ್ಳಲು ನಿರ್ಮಾಪಕರು ಬಯಸಿರುವ ಕಾರಣ, ದೀಪಿಕಾ ಅವರನ್ನು ಕೈಬಿಡಲಾಗಿದೆ ಎಂಬುದು ಒಂದೆಡೆ ಸುದ್ದಿ.

ಆದರೆ ಈ ಚಿತ್ರದ ಹೈಲೈಟ್‌ ಇಬ್ಬರು ಸಹೋದರರು ಮಾತ್ರ. ನಟಿಯದ್ದು ತೀರಾ ಚಿಕ್ಕ ಪಾತ್ರ ಆಗಿದುದರಿಂದ ದೀಪಿಕಾ ಇದನ್ನು ಒಪ್ಪಲಿಲ್ಲ ಎನ್ನುವುದು ಇನ್ನೊಂದೆಡೆಯ ಸುದ್ದಿ. ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಇನ್ನಷ್ಟು ಹೆಚ್ಚಿಸುವಂತೆ ದೀಪಿಕಾ ಅವರು ಕಬೀರ್‌ ಅವರಿಗೆ ಕೇಳಿಕೊಂಡಿದ್ದರೂ ಕಬೀರ್‌ ಅದಕ್ಕೆ ಒಪ್ಪದ ಕಾರಣ ದೀಪಿಕಾ ಚಿತ್ರಕ್ಕೆ ಸಹಿ ಹಾಕಲು ಒಪ್ಪಲಿಲ್ಲ’ ಎನ್ನಲಾಗಿದೆ.

ಇದರಲ್ಲಿ ಯಾವುದು ನಿಜ, ಯಾವುದು ಸುಳ್ಳು, ಡಿಪ್ಸ್‌–ಸಲ್ಲು ಜೋಡಿಯನ್ನು ತೆರೆಯ ಮೇಲೆ ಕಾಣುವ ಅವಕಾಶ ಇವರಿಬ್ಬರ ಅಭಿಮಾನಿಗಳಿಗೆ ಸಿಗುತ್ತದೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಿದೆ. ಸದ್ಯದ ಮಟ್ಟಿಗೆ ಇದು ಗೊಂದಲದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT