ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಬೆ ಆಟ; ಭರ್ಜರಿ ಊಟ

Last Updated 12 ನವೆಂಬರ್ 2015, 19:30 IST
ಅಕ್ಷರ ಗಾತ್ರ

ನಗರದ ಶೆಖಾವತ್‌ ರೆಸ್ಟೊರೆಂಟ್‌ ‘ಕೇಸರಿಯಾ’ ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬದ ಅಂಗವಾಗಿ ವಿಶೇಷ ರಾಜಸ್ತಾನಿ ಖಾದ್ಯಗಳ ಜೊತೆಗೆ ಅಲ್ಲಿನ ಗೊಂಬೆಯಾಟದ (ಕಟ್‌ಪುತ್ಲಿ) ಮನರಂಜನೆಯನ್ನು ನೀಡುತ್ತಿದೆ. ರಾಜಸ್ತಾನದಲ್ಲಿ ದೀಪಾವಳಿ ಹಬ್ಬಕ್ಕೆಂದೇ ತಯಾರಿಸಲಾಗುವ ಸಾಂಪ್ರದಾಯಿಕ ಖಾದ್ಯಗಳನ್ನು ನಗರದ ಆಹಾರ ಪ್ರಿಯರಿಗೆ ಪರಿಚಯಿಸುತ್ತಿದೆ.

ಗ್ರಾಹಕರಿಗೆ ರುಚಿಯಾದ ಆಹಾರ ನೀಡುವುದರೊಂದಿಗೆ ರಾಜಸ್ತಾನದಲ್ಲಿ ಹಬ್ಬ ಹರಿದಿನಗಳಲ್ಲಿ ಹಾಗೂ ಸಾಮಾಜಿಕ ಕೂಟಗಳಲ್ಲಿ ಪ್ರದರ್ಶಿಸಲಾವ ಕಟ್‌ಪುತ್ಲಿ ಪ್ರದರ್ಶನವನ್ನೂ ರೆಸ್ಟೊರೆಂಟ್‌ನಲ್ಲಿ ಆಯೋಜಿಸಿರುವುದು ವಿಶೇಷ. ರೆಸ್ಟೊರೆಂಟ್‌ನ ಗ್ರಾಹಕರನ್ನು ರಂಜಿಸಲು ರಾಜಸ್ತಾನದಿಂದ ಕಟ್‌ಪುತ್ಲಿ ಆಡಿಸುವವರನ್ನು ಕರೆಸಿದ್ದಾರೆ.

ಕಟ್‌ಪುತ್ಲಿ ಆಟಿಸುವ ಕಲಾವಿದರು ಪಕ್ಕಾ ರಾಜಸ್ತಾನಿ ಜಾನಪದ ಹಾಡುಗಳೊಂದಿಗೆ ಅಲ್ಲಿನ ಇತಿಹಾಸ, ಜೀವನ ಶೈಲಿ, ವಿವಾಹ ಪದ್ಧತಿ, ರಾಜ ಮನೆತನಗಳು, ಅವರ ಕಥೆಗಳು ಹಾಗೂ ಅಲ್ಲಿನ ಆಚಾರ ವಿಚಾರಗಳನ್ನು ಗೊಂಬೆಯಾಟದ ಮೂಲಕ ನಗರದ ಜನರಿಗೆ ಪರಿಚಯ ಮಾಡಿಕೊಡುತ್ತಿದ್ದಾರೆ. ಜತೆಗೆ ಇತ್ತೀಚಿನ ಬಾಲಿವುಡ್‌ ಹಾಡುಗಳಿಗೂ ಈ ಗೊಂಬೆಗಳು (ಕಟ್‌ಪುತ್ಲಿ) ಕುಣಿಯುತ್ತಾ ರೆಸ್ಟೊರೆಂಟ್‌ಗೆ ಬರುವ ಗ್ರಾಹಕರನ್ನು ರಂಜಿಸುತ್ತಿವೆ. ಬೇಡಿಕೆ ಮೇರೆಗೆ ಹಿಂದಿ ಸಿನಿಮಾದ ಹಾಡುಗಳಿಗೂ ಕಲಾವಿದರು ಈ ಗೊಂಬೆಗಳನ್ನು ಕುಣಿಸುವ ಮೂಲಕ ಗ್ರಾಹಕರನ್ನು ತೃಪ್ತಿಪಡಿಸುತ್ತಾರೆ.

‘ಹಿಂದೆ ಮಹಾರಾಜರ ಸಾಧನೆಯನ್ನು ಜನರಿಗೆ ಸಾರುವ ಸಲುವಾಗಿ ಕಟ್‌ಪುತ್ಲಿ ಪ್ರದರ್ಶನದ ಆರಂಭವಾಯಿತು. ಅದರಲ್ಲಿ ರಾಜ ಬೀರಂಬರ್‌ ಸಿಂಗ್‌ ರಾಥೋಡ್‌, ಅಮರ್‌ ಸಿಂಗ್‌ ರಾಜನ ಕಥೆಗಳು ತುಂಬಾ ಪ್ರಸಿದ್ಧವಾಗಿವೆ. ಅವರು ಮುಸ್ಲಿಂ ರಾಜರ ವಿರುದ್ಧ ನಡೆಸಿದ್ದ ಯುದ್ಧ ಹಾಗೂ ತೋರಿದ ಸಾಹಸವನ್ನು ಗೊಂಬೆಯಾಟದ ಮೂಲಕ ಜನರಿಗೆ ತಿಳಿಸಲಾಗುತ್ತಿತ್ತು. ಹೀಗೆ ಪ್ರಾರಂಭವಾದ ಗೊಂಬೆಯಾಟ ಜನರ ಮನರಂಜನೆಯ ಮಾಧ್ಯಮವಾಗಿ ಬೆಳೆಯಿತು. ಹೀಗಾಗಿ ಹಬ್ಬ ಹರಿದಿನಗಳಲ್ಲಿ, ವಿವಾಹ, ಹುಟ್ಟುಹಬ್ಬ ಸೇರಿದಂತೆ ಎಲ್ಲಾ ರೀತಿಯ ಔತಣ ಕೂಟಗಳಲ್ಲಿ ಇದು ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಈಗ ಸಿನಿಮಾ, ಮಾಲ್‌ಗಳ ಹಾವಳಿಯಿಂದ ಇದು ಕೇವಲ ಪ್ರವಾಸಿಗರನ್ನು ರಂಜಿಸುವ ಮಾಧ್ಯಮವಾಗಿ ಉಳಿದಿದೆ’ ಎಂದು ಬೇಸರದಿಂದ ನುಡಿಯುತ್ತಾರೆ ಗೊಂಬೆಯಾಡಿಸುವ ಕಲಾವಿದ ಬಿಯಾರಾಮ್‌ ಭಟ್‌.

‘ರಾಜಸ್ತಾನದ ಭಟ್‌ ಕುಟುಂಬದವರು ಮಾತ್ರ ಹಿಂದೆ ಕಟ್‌ಪುತ್ಲಿ ಆಡಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಆಸಕ್ತಿಯುಳ್ಳವರೆಲ್ಲರೂ ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಪ್ರಾರಂಭಿಸಿದರು. ಆದರೆ ಈ ಕಲೆ ಈಗ ರಾಜಸ್ತಾನದಲ್ಲಿ ಪ್ರವಾಸಿಗರು ಭೇಟಿ ನೀಡುವ ಪ್ರದೇಶಗಳಲ್ಲಿ ಮಾತ್ರ ಜೀವಂತವಾಗಿದೆ.

ಉಳಿದಂತೆ ಕೆಲವರು ಸಿನಿಮಾಗಳಲ್ಲಿ ಹಾಗೂ ಟೀವಿ ಷೋಗಳಲ್ಲಿ ಗೊಂಬೆ ಆಡಿಸುತ್ತಾರೆ. ಇನ್ನು ಕೆಲವರು ರಾಜಸ್ತಾನದ ಸಾಂಪ್ರದಾಯಿಕ ಕಲೆಯನ್ನು ವಿದೇಶಗಳಲ್ಲಿ ಪ್ರದರ್ಶಿಸುತ್ತಾರೆ. ಆದರೂ ಇನ್ನೂ ರಾಜಸ್ತಾನದಲ್ಲಿ ಭಟ್‌ ಸಮುದಾಯಕ್ಕೆ ಸೇರಿದವರು ಮಾತ್ರ ಪರಂಪರಾಗತವಾಗಿ ಇದನ್ನು ವೃತ್ತಿಯನ್ನಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮನೆಯಲ್ಲಿ ಮಗು ಐದು ವರ್ಷ ಪೂರೈಸುತ್ತಿದ್ದಂತೆಯೇ ಡೋಲಕ್‌ ಬಾರಿಸುವುದು, ಹಾಡು ಹೇಳುವುದು ನಂತರ ಗೊಂಬೆಯಾಡಿಸುವುದನ್ನು ಕಲಿಸುತ್ತೇವೆ’ ಎಂದು ವಿವರಿಸುತ್ತಾರೆ ಅವರು.

ಕಟ್‌ಪುತ್ಲಿಗೆ ಅಳವಡಿಸಲಾಗಿರುವ ದಾರವನ್ನು ಹಿಡಿದು ಪರದೆ ಹಿಂದೆ ನಿಂತ ವ್ಯಕ್ತಿಗಳು ಆಡಿಸುತ್ತಾರೆ. ಒಂದು ಗೊಂಬೆಗೆ ಹತ್ತು ದಾರಗಳನ್ನು ಅಳವಡಿಸಲಾಗಿರುತ್ತದೆ. ಅದನ್ನು ಕೈಗಳಲ್ಲಿನ ಹತ್ತು ಬೆರಳುಗಳಿಗೆ ಸೇರಿಸಿಕೊಂಡು ಎರಡು ಗೊಂಬೆಗಳನ್ನು ಏಕಕಾಲಕ್ಕೆ ಕುಣಿಸುತ್ತಾರೆ. ಸ್ಥಳ ಹಾಗೂ ಪ್ರೇಕ್ಷಕರ ಸಂಖ್ಯೆಯ ಆಧಾರದ ಮೇಲೆ ವೇದಿಕೆಯ ನಿರ್ಮಾಣ ಹಾಗೂ ಆಡಿಸುವ ಗೊಂಬೆಗಳ ಸಂಖ್ಯೆಯನ್ನು ನಿರ್ಧರಿಸುತ್ತಾರೆ. ಅದರಲ್ಲೂ ಗೊಂಬೆ ಆಡಿಸುವ ತಂಡದಲ್ಲಿ ಹಾಡು ಹೇಳುವವರು, ಡೋಲಕ್‌ ಬಾರಿಸುವವರು ಹಾಗೂ ಗೊಂಬೆ ಆಡಿಸುವವರು ಇರುತ್ತಾರೆ. ಈ ತಂಡದಲ್ಲಿರುವ ಎಲ್ಲರೂ ಎಲ್ಲಾ ಕೆಲಸಗಳನ್ನು ಕಲಿತಿರುತ್ತಾರೆ.

ಸಾಮಾನ್ಯವಾಗಿ ಗೊಂಬೆ ಆಡಿಸುವವರೇ ಗೊಂಬೆಗಳನ್ನು ತಯಾರಿಸುತ್ತಾರೆ. ಹಗುರವಾದ ಮರದಿಂದ ಗೊಂಬೆಯ ಮುಖವನ್ನು ಮಾತ್ರ ಸಿದ್ಧಪಡಿಸಿ, ಅದಕ್ಕೆ ಬಣ್ಣದಿಂದ ಕಣ್ಣು, ಮೂಗು, ಬಾಯಿ ಹಾಗೂ ಕಿವಿಗಳನ್ನು ಬರೆಯುತ್ತಾರೆ. ನಂತರ ಅದಕ್ಕೆ ಅಗತ್ಯ ವಸ್ತ್ರಗಳನ್ನು ವಿನ್ಯಾಸ ಮಾಡುತ್ತಾರೆ. ಒಂದು ಗೊಂಬೆಗೆ ಹತ್ತಕ್ಕೂ ಹೆಚ್ಚು ರೀತಿಯ ವಸ್ತ್ರಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಪ್ರೇಕ್ಷಕರ ಬೇಡಿಕೆಗೆ ಹಾಗೂ ಗೊಂಬೆಯಾಟದ ವಿಷಯದ ಆಯ್ಕೆಗೆ ತಕ್ಕಂತೆ ವಸ್ತ್ರಗಳನ್ನು ಮಾತ್ರ ಬದಲಾಯಿಸುತ್ತಾರೆ. ಹೀಗೆ ಒಂದು ಗೊಂಬೆಯನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಕಲಾವಿದರಿಗೆ ಎರಡು ದಿನಗಳು ಬೇಕು. ಈ ಗೊಂಬೆಗಳನ್ನು ಹಗುರವಾದ ಮರಗಳಿಂದ ಮಾಡುವುದರಿಂದ ಅವುಗಳನ್ನು ಸುಲಭವಾಗಿ ಕುಣಿಸಬಹುದು. ಆದರೆ ದೀರ್ಘಕಾಲ ಬಾಳಿಗೆ ಬರುವುದಿಲ್ಲ.

ಗೊಂಬೆಯಾಡಿಸುವ ಕಲಾವಿದರು ದೇಶದ ನಾನಾ ಭಾಗಗಳಿಗೆ ತೆರಳಿ ಪ್ರದರ್ಶನ ನೀಡುತ್ತಾರೆ. ಒಮ್ಮೆ ನೀಡುವ ಪ್ರದರ್ಶನಕ್ಕೆ ತಕ್ಕಂತೆ ಸಂಭಾವನೆಯನ್ನು ಪಡೆಯುತ್ತಾರೆ. ಆದರೆ ಕೇವಲ ಸಾಂಪ್ರದಾಯಿಕ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದ ಗೊಂಬೆಗಳು ಈಗ ಬಾಲಿವುಡ್‌ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಬದಲಾವಣೆಗೆ ತಕ್ಕಂತೆ ಬದಲಾಗುತ್ತಿವೆ.  

***
ದೀಪಾವಳಿ ವಿಶೇಷ ಖಾದ್ಯಗಳು
ದೀಪಾವಳಿಗಾಗಿ 7 ಕೋರ್ಸ್‌ಗಳ ಮೆನುವನ್ನು ತಯಾರಿಸಲಾಗಿದ್ದು, ಇದರಲ್ಲಿ ಮೂರು ರೀತಿಯ ವಿಶೇಷ ಥಾಲಿಗಳನ್ನು ಪರಿಚಯಿಸಿದ್ದಾರೆ. ಈ ಥಾಲಿಯಲ್ಲಿ ಸ್ವಾಗತ ಪಾನೀಯಗಳು, ಮೂರು ರೀತಿಯ ಸಿಹಿ ತಿನಿಸುಗಳು, ಸ್ಟಾಟರ್‌ಗಳು, ನಂತರ ಪರೋಟ, ಪುರಿ, ಹಾಗೂ ರೋಟಿ, ನಂತರ ಅನ್ನದ ಖಾದ್ಯಗಳು, ಇದಾದ ಮೇಲೆ ಮತ್ತೆ ಸಿಹಿ ತಿನಿಸುಗಳು ,ಕೊನೆಯದಾಗಿ ಐಸ್‌ಕ್ರೀಮ್‌ ಅಥವಾ ಶ್ರೀಕಂಡ್‌ ನೀಡಲಾಗುತ್ತದೆ. ಊಟ ಮುಗಿದ ನಂತರ ಸ್ವೀಟ್‌ ಬೀಡಾವನ್ನು ಸವಿಯಬಹುದು. ಪ್ರತಿನಿತ್ಯ ಒಂದೊಂದು ಬಗೆಯ ಥಾಲಿ ಲಭ್ಯವಿದೆ. ಅದರಲ್ಲಿ ಒಟ್ಟಾರೆ 30 ರೀತಿಯ ತಿಸಿಸುಗಳಿದ್ದು, ಮೂರಕ್ಕೂ ಹೆಚ್ಚು ಸಿಹಿ ತಿನಿಸುಗಳು ಇರುತ್ತವೆ.

ಇಲ್ಲಿ ಶೆಖಾವತ್‌ ಶೈಲಿಯಲ್ಲಿ ಮೊದಲು ಮಸಾಲ ಚಾಸ್‌, ಪುದಿನಾ ಪಂಚ್‌ ಮತ್ತು ಕೆರಿ ಪುದಿನಾ ಪಚಕ್‌ನಂತಹ ಸ್ವಾಗತ ಪಾನೀಯಗಳೊಂದಿಗೆ ಊಟ ಪ್ರಾರಂಭಿಸಲಾಗುತ್ತದೆ. ನಂತರ ರಾಜಸ್ತಾನದ ವಿಶೇಷ ಸಿಹಿ ತಿನಿಸುಗಳಾದ ಮಲಾಯ್‌ ಪೇಥಾ ಸ್ಯಾಂಡ್‌ವಿಚ್‌, ಜಿಲೇಬಿ ರಸ್ಮಲಾಯ್‌ ಸ್ಯಾಂಡ್‌ವಿಚ್‌, ಪನ್ನೀರ್‌ ಘೇರಾವ್‌ ಸವಿಯುತ್ತಿದ್ದಂತೆಯೇ ಹಪ್ಪಳ, ರಾಜಸ್ತಾನಿ ಉಪ್ಪಿನಕಾಯಿ, ಸ್ಟಾಟರ್‌ಗಳಾದ ಮಟರ್‌ ಕಚೋರಿ, ದಾಲ್‌ ಕಾ ಸಮೋಸಾ, ಪ್ಯಾಜೋ ವಡಾ, ಆಲೂ ಮಟರ್‌ ಸಮೋಸಾ, ಜತೆಗೆ ಕಚುಂಬರ್‌ ಮತ್ತು ಹಸಿರು ಚಟ್ನಿ ಬಡಿಸುತ್ತಾರೆ. ನಂತರ ಮೇನ್‌ ಕೋರ್ಸ್‌ ಪ್ರಾರಂಭ ದಾಲ್‌ ಪಂಚಮೆಲ್‌, ಕೂರ್ಮದೊಂದಿಗೆ ಸಾಂಪ್ರದಾಯಿಕ ರಾಜಸ್ತಾನಿ ಭಾಟಿ, ಪನ್ನೀರ್‌ ಸಿಮ್ಲಾ ಮಿರ್ಚ್‌, ಆಲೂ ಗೋಬಿ, ಬರ್ಮಾ ಕಾಫ್ತೆ, ಆಮ್‌ ಮೇಥಿ ಕಿ ಲುಂಜೆಯಂತಹ ಸಿಹಿ ಸಿಹಿ ಖಾರದ ರುಚಿಯನ್ನು ನೀಡು ಕಟ್ಟಾಮಿಟ್ಟಾ ಸಬ್ಜಿಗಳು, ಇದರೊಂದಿಗೆ   ಫುಲ್ಕಾ, ಮಿಸ್ಸಿ ರೋಟಿ, ದಾಲ್‌ ಕಿ ಪೂರಿ, ರಾಜಶಾಹಿ ಫುಲಾವ್‌ ಅಥವಾ ಸ್ಟೀಮ್ಡ್‌ ರೈಸ್‌, ನಂತರ ಬಜ್ರೆ ಕಿ ಕಿಚಡಿ, ಅಥವಾ ರಾಮ್‌ ಕಿಚಡಿಯನ್ನು ಆಸ್ವಾದಿಸಬಹುದು. ಇನ್ನು ಭೋಜನದ ಕೊನೆಯ ಹಂತದಲ್ಲಿ ಮತ್ತೆ ಬಾದಾಮಿ ಹಲ್ವಾ, ಶಾಹಿ ಜಾಮೂನ್‌, ಮೂಂಗ್‌ ದಾಲ್‌ ಹಲ್ವಾ, ಕ್ಯಾರೆಟ್‌ ಹಲ್ವಾ ಅಥವಾ ಮ್ಯಾಂಗೋ ಶ್ರೀಕಂಡ್‌, ಅಥವಾ ಕುಲ್ಫಿ ನೀಡುತ್ತಾರೆ.

***
ದರ– ವಯಸ್ಕರಿಗೆ ₹ 545, ಮಕ್ಕಳಿಗೆ(5ರಿಂದ 8 ವರ್ಷದೊಳಿಗನವರು)– ₹ 300. ಸ್ಥಳ– ಕೇಸರಿಯಾ, ಗೇಟ್‌ ನಂ.55, ಗೋಯೆಂಕಾ ಛೇಂಬರ್ಸ್‌, 19ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, 2ನೇ ಹಂತ, ಜೆ.ಪಿ.ನಗರ. ಅವಧಿ– ನವೆಂಬರ್‌ 15 ರ ವರೆಗೆ ಈ ದೀಪಾವಳಿ ಫುಡ್‌ ಫೆಸ್ಟ್‌ನೊಂದಿಗೆ ಗೊಂಬೆ ಪ್ರದರ್ಶನ ಮುಂದುವರೆಯಲಿದೆ. ಸಮಯ– ಮಧ್ಯಾಹ್ನ 12ರಿಂದ 3.30ರವರೆಗೆ, ಸಂಜೆ 7 ರಿಂದ ರಾತ್ರಿ 11ರವರೆಗೆ.

ಟೇಬಲ್‌ ಕಾಯ್ದಿರಿಸಲು– 080– 26590800

***
ಭಲಾರೆ ಹಬ್ಬದೂಟ
ದೀಪಾವಳಿ ಹಬ್ಬದ ಅಂಗವಾಗಿ ನಗರದ ಖಾಂದಾನಿ ರಾಜ್‌ಧಾನಿ ರೆಸ್ಟೋರೆಂಟ್‌ ದೀಪಾವಳಿ ವಿಶೇಷ ರುಚಿಯನ್ನು ಪರಿಚಯಿಸಿದೆ. ಚಳಿಗಾಲದಲ್ಲಿ ಆಹಾರಪ್ರಿಯರು ಬಯಸುವ ದೀಪಾವಳಿ ವಿಶೇಷ ಖಾದ್ಯಗಳನ್ನು ಖಾಂದಾನಿ ರಾಜ್‌ಧಾನಿಯ ನುರಿತ ಬಾಣಸಿಗರು ಉಣಬಡಿಸುತ್ತಿದ್ದಾರೆ.

ಚಳಿಗಾಲಕ್ಕೆಂದೇ ವಿಶೇಷವಾಗಿ ಖಾದ್ಯ ಎಪಿಕ್ ಉಂಧಿಯು ಖಾದ್ಯವನ್ನು ತಯಾರಿಸಲಾಗಿದ್ದು, ಜತೆಗೆ ಖಸ್ತ ಕಚೋರಿಸ್, ಸಮೋಸಾಗಳು ಇಲ್ಲಿ ಲಭ್ಯ.
ಇನ್ನು ದೀಪಾವಳಿಗೆ ಸೂರಟಿ ಉಂಧಿಯುವನ್ನು ಮೊದಲ ಬಾರಿಗೆ ಪರಿಚಯಿಸುತ್ತಿದೆ. ಜತೆಗೆ ಚಳಿಗಾಲದ ಗುಜರಾತಿನ ಪ್ರಸಿದ್ದ ಖಾದ್ಯಗಳು ಕಿಕ್ ನೀಡಲು ನಿಮಗಾಗಿ ಕಾಯುತ್ತಿವೆ.

ವಿಶೇಷವಾಗಿ ಮುಖ್ಯ ಕೋರ್ಸ್‌ನಲ್ಲಿ ಶಾಹಿ ರಾಬ್ರಿ, ಆ್ಯಪಲ್ ಜಿಲೇಬಿ, ಕಾರ್ನ್ ಹಲ್ವ, ಅಖ್ರೋಟ್ ಮೋದಕ್, ಗುಲಾಬಿ ಮ್ಯಾಲ್ವಾ ಇರುತ್ತದೆ.
ಜತೆಗೆ ಎವರ್‌ಗ್ರೀನ್ ಫೇವರೇಟ್ಸ್ ದಾಲ್ ಬಾಟಿ ಕೂರ್ಮ, ಖಾಮನ್ ಡೋಕ್ಲಾ, ಪೂರನ್‌ಪೋಳಿ, ಖಂದ್ವಿ,  ಘುಘ್ರಸ್ ಬಾಯಲ್ಲಿ ನೀರೂರಿಸುತ್ತವೆ.  ಪ್ರತಿದಿನವೂ ಮೆನುವಿನಲ್ಲಿ ವೈವಿಧ್ಯ ಇದೆ.

ಖಾಂದಾನಿ ರಾಜ್‌ಧಾನಿಯಲ್ಲಿ ವಿಶೇಷ ದೀಪಾವಳಿ ಥಾಲಿ ನವೆಂಬರ್‌ 15ರವರೆಗೆ ಲಭ್ಯ. ಇಂದಿರಾನಗರ, ಜೆ.ಪಿ.ನಗರ, ಮಂತ್ರಿ ಮಾಲ್‌ ಮತ್ತು  ರಾಯಲ್ ಮೀನಾಕ್ಷಿ ಮಾಲ್‌ನಲ್ಲಿ ವಾರದ ದಿನಗಳಲ್ಲಿ ಮಧ್ಯಾಹ್ನದ ಊಟ ₹ 350 ಮತ್ತು ರಾತ್ರಿ ಭೋಜನ (ಡಿನ್ನರ್) ₹ 415. ವಾರಾಂತ್ಯದಲ್ಲಿ ಮಧ್ಯಾಹ್ನದ ಮತ್ತು ರಾತ್ರಿ ಊಟ ₹ 425. 

ದ ಫೋರಂ, ವ್ಯಾಲ್ಯೂ ಮಾಲ್, ಮತ್ತು ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ವಾರದ ದಿನಗಳಲ್ಲಿ ಮಧ್ಯಾಹ್ನದ ಊಟ ₹ 350 ಮತ್ತು ರಾತ್ರಿ ಊಟ ₹ 425. ವಾರಾಂತ್ಯದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಊಟ ₹ 425.

ಒರಾಯನ್ ಮಾಲ್‌ನಲ್ಲಿ  ವಾರದ ದಿನಗಳಲ್ಲಿ ಮಧ್ಯಾಹ್ನದ ಊಟ ₹ 400 ಹಾಗೂ ರಾತ್ರಿ ಊಟ ₹ 460.  ವಾರಾಂತ್ಯದಲ್ಲಿ ಊಟದ ದರ ₹ 460.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT