ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಲ್ಲರ ಹಟ್ಟಿಯಲ್ಲಿ ಮೂಢನಂಬಿಕೆ: ಗುಡಿಸಲಲ್ಲಿ ಬಾಣಂತಿ

Last Updated 1 ನವೆಂಬರ್ 2014, 11:25 IST
ಅಕ್ಷರ ಗಾತ್ರ

ಮಾಗಡಿ: ಕುಲದೈವದ ಮೇಲಿನ  ಮೂಢ ನಂಬಿಕೆಯಿಂದ ಕೊರೆಯುವ ಚಳಿ, ಎಡಬಿಡದೆ ಸುರಿಯುತ್ತಿರುವ ಮಳೆಯಲ್ಲೂ ಸಹ ಬಾಣಂತಿಯೊಬ್ಬಳು ತನ್ನ ಹಸುಗೂಸಿನೊಂದಿಗೆ ರಾಗಿ ಹೊಲ­ದ ನಡುವೆ ಹುಲ್ಲಿನ ಗುಡಿಸಲಿ­ನಲ್ಲಿ  ದಿನದೂಡುತ್ತಿರುವ ಘಟನೆ ತಾಲ್ಲೂ­ಕಿನ ತಟವಾಳು ದಾಖಲೆ ಅರೆ­ಅಲೆ­ಮಾರಿ ಕಾಡುಗೊಲ್ಲರ ಹಟ್ಟಿಯಲ್ಲಿ ನಡೆದಿದೆ.

ಮಹಿಳೆಗೆ ಹೆರಿಗೆಯಾಗಿ 1 ತಿಂಗ­ಳಾಗಿದೆ.  ಮುದ್ದಾದ ಗಂಡುಮಗು­ವಿಗೆ ಜನ್ಮ­ನೀಡಿದ್ದಾಳೆ. ಗೊಲ್ಲರ ಹಟ್ಟಿಯ ಸಂಪ್ರ­ದಾಯದಂತೆ ಹೆರಿಗೆಯಾದ ಬಾಣಂತಿ ತನ್ನ ಹಸುಗೂಸಿನೊಂದಿಗೆ 3 ತಿಂಗಳು ಸೂತಕದ ಹೆಸರಿನಲ್ಲಿ ಗೊಲ್ಲರ ಹಟ್ಟಿ­ಯಿಂದ 1 ಕಿ.ಮಿ.ದೂರದಲ್ಲಿ 3 ಅಡಿ­ಗಳ ಸುತ್ತಳತೆಯ ಹುಲ್ಲಿನ ಗುಡಿಸ­ಲಿನಲ್ಲಿರಬೇಕು.

ಪುಟ್ಟಗುಡಿಸಲಿನಲ್ಲಿ ಹಸಿಮೈ ಬಾಣಂ­ತಿಯೇ ಅಡುಗೆ ಮಾಡಿಕೊಳ್ಳಬೇಕು.  ಗುಡಿಸಿಲಿನಿಂದ ಹೊರಗೆ ಮಗುವಿಗೆ ಬಿಸಿ ನೀರು ಕಾಯಿಸಿಕೊಂಡು ಸ್ನಾನ ಮಾಡಿ­ಸಬೇಕು. ಬಟ್ಟೆ ತೊಳೆದುಕೊಳ್ಳಬೇಕು. ಬಾಣಂತಿ ತನ್ನ ಆರೈಕೆ ತಾನೇ ಮಾಡಿ­ಕೊಳ್ಳಬೇಕಿದೆ. ಗೊಲ್ಲರ ಹಟ್ಟಿಯ ಇತರೆ ಮಹಿ­ಳೆಯರು ಯಾರು ಬಾಣಂತಿ ಮತ್ತು ಮಗುವನ್ನು ಮುಟ್ಟುವಂತಿಲ್ಲ.

ಬುಡಕಟ್ಟು ಸಂಪ್ರದಾಯ: ಗೊಲ್ಲರ ಹಟ್ಟಿಯ ಅಜ್ಜಪ್ಪ ಸ್ವಾಮಿ ದೇವರ ಪಟ್ಟದ ಪೂಜಾರಿ ಚಿತ್ತಯ್ಯ ಮಾತನಾಡಿ ‘ನಾವು ಬುಡಕಟ್ಟು ಸಂಪ್ರದಾಯದ ಕಾಡುಗೊಲ್ಲರು.

ಬಹಳ ಹಿಂದೆ ನಮ್ಮ ಪೂರ್ವಿಕರು ಕಾಡಿನಲ್ಲಿದ್ದಾಗ ಕಾಡು­ಮೇಡುಗಳಲ್ಲಿ ದಟ್ಟಹಸಿರಿನ ನಡುವೆ ಹುಲ್ಲಿನ ಗುಡಿಸಲು ಕಟ್ಟಿಕೊಂಡಿ­ದ್ದರು. ಗುಡಿಸಲಿನ ಒಳಗೆ ದನಕರುಗಳಿಗೆ ಒಂದು ಗುಡಿಸಲು, ಕುರಿಮರಿಗೆ ಒಂದು ಗುಡಿಸಲು, ಹೆರಿಗೆಯಾದ ಮಹಿಳೆಯರಿ­ಗಾಗಿ ಮತ್ತೊಂದು ಗುಡಿಸಲು ಇರು­ತ್ತಿತ್ತು. ಇತ್ತೀಚೆಗೆ ಹೆರಿಯಾದ ಮಹಿಳೆ­ಯರಿಗೆ ಪ್ರತ್ಯೇಕ ಗುಡಿಸಲು ಕಟ್ಟಿಕೊ­ಡುತ್ತಿ­ದ್ದೇವೆ. ನಾವೆಲ್ಲರೂ ನಮ್ಮ ಕುಲ­ದೈವದಲ್ಲಿ ಕೇಳಿದ ನಂತರ ಈ ಪದ್ಧತಿ­ಯನ್ನು ಬದಲಾಯಿಸಲು ನಿರ್ಧರಿಸಿ­ದ್ದೇವೆ’ ಎಂದರು.

‘ಕಾಡುಗೊಲ್ಲರ  ಸಾಂಸ್ಕೃತಿಕ ವೀರ­ರಾದ ದೊಡ್ಡೋನು ಜುಂಜಪ್ಪ, ಅಜ್ಜಪ್ಪ­ಸ್ವಾಮಿ, ಚಿಕ್ಕಣ್ಣ ಸ್ವಾಮಿ , ಚಿತ್ತಯ್ಯ, ಕಾಟಯ್ಯ ಇತರರು  ತಮ್ಮ ಜನಪದ ಕಥನ ಕಾವ್ಯಗಳಲ್ಲಿ ಎಲ್ಲಿಯೂ ಸಹ ಕುಲದ ಮಹಿಳೆಯರು ಋತುಮತಿಯಾ­ದಾಗ, ಮೈನೆರೆದಾಗ, ಹೆರಿಗೆಯಾದಾಗ ಹಟ್ಟಿಯಿಂದ ಹೊರಗೆ ಉಳಿಯಬೇಕು ಎಂದು ಹೇಳಿಲ್ಲ’ ಎಂಬುದು ಜನಪದ ವಿದ್ವಾಂಸರಾದ ಡಾ. ಟಿ.ಗೋವಿಂದ­ರಾಜು ಅಭಿಪ್ರಾಯ ಪಟ್ಟಿದ್ದಾರೆ,

‘ಮಹಿಳೆಯರಲ್ಲಿ ಅಕ್ಷರದ ಅರಿವು ಮೂಡಿಸಿ, ಮೂಢನಂಬಿಕೆಗಳನ್ನು ತಡೆ­ಗಟ್ಟಲು  ಜಾಗೃತಿ ಮೂಡಿಸಬೇಕು’ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಪ್ರತಿನಿಧಿ ವನಜ ಮತ್ತು ಜನವಾದಿ ಮಹಿಳಾ ಸಂಘಟನೆ ಸಂಚಾಲಕಿ ಲಕ್ಷ್ಮೀ­ದೇವಿ ತಿಳಿಸಿದ್ದಾರೆ.

‘ತಾಲ್ಲೂಕಿನ 28 ಗೊಲ್ಲರ ಹಟ್ಟಿಗ­ಳಲ್ಲಿ ಇರುವ ಗೊಲ್ಲ ಸಮುದಾಯದ ಅಕ್ಷರಸ್ಥ ಯುವಕರು ಮುಂದೆ ಬಂದು ಮಹಿಳೆಯರ ಮೇಲೆ ನಡೆಯುತ್ತಿರುವ ಅಮಾನವೀಯ ಪದ್ಧತಿ ನಿರ್ಮೂಲನೆಗೆ ಮುಂದಾಗಬೇಕಿದೆ’ ಎಂದು ಪ್ರಗತಿಪರ ಚಿಂತಕರಾದ ಕೆ.ವಿ.ರವಿಕುಮಾರ್‌, ತಾಲ್ಲೂಕು ಡಿಎಸ್‌ಎಸ್‌ ಸಂಚಾಲಕ ಗಂಗಾಧರ್‌ ತಿಳಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT