ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆ ಕುಸಿದು ಇಬ್ಬರ ಸಾವು

Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ಆಲಿಕಲ್ಲು ಸಹಿತ ಬಿರುಸಿನ ಮಳೆಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಕಲ್‌ಬೀಳಗಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಅದೇ ಗ್ರಾಮದ ಯಮನಪ್ಪ ಕಾಂಬಳೆ (65), ಗೋಪಾಲ ಕಾಂಬಳೆ (30) ಎಂದು ಗುರುತಿಸಲಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಮನೆಯೊಂದರ ಬಳಿ ನಿಂತಾಗ, ಗೋಡೆ ಕುಸಿದು ಈ ಅವಘಡ ಸಂಭವಿಸಿದೆ. ರಭಸದ ಗಾಳಿಗೆ ಮನೆಯ ಚಾವಣಿಯ ತಗಡುಗಳೂ ಹಾರಿಹೋಗಿವೆ.
ವಿಜಯಪುರ ಸೇರಿದಂತೆ ಜಿಲ್ಲೆಯ ಸಿಂದಗಿ, ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಅರ್ಧ ತಾಸಿಗೂ ಹೆಚ್ಚು ಸಮಯ ಬಿರುಸಿನ ಮಳೆಯಾಗಿದೆ. ಜಯಪುರದ ಹಲವೆಡೆ ಮಳೆ ನೀರು ರಸ್ತೆ ಮೇಲೆಯೇ ಹರಿದು, ಒಂದು ತಾಸು ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಸತತ ಎರಡು ತಾಸು ಬಿರುಸಿನ ಮಳೆಯಾಗಿದ್ದು, ಹಲವೆಡೆ ಮರಗಳು ಉರುಳಿಬಿದ್ದಿವೆ. ಅಪಾರ ಹಾನಿ: ಶುಕ್ರವಾರ ಸಂಜೆ ಬೀಸಿದ ಭಾರಿ ಗಾಳಿಗೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕು ಬಿಸನಾಳಕೊಪ್ಪದಲ್ಲಿ ಮುಳುಗಡೆ ಸಂತ್ರಸ್ತರಿಗಾಗಿ ನಿರ್ಮಿಸಿದ ತಾತ್ಕಾಲಿಕ ಶೆಡ್‌ಗಳ ತಗಡುಗಳು ಹಾರಿಹೋಗಿವೆ. ಮಳೆ ನೀರಿಗೆ ದವಸ ಧಾನ್ಯ ಸೇರಿದಂತೆ ಶೆಡ್‌ನಲ್ಲಿದ್ದ ಎಲ್ಲ ಸಾಮಗ್ರಿಗಳೂ ಹಾಳಾಗಿದ್ದು, 200 ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ. 

ಸಿಡಿಲಿಗೆ ಮೂರು ಎಮ್ಮೆ ಬಲಿ: ಬಸವನಬಾಗೇವಾಡಿ ತಾಲ್ಲೂಕಿನಲ್ಲಿ ಸಿಡಿಲು ಬಡಿದು ಮೂರು ಎಮ್ಮೆಗಳು ಮೃತಪಟ್ಟಿವೆ. ಭಾರಿ ಬಿರುಗಾಳಿಗೆ ಕೊಲ್ಹಾರ ಪಟ್ಟಣದ ತೋಟವೊಂದರಲ್ಲಿನ ಬಾಳೆ ನೆಲ ಕಚ್ಚಿದೆ. ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿ ಬಳಿ ನಡೆಯುತ್ತಿರುವ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರ ಕಾಮಗಾರಿಗಾಗಿ ನೀರು ಸಂಗ್ರಹಿಸಲು 175 ಎಕರೆ ಪ್ರದೇಶದಲ್ಲಿ  ತಾತ್ಕಾಲಿಕವಾಗಿ ನಿರ್ಮಿಸಿದ ಕೆರೆಯ ಪ್ಲಾಸ್ಟಿಕ್ ಹೊದಿಕೆಗಳು ಹಾರಿಹೋಗಿವೆ.

ವಿದ್ಯುತ್‌ ತಗುಲಿ ಯುವಕ ಸಾವು: ಬೆಳಗಾವಿ ಜಿಲ್ಲೆಯ ರಾಮದುರ್ಗ ಸಮೀಪದ ಎಂ. ಕಲ್ಲಾಪುರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಯುವಕನೊಬ್ಬ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದಾನೆ. ಶುಕ್ರವಾರ ರಾತ್ರಿ ಸುರಿದ ಮಳೆನೀರಲ್ಲಿ ಮುಳುಗಿದ್ದ ಪಂಪ್‌ಸೆಟ್‌ ಮೇಲೆತ್ತಲು ಹೋದಾಗ ಈ ಘಟನೆ ಸಂಭವಿಸಿದೆ.

ಸಿಡಿಲು ಬಡಿದು ವ್ಯಕ್ತಿ ಸಾವು
ಬೀದರ್:
ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ಆಶ್ರಯ ಪಡೆದಿದ್ದಾಗ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೀದರ್ ತಾಲ್ಲೂಕಿನ ಕಮಠಾಣ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಗ್ರಾಮದ ಚಂದ್ರಕಾಂತ ಮಾಣಿಕಪ್ಪ ಚಿಟ್ಟಾ (35) ಮೃತಪಟ್ಟವರು. ಘಟನೆಯಲ್ಲಿ ಪಾಶಾಮಿಯ ಮೈನುದ್ದೀನ್‌ ಉಪಾಸೆವಾಲೆ ಗಾಯಗೊಂಡಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಂಜೆ ಅರ್ಧ ಗಂಟೆಗೂ ಹೆಚ್ಚು ಮಳೆ ಸುರಿಯಿತು. ಔರಾದ್‌ನಲ್ಲಿ ಮಧ್ಯಾಹ್ನ 15 ನಿಮಿಷ ಮಳೆಯಾಗಿದೆ.  ಮಹಿಳೆಯರು, ಮಕ್ಕಳು ಬಕೆಟ್‌ಗಳಲ್ಲಿ ಮನೆಯ ಮಾಳಿಗೆಗಳಿಂದ ಬೀಳುತ್ತಿದ್ದ  ಮಳೆ ನೀರು ಸಂಗ್ರಹಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹನುಮಸಾಗರ ವರದಿ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲಿ ಗಾಳಿ ಮಿಶ್ರಿತ ಮಳೆಯಿಂದ ಅಲ್ಲಲ್ಲಿ ಮರಗಳು ವಿದ್ಯುತ್‌ ತಂತಿ ಮೇಲೆ ಉರುಳಿ ಬಿದ್ದವು. ಮನೆಗಳಿಗೆ ಹೊದಿಸಲಾಗಿದ್ದ ಹೆಂಚುಗಳು ಗಾಳಿಗೆ ಹಾರಿ ಬಿದ್ದವು. ಸಿಡಿಲಿ ಆರ್ಭಟವು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT