ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಾಲಪುರ ಆಯ್ಕೆ: ಶಿಖಾ

ಮೈಸೂರು ಜಿಲ್ಲೆಯಲ್ಲಿ ‘ಹಮಾರ ಜಲ್‌–ಹಮಾರ ಜೀವನ್‌’ ಯೋಜನೆ ಜಾರಿ
Last Updated 28 ಮಾರ್ಚ್ 2015, 9:03 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸರ್ಕಾರ ಪ್ರಾಯೋಜಕತ್ವದ ‘ಹಮಾರ ಜಲ್‌– ಹಮಾರ ಜೀವನ್‌’ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವ ಸಂಬಂಧ ತಾಲ್ಲೂಕಿನ ಜಯಪುರ ಹೋಬಳಿಯ ಗೋಪಾಲಪುರ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಹಮಾರ ಜಲ್‌– ಹಮಾರ ಜೀವನ್‌’ ಕಾರ್ಯಾಗಾರದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. 2015–16ನೇ ಸಾಲನ್ನು ದೇಶದಾದ್ಯಂತ ‘ಜಲಕ್ರಾಂತಿ ವರ್ಷ’ ಎಂದು ಆಚರಿಸಲಾಗುತ್ತಿದೆ. ದೇಶದ ಎಲ್ಲ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಅದರಂತೆ ಮೈಸೂರು ಜಿಲ್ಲೆಯಲ್ಲಿ ಅನಗಳ್ಳಿ, ಮುಳ್ಳೂರು ಮತ್ತು ಗೋಪಾಲಪುರ ಗ್ರಾಮಗಳನ್ನು ‘ಕಿರು ಜಲಾನಯನ ಪ್ರದೇಶ’ ಎಂದು ಗುರುತಿಸಲಾಗಿದೆ.

ಈ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಆದ್ದರಿಂದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜತೆಗೆ, ಬಹುತೇಕ ಹಳ್ಳಿಗಳಲ್ಲಿ ನೈಟ್ರೇಟ್‌ಯುಕ್ತ ನೀರನ್ನು ಬಳಸಲಾಗುತ್ತಿದೆ. ನೂತನ ಯೋಜನೆಯಡಿ ಮಳೆ ನೀರು ಸಂಗ್ರಹ, ಕೃಷಿ ಹೊಂಡ, ಬದುಗಳ ನಿರ್ಮಾಣ ಮುಂತಾದ ಕಾರ್ಯಗಳನ್ನು ಕೈಗೊಂಡು ಅಂತರ್ಜಲ ಮರುಪೂರಣ ಮಾಡಲಾಗುತ್ತದೆ. 2016ರ ಒಳಗೆ ಇಲ್ಲಿನ ಸಾಧಕ–ಬಾಧಕಗಳನ್ನು ನೋಡಿಕೊಂಡು ಇತರೆಡೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ ಎಂದರು.

ಕೇಂದ್ರ ಜಲ ಆಯೋಗದ ಉಪನಿರ್ದೇಶಕ ಜೆ. ಹರ್ಷ ಮಾತನಾಡಿ, ಜನಸಂಖ್ಯೆ ಹೆಚ್ಚಿದಂತೆ ನೀರಿಗೆ ಹಾಹಾಕಾರ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಕಾವೇರಿ ಜಲಾನಯನ ಪ್ರದೇಶವಾದ ಮೈಸೂರಿ­ನಲ್ಲೂ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಕಾಡುತ್ತಿದೆ. ಜಲ ಜಾಗೃತಿ ಮೂಡಿಸಲು ವಿಜ್ಞಾನಿಗಳು, ಎಂಜಿನಿಯರ್‌­ಗಳು ಮತ್ತು ಇತರೆ ಸಂಘ–ಸಂಸ್ಥೆಗಳು ತೊಡಗಿಕೊಳ್ಳುವ ಮೂಲಕ ನೂತನ ಯೋಜನೆಯನ್ನು ಯಶಸ್ವಿ­ಗೊಳಿಸಲು ಮನವಿ ಮಾಡಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಲಕ್ಷ್ಮಮ್ಮ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ 1,955 ಅಂತರ್ಜಲ ಮರುಪೂರೈಕೆ ರಚನಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂತರ್ಜಲ ಜನಜಾಗೃತಿ ಶಿಬಿರಗಳನ್ನು ನಡೆಸಲಾಗಿದೆ. ಮೈಸೂರಿನಲ್ಲಿ ಅಂತರ್ಜಲ ಪ್ರಾಧಿಕಾರ ರಚನೆಯಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿ.ಪಂ. ಸಿಇಒ ಉಪಾಧ್ಯಕ್ಷರಾಗಿದ್ದಾರೆ. ಪೊಲೀಸ್‌ ವರಿಷ್ಠಾಧಿಕಾರಿ, ಭೂ ವಿಜ್ಞಾನಿಗಳು, ಕಾರ್ಯಪಾಲಕ ಎಂಜಿನಿಯರ್‌ ಸದಸ್ಯರಾಗಿರುತ್ತಾರೆ ಎಂದು ಹೇಳಿದರು.

ಅಧೀಕ್ಷಕ ಎಂಜಿನಿಯರ್‌ ಸುರೇಶ್‌ಬಾಬು, ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆಯ ಯೋಜನಾ ನಿರ್ದೇಶಕ ಎಚ್‌.ಸಿ. ಶಿವಶಂಕರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ. ಬಸವರಾಜು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT