ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪ್ಯ ದಾಖಲೆಗಳು ಸ್ವಾಮಿಗೆ ಸಿಕ್ಕಿದ್ದಾದರೂ ಹೇಗೆ

ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ
Last Updated 5 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಬಳಿ ಇರುವ ಸೂಕ್ಷ್ಮ ಮತ್ತು ಗೋಪ್ಯ ದಾಖಲೆಗಳು ಬಿಜೆಪಿ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಸಿಕ್ಕಿದ್ದು  ಹೇಗೆ ಎಂದು ಕಾಂಗ್ರೆಸ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ರಾಜ್ಯಸಭೆಯಲ್ಲಿ ಗುರುವಾರ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಆನಂದ ಶರ್ಮ, ‘ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ ಕುರಿತಂತೆ ಸದನದಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಸುಬ್ರಮಣಿಯನ್‌ ಸ್ವಾಮಿ ಅವರು ತನಿಖಾ ಸಂಸ್ಥೆಗಳ ಬಳಿ ಇರುವ ಸೂಕ್ಷ್ಮ ದಾಖಲೆಗಳಲ್ಲಿರುವ ಅಂಶಗಳನ್ನು ಪ್ರಸ್ತಾಪಿಸಿದ್ದೇನೆ’ ಎಂದು ಹೇಳಿದ್ದರು.

‘ಗೌರವಾನ್ವಿತ ಅಥವಾ ಕಡಿಮೆ ಗೌರವ ಹೊಂದಿರುವ ಸದಸ್ಯರಿಗೆ ಗೋಪ್ಯ ದಾಖಲೆಗಳು ಹೇಗೆ ಸಿಕ್ಕವು ಎಂಬುದನ್ನು ತಿಳಿಯಲು ಸದನ ಬಯಸುತ್ತದೆ. ಆ ದಾಖಲೆಗಳನ್ನು ಅವರು ದೃಢಪಡಿಸಿಲ್ಲ ಮತ್ತು ಸದನದಲ್ಲಿ ಮಂಡಿಸಲೂ ಇಲ್ಲ’ ಎಂದು  ಶರ್ಮ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪ ಸಭಾಪತಿ ಪಿ.ಜೆ.ಕುರಿಯನ್‌, ‘ಉಲ್ಲೇಖಿಸಿರುವ ದಾಖಲೆಗಳನ್ನು  ದೃಢೀಕರಿಸಬೇಕು ಮತ್ತು ಸದನದಲ್ಲಿ ಮಂಡಿಸಬೇಕು ಎಂದು ನಾನು ನೀಡಿರುವ ಆದೇಶವನ್ನು ಸ್ವಾಮಿ ಅವರು ಪಾಲಿಸದೇ ಇದ್ದಲ್ಲಿ, ಸದನದ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ನಿರ್ಣಯವನ್ನು ಅನುಸರಿಸಲೇಬೇಕು’ ಎಂದು ಅವರು ಹೇಳಿದರು.

ಇದರಿಂದ ಸಮಾಧಾನಗೊಳ್ಳದ ಕಾಂಗ್ರೆಸ್‌ ಸದಸ್ಯರು ಗದ್ದಲ ಎಬ್ಬಿಸಿದರು.

ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ, ‘ಸ್ವಾಮಿ  ತಾವು ಉಲ್ಲೇಖಿಸಿದ ದಾಖಲೆಗಳನ್ನು ದೃಢಪಡಿಸಿದ್ದಾರೆ ಮತ್ತು ಸದನದಲ್ಲಿ ಮಂಡಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಕ್ರಿಯಾ ಲೋಪ ಎತ್ತಿದ ಕಾಂಗ್ರೆಸ್‌ನ ಮತ್ತೊಬ್ಬ ಸದಸ್ಯ ಪ್ರಮೋದ್‌ ತಿವಾರಿ, ‘ಈ ಪ್ರಕರಣದಲ್ಲಿ ಗಾಂಧಿ ಕುಟುಂಬವನ್ನು ಸಿಕ್ಕಿಸಿ ಹಾಕುವುದಕ್ಕಾಗಿ ಸರ್ಕಾರ ಯಾವ ರೀತಿ ಪ್ರಯತ್ನಿಸುತ್ತಿದೆ ಎಂಬುದನ್ನು ಟಿವಿ ಚಾನೆಲ್‌ ಒಂದು ವರದಿ ಮಾಡಿದೆ’ ಎಂದರು.

‘ಕೆಲವು ದ್ರೇಶದ್ರೋಹಿಗಳು ಹೊರದೇಶಗಳಿಂದ ಹಣ ಪಡೆದು ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಆದರೆ, ಉಪಸಭಾಪತಿ ಕುರಿಯನ್‌ ಅವರು ತಿವಾರಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ.

ಯುರೋಪ್ ಮಧ್ಯವರ್ತಿಯಿಂದ ಖೇತಾನ್‌ಗೆ ಹಣ ಸಂದಾಯ
ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ವ್ಯವಹಾರಕ್ಕೆ ಸಂಬಂಧಿಸಿ ಯುರೋಪ್ ಮಧ್ಯವರ್ತಿಗಳಾದ ಗಿಡೊ ಹಸ್ಚೆಕ್ ಮತ್ತು ಕಾರ್ಲೊ ಗೆರೊಸಾ ಅವರಿಂದ ಹಣ ಪಡೆದಿದ್ದು ನಿಜ ಎಂದು ಏರೊಮ್ಯಾಟ್ರಿಕ್ಸ್ ಕಂಪೆನಿಯ ನಿರ್ದೇಶಕ ಗೌತಮ್ ಖೇತಾನ್ ಒಪ್ಪಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಆದರೆ ಕಮಿಷನ್ ಪಡೆಯಲಾಗಿದೆ ಎಂಬ ಸಿಬಿಐ ಆರೋಪವನ್ನು ಖೇತಾನ್ ತಳ್ಳಿಹಾಕಿದ್ದಾರೆ.

ಖೇತಾನ್ ಅವರು ಹಣ ಪಡೆದಿರುವ ಬಗ್ಗೆ ನೀಡಿರುವ ಕಾರಣವನ್ನು ನಂಬಲು ಸಾಧ್ಯವಿಲ್ಲ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ವಾಯು ದಳದ ಮಾಜಿ ಮುಖ್ಯಸ್ಥ ತ್ಯಾಗಿ ಮತ್ತು ಖೇತಾನ್ ಅವರನ್ನು ಸಿಬಿಐ ಈಗಾಗಲೇ ಹಲವು ಬಾರಿ ಪ್ರಶ್ನಿಸಿದೆ.

ತ್ಯಾಗಿ ಅವರ ಸಹೋದರ ಸಂಬಂಧಿಗಳಾದ ಸಂದೀಪ್, ಸಂಜೀವ್ ಮತ್ತು ರಾಜೀವ್ ಅವರ ವಿಚಾರಣೆಯನ್ನು ಶುಕ್ರವಾರ ನಡೆಸಲಾಗುತ್ತದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂವರ ಹೆಸರು ಸಿಬಿಐನ ಎಫ್ಐಆರ್‌ನಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT