ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಕ್ಷಕ ಸಂಘಟನೆ ನಿಷೇಧಿಸಲು ಖರ್ಗೆ ಆಗ್ರಹ

ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳ ಸದಸ್ಯರು ಸಭಾತ್ಯಾಗ
Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗೋಮಾಂಸ ವಿಚಾರದಲ್ಲಿ ಮಧ್ಯಪ್ರದೇಶದಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ನಡೆದ ಹಲ್ಲೆ ಘಟನೆಯನ್ನು ಲೋಕಸಭೆಯಲ್ಲಿ ಶುಕ್ರವಾರ ಪ್ರಸ್ತಾಪಿಸಿದ ಕಾಂಗ್ರೆಸ್, ದಲಿತರು ಮತ್ತು ಮುಸ್ಲಿಮರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಹಲ್ಲೆಗೊಳಗಾದವರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದರು.
ಹಲ್ಲೆ ವಿಚಾರವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಧ್ಯಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ನಡೆದ ಹಲ್ಲೆಗಳನ್ನು ಉಲ್ಲೇಖಿಸಿದರು.

‘ಗೋ ರಕ್ಷಕ ಸಂಘ’ದಂತಹ ಗುಂಪುಗಳು ಕಾನೂನನ್ನು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಿವೆ. ಇಂಥ ಸಂಘಟನೆಗಳನ್ನು ನಿಷೇಧಿಸಬೇಕು. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಸರ್ಕಾರದ ಬೆಂಬಲ ಈ ಸಂಘಟನೆಗಳಿಗೆ ಇದೆ ಎಂದು ಖರ್ಗೆ ಆರೋಪಿಸಿದರು. ಹಲ್ಲೆ ಘಟನೆಗಳಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗೆ ಸೇರಿದವರೂ ಭಾಗಿಯಾಗಿದ್ದಾರೆ ಎಂದು ಕಿಡಿ ಕಾರಿದರು.

‘ಸಂಘಟನೆಗಳಿಗೆ ಸರ್ಕಾರದ ಬೆಂಬಲ ಇದ್ದಾಗ ಮಾತ್ರ ಇಂಥ ಘಟನೆಗಳು ನಡೆಯಲು ಸಾಧ್ಯ. ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಆಧಾರದಲ್ಲಿ ಹಲ್ಲೆಗೆ ಒಳಗಾದ ಮುಸ್ಲಿಂ ಮಹಿಳೆಯರು, ತಮ್ಮ ಬಳಿ ಇರುವುದು ಕೋಣನ ಮಾಂಸ ಎಂದು ಪರಿಪರಿಯಾಗಿ ಹೇಳಿದರು. ಆದರೂ ಅವರ ಮೇಲೆ ಹಲ್ಲೆ ನಡೆಯಿತು’ ಎಂದು ಖರ್ಗೆ ಹೇಳಿದರು.

‘ಪೊಲೀಸರ ಎದುರೇ ಈ ಮಹಿಳೆಯರ ಮೇಲೆ ಹಲ್ಲೆ ನಡೆಯಿತು. ಪುರುಷರಾಗಿದ್ದರೆ ಕೊಂದುಹಾಕುತ್ತಿದ್ದೆವು ಎಂದು ಆ ಮುಸ್ಲಿಂ ಮಹಿಳೆಯರಿಗೆ ಹಲ್ಲೆಕೋರರು ಹೇಳಿದ್ದಾರೆ’ ಎಂಬುದನ್ನು ಖರ್ಗೆ ಸದನದ ಗಮನಕ್ಕೆ ತಂದರು.

ರಾಷ್ಟ್ರೀಯ ಅಪರಾಧ ಮಾಹಿತಿ ಕೋಶದ ಪ್ರಕಾರ, ಪ್ರತಿ 80 ನಿಮಿಷಕ್ಕೆ ಒಬ್ಬ ದಲಿತ ದೌರ್ಜನ್ಯಕ್ಕೆ, ಕಿರುಕುಳಕ್ಕೆ ಒಳಗಾಗುತ್ತಿದ್ದಾನೆ. ಪ್ರತಿದಿನ ಸರಾಸರಿ ಮೂವರು ದಲಿತರ ಮೇಲೆ ಅತ್ಯಾಚಾರ ನಡೆಯುತ್ತಿದೆ, ಇಬ್ಬರು ದಲಿತರನ್ನು ಕೊಲ್ಲಲಾಗುತ್ತಿದೆ ಎಂದು ಖರ್ಗೆ ಹೇಳಿದರು.

‘ಇಂಥ ಘಟನೆಗಳು ಮೊದಲೂ ನಡೆದಿದ್ದವು ಎಂದು ನಿಮ್ಮ ಸರ್ಕಾರ ಹೇಳಬಹುದು. ಆದರೆ ನೀವು (ಎನ್‌ಡಿಎ) ಅಧಿಕಾರಕ್ಕೆ ಬಂದ ನಂತರ ಈ ಘಟನೆಗಳು ಹೆಚ್ಚಾಗಿವೆ. ಇಂಥ ಹಲ್ಲೆಗಳಿಗೆ ನಿಮ್ಮ ಬೆಂಬಲ ಇದೆ’ ಎಂದು ಆರೋಪಿಸಿದರು.

ಮಧ್ಯಪ್ರದೇಶದಲ್ಲಿ ನಡೆದ ಘಟನೆ ಬಗ್ಗೆ ಚುಟುಕಾಗಿ ಉತ್ತರ ನೀಡಿದ ಗೃಹ ಸಚಿವ ಸಿಂಗ್, ‘ಇದು ಕಾನೂನು – ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರ. ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಈ ಘಟನೆ ಬಗ್ಗೆ ಮಧ್ಯಪ್ರದೇಶ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದೆ. ತನಿಖೆ ನಡೆಯುತ್ತಿದೆ.

ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತದೆ’ ಎಂದು ಹೇಳಿದರು. ಆದರೆ, ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದರು.

ಮುಷ್ಕರಕ್ಕೆ ಕರೆ ನೀಡಿದ ದಲಿತ ಸಂಘಟನೆ
ಅಹಮದಾಬಾದ್ (ಪಿಟಿಐ):  
ದಲಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿವಿಧ ಸಂಘಟನೆಗಳ ಒಕ್ಕೂಟವಾದ ‘ದಲಿತ ಮಾನವ ಅಧಿಕಾರ ಚಳವಳಿ’ಯು ದಲಿತರು ಸತ್ತ ದನಗಳ ಚರ್ಮ ಸುಲಿಯುವುದನ್ನು ನಿರಾಕರಿಸುವ ಪ್ರತಿಭಟನೆಗೆ ಕರೆ ನೀಡಿದೆ.

‘ದಲಿತ ಸಮುದಾಯದ ಹಲವರು ನಮ್ಮ ಚಳವಳಿಗೆ ಕೈಜೋಡಿಸಿದ್ದಾರೆ. ಸತ್ತ ದನಗಳ ವಿಲೇವಾರಿ ಕೆಲಸದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಸುರೇಂದ್ರನಗರದಲ್ಲಿ ನಮಗೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿದೆ’ ಎಂದು ದಲಿತರ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ನವಸರ್ಜನ್ ಟ್ರಸ್ಟ್‌ನ ನಾತು ಪರ್ಮಾರ್‌ ತಿಳಿಸಿದರು. ಜಿಲ್ಲಾಡಳಿತ ಈಗ ದಿನವೊಂದಕ್ಕೆ ಕನಿಷ್ಠ 200 ದನಕರುಗಳ ಶವ ವಿಲೇವಾರಿ ಮಾಡಬೇಕಾಗಿದೆ ಎಂದು ಪರ್ಮಾರ್ ಹೇಳಿದರು.

‘ಬೇಡಿಕೆಗಳು ಈಡೇರುವವರೆಗೆ ನಮ್ಮ ಕೆಲಸ ಆರಂಭಿಸುವುದಿಲ್ಲ. ಊನಾ ಘಟನೆಯ ನಂತರ ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಜನರಿಗೆ ಗೊತ್ತಾಗಿದೆ. ಸತ್ತ ದನಗಳ ಚರ್ಮ ಸುಲಿಯುವವರು ಇಂಥ ದೌರ್ಜನ್ಯಗಳನ್ನು ಪ್ರತಿದಿನ ಎದುರಿಸುತ್ತಿದ್ದಾರೆ. ನಮಗೆ ರಕ್ಷಣೆ ನೀಡುವ ಭರವಸೆ ಸರ್ಕಾರದಿಂದ ಬರಬೇಕು’ ಎಂದರು.

ಗಿರ್‌ ಸೋಮನಾಥ ಜಿಲ್ಲೆಯ ಊನಾ ತಾಲ್ಲೂಕಿನ ಮೋಟಾ ಸಮಾಧಿಯಾಲ ಗ್ರಾಮದಲ್ಲಿ ನಾಲ್ವರು ದಲಿತ ಯುವಕರು ಸತ್ತ ದನದ ಚರ್ಮ ಸುಲಿಯುತ್ತಿದ್ದಾಗ ಅವರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT